ಗುರುಕುಲ ಮಾದರಿ ಶಿಕ್ಷಣ ಜಾರಿಗೆ ನೀಡಿ –ಕೇಮಾರು ಶ್ರೀ

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ನಮ್ಮ ದೇಶದಲ್ಲಿ ಗುರುಕುಲ ಮಾದರಿಯ ಶಿಕ್ಷಣ ಪದ್ದತಿಯನ್ನು ಜಾರಿಗೆ ತರಬೇಕು ಎಂದು ಕೇಮಾರಿನ ಸಾಂದೀಪನಿಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಶ್ರೀಪಾದಂಗಳ ನುಡಿದರು.
ಭಾನುವಾರ ಸಾಸ್ತಾನದ ಕಾರ್ತಿಕೇಯ ಎಸ್ಟೇಟ್‍ನಲ್ಲಿ
ಹಿಂದೂ ಸಂಗಮ ಆಯೋಜನಾ ಸಮಿತಿ ಸಾಲಿಗ್ರಾಮ ತಾಲೂಕಿನ ಸಾಸ್ತಾನ ಮಂಡಲದ ಆಶ್ರಯದಲ್ಲಿ ಬೃಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಆಶ್ರೀವಚನ ನೀಡಿ ಮಾತನಾಡಿ ಹಿಂದೆ ಗುರುಕುಲ ಮಾದರಿ ಶಿಕ್ಷಣ ಇದಿತ್ತು ಆದರೆ ಇಂದು ಗುಲಾಮಿ ಶಿಕ್ಷಣದಿಂದ ಇಡೀ ದೇಶವೇ ಸಮಸ್ಯೆ ಎದುರಿಸುತ್ತಿದ್ದೇವೆ.
ಸಂಸ್ಕಾರಭರಿತ ಶಿಕ್ಷಣವನ್ನು ನಮ್ಮ ಮುಂದಿನ ತಲೆಮಾರಿಗೆ ತಾಯಂದಿರರು ನೀಡಬೇಕಿದೆ. ಆಂಗ್ಲ ಶಿಕ್ಷಣ ವ್ಯಾಮೂಹದಿಂದ ನಮ್ಮ ಸಂಪ್ರದಾಯ ಪರಂಪರೆಯನ್ನು ಮರೆತು ಬಿಡುತ್ತಿದ್ದೇವೆ. ಇದರ ದುಷ್ಪರಿಣಾಮ ಇಂದು ಅನುಭವಿಸುತ್ತಿದ್ದೇವೆ ಇದಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸಮರ್ಪಣಾ ಮನೋಭಾವದಿಂದ ಹಗಲು ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿದೆ. ಹಿಂದೂ ಸಮುದಾಯದ ಮಕ್ಕಳಿಗೆ ಭಗವದ್ಗೀತೆ, ರಾಮಾಯಣ ಮಹಾಭಾರತದಂತಹ ಕಾವ್ಯವನ್ನು ಪ್ರತಿದಿನ ಓದಿಸಿ ಹಿಂದೂ ಧರ್ಮವನ್ನು ನಿರಂತರ ಜಾಗೃತಗೊಳಿಸುವ ಕೆಲಸ ನಮ್ಮ ಪೋಷಕರಿಂದಾಗಬೇಕು. ಹಿಂದೂ ಸಂಗಮದ ಮೂಲಕ ಜಾಗೃತಗೊಳಿಸುವ ಕಾರ್ಯ ನಿತ್ಯನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹಕ ಪ್ರಕಾಶ್ ಎಸ್.ಪಿ ದಿಕ್ಸೂಚಿ ಭಾಷಣಗೈದು
ಅಖಂಡವಾಗಿದ್ದ ಈ ಭರತ ಖಂಡವನ್ನು ಮರುಜೋಡಿಸುವ ಕೆಲಸ ಮಾಡಬೇಕು. ಸನಾತನ ಹಿಂದೂ ಧರ್ಮವನ್ನು ಮತ್ತಷ್ಟು ಜಾಗೃತಗೊಳಿಸುವ ಕಾರ್ಯ ಮಾಡಬೇಕಿದೆ. ಜಗತ್ತಿಗೆ ಭಾರತ ವಿಶ್ವಗುರು ಎನಿಸಿದೆ ಅದೇ ರೀತಿ ಧರ್ಮಜಾಗೃತಿಗಾಗಿ ಕುಟುಂಬ ಪ್ರಭೋದನ್, ಸಂಸ್ಕೃತಿ ರಕ್ಷಣೆ, ವಿದೇಶಿ ಆಚರಣೆ ಅಂತ್ಯಗೊಳ್ಳಬೇಕು, ಅಸ್ಪೃಶ್ಯತೆ ತೊಡೆದುಹಾಕಬೇಕು, ಪರಿಸರದ ಮೇಲೆ ರ್ದೌಜನ್ಯಕ್ಕೆ ಕಡಿವಾಣ ಹಾಕಬೇಕು ಈ ಮೂಲಕ ಅದರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ರಾಮಮಂದಿರದ ಮೂಲಕ ಸ್ವದೇಶಿ ಚಿಂತನೆ ಜಾಗೃತಗೊಂಡಿದೆ, ಕೃಷಿಗೆ ವಿಷಕಾರಿ ವಸ್ತುಗಳ ಬಳಕೆಗೆ ಕಡಿವಾಣ ಹಾಕಿ ಸಾವಯವ ಪದ್ದತಿ ಜಾರಿಗೊಳಿಸಬೇಕು ಎಂದರು.
