ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ವಸತಿ ಮತ್ತು ವಸತಿಯೇತರ ಉದ್ದೇಶದ ಜಮೀನಿನ ಭೂ ಪರಿವರ್ತನೆಗೆ ಭೂ ಮಾಲೀಕರು , ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದಾಗ, ತಾಂತ್ರಿಕ ಅನುಮೋದನೆಗೆ ನಗರ ಮತ್ತು ಗ್ರಾಮಾಂತರ ಯೋಜನಾ ಕಚೇರಿ ಉಡುಪಿಗೆ ಕಳುಹಿಸಲಾಗುತ್ತದೆ. ತಾಂತ್ರಿಕ ಅನುಮೋದನೆಯ ಪೂರ್ವದಲ್ಲಿ , ಲೋಕೋಪಯೋಗಿ, ಕರಾವಳಿ ನಿಯಂತ್ರಣ, ಅರಣ್ಯ ಇಲಾಖೆ ಹಾಗೂ ಇತರ ಸಂಬಂಧಿತ ಇಲಾಖೆಗಳಿಂದ ನಿರಾಪೇಕ್ಷಣ ಪತ್ರ ಪಡೆಯಲಾಗುತ್ತಿತ್ತು. ಮುಖ್ಯವಾಗಿ ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಉಡುಪಿ ಜಿಲ್ಲೆಯ ಜಿಲ್ಲಾ ಮುಖ್ಯ ರಸ್ತೆ ಮತ್ತು ರಾಜ್ಯ ಹೆದ್ದಾರಿಗಳು, ಸ್ಥಳೀಯ ಆಡಳಿತ ನಡೆಸುತ್ತಿರುವ ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್ , ಟೌನ್ ಪಂಚಾಯತ್ ಮತ್ತು ಗ್ರಾಮ ಪಂಚಾಯತ್ ಗಳಲ್ಲಿ ಹಾದು ಹೋಗಿರುವುದರಿಂದ , ದಾಖಲಿತ ರಸ್ತೆ ಭೂಗಡಿ ಅಂಚಿನಿಂದ , ಕಟ್ಟಡ ರೇಖೆಯ ಅಂತರ ನಮೂದಿಸುವಲ್ಲಿ ಗೊಂದಲವಾಗಿ ವಿಳಂಬವಾಗುತ್ತಿತ್ತು. ಈ ಸಮಸ್ಯೆಯನ್ನು ಮನಗೊಂಡ ಕುಂದಾಪುರ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿನೋದ್ ಕ್ರಾಸ್ಟೋ ಮತ್ತು ಆನಗಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಸುರೇಶ್ ನಾಯ್ಕ್ ರವರು , ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆಯವರ ಗಮನಕ್ಕೆ ತಂದು ಸರ್ಕಾರಕ್ಕೆ ಪತ್ರವನ್ನು ಬರೆದರು. ಮಾಜಿ ಸಂಸದರಾದ ಜೆಪಿ ಹೆಗ್ಡೆಯವರು, ಮಾನ್ಯ ಜಿಲ್ಲಾಧಿಕಾರಿಗಳು, ಕಾರ್ಯಪಾಲ ಅಭಿಯಂತರರು ಲೋಕೋಪಯೊಗಿ ಇಲಾಖೆ, ಆಯುಕ್ತರು, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯೊಂದಿಗೆ, ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿ ನಗರ ಯೋಜನಾ ವಿಭಾಗದಿಂದ ಭೂ ಪರಿವರ್ತನೆಯ ಉದ್ದೇಶದ ಪ್ರಸ್ತಾವನೆಗಳನ್ನು ಶೀಘ್ರವಾಗಿ ಅನುಮೋದಿಸುವ ಅಥವಾ ತಿರಸ್ಕರಿಸಲು ಕಾಲಮಿತಿಯೊಳಗೆ ನಿಯಮಾನುಸಾರವಾಗಿ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ನೀಡುವಾಗ, ಲೋಕೋಪಯೋಗಿ ಇಲಾಖೆಯ ನಿರಾಪೇಕ್ಷಣ ಪತ್ರದ ಅವಶ್ಯಕತೆ ಇಲ್ಲದಿರುವುದು ಸೂಚಿಸಲಾಗಿದೆ.(ಭೂ ಗಡಿ ಮತ್ತು ಕಟ್ಟಡ ಗಡಿಯ ಅಂತರವನ್ನು ಷರತ್ತುಗಳಲ್ಲಿ ವಿಧಿಸಲಾಗುವುದು)
ಈ ಬಗ್ಗೆ ಇದ್ದ ಗೊಂದಲಗಳಿಗೆ ಮಾಜಿ ಸಂಸದರು ತೆರೆಯೆಳೆದು , ಕರಾವಳಿ ಭಾಗದ ಅಭಿವೃದ್ಧಿಗೆ ಅನುಕೂಲವಾಗುವಂತೆ ತೀರ್ಮಾನಿಸಲಾಯಿತು.











