ಹಾಲಾಡಿ ಗ್ರಾಮ ಪಂಚಾಯತ್‍ಗೆ ಶಾಶ್ವತ ಆದಾಯದ ದೂರದೃಷ್ಟಿಯಿಂದ ಕಟ್ಟಡ ನಿರ್ಮಾಣ, ಯಾವುದೇ ಭ್ರಷ್ಟಚಾರ ನಡೆದಿಲ್ಲ – ಅಶೋಕ್ ಶೆಟ್ಟಿ ಚೋರಾಡಿ
ಕುಂದಾಪುರ ಮಿರರ್ ಸುದ್ದಿ…


ಹಾಲಾಡಿ: ಹಾಲಾಡಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆ ಪ್ರಥಮ ಮಹಡಿಯಲ್ಲಿದ್ದು, ಮೂಲ ಸೌಕರ್ಯಗಳ ಸಮಸ್ಯೆ ಹಾಗೂ ಹಿರಿಯರು, ವಿಶೇಷಚೇತನರಿಗೆ ಬ್ಯಾಂಕ್‍ಗೆ ಹೋಗಲು ಅನಾನೂಕುಲವಾಗಿದ್ದು ಪಕ್ಕದಲ್ಲಿ ಗ್ರಾಮ ಪಂಚಾಯಿತಿಯಿಂದ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಬ್ಯಾಂಕನ್ನು ಸ್ಥಳಾಂತರ ಮಾಡುವ ಕುರಿತು ವಿಶೇಷ ಗ್ರಾಮ ಸಭೆ ಸೋಮವಾರ ನಡೆಯಿತು. ಅನಾನೂಕುಲಕರವಾದ ಕಟ್ಟಡದಲ್ಲಿರುವ ಬ್ಯಾಂಕನ್ನು ಅನುಕೂಲಕರವಾದ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಬಗ್ಗೆ ಗ್ರಾಮಸ್ಥರು ಸರ್ವಾನುಮತದ ಒಪ್ಪಿಗೆ ಸೂಚಿಸಿದರು.
ಬ್ಯಾಂಕ್ ಆಫ್ ಬರೋಡ ಶಾಖೆ ಇರುವ ಕಟ್ಟಡ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದ್ದು ಪ್ರಥಮ ಮಹಡಿಯಲ್ಲಿ ಬ್ಯಾಂಕ್ ಇರುವುದರಿಂದ ಜನಸಾಮಾನ್ಯರಿಗೆ, ವಿಶೇಷ ಚೇತನರಿಗೆ ವ್ಯವಹಾರಗಳಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಾಕಷ್ಟು ಸಾರ್ವಜನಿಕ ದೂರುಗಳು ಗ್ರಾ.ಪಂ.ಗೆ ಬರುತ್ತಿವೆ. ಹಾಲಾಡಿ ಗ್ರಾಮ ಪಂಚಾಯತ್‍ಗೆ ಶಾಶ್ವತ ಆದಾಯದ ದೂರದೃಷ್ಟಿಯಿಂದ ಕಟ್ಟಡ ನಿರ್ಮಾಣಕ್ಕೆ ಮುಂದಾದೆವು. ಈ ಬಗ್ಗೆ ಸತತ ಸಾಮಾನ್ಯ ಸಭೆಯಲ್ಲಿ ನಿರ್ಣಯಗಳನ್ನು ಮಾಡಲಾಗಿತ್ತು. ಉದ್ಯೋಗ ಖಾತರಿ ಯೋಜನೆಯನ್ನು ಗ್ರಾಮ ಪಂಚಾಯತ್ ಭವನ ವಾಣಿಜ್ಯ ಉದ್ದೇಶಕ್ಕೆ ಬಳಸಲು ಅವಕಾಶ ಇಲ್ಲದ ಕಾರಣ, ಇಲ್ಲಿಯವರೆಗೆ ಪಾವತಿಯಾದ ಮೊತ್ತ ರೂ.3,87,760 ನ್ನು ಗ್ರಾಮ ಪಂಚಾಯತ್ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಪಾವತಿಸಿದ್ದೇನೆ ಇಲ್ಲಿ ಯಾವುದೇ ಭ್ರಷ್ಟಚಾರ ನಡೆದಿಲ್ಲ ಎಂದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶೋಕ್ ಶೆಟ್ಟಿ ಚೋರಾಡಿ ಹೇಳಿದರು.
