ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಕುಂದಾಪುರ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ಭಾರೀ ಅವ್ಯವಹಾರ ಮತ್ತು ಬಹುದೊಡ್ಡ ಹಗರಣ ನಡೆದಿದೆ. ಇದರ ಬಗ್ಗೆ ಇ.ಡಿ ಗೆ ದೂರು ನೀಡಲು ಚಿಂತನೆ ನಡೆಸಲಾಗಿದೆ. ಇತ್ತೀಚಿಗೆ ನಡೆದ ಆಡಳಿತ ಮಂಡಳಿ ಸದಸ್ಯರ ಆಯ್ಕೆಯ ಚುನಾವಣೆಯಲ್ಲಿ ಕೂಡ ಅಕ್ರಮ ನಡೆದಿದೆ ಎಂದು ಸೊಸೈಟಿಯ ಸಂತ್ರಸ್ತ ಠೇವಣಿದಾರ ರಾಜಾರಾಮ್ ಎ. ಆರೋಪಿಸಿದರು.
ಕುಂದಾಪುರ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೊಸೈಟಿಯ ಸುಮಾರು 70 ಕೋಟಿ ಠೇವಣಿಯ ಪೈಕಿ ಸುಮಾರು 40 ಕೋಟಿ ಠೇವಣಿಯನ್ನು ಯಾವುದೇ ಭದ್ರತೆ ಪಡೆದುಕೊಳ್ಳದೆ ಸೊಸೈಟಿಯ ನಿರ್ದೇಶಕರು ಮತ್ತು ಸಿಬ್ಬಂದಿಗಳ ಕುಟುಂಬಗಳಿಗೆ ನೀಡಲಾಗಿದೆ. 2016-17ನೇ ಸಾಲಿನಲ್ಲಿಯೇ ಸೊಸೈಟಿಯನ್ನು ಮುಚ್ಚುವ ಕೆಲಸ ಪ್ರಾರಂಭವಾಗಿದ್ದು, ಸಹಕಾರಿ ಇಲಾಖೆಯ ಅಧಿಕಾರಿಗಳು ಇದಕ್ಕೆ ಸಹಕಾರ ನೀಡಿದ್ದಾರೆ. ಕಳೆದ ಸುಮಾರು ಒಂದು ವರ್ಷದಿಂದ ಸೊಸೈಟಿಯಲ್ಲಿ ಠೇವಣಿ ಇಟ್ಟ ಸದಸ್ಯರಿಗೆ ಠೇವಣಿಯನ್ನು ಮರಳಿ ನೀಡದಿರುವುದರಿಂದ ಸುಮಾರು 10 ಸಾವಿರ ಸದಸ್ಯರಿಗೆ ಅನ್ಯಾಯವಾಗಿದೆ. ಯಾವುದೇ ಭದ್ರತೆ ಇಲ್ಲದೆ ಸಾಲ ನೀಡಿರುವುದರಿಂದ ವಸೂಲಾತಿ ಬಹಳ ಕಷ್ಟ ಎಂದು ಕಳವಳ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಅನೇಕ ಠೇವಣಿದಾರರು ದೂರು ನೀಡಿದರೂ ಈವರೆಗೆ ಯಾವುದೇ ಕ್ರಮಕೈಗೊಂಡಿಲ್ಲ. ನ್ಯಾಯಾಲಯ ಆಡಿಟ್ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದ್ದರೂ, ಆಡಿಟ್ ಮಾಡಲು ಸಹಕಾರ ನೀಡುತ್ತಿಲ್ಲ. ಠೇವಣಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಪೂರ್ವ ನಿಯೋಜಿತವಾಗಿ ಇಂತಹ ಕಾನೂನುಬಾಹಿರ ಚಟುವಟಿಕೆ ನಡೆಸಿದ್ದು, ಸುಮಾರು 50 ಕೋಟಿ ರೂ. ಮಿಕ್ಕಿ ವಂಚನೆ ನಡೆದಿದೆ ಎಂದು ಅವರು ಆರೋಪಿಸಿದರು.
ತಾತ್ಕಾಲಿಕವಾಗಿ ಬಾಗಿಲು ಮುಚ್ಚಲಾದ ಸೊಸೈಟಿಯನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಹೊಸ ಆಡಳಿತ ಮಂಡಳಿ ಸದಸ್ಯರ ಆಯ್ಕೆ ಚುನಾವಣೆಯಲ್ಲಿ ಹಂಗಾಮಿ ಕಾರ್ಯನಿರ್ವಹಣಾಧಿಕಾರಿ ವಾಲಂಟೈನ್ ಬ್ರಗಾಂಜ ಮತ್ತು ಚುನಾವಣಾ ನಿರ್ವಾಚನಾಧಿಕಾರಿ ವೇಣುಗೋಪಾಲ ಅವರು ಚುನಾವಣೆಯನ್ನು ಗೊಂದಲದ ಗೂಡಾಗಿರಿಸಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆ ದಿನ ಒಟ್ಟು 10 ಮಂದಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ವಾಪಾಸು ಪಡೆಯುವ ದಿನ ಒಟ್ಟು 15 ನಾಮಪತ್ರ ಸ್ವೀಕರಿಸಲಾಗಿದೆ. ಎಲ್ಲರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. 9 ಸಾಮಾನ್ಯ ಸ್ಥಾನ ಕ್ಷೇತ್ರಗಳಿಗೆ 11 ನಾಮಪತ್ರ ಸ್ವೀಕರಿಸಲಾಗಿದ್ದರೂ, ಚುನಾವಣೆ ನಡೆಸಿಲ್ಲ. ಹಳೆ ಆಡಳಿತ ಮಂಡಳಿಯ ಐದು ಮಂದಿಯ ನಾಮಪತ್ರ ಕಾನೂನುಬಾಹಿರವಾಗಿ ಸ್ವೀಕರಿಸಲಾಗಿದ್ದು, ಈ ಪೈಕಿ ಮೂವರು ಒಂದೇ ಕುಟುಂಬದ ಸದಸ್ಯರಾಗಿದ್ದಾರೆ. ಎಸ್.ಸಿ.,ಎಸ್.ಟಿ. ಸ್ಥಾನ ಮೀಸಲಿರಿಸಿಲ್ಲ. ಚುನಾವಣೆ ಸಂದರ್ಭ ನಡೆದ ಅಕ್ರಮಗಳ ಬಗ್ಗೆ ನೊಂದು 7 ಮಂದಿ ರಾಜೀನಾಮೆ ನೀಡಿದರೂ, ಸ್ವೀಕರಿಸದೆ ಅಧ್ಯಕ್ಷ/ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆಯನ್ನು ನಡೆಸಿದ್ದಾರೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದ್ದು, ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಸಂತ್ರಸ್ತ ಠೇವಣಿದಾರರಾದ ರವೀಂದ್ರ ಮಧ್ಯಸ್ಥ, ಸುದರ್ಶನ ಹಂದೆ ಎಂ. ಉಪಸ್ಥಿತರಿದ್ದರು.