ಸಭೆಯ ಅಧ್ಯಕ್ಷತೆಯನ್ನು ಹಿಂದೂ ಸಂಗಮ ಸಾಸ್ತಾನ ಮಂಡಲದ ಅಧ್ಯಕ್ಷ ರಘು ಪೂಜಾರಿ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕಚ್ಚೂರು ಮಾಲ್ತಿಯಮ್ಮ ದೇಗುಲದ ಟ್ರಸ್ಟಿ ವಾಸುದೇವ ಹಂಗಾರಕಟ್ಟೆ, ಸಾಸ್ತಾನದ ಪ್ರಸಿದ್ಧ ವೈದ್ಯೆ ಡಾ.ಉಷಾ ಹೇಮಂತ್, ಹಿಂದೂ ಸಂಗಮದ ಉಪಾಧ್ಯಕ್ಷ ಎಂ.ಸಿ ಚಂದ್ರಶೇಖರ ಉಪಸ್ಥಿತರಿದ್ದರು.
ಸಮಿತಿಯ ಪ್ರಮುಖರಾದ ಯೋಗಗುರುಕುಲದ ಡಾ.ವಿದ್ವಾನ್ ವಿಜಯ ಮಂಜರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಪ್ರಶಾಂತ್ ಶೆಟ್ಟಿ ನಿರೂಪಿಸಿದರೆ, ಸಮಿತಿಯ ಸುರೇಶ್ ಪೂಜಾರಿ ಪಾಂಡೇಶ್ವರ ಸ್ವಾಗತಿಸಿದರು. ಹಿಂದೂ ಸಂಗಮ ಸಾಲಿಗ್ರಾಮ ತಾಲೂಕಿನ ಸಂಯೋಜಕ ಸುರೇಂದ್ರ ಕೋಡಿ ವಂದಿಸಿದರು.
ಇದೇ ವೇಳೆ ಕೇಮಾರು ಈಶವಿಠಲದಾಸ ಸ್ವಾಮೀಜಿಯವರನ್ನು ಫಲಪುಷ್ಭಗಳೊಂದಿಗೆ ಗೌರವಿಸಿಕೊಳ್ಳಲಾಯಿತು.
ಸಾಸ್ತಾನದ ಶಿವಕೃಪಾ ಕಲ್ಯಾಣಮಂಟಪದಿಂದ ಬೃಹತ್ ಹಿಂದೂ ಸಂಗಮ ಶೋಭಯಾತ್ರೆ ವೈಭವದಿಂದ ಕಾರ್ತಿಕೇಯ ಎಸ್ಟೇಟ್ ವರೆಗೆ ನಡೆದ ಮೆರವಣಿಗೆಯಲ್ಲಿ ವಿವಿಧ ಸ್ಥಭ್ಧ ಚಿತ್ರಗಳು, ವಿವಿಧ ಭಜನಾ ತಂಡಗಳು ಚಂಡೆ ವಾದನದೊಂದಿಗೆ ಭಾಗವಹಿಸಿದವು.
ಈ ಮೊದಲು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಪಾರಾಯಣ ತಂಡ ಬ್ರಹ್ಮಾವರ ಇವರಿಂದ ಭಗವದ್ಗೀತೆ ಪಾರಾಯಣ, ಮೀನಾ ಕಾರಂತ ನೇತ್ರತ್ವದ ಹೆಜ್ಜೆಗೆಜ್ಜೆ ನೃತ್ಯ ತಂಡದಿಂದ ನೃತ್ಯ ಸಿಂಚನ,ದೇಶ ಭಕ್ತಿಗೀತೆಗಾಯನ ಜರಗಿತು. ಕಲಾವಿದ ಮಂಜುನಾಥ ಕುಂದೇಶ್ವರ ಇವರಿಂದ ಹಾಸ್ಯ ಸಂಜೆ ಜರಗಿತು. ಸ್ಥಳೀಯ ಗಾಯಕರಿಂದ ಸಂಗೀತ ಸಂಜೆ ಜರಗಿತು.











