ಸಂಸತ್ತಿನಲ್ಲಿ ರಾಜ್ಯದ ಅಡಿಕೆ ಬೆಳೆಗಾರರ ವಿಷಯವನ್ನು ಮತ್ತೆ ಪ್ರಸ್ತಾಪಿಸಿರುವ ಸಂಸದ ಬಿ.ವೈ.ರಾಘವೇಂದ್ರ
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಎಲೆ ಚುಕ್ಕೆ ಮತ್ತು ಹಣ್ಣಿನ ಕೊಳೆತ (ಕೊಳೆರೋಗ) ದಂತಹ ಗಂಭೀರ ರೋಗಗಳಿಂದ ಅಡಿಕೆ ಬೆಳೆಗಳನ್ನು ರಕ್ಷಿಸಲು, ಕಾಲಕಾಲಕ್ಕೆ ಪರಿಹಾರ ಮತ್ತು ವೈಜ್ಞಾನಿಕ ನೆರವನ್ನು ವಿಸ್ತರಿಸಿಕೊಂಡೆ ಬರುತ್ತಿದೆ. ಸಂಸತ್ತಿನ ಹಾಲಿ ಅಧಿವೇಶನದಲ್ಲಿ ಶಿವಮೊಗ್ಗ ಲೋಕಸಭಾ ಸಂಸದ ಬಿ.ವೈ.ರಾಘವೇಂದ್ರ ಅವರ ಪ್ರಶ್ನೆಗೆ ಕೇಂದ್ರ ಸರ್ಕಾರ ನೀಡಿರುವ ಪ್ರತಿಕ್ರಿಯೆಯಿಂದ ಈ ವಿವರಗಳು ಬಹಿರಂಗವಾಗಿದೆ. ಕೇಂದ್ರ ಕೃಷಿ ಸಚಿವಾಲಯ 2024–25ರ ಅವಧಿಯಲ್ಲಿ ಎಲೆ ಚುಕ್ಕೆ ರೋಗದ ನಿರ್ವಹಣೆಗಾಗಿ ಕರ್ನಾಟಕ ರಾಜ್ಯ ತೋಟಗಾರಿಕಾ ಮಿಷನ್‌ಗೆ 37 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಇದರ ಜೊತೆಗೆ, 2025–26ರ ರಾಷ್ಟ್ರೀಯ ತೋಟಗಾರಿಕಾ ಮಿಷನ್‌ನ ವಿಶೇಷ ಮಧ್ಯಸ್ಥಿಕೆ ಕಾರ್ಯಕ್ರಮದಡಿಯಲ್ಲಿ, ರೋಗ ನಿಯಂತ್ರಣ ಕ್ರಮಗಳನ್ನು ಬಲಪಡಿಸಲು ರಾಜ್ಯಕ್ಕೆ ಇನ್ನೂ 8.6 ಕೋಟಿ ರೂ.ಗಳನ್ನು ಅನುಮೋದಿಸಿದೆ.
ಈ ಸಕಾಲಿಕ ಮತ್ತು ಅಗತ್ಯ ನೆರವಿಗೆ ಕೃತಜ್ಞತೆ ಸಲ್ಲಿಸಿರುವ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಕೇಂದ್ರ ಸರ್ಕಾರದ “ರೈತ-ಮೊದಲು” ನೀತಿಯ ಬದ್ಧತೆಗೆ ಇದು ಸಾಕ್ಷಿ ಎಂದು ಹೇಳಿದ್ದಾರೆ. ವೈಜ್ಞಾನಿಕ ನಿರ್ವಹಣಾ ಪ್ರೋಟೋಕಾಲ್‌ಗಳು ಸೇರಿದಂತೆ ಆರ್ಥಿಕ ನೆರವು ತಳ ಹಂತದ ಬೆಳೆಗಾರರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಮೋದಿ ಸರ್ಕಾರ ಬದ್ಧವಾಗಿದ್ದು, ಆ ಮೂಲಕ ಅಡಕೆ ಬೆಳೆಗಾರರ ರಕ್ಷಣೆಗೆ ಸದಾ ಮುಂದಾಗಿದೆ ಎಂದು ಹೇಳಿದರು. ಪ್ರಸಕ್ತ 2025–26 ಸಾಲಿನಲ್ಲಿ, ಶಿವಮೊಗ್ಗ ಜಿಲ್ಲೆಯ 2,755 ರೈತರಿಗೆ ಈಗಾಗಲೇ 146.24 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ, ಪುನರ್ ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (RWBCIS) ಅಡಿಯಲ್ಲಿ, ಕೇಂದ್ರ ಸರ್ಕಾರ ರೈತರಿಗೆ ಉತ್ತಮ ಸುರಕ್ಷತಾ ಜಾಲವನ್ನು ಒದಗಿಸಿದೆ. 2024–25ರ ಸಾಲಿನಲ್ಲಿ , ಶಿವಮೊಗ್ಗದ 86,085 ಫಲಾನುಭವಿ ಬೆಳೆಗಾರರು ಒಟ್ಟು 107 ಕೋಟಿ ರೂಪಾಯಿಗಳ ವಿಮಾ ಕ್ಲೇಮ್ ಪಾವತಿಗಳನ್ನು ಪಡೆದಿದ್ದಾರೆ ಎಂದು ಸರ್ಕಾರ ಮಾಹಿತಿ ನೀಡಿದೆ.
2025–26ನೇ ಸಾಲಿನಲ್ಲಿ ಶಿವಮೊಗ್ಗದಿಂದ 1.18 ಲಕ್ಷಕ್ಕೂ ಹೆಚ್ಚು ವಿಮಾ ಅರ್ಜಿಗಳು ಬಂದಿದ್ದು, ಹಳದಿ ಎಲೆ ಮತ್ತು ಎಲೆ ಚುಕ್ಕೆ ರೋಗಗಳಿಂದ ಉಂಟಾಗಿರುವ ಬೆಳೆ ನಷ್ಟ ಎದುರಿಸುತ್ತಿರುವ ಬೆಳೆಗಾರರಿಗೆ ಸಮರ್ಪಕ ರಕ್ಷಣೆ ಸಿಗಬೇಕು ಮತ್ತು WBCIS ವಿಮಾ ಲೆಕ್ಕಾಚಾರದಲ್ಲಿ ಉಂಟಾಗಿರುವ ತಾಂತ್ರಿಕ ಅಡಚಣೆ ಹೋಗಲಾಡಿಸಿ, ಅಂತರವನ್ನು ಸರಿಪಡಿಸಬೇಕೆಂದು ಸಂಸದ ರಾಘವೇಂದ್ರ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.











