ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕರ್ನಾಟಕ ಪಬ್ಲಿಕ್ ಸ್ಕೂಲ್ ಕೋಟೇಶ್ವರ ಇಲ್ಲಿನ ಪ್ರೌಢ ಮತ್ತು ಪದವಿ ಪೂರ್ವ ವಿಭಾಗದ ವಾರ್ಷಿಕ ಕ್ರೀಡಾಕೂಟ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆದು, ಪಥಸಂಚಲನದ ಗೌರವ ರಕ್ಷೆಯನ್ನು ಮುಖ್ಯ ಅತಿಥಿ ಮತ್ತು ಸಂಸ್ಥೆಯ ಹಳೇ ವಿದ್ಯಾರ್ಥಿ ಡಾ. ಮೊಹಮ್ಮದ್ ಆಸಿಫ್ ಬ್ಯಾರಿ ಸ್ವೀಕರಿಸಿ ಮಾತನಾಡಿ ಕ್ರೀಡೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಹಾಗೂ ಆರೋಗ್ಯಕರ ದೇಹ ಮತ್ತು ಮನಸ್ಸಿನ ಬೆಳವಣಿಗೆ. ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳ ಪೂರ್ಣ ಪ್ರಮಾಣದ ಸ್ವಾಸ್ಥ್ಯಕ್ಕೆ ಕ್ರೀಡೆ ಅವಶ್ಯಕ. ಪ್ರತಿಯೊಬ್ಬರು ದಿನವೊಂದಕ್ಕೆ ಒಂದು ಗಂಟೆಯಾದರೂ ಕ್ರೀಡಾ ಚಟುವಟಿಕೆಗೆ ಮೀಸಲಿಡಬೇಕು ಎಂದು ಅಭಿಪ್ರಾಯಪಟ್ಟರು.
ಕೆಪಿಎಸ್ ನ ಪ್ರೌಢ ವಿಭಾಗದ ಅಮೃತ ಮಹೋತ್ಸವ ಸಮಿತಿಯ ಅಧ್ಯಕ್ಷರಾದ ರಾಜೇಶ್ ಉಡುಪರವರು ಕ್ರೀಡಾ ಜ್ಯೋತಿಯನ್ನು ಬೆಳಗಿಸಿದರು.
ಸ್ಥಳೀಯ ಪಂಚಾಯತ್ ಅಧ್ಯಕ್ಷರು ಸಭಾ ಕಾರ್ಯಕ್ರಮದ ಅಧ್ಯಕ್ಷರು ರಾಗಿಣಿ ದೇವಾಡಿಗ ಕ್ರೀಡಾ ಧ್ವಜವನ್ನು ಅರಳಿಸಿದರು.
ಇದೇ ಸಂದರ್ಭದಲ್ಲಿ ಪ್ರೌಢ ಶಾಲಾ ವಿಭಾಗದ ಕ್ರೀಡಾಕೂಟದಲ್ಲಿ ರಾಜ್ಯಮಟ್ಟವನ್ನು ಪ್ರತಿನಿಧಿಸಿದ ಐವರು ವಿದ್ಯಾರ್ಥಿಗಳನ್ನು ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಇವರು ವೈಯಕ್ತಿಕ ನಗದು ಪುರಸ್ಕಾರ ನೀಡಿ ಗೌರವಿಸಿದರು.
ಸಭೆಯಲ್ಲಿ ಸ್ಥಳೀಯ ವಾರ್ಡ್ ಸದಸ್ಯರಾದ ನಾಗರಾಜ್ ಎಂ., ಕಾಂಚನ್ ಪ್ರಾಥಮಿಕ ವಿಭಾಗದ ಎಸ್‌ಡಿಎಂಸಿ ಸದಸ್ಯರಾದ ಅಶೋಕ್, ಪ್ರೌಢ ವಿಭಾಗದ ಎಸ್ ಡಿ ಎಂ ಸಿ ಸದಸ್ಯರಾದ ಸಿದ್ದಿಕ್ ಮತ್ತು ಕುಮಾರಸ್ವಾಮಿ ಜೋಗಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಗಣೇಶ ಹೆಬ್ಬಾರ್ ನಿರೂಪಿಸಿ, ಪ್ರಾಂಶುಪಾಲರಾದ ಪ್ರಕಾಶ್ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಚಂದ್ರಶೇಖರ್ ಶೆಟ್ಟಿ ವಂದಿಸಿದರು. ಕ್ರೀಡಾಕೂಟವನ್ನು ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್ ಹೊಳ್ಳ ಮತ್ತು ಉದಯ ಮಡಿವಾಳ ಎಂ ಸಂಘಟಿಸಿದ್ದರು.











