ಧಾರ್ಮಿಕ ಮುಂದಾಳು ಬಸ್ರೂರು ಅಪ್ಪಣ್ಣ ಹೆಗ್ಡೆಯವರ 91ನೇ ಹುಟ್ಟುಹಬ್ಬ – ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ಅವರಿಗೆ ಬಿ. ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ ಪ್ರದಾನ, ಬಿ.ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದಿಂದ ದತ್ತಿನಿಧಿ ಹಸ್ತಾಂತರ.
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಅಪ್ಪಣ್ಣ ಹೆಗ್ಡೆ ಅವರ ಬದುಕು ಧರ್ಮಾಧಾರಿತ ಮತ್ತು ಮಾನವಾಧಾರಿತ. ಧರ್ಮವನ್ನು ಬಿಟ್ಟು ಅಧರ್ಮವನ್ನು ಎಲ್ಲೂ ಆಚರಣೆ ಮಾಡಿಲ್ಲ. ಸವ್ಯಸಾಚಿ ಅಪ್ಪಣ್ಣ ಎಲ್ಲಾ ಕ್ಷೇತ್ರದಲ್ಲಿ ಕೈಯಾಡಿಸಿದವರು ಮತ್ತು ತನ್ನತನವನ್ನು ತನ್ನ ಗಟ್ಟಿತನವನ್ನು ಉಳಿಸಿಕೊಂಡು ತನ್ನ ಬದುಕನ್ನು ಬೆಳೆಸಿಕೊಂಡವರು. ಅಪ್ಪಣ್ಣ ಹೆಗ್ಡೆಯವರು ಕಾಯಕದಲ್ಲಿ ಕೈಲಾಸವನ್ನು ಕಂಡ ಕರ್ಮಯೋಗಿ, ಬದುಕನ್ನು ಕ್ಷಣ ಕ್ಷಣಕ್ಕೂ ನಿಷ್ಕರ್ಷಕ್ಕೆ ಒಡ್ಡಿ ಬದುಕನ್ನು ಸಾರ್ಥಕಪಡಿಸಿಕೊಂಡ ಭಗೀರಥ. ಮನುಕುಲದ ಸೇವೆಯನ್ನೇ ಅನ್ನ, ಅರಿವೇ, ಅಸು, ಆತ್ಮ, ಅಮೃತ ಎಂದು ಭಾವಿಸಿ ಎಲ್ಲರಿಗೂ ಮಾರ್ಗದರ್ಶನ ಮಾಡುತ್ತಿದ್ದರು ಎಂದು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಹೇಳಿದರು.
ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ಬಸ್ರೂರು ಇದರ ವತಿಯಿಂದ ಬಸ್ರೂರು ಶ್ರೀ ಶಾರದಾ ಕಾಲೇಜಿನ ವಠಾರದಲ್ಲಿ ಜರಗಿದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ 91ನೇ ಹುಟ್ಟು ಹಬ್ಬದ ಆಚರಣೆ, ದತ್ತಿನಿಧಿ ವಿತರಣೆ ಹಾಗೂ ಕೃಷಿ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಶುಭಾಶಂಸನೆಗೈದರು.
ಇದೇ ಸಂದರ್ಭ ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್ ಅವರಿಗೆ ಕೃಷಿ ಕಂಠೀರವ ಬಿರುದು ನೀಡಿ ಬಿ.ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಕುದಿ ಶ್ರೀನಿವಾಸ ಭಟ್, ಕೃಷಿ ಉಳಿದರೆ ಮಾತ್ರ ನಮ್ಮ ಸಂಸ್ಕøತಿ ಉಳಿಯುತ್ತದೆ. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿಗೆ ಹೆಚ್ಚು ಮಹತ್ವ ನೀಡಬೇಕು. ಕೃಷಿ ಲಾಭದಾಯಕ ಅಲ್ಲ ಎಂದು ಹೇಳಬಾರದು. ಕೃಷಿ ಉಳಿದರಷ್ಟೇ ನಮ್ಮ ಬದುಕು. ಇಂದಲ್ಲ ನಾಳೆ ಕೃಷಿಗೆ ಬೆಲೆ ಬಂದೇ ಬರುತ್ತದೆ. ಕೃಷಿಯನ್ನು ಲಾಭದಾಯಕ ಮಾಡಲು ಗಮನಹರಿಸಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಅನಾರೋಗ್ಯಪೀಡಿತರಿಗೆ ಆರೋಗ್ಯ ನಿಧಿಯಿಂದ ಸಹಾಯಧನ ವಿತರಿಸಲಾಯಿತು.
ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅನುಪಮಾ ಎಸ್.ಶೆಟ್ಟಿ ಸ್ವಾಗತಿಸಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ಅಧ್ಯಕ್ಷ ರಾಮಕಿಶನ್ ಹೆಗ್ಡೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಮೊಳಹಳ್ಳಿ ಅಕ್ಷಯ್ ಹೆಗ್ಡೆ ಸನ್ಮಾನ ಪತ್ರ ವಾಚಿಸಿದರು. ಪತ್ರಕರ್ತ ಕೆ.ಸಿ.ರಾಜೇಶ್ ಕಾರ್ಯಕ್ರಮ ನಿರ್ವಹಿಸಿದರು. ಕಾಲೇಜಿನ ಪ್ರಾಂಶುಪಾಲೆ ಚಂದ್ರಾವತಿ ಶೆಟ್ಟಿ ವಂದಿಸಿದರು.











