ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಜೀವನದಲ್ಲಿ ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಸಮಾಜದಲ್ಲಿ ಸ್ಪಂದಿಸುವ ಸಮಾಜಮುಖಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಸಾಧ್ಯ. ಇದಕ್ಕೆ ಪಂಚವರ್ಣ ಸಂಘಟನೆಯೇ ಸಾಕ್ಷಿ ಎಂದು ವಿವೇಕ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಜಗದೀಶ ನಾವಡ ಅಭಿಪ್ರಾಯಪಟ್ಟರು.
ಬುಧವಾರ ಕೋಟದ ಪಂಚವರ್ಣ ಕಛೇರಿಯಲ್ಲಿ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಸಂಘದ ಸದಸ್ಯರೊರ್ವರ ಹುಟ್ಟುಹಬ್ಬದ ಅಂಗವಾಗಿ ಅಶಕ್ತರಿಗೆ ನೆರವು ಎಂಬ ಶೀರ್ಷಿಕೆಯಡಿ ಮೂಡುಗಿಳಿಯಾರಿನ ಆಶಾಕಾರ್ಯಕರ್ತೆ ಲಕ್ಷ್ಮೀ ಇವರಿಗೆ ನೆರವು ಹಾಗೂ ದಿನಸಿ ಪರಿಕರ ಹಸ್ತಾಂತರಿಸುವ ಕಾರ್ಯಕ್ರಮದಲ್ಲಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಿ, ಮಾತನಾಡಿ ಸದಾ ಕ್ರೀಯಾಶೀಲತೆಯೇ ಜೀವಾಳವಾಗಿರಿಸಿಕೊಂಡು ಪರಿಸರದ ಬಗೆಗಿನ ಕಾಳಜಿ ಕಾರ್ಯಕ್ರಮ, ವಿದ್ಯಾರ್ಥಿಗಳ ದತ್ತು ಸ್ವೀಕಾರ ಹತ್ತು ಹಲವು ಕಾರ್ಯಕ್ರಮಗಳಿಂದ ಜನಮನದಿ ಅಚ್ಚಳಿಯದೆ ಉಳಿದ ಪಂಚವರ್ಣ ಸಂಘಟನೆ ಕಾರ್ಯನಿರ್ವಹಣೆ ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲದಾಗಿದೆ. ಅಶಕ್ತರಿಗೆ ನೆರವು ನಿತ್ಯನಿರಂತರ ಬಡವರ ಹಾಗೂ ಅನಾರೋಗ್ಯ ಪೀಡಿತರಿಗೆ ಧ್ವನಿಯಾಗಲಿ ಎಂದರು.
ಇದೇ ವೇಳೆ ಹುಟ್ಟುಹಬ್ಬ ಆಚರಿಸಿಕೊಂಡ ಶಶಿಧರ ತಿಂಗಳಾಯ ಇವರಿಗೆ ಶುಭಾಶಯ ಕೋರಿದ ಗಣ್ಯರು ಹದಿನಾರು ಸಾವಿರ ಮೌಲ್ಯ ಒಗ್ಗೂಡಿಸಿದ ಹಣವನ್ನು ಫಲಾನುಭವಿ ಲಕ್ಷ್ಮೀ ಇವರಿಗೆ ಹಸ್ತಾಂತರಿಸಲಾಯಿತು.
ಮುಖ್ಯ ಅತಿಥಿಯಾಗಿ ಕೋಟ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಕ ಹರೀಶ್ಚಂದ್ರ, ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಸತೀಶ್ ಹೆಚ್ ಕುಂದರ್, ಸಂಘದ ಅಧ್ಯಕ್ಷ ಮನೋಹರ್ ಪೂಜಾರಿ, ಸಂಚಾಲಕ ಅಮೃತ್ ಜೋಗಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಸಂಯೋಜಕ ರವೀಂದ್ರ ಕೋಟ ಪ್ರಾಸ್ತಾವಿಕ ನುಡಿಗಳನ್ನಾಡಿದರು .ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.