ಸೋಮವಾರ ನಡೆದ ಹಾಲಾಡಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆ ಪ್ರಥಮ ಮಹಡಿಯಲ್ಲಿದ್ದು, ಮೂಲ ಸೌಕರ್ಯಗಳ ಸಮಸ್ಯೆ ಹಾಗೂ ಹಿರಿಯರು, ವಿಶೇಷಚೇತನರಿಗೆ ಬ್ಯಾಂಕ್‍ಗೆ ಹೋಗಲು ಅನಾನೂಕುಲವಾಗಿದ್ದು ಪಕ್ಕದಲ್ಲಿ ಗ್ರಾಮ ಪಂಚಾಯಿತಿಯಿಂದ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಬ್ಯಾಂಕನ್ನು ಸ್ಥಳಾಂತರ ಮಾಡುವ ಕುರಿತು ವಿಶೇಷ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾನು ಕಳೆದ 37 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಒಂದು ರೂಪಾಯಿಯ ಭ್ರಷ್ಟಚಾರವನ್ನೂ ಮಾಡಿಲ್ಲ. ನಾನು ಯಾವ ತಪ್ಪನ್ನು ಮಾಡಿಲ್ಲ, ಸಾಮಾಜಿಕ, ರಾಜಕೀಯ ವ್ಯವಸ್ಥೆಯಲ್ಲಿ ಹೇಗಿರಬೇಕು ಎಂದು ನನ್ನ ಗುರುಗಳಿಂದ ಕಲಿತುಕೊಂಡಿದ್ದೇನೆ. ಈ ಬಗ್ಗೆ ಆರೋಪ ಮಾಡುವ ವ್ಯಕ್ತಿಗಳು ಮೊದಲು ಆತ್ಮವಲೋಕನ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬ್ಯಾಂಕ್ ಆಫ್ ಬರೋಡ ಕೇಂದ್ರ ಸ್ವಾಮ್ಯದ ಬ್ಯಾಂಕ್, ಗ್ರಾಮ ಪಂಚಾಯತ್ ರಾಜ್ಯ ಸರ್ಕಾರ ಅಧೀನದ ಸಂಸ್ಥೆ. ಸಾರ್ವಜನಿಕರಿಗೆ ಅನುಕೂಲವಾದ ಸೇವೆ ನೀಡಲು ನಾವು ಪ್ರಯತ್ನ ಮಾಡುತ್ತಿದ್ದೇವೆ ವಿನಃ ಇದರಲ್ಲಿ ಖಾಸಗಿ ಕಟ್ಟಡ ಮಾಲೀಕರ ಆರೋಪಗಳಿಗೆ ಅರ್ಥವಿಲ್ಲ. ನಾನು ಶುದ್ಧ ಹಸ್ತನಾಗಿಯೇ ಜನರ ಮುಂದೆ ಗುರುತಿಸಿಕೊಳ್ಳುತ್ತೇನೆ ಎಂದರು.
ಬ್ಯಾಂಕ್ ಆಫ್ ಬರೋಢ ಈಗ ನಿರ್ಮಾಣವಾಗುತ್ತಿರುವ ಗ್ರಾಮ ಪಂಚಾಯತ್ ಕಟ್ಟಡದ ತಳ ಅಂತಸ್ತಿನಲ್ಲಿ ಕಾರ್ಯನಿರ್ವಹಿಸುವುದು ಶತಸಿದ್ಧ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಇದರಿಂದ ಹಾಲಾಡಿ ಗ್ರಾಮ ಪಂಚಾಯತ್‍ಗೆ ಶಾಶ್ವತ ಆದಾಯ ಬರುತ್ತದೆ ಎಂದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ ಮಾತನಾಡಿ, ಈಗ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ಕಟ್ಟಡ ಸಮಸ್ಯೆಗಳ ಅಗರವಾಗಿದೆ. ನೀರಿನ ವ್ಯವಸ್ಥೆಇಲ್ಲ, ಸುಣ್ಣಬಣ್ಣವಿಲ್ಲ, ಲಿಫ್ಟ್ ವ್ಯವಸ್ಥೆ ಇಲ್ಲ, ಇಕ್ಕಟ್ಟಾದ ಮೆಟ್ಟಿಲು ಮಾತ್ರವಲ್ಲದೆ ಪ್ರಥಮ ಮಹಡಿಯಲ್ಲಿ ಅವೈಜ್ಞಾನಿಕವಾಗಿ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಈಗ ಬ್ಯಾಂಕಿಗೆ ಬರುವವರು ವಯಸ್ಸಾದವರು. ಅವರಿಗೆ ಮೆಟ್ಟಿಲು ಏರಿ ಬರಲು ಸಾಧ್ಯವಾಗುವುದಿಲ್ಲ. ಮಳೆಗಾಲದಲ್ಲಿ ಸಮಸ್ಯೆ ಇನ್ನೂ ಗಂಭೀರವಾಗಿರುತ್ತದೆ. ಆದ್ದರಿಂದ ಗ್ರಾಮ ಪಂಚಾಯಿತಿಯಿಂದ ನಿರ್ಮಾಣವಾಗುವ ಹೊಸ ಕಟ್ಟಡದ ತಳ ಅಂತಸ್ತಿಗೆ ಬ್ಯಾಂಕ್ ಸ್ಥಳಾಂತರವಾಗಲೇ ಬೇಕು ಎಂದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನಾಗರಾಜ ಗೊಳಿ ಮಾತನಾಡಿ, ಹಾಲಾಡಿ ಗ್ರಾಮ ಪಂಚಾಯಿತಿಗೆ ಯಾವುದೇ ಆದಾಯವಿಲ್ಲ. ಹಿಂದೆ ವಿಜಯ ಬ್ಯಾಂಕ್ ಗ್ರಾಮ ಪಂಚಾಯತ್ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದು, ಕಟ್ಟಡ ಶಿಥಿಲಗೊಂಡ ಕಾರಣ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಕೂಡಲೇ ನಮಗೆ ಹೊಸ ಕಟ್ಟಡ ಮಾಡಲು ಅನುದಾನದ ಲಭ್ಯತೆ ಇರಲಿಲ್ಲ. ಈಗ ಅನುದಾನಗಳ ಹೊಂದಾಣಿಕೆ ಮಾಡಿಕೊಂಡು ಪಂಚಾಯತ್ ಕಟ್ಟಡ ನಿರ್ಮಾಣ ಮಾಡಿದೆ. ಈ ಕಟ್ಟಡಕ್ಕೆ ಬ್ಯಾಂಕ್ ಆಪ್ ಬರೋಢ ಹಾಲಾಡಿ ಶಾಖೆ ಸ್ಥಳಾಂತರವಾಗಲೇ ಬೇಕು ಎಂದರು.
ಹಾಫ್ ಕಾಮ್ಸ್ ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ ಮಾತನಾಡಿ, ಬ್ಯಾಂಕ್ ಶಾಖೆ ಸ್ಥಳಾಂತರ ಅನಿವಾರ್ಯ. ಹಿರಿಯ ನಾಗರಿಕರಿಗೆ ಮೆಟ್ಟಿಲುಗಳನ್ನು ಏರಿ ಬ್ಯಾಂಕ್‍ಗೆ ಹೋಗಲು ಸಾಧ್ಯವೇ ಇಲ್ಲ. ಬ್ಯಾಂಕುಗಳು ನೆಲ ಮಹಡಿಯಲ್ಲಿಯೇ ಇರಬೇಕು.ಎಂದರು.
ಸೂರ್ಯಕಾಂತ ದಾಮ್ಲೆ, ಕೃಷಿಕ ಶಶಿಕಾಂತ, ಶಶಿಧರ ಭಟ್ ಚೋರಾಡಿ,ರಾಜೇಂದ್ರ, ನಮ್ಮ ಭೂಮಿ ಸಂಸ್ಥೆಯ ಗಣೇಶ ಶೆಟ್ಟಿ, ಗುತ್ತಿಗೆದಾರರಾದ ಕುಮಾರದಾಸ, ಭಾರತಿ, ಸುರೇಂದ್ರ ಶೆಟ್ಟಿ, ಮುರಳಿಧರ ಮೊದಲಾದವರು ಸಭೆಯಲ್ಲಿ ಮಾತನಾಡಿ ಗ್ರಾಮ ಪಂಚಾಯಿತಿ ಕಟ್ಟಡದ ನೆಲ ಅಂತಸ್ತಿಗೆ ಸ್ಥಳಾಂತರಿಸಬೇಕು ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಅನುರಾಧ ಪಿ.ಶೆಟ್ಟಿ, ಗ್ರಾಮ ಪಂಚಾಯತ್ ಸದಸ್ಯರಾದ ಗುರುಪ್ರಸಾದ್, ಜನಾರ್ದನ ಯಾನೆ ಜಾಣ, ಜಾನಕಿ, ಸಾಧು, ರೇಣುಕಾ, ಹೇಮ ಕುಲಾಲ್, ಗಿರಿಜಾ, ಸಮುದಾಯ ಆರೋಗ್ಯಧಿಕಾರಿ ಸಿದ್ಧನಗೌಡ, ಗ್ರಾಮಾಡಳಿತ ಅಧಿಕಾರಿ ನಾಗರಾಜ, ಶಂಕರನಾರಾಯಣ ಠಾಣೆಯ ಸಬ್ ಇನ್ಸಪೆಕ್ಟರ್ ಐ.ಆರ್ ಗಡ್ಡೆಕರ್, ಹಾಲಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ರೋಶನಿ ಬಿಬಿ ಉಪಸ್ಥಿತರಿದ್ದರು,
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ವೇತಾಲತಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ವನಿತಾ ಸ್ವಾಗತಿಸಿ ವಂದಿಸಿದರು.











