
ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ವಾರಾಹಿ ನೀರಾವರಿ ಯೋಜನೆಯ ಮೂಲ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಜಿಲ್ಲಾ ರೈತ ಸಂಘವು ನಡೆದುಕೊಳ್ಳುತ್ತಿದೆ. ರೈತ ಸಂಘದ ಇತ್ತೀಚಿನ ದ್ವಂದ್ವ ನಿಲುವುಗಳು ಸಮಾಜದಲ್ಲಿ ಗೊಂದಲ ಮೂಡಿಸುತ್ತಿವೆ ಎಂದು ಬಿಜೆಪಿ ಬೈಂದೂರು ಮಂಡಲದ ಉಪಾಧ್ಯಕ್ಷ ರಾಘವೇಂದ್ರ ನೆಂಪು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ, ಈ ಹಿಂದೆ ವಾರಾಹಿ ಯೋಜನೆಯ ಮೂಲ ಉದ್ದೇಶ ಬಿಟ್ಟು ಬೇರೆ ಯೋಜನೆ ಮಾಡಬಾರದು ಎಂದು ಧರಣಿ ಕುಳಿತಿದ್ದ ರೈತ ಸಂಘ, ಈಗ ಸಿದ್ದಾಪುರ ಏತ ನೀರಾವರಿ ಯೋಜನೆಯ ವಿಷಯದಲ್ಲಿ ತನ್ನ ನಿಲುವು ಬದಲಿಸಿದೆ. ಹೊಸಂಗಡಿ ಗ್ರಾಮದ ಹೋರಿಅಬ್ಬೆ ಡ್ಯಾಂ ಕೆಳಭಾಗದಲ್ಲಿ ಸಿದ್ದಾಪುರ ಏತ ನೀರಾವರಿ ಯೋಜನೆ ಜಾರಿಯಾದರೆ ನದಿ ಪಾತ್ರದ ಗ್ರಾಮಗಳು, ಪಟ್ಟಣ ಪಂಚಾಯತ್ ಹಾಗೂ ಪುರಸಭೆಗಳಿಗೆ ಕುಡಿಯುವ ನೀರು ಮತ್ತು ರೈತಾಪಿ ವರ್ಗಕ್ಕೆ ಅನುಕೂಲವಾಗಲಿದೆ. ಈ ಕಾರಣಕ್ಕಾಗಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ಸಹ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಹೊಸ ಯೋಜನೆಗಳು ಮೂಲ ನದಿಯಲ್ಲೇ (ಹೋರಿಅಬ್ಬೆ ಡ್ಯಾಂ ಮೇಲ್ಭಾಗದಲ್ಲಿ) ಆರಂಭಗೊಂಡರೆ ವಾರಾಹಿ ಮೂಲ ನದಿ ಭವಿಷ್ಯದಲ್ಲಿ ಕಣ್ಮರೆಯಾಗುವ ಆತಂಕವಿದೆ. ಇದರಿಂದ ವಾರಾಹಿ ಕಾಲುವೆಗಳಲ್ಲಿ ನೀರಿನ ಕೊರತೆಯಾಗಿ ಇಡೀ ಯೋಜನೆ ನಿಂತುಹೋಗುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ರೈತ ಸಂಘವು ಕೇವಲ ಒಂದು ನಿರ್ದಿಷ್ಟ ಯೋಜನೆಯ ಬಗ್ಗೆ ಮಾತ್ರ ಮಾತನಾಡದೆ, ವಾರಾಹಿ ಕಾಲುವೆ ನೀರನ್ನು ನಂಬಿಕೊಂಡಿರುವ ಮತ್ತು ನದಿ ಪಾತ್ರದ ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದ ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದರು. ಬ್ರಹ್ಮಾವರ ಸಕ್ಕರೆ ಕಾರ್ಖಾನೆಗೆ ಕಬ್ಬು ಬೆಳೆಸಲು ನೀರು ಬೇಕು ಎನ್ನುವ ರೈತ ಸಂಘದ ನಾಯಕರು, ಸಿದ್ದಾಪುರ ಏತ ನೀರಾವರಿ ಯೋಜನೆಯ ಬಗ್ಗೆ ಯಾಕೆ ದ್ವಂದ್ವ ನಿಲುವು ತಳೆದಿದ್ದಾರೆ ಎಂದು ನಮ್ಮ ಪ್ರಶ್ನೆ ಎಂದರು.
ಎಲ್ಲ ರೈತ ಬಾಂಧವರಿಗೂ ಒಂದೇ ನ್ಯಾಯ ದೊರೆಯಬೇಕು. ಅಣೆಕಟ್ಟಿನ ಜಾಗ ಬದಲಿಸದೇ ಇದ್ದರೆ ತೊಂದರೆ ಆಗುವುದನ್ನು ತಪ್ಪಿಸಬೇಕು. ಕಕುರ್ಂಜೆ, ನೆಂಪು, ಗುಲ್ವಾಡಿ, ಹಟ್ಟಿಯಂಗಡಿಗೆ ಈಗಾಗಲೇ ಸೌಕೂರು ಏತ ನೀರಾವರಿಯಿಂದ ಪ್ರಯೋಜನ ಆಗಿದ್ದು ಉದ್ದೇಶಿತ ಕಾಮಗಾರಿಯಿಂದ ಕುಡಿಯುವ, ಕೃಷಿ ನೀರಿಗೆ ತೊಂದರೆ ಆಗಬಾರದು ಎಂದರು.
ಹೆಮ್ಮಾಡಿ ಮೀನುಗಾರರ ಸೊಸೈಟಿ ಅಧ್ಯಕ್ಷ ರಾಜೀವ ಶ್ರೀಯಾನ್, ರಮೇಶ್ ಮೊಗವೀರ, ಚಂದ್ರಶೇಖರ ಶೆಟ್ಟಿ, ಸತೀಶ ಮೊಗವೀರ, ರಾಜು ಮೆಂಡನ್, ಬಚ್ಚು ನಾಯ್ಕ ಉಪಸ್ಥಿತರಿದ್ದರು.










