ರಾಜ್ಯ ಮಹಿಳಾ ನಿಲಯದಲ್ಲಿ ನಿವಾಸಿನಿಯರ ಅದ್ಧೂರಿ ಮದುವೆ ಸಂಭ್ರಮ

0
124

Click Here

Click Here

ಕುಂದಾಪುರ ಮಿರರ್ ಸುದ್ದಿ…

ಉಡುಪಿ :ರಾಜ್ಯ ಮಹಿಳಾ ನಿಲಯವನ್ನು ಸ್ವಾಗತ ದ್ವಾರ, ಮದುವೆ ಚಪ್ಪರ, ಮಾವಿನ ತಳಿರು-ತೋರಣ, ಬಣ್ಣ-ಬಣ್ಣದ ರಂಗೋಲಿ ಚಿತ್ತಾರಗಳಿಂದ ಅಲಂಕರಿಸಲಾಗಿದ್ದು, ಯಾವುದೇ ಖಾಸಗಿ ಮದುವೆಗೆ ಕಡಿಮೆಯಿಲ್ಲ ಎಂಬಂತೆ ರಾಜ್ಯ ಮಹಿಳಾ ನಿಲಯದಲ್ಲಿ ನಡೆದ ವಿವಾಹ ಕಾರ್ಯಕ್ರಮವು ನೋಡುಗರನ್ನು ಆಕರ್ಷಿಸುತ್ತಿತ್ತು. ಮದುವೆಗೆ ಆಗಮಿಸಿದ ಗಣ್ಯರನ್ನು, ಅಧಿಕಾರಿಗಳನ್ನು ತಂಪು ಪಾನೀಯ ಹಾಗೂ ಗುಲಾಬಿ ಹೂವುಗಳನ್ನು ನೀಡಿ, ನಿಲಯದ ಸಿಬ್ಬಂದಿಗಳು ಆದರದಿಂದ ಬರಮಾಡಿಕೊಳ್ಳುತ್ತಿರುವ ದೃಶ್ಯ ಮದುವೆಗೆ ಮತ್ತಷ್ಟು ಮೆರುಗು ನೀಡಿತ್ತು.
ಇವೆಲ್ಲವೂ ಕಂಡುಬಂದಿದ್ದು, ಇಂದು ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ನಡೆದ ನಿವಾಸಿನಿಯರೇ ವಿವಾಹ ಕಾರ್ಯಕ್ರಮದಲ್ಲಿ ಎನ್ನುವುದೇ ವಿಶೇಷ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಮಹಿಳಾ ನಿಲಯ ಉಡುಪಿ ಇವರ ಸಹಯೊಗದಲ್ಲಿ ಸಂಸ್ಥೆಯ ನಿವಾಸಿನಿಯರಾದ ಚಿ.ಸೌ ಮಲ್ಲೇಶ್ವರಿ ಅವರ ವಿವಾಹವು ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಬಪ್ಪನಾಡು ಇಲ್ಲಿನ ವಾಸಿ ಸತೀಶ್ ಪ್ರಭು ಅವರ ಪುತ್ರ ಚಿ.ಸಂಜಯ ಪ್ರಭು ಅವರೊಂದಿಗೆ ಹಾಗೂ ಇನ್ನೊರ್ವ ನಿವಾಸಿನಿಯಾದ ಚಿ.ಸೌ.ಸುಶೀಲ ಅವರ ವಿವಾಹವು ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕು ಕೃಷ್ಣಾಪುರ ಗ್ರಾಮದ ಮಲ್ಲಪ್ಪ ಅವರ ಪುತ್ರ ಚಿ.ನಾಗರಾಜ ಅವರೊಂದಿಗೆ ಶಾಸ್ತ್ರೋಸ್ತವಾಗಿ, ಮಗಂಳವಾದ್ಯಗಳೊಂದಿಗೆ ಶುಭಲಗ್ನ ಸುಮೂಹೂರ್ತದಲ್ಲಿ ನಡೆದ ಮದುವೆಯಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅವರು ಧಾರೆ ಎರೆದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಮಹಿಳಾ ನಿಲಯದ ಹೆಣ್ಣು ಮಕ್ಕಳ ಜೀವನ ರೂಪಿಸಲು ಸರಕಾರದ ವತಿಯಿಂದ ಅವರುಗಳಿಗೆ ವಿದ್ಯಾಭ್ಯಾಸ, ಉದ್ಯೋಗಾವಕಾಶ, ಕೌಶಲ್ಯ ತರಬೇತಿಗಳನ್ನು ನೀಡಲಾಗುತ್ತಿದೆ. ಜೊತೆಗೆ ಅವರುಗಳ ಇಚ್ಛೆಗೆ ಅನುಸಾರವಾಗಿ ವರ ಬಂದಲ್ಲಿ ಹುಡುಗನ ಪೂರ್ವಾಪರಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ವಿವಾಹ ಮಾಡಿಕೊಡಲಾಗುವುದು. ಇಂದು ನಿಲಯದಲ್ಲಿ ನಡೆದ ಮದುವೆಯನ್ನು ಹಿಂದೂ ಸಂಪ್ರದಾಯದಂತೆ ನಡೆಸಿಕೊಡಲಾಗಿದೆ. ಮದುವೆಯ ನಂತರ ವಿವಾಹವನ್ನು ನೋಂದಣಿ ಮಾಡಲಾಗುವುದು. ನಿಲಯದ ನಿವಾಸಿನಿಯರಿಗೆ ವಿವಾಹ ಪ್ರೋತ್ಸಾಹಧನವಾಗಿ 50,000 ರೂ.ಗಳನ್ನು ಅವರುಗಳ ಹೆಸರಿನಲ್ಲಿ ಠೇವಣಿ ಇಟ್ಟು, ನಿರಂತರ ಮೂರು ವರ್ಷಗಳ ಕಾಲ ಇಲಾಖೆಯು ವಧು-ವರರ ಮುಂದಿನ ಜೀವನದ ಮೇಲೆ ನಿಗಾ ವಹಿಸಲಿದೆ. ನಂತರದಲ್ಲಿ ಸಂಸ್ಥೆಯ ನಿವಾಸಿನಿಯರ ಖಾತೆಗೆ ಹಣ ವರ್ಗಾಯಿಸಲಾಗುವುದು ಎಂದರು.

