ಕುಂದಾಪುರ ಮಿರರ್ ಸುದ್ದಿ…












ಕುಂದಾಪುರ :ಪುರಾಣ ಪ್ರಸಿದ್ಧ ಕೋಟೇಶ್ವರ ಮಹತೋಬಾರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ರಥೋತ್ಸವ ಡಿಸೆಂಬರ್ 4 ಗುರುವಾರ ವಿಜೃಂಭಣೆಯಿಂದ ನಡೆಯಿತು.
ನವೆಂಬರ್ 27ರಿಂದ ರಥೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಶತರುದ್ರಾಭಿಷೇಕ, ಸಣ್ಣರಂಗಪೂಜೆ, ದೊಡ್ಡ ರಂಗಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಗುರುವಾರ ಬೆಳಿಗ್ಗೆ ರಥೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು.
ರಥೋತ್ಸವ ನೋಡಲು ಬೆಳಿಗ್ಗೆಯಿಂದ ಕೋಟೇಶ್ವರಕ್ಕೆ ಜಿಲ್ಲೆಯ ಬೇರೆ ಬೇರೆ ಭಾಗದಿಂದ ಭಕ್ತಾದಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಗರುಡ ಪ್ರದಕ್ಷಿಣೆ: ದೇವರು ರಥವನ್ನು ಏರುತ್ತಿದ್ದಂತೆ ಗರುಡ ಪ್ರದಕ್ಷಿಣೆ ಬರುವ ಪರಂಪರೆ ಹಿಂದಿನಿಂದಲೂ ಇದೆ. ಇದೊಂದು ಸೋಜಿಗ. ಈಗ ಡ್ರೋನ್‍ಗಳ ಹಾರಾಟದ ನಡುವೆಯೂ ಗರುಡ ಬಂದು ಪ್ರದಕ್ಷಿಣೆ ಮಾಡಿ ಹೋಗುತ್ತದೆ. ಇದು ಭಕ್ತಕೋಟಿಯನ್ನು ಪಾವನಗೊಳಿಸುತ್ತದೆ.
ಜಿಲ್ಲೆಯ ದೊಡ್ಡ ಹಬ್ಬವಾಗಿರುವ ಕೋಟೇಶ್ವರ ಕೊಡಿ ಹಬ್ಬ ಮೈಲುಗಳಷ್ಟು ದೂರಕ್ಕೆ ಅಂಗಡಿ ಮಳಿಗೆಗಳಿಂದ ತುಂಬಿ ತುಳುಕುತ್ತವೆ. ಮನೋರಂಜನಾ ಪಾರ್ಕ್‍ಗಳು, ತಿಂಡಿ ತಿನಿಸುಗಳ ಅಂಗಡಿಗಳ ಸಾಲು, ಹೋಟೆಲ್‍ಗಳು, ಸಿಹಿತಿಂಡಿ ಅಂಗಡಿಗಳ ಸಾಲು ಸಾಲು ಹಬ್ಬ ಕಳೆಕಟ್ಟಿದ್ದವು.
ಭಕ್ತಾದಿಗಳಲ್ಲಿ ಅಲ್ಲಲ್ಲಿ ಪಾನಕದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಕೊಡಿಹಬ್ಬ: ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ತಾಲೂಕಿನ ದೊಡ್ಡ ಈ ರಥೋತ್ಸವಕ್ಕೆ `ಕೊಡಿ’ ಹಬ್ಬ ಎಂದು ಹೆಸರು ಬರಲು ಕಾರಣವಾಯಿತು. ಕೊಡಿಹಬ್ಬದ ಆಚರಣೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ನವವಿವಾಹಿತರು ಬದುಕಿನ ಕುಡಿಯೊಡೆವ ಕ್ಷೇತ್ರವೆಂದೇ ನಂಬುಗೆ ತಳೆದವರಾಗಿ ಕೋಟಿತೀರ್ಥದಲ್ಲಿ ಸ್ನಾನಮಾಡಿ ದೇವರ ದರ್ಶನ ಪಡೆದು ಕಬ್ಬಿನ ಕೊಡಿಯನ್ನು ಕೊಂಡೊಯ್ಯುತ್ತಾರೆ. ಕೋಟೇಶ್ವರ ಹಬ್ಬದಲ್ಲಿ ಲಾರಿಗಟ್ಟಲೇ ಕಬ್ಬಿನ ಜಲ್ಲೆಗಳು ಬರುತ್ತದೆ. ಹಬ್ಬದಂದು ಅಷ್ಟೊಂದು ಸಂಖ್ಯೆ ಕಬ್ಬು ಮಾರಾಟವಾಗುತ್ತದೆ. ಇದು ಈ ಭಾಗದ ಜನರು ಇಟ್ಟ ನಂಬಿಕೆಯ ಪ್ರತೀಕ. ಈ ಕೊಡಿಹಬ್ಬದೊಳಗೆ ಪ್ರಕೃತಿಯ ಆರಾಧನೆಯೂ ಸೇರಿಕೊಂಡಿದೆ.
ಸುತ್ತಕ್ಕಿ ಪ್ರದಕ್ಷಿಣೆ: ಬೆಳಿಗ್ಗೆಯಿಂದಲೇ ದೂರ ದೂರದ ಹರಕೆ ಹೊತ್ತ ಭಕ್ತಾಭಿಮಾನಿಗಳು ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ ಮನೆಯಲ್ಲಿಯೇ ಬೆಳೆದ ಅಕ್ಕಿಯನ್ನು ಈ ಕೆರೆಯ ಸುತ್ತ ತಳಿಯುತ್ತಾರೆ. ಸುತಕ್ಕಿ ಪ್ರದಕ್ಷಿಣೆ ಎನ್ನುವ ಹರಕೆ ಇದಾಗಿದೆ. 5 ಎಕ್ರೆ ವಿಸ್ತೀರ್ಣದ ಕೆರೆಗೆ ಸುತ್ತು ಬರುವುದೇ ಒಂದು ಪರಮಸಾರ್ಥಕ ಸೇವೆ. ಈಗ ಸುತ್ತಕ್ಕಿಯನ್ನು ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ.ಗೋಪಾಲಕೃಷ್ಣ ಶೆಟ್ಟಿ, ತಂತ್ರಿಗಳು, ಪ್ರಧಾನ ಅರ್ಚಕರಾದ ಪ್ರಸನ್ನ ಕುಮಾರ್ ಐತಾಳ್, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.











