ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಮೈಸೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಪ್ರಸಾದ್ ರೆಡ್ಡಿ ಇವರು ಕೋಟ ಸಹಕಾರಿ ವ್ಯವಸಾಯಕ ಸಂಘಕ್ಕೆ ಡಿ.18ರಂದು ಭೇಟಿ ನೀಡಿದರು.
ಸಂಘದ ಅಧ್ಯಕ್ಷರಾದ ಡಾ. ಕೃಷ್ಣ ಕಾಂಚನ್ ಇವರು ಸಹಕಾರ ಸಂಘಗಳ ಜಂಟಿ ನಿಬಂಧಕರು ಮತ್ತು ಸಹಕಾರಿ ಇಲಾಖೆಯ ಅಧಿಕಾರಿಗಳನ್ನು ಸ್ವಾಗತಿಸಿ, ಸಂಘವು ನಡೆದು ಬಂದ ದಾರಿ, ಸದಸ್ಯತ್ವ, ಸದಸ್ಯರಿಗೆ ಸಂಘದಿಂದ ದೊರಕುವ ವಿವಿಧ ಸಾಲಗಳು, ಸ್ವಸಹಾಯ ಸಂಘ ರಚನೆ, ಸಾಲ ವಿತರಣೆ ಮತ್ತು ವಸೂಲಾತಿ, ಸಂಘದ ಸ್ವಂತ ಕಟ್ಟಡಗಳು ಮತ್ತು ಗೋದಾಮುಗಳು, ಸಂಘದ ವ್ಯವಹಾರ ಅಭಿವೃದ್ಧಿ, ಸದಸ್ಯರಿಗೆ ನೀಡಲಾಗುತ್ತಿರುವ ಸೇವೆಗಳು ಮತ್ತು ಸವಲತ್ತುಗಳ ಬಗ್ಗೆ ಅವರಿಗೆ ಮಾಹಿತಿ ನೀಡಿದರು.
ಮೈಸೂರು ವಿಭಾಗದ ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಪ್ರಸಾದ್ ರೆಡ್ಡಿ ಇವರು ಸಂಘದ ಕಾರ್ಯಚಟುವಟಿಕೆ ಮತ್ತು ಸಂಘದ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಸಂಘದ ವ್ಯವಸ್ಥಿತ ಕಾರ್ಯವೈಖರಿ, ಸೇವಾ ಮನೋಭಾವ ಹಾಗೂ ಕಾರ್ಯತತ್ಪರತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಘದ ಅಭಿವೃದ್ಧಿ ಮತ್ತು ಜನಪರ ಕಾರ್ಯಗಳನ್ನು ಶ್ಲಾಘಿಸಿ, ಸಂಘದ ನೂತನ ವಿಶಿಷ್ಟ ಯೋಜನೆಗಳಲ್ಲಿ ಒಂದಾದ ‘ಸಕಲ’ ಕೃಷಿ ಉಪಕರಣಗಳ ಮಾರಾಟ ಮಳಿಗೆಗೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪ್ರಶಂಸೆ ವ್ಯಕ್ತಪಡಿಸಿದರು.
ಸಂಘಕ್ಕೆ ಭೇಟಿ ನೀಡಿದ ಜಂಟಿ ನಿಬಂಧಕರಾದ ಪ್ರಸಾದ್ ರೆಡ್ಡಿ ಇವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಎಚ್. ನಾಗರಾಜ ಹಂದೆ, ನಿರ್ದೇಶಕರಾದ ಜಿ. ತಿಮ್ಮ ಪೂಜಾರಿ ಮತ್ತು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಶರತ್ ಕುಮಾರ್ ಶೆಟ್ಟಿ ಭೇಟಿ ನೀಡಿದ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ ಕೆ. ಆರ್., ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಜೆ. ಸುಧೀರ್ ಕುಮಾರ್, ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕ ಕಛೇರಿಯ ಕೆ. ಆರ್. ರೋಹಿತ್ ಮತ್ತು ಸುನಿಲ್ ಕುಮಾರ್ ಸಿ. ಎಮ್., ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಬ್ರಹ್ಮಾವರ ವಲಯ ಮೇಲ್ವಿಚಾರಕರಾದ ರಾಜಾರಾಮ ಶೆಟ್ಟಿ ಇವರು ಉಪಸ್ಥಿತರಿದ್ದರು.