Click Here

ನಿವಾಸಿನಿ ಮಲ್ಲೇಶ್ವರಿಯು ಕಾಲೇಜು ವಿದ್ಯಾಭ್ಯಾಸ ನಡೆಸುತ್ತಿದ್ದು, ಮೂರನೇ ವರ್ಷದ ಪದವಿ ವ್ಯಾಸಾಂಗ ಮಾಡುತ್ತಿದ್ದಾರೆ. ಇವರ ಕೈಹಿಡಿದ ದ.ಕ. ಜಿಲ್ಲೆಯ ಮೂಲ್ಕಿಯ ಚಿ.ಸಂಜಯ ಪ್ರಭು ಅವರು, ಎಂ.ಕಾಂ. ವಿದ್ಯಾಭ್ಯಾಸ ಪೂರೈಸಿ, ಐ.ಬಿ.ಎಂ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಇನ್ನೋರ್ವ ನಿವಾಸಿನಿ ಸುಶೀಲ ಇವರು ಮೂಗಿ ಮತ್ತು ಕಿವುಡಿಯಾಗಿದ್ದು, ಎಲ್ಲಾ ನ್ಯೂನ್ಯತೆಯನ್ನು ಮೆಟ್ಟಿನಿಂತು ಇತರರಂತೆ ನಿಲಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿದ್ದಾರೆ. ಇವರನ್ನು ವರಿಸಿದ ಹಾಸನದ ನಾಗರಾಜ ಅವರು ಸ್ವಂತ ಉದ್ಯೋಗ ನಿರ್ವಹಿಸುತ್ತಿದ್ದು, ಈ ಎರಡೂ ಮದುವೆಯಲ್ಲಿ ವರನ ಹಿನ್ನೆಲೆಯನ್ನು ಪರಿಶೀಲಿಸಿ, ನಿವಾಸಿನಿಯರ ಒಪ್ಪಿಗೆಯೊಂದಿಗೆ, ಮಹಿಳಾ ನಿಲಯದಲ್ಲಿ ಈ ಶುಭಕಾರ್ಯವನ್ನು ದಾನಿಗಳ ಒಪ್ಪಿಗೆಯೊಂದಿಗೆ ಶಾಸ್ತ್ರೋಸ್ತವಾಗಿ ನೆರವೇರಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ನಿಲಯದ ಅಧೀಕ್ಷಕಿ ಪುಷ್ಪಾರಾಣಿ ಮಾತನಾಡಿ, ಯಾವ ವಧುವಿಗೆ ಯಾವ ವರನೆಂದು ಸ್ವರ್ಗದಲ್ಲೇ ಮೊದಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಆದರೆ ನಿಲಯದ ನಿವಾಸಿನಿಯರ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿ ಇಂದು ರಾಜ್ಯ ಮಹಿಳಾ ನಿಲಯದಲ್ಲಿ ವಿವಾಹ ಸಮಾರಂಭ ನಡೆಯುತ್ತಿದೆ. ಈಗಾಗಲೇ 25 ಮದುವೆಗಳನ್ನು ಯಶಸ್ವಿಯಾಗಿ ಪೂರೈಸಿ, 26 ಮತ್ತು 27 ನೇ ಮದುವೆಯನ್ನು ಅದ್ಧೂರಿಯಿಂದ ನಡೆಸುತ್ತಿರುವುದು ನಿಟ್ಟೂರಿನ ರಾಜ್ಯ ಮಹಿಳಾ ನಿಲಯದ ಹೆಗ್ಗಳಿಕೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಇತರೆ ಇಲಾಖೆಗಳ ಸಹಭಾಗಿತ್ವದೊಂದಿಗೆ ಮದುವೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ ಎಂದ ಅವರು, ನಿಲಯದಲ್ಲಿ ಮದುವೆಗಳು ಹೆಚ್ಚಾದಂತೆ ವಧುವನ್ನು ಅರಸಿ ಕರೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಾ ಹೋಗುತ್ತಿದೆ ಎಂದರು.

ಮದುವೆಗಾಗಿ ಸಿಹಿ ಖಾದ್ಯಗಳೊಂದಿಗೆ ಭರ್ಜರಿ ಭೋಜನವನ್ನೂ ಸಹ ಏರ್ಪಡಿಸಲಾಗಿತ್ತು. ನವ ದಂಪತಿಗಳಿಗೆ ಹರಸಿ, ಆಶೀರ್ವಚಿಸಿದ ಅತಿಥಿಗಳು, ಭೋಜನವನ್ನು ಸವೆದು ನವದಂಪತಿಗಳೊಙದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿವಾಹ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಉಪ ಪೊಲೀಸ್ ಅಧೀಕ್ಷಕ ಪ್ರಭು ಡಿ.ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ರಾಜ್ಯ ಮಹಿಳಾ ನಿಲಯದ ಸಿಬ್ಬಂದಿಗಳು, ನಿವಾಸಿನಿಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here