ಕುಂದಾಪುರ ಮಿರರ್ ಸುದ್ದಿ…




ಕುಂದಾಪುರ: ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಂಪಾರು ಹಾಗೂ ಸಂಜಯ ಗಾಂಧಿ ಇಂಗ್ಲಿಷ್ ಮೀಡಿಯಂ ಶಾಲೆಯ ವತಿಯಿಂದ ಮಾ.13 ಶುಕ್ರವಾರದಂದು ವಿದ್ಯಾದಾಯಿನಿ ಸಭಾಭವನದಲ್ಲಿ ಶಾರದಾ ಪೂಜೆಯನ್ನು ಭಕ್ತಿಭಾವ ಹಾಗೂ ಅರ್ಥಪೂರ್ಣವಾಗಿ ಭವ್ಯವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ “ಜ್ಞಾನವೃಕ್ಷ” ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಪರಿಚಯಿಸಲಾಯಿತು. ವಿದ್ಯಾರ್ಥಿಗಳು ಒಟ್ಟಾಗಿ ಒಂದು ಸಸಿಯನ್ನು ನೆಟ್ಟು ಅದಕ್ಕೆ “ಜ್ಞಾನವೃಕ್ಷ” ಎಂದು ನಾಮಕರಣ ಮಾಡಿದರು. ಪ್ರತಿಯೊಂದು ತರಗತಿಯ ತರಗತಿ ನಾಯಕರು ಶಾಲೆ ಮತ್ತು ಶಿಕ್ಷಣದಿಂದ ನಮಗೆ ದೊರೆಯುವ ಮೌಲ್ಯಗಳನ್ನು ಪ್ರತಿಬಿಂಬಿಸುವ ಘೋಷವಾಕ್ಯಗಳನ್ನು ಆ ಸಸಿಗೆ ಕಟ್ಟುವ ಮೂಲಕ ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸಿದರು.
ಮುಂದೆ “ಪುಸ್ತಕ ಪೂಜೆ” ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಪುಸ್ತಕಗಳ ಮೇಲೆ ಹೂವು ಮತ್ತು ಅಕ್ಷತೆಗಳನ್ನು ಅರ್ಪಿಸಿ ನಮಸ್ಕಾರ ಸಲ್ಲಿಸಿ ಜ್ಞಾನಕ್ಕೆ ಗೌರವ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ “ಜ್ಞಾನ ಗೋಡೆ” ಎಂಬ ವಿನೂತನ ಕಲ್ಪನೆಯ ಮೂಲಕ ವಿದ್ಯಾರ್ಥಿಗಳು ಜ್ಞಾನ ಮತ್ತು ಶಿಕ್ಷಣವನ್ನು ಪ್ರೇರೇಪಿಸುವ ಅನೇಕ ಉಲ್ಲೇಖಗಳು ಹಾಗೂ ಚಿಂತನೆಗಳನ್ನು ಪ್ರದರ್ಶಿಸಿದರು.
ಶಾರದಾ ಪೂಜೆಯ ಸಾಂಪ್ರದಾಯಿಕ ವಿಧಿವಿಧಾನಗಳನ್ನು ಶಾಲೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಅವರು ಪೋಷಕರಾದ ಪುರೋಹಿತ ಶ್ರೀಕಾಂತ್ ಅಡಿಗ ಅವರ ಮಾರ್ಗದರ್ಶನದಲ್ಲಿ ನೆರವೇರಿಸಿದರು. ಈ ವೇಳೆ ವಿದ್ಯಾರ್ಥಿಗಳು ಭಗವದ್ಗೀತೆಯ ಕಂಠಸ್ಥ ಶ್ಲೋಕಗಳನ್ನು ಪಠಿಸಿ ಭಜನೆಗಳನ್ನು ಹಾಡಿದರು.
ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರು ಹಾಗೂ ಮುಖ್ಯ ಭಾಷಣಕಾರರಾದ ನಂದಗೋಕುಲ ಶಿಶುಮಂದಿರ ಪ್ರವರ್ತಕರಾದ ಕಟ್ಕೇರೆಯ ಪ್ರೇಮನಂದ ಶೆಟ್ಟಿ ಅವರು ಭಾಗವಹಿಸಿ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ಮೌಲ್ಯಗಳ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಭಾಷಣ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಜಯ ಗಾಂಧಿ ಚಾರಿಟೇಬಲ್ ಟ್ರಸ್ಟ್ ಅಂಪಾರಿನ ಖಜಾಂಚಿ ಹಾಗೂ ಶಾಲೆಯ ಶೈಕ್ಷಣಿಕ ಸಂಚಾಲಕರಾದ ಕೊಡ್ಲಾಡಿ ಸುಭಾಷ್ಚಂದ್ರ ಶೆಟ್ಟಿ ಅವರು ವಹಿಸಿ, ಗುಣಮಟ್ಟದ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುವುದು ಶಾಲೆಯ ಪ್ರಮುಖ ಧ್ಯೇಯವಾಗಿದ್ದು, ವಿವಿಧ ಚಟುವಟಿಕೆಗಳ ಮೂಲಕ ಅದನ್ನು ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಂಜಯ ಗಾಂಧಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಲೇಖನಿ ನೀಡಿ ಮುಂಬರುವ ಪರೀಕ್ಷೆಗೆ ಶುಭ ಹಾರೈಸಲಾಯಿತು.
ಶಾಲೆಯ ಆಡಳಿತಾಧಿಕಾರಿ ಚೈತ್ರ ಯಡಿಯಾಳ ಅವರು ಅತಿಥಿಗಳನ್ನು ಸ್ವಾಗತಿಸಿದರು. ಹಿಂದಿ ಶಿಕ್ಷಕರಾದ ಪ್ರದೀಪ್ ಹಾಲಾಡಿ ಅವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಿಸಿದರು.












