ಕೋಟೇಶ್ವರ : ಬ್ರಹ್ಮ ಕಲಶೋತ್ಸವ – ರಥ ಮೂಹೂರ್ತ

0
662

Click Here

Click Here

ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ : ಕೋಟೇಶ್ವರದ ಐತಿಹಾಸಿಕ ಮಹತೋಭಾರ ಶ್ರೀ ಕೋಟಿಲಿಂಗೇಶ್ವರ ದೇವಳ ನೂತನ ಧ್ವಜ ಸ್ಥಂಭ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ ಹಾಗೂ ಶ್ರೀಮನ್ ಮಹಾರಥೋತ್ಸವಗಳಂಗವಾಗಿ, ಪ್ರಥಮ ದಿನದ ಕಾರ್ಯಕ್ರಮ ಸೋಮವಾರ ನಸುಕಿನ 5 ಗಂಟೆಗೆ ಶ್ರೀ ಗಣಪತಿ, ಶ್ರೀ ಪಾರ್ವತಿ ಸಹಿತ ಶ್ರೀ ಕೋಟಿಲಿಂಗೇಶ್ವರ ಮತ್ತು ಪರಿವಾರ ದೇವರುಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಗೋಪಾಡಿ ಶ್ರೀನಿವಾಸ ರಾವ್ – ರುಕ್ಮಿಣಿ ದಂಪತಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೋಣಿ ಕೃಷ್ಣದೇವ ಕಾರಂತ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ- ವಿಶಾಲಾಕ್ಷಿ ದಂಪತಿ ಸಹಿತವಾಗಿ ತಂತ್ರಿ ಪ್ರಸನ್ನ ಕುಮಾರ ಐತಾಳರ ನೇತೃತ್ವದ ಋತ್ವಿಜ ಗಡಣ ಪೂಜೆ ನೆರವೇರಿಸಿದರು.

ನಸುಕಿನ 5.30 ಕ್ಕೆ ರಥ ಮುಹೂರ್ತ ನೆರವೇರಿಸಲಾಯಿತು. ಶ್ರೀನಿವಾಸ ರಾವ್ ದಂಪತಿ ಕರ್ತೃಗಳಾಗಿ ಸಂಕಲ್ಪದಲ್ಲಿ ಪಾಲ್ಗೊಂಡರು. ಆರ್ಥಿಕ ಸಮಿತಿಯ ಎನ್. ರಾಘವೇಂದ್ರ ರಾವ್, ವ್ಯವಸ್ಥಾಪನಾ ಸಮಿತಿ, ಧಾರ್ಮಿಕ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿ ಸದಸ್ಯರು, ದೊಡ್ಮನೆಬೆಟ್ಟು ಶ್ರೀ ಮುಖ್ಯಪಾಣ ದೇಗುಲ ಅರ್ಚಕ ವೈ. ಎನ್. ವೆಂಕಟೇಶಮೂರ್ತಿ ಭಟ್, ರಥಶಿಲ್ಪಿ ರಾಜಗೋಪಾಲ ಆಚಾರ್ಯ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.

ಈ ಪೂಜಾ ವಿಧಿಗಳೊಂದಿಗೆ ಧ್ವಜ ಸ್ಥಂಭ ಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ ಮತ್ತು ವಿಶೇಷ ಬ್ರಹ್ಮರಥೋತ್ಸವಗಳಿಗೆ
ಕ್ಷಣಗಣನೆ ಆರಂಭಗೊಂಡಿದೆ.

Click Here

ಇದಕ್ಕಾಗಿ ಇಲ್ಲಿನ ಬ್ರಹ್ಮರಥವನ್ನು ಪತಾಕೆ, ಚಿತ್ರಪಟಗಳು, ಅಟ್ಟೆಗಳನ್ನು ಜೋಡಿಸಿ ಸಿಂಗರಿಸುವ ಕಾರ್ಯಾರಂಭವೇ ರಥಮುಹೂರ್ತ. ಇದನ್ನು ರಥ ಕಟ್ಟುವುದು ಎನ್ನಲಾಗಿತ್ತದೆ. ಈ ಪ್ರಾಚೀನ ಆರು ಚಕ್ರಗಳ ಬ್ರಹ್ಮರಥವನ್ನು ಕೆಳದಿ ಸಂಸ್ಥಾನದ ಹಿರಿಯ ವೆಂಕಟಪ್ಪನಾಯಕ ನಿರ್ಮಿಸಿಕೊಟ್ಟಿದ್ದರು ಎನ್ನಲಾಗಿದೆ. ಅವರೇ ದೇವಳ ಗರ್ಭಗುಡಿಗೆ ತಾಮ್ರದ ತಗಡು ಹೊದೆಸಿ ನಂದಿ ಮಂಟವನ್ನು ನಿರ್ಮಿಸಿಕೊಟ್ಟರು ಎಂದು ದಾಖಲೆಗಳು ಸಾರುತ್ತವೆ.
ಶಾಸ್ತ್ರೀಯವಾಗಿ ಈ ಆರು ಚಕ್ರಗಳ ಮಹಾ ರಥವನ್ನು “ಸ್ಯಂದನ ಮಹಾರಥ” ಎಂದು ಕರೆಯಲಾಗುವುದು. ಅಡಿಪಾಯ, ಅಧಿಷ್ಠಾನ ಮತ್ತು ಮಂಟಪ ಎಂಬ ಮೂರು ಹಂತಗಳಿರುವ ಈ ರಥದ ಹೊರಮೈಯಲ್ಲಿ ಕಡಾವು ಹೂಬಳ್ಳಿ, ಅಷ್ಟದಿಕ್ಪಾಲಕರು, ಚತುರ್ವಿಧ ಮೋಕ್ಷಗಳನ್ನು ಬಿಂಬಿಸುವ ವಿವಿಧ ಸುಂದರ ಕೆತ್ತನೆಗಳಿವೆ. ಅಡಿಪಾಯದಿಂದ ಮಂಟಪದವರೆಗಿನ ಸ್ಥಿರರಥವನ್ನು ರಥದ ಗಡ್ಡೆ ಎನ್ನುವರು. ಈ ಗಡ್ಡೆಯ ಮಂಟಪದ ಮೇಲಿನಿಂದ ಬಿದಿರು, ಅಡಿಕೆ ದಬ್ಬೆಗಳಿಂದ ರಚಿಸಿದ ಗೂಡುಗಳನಿಟ್ಟು ಕೆಂಪು, ಬಿಳಿ ನಿಶಾನೆ ಪತಾಕೆಗಳು, ಕಳಸಗಳಿಂದ ಅಲಂಕರಿಸಲಾಗುತ್ತದೆ. ರಥ ಕಟ್ಟುವ ಈ ಎಲ್ಲಾ ಕಾರ್ಯಗಳನ್ನು ಪಾರಂಪರಿಕವಾಗಿ ದೇವಾಡಿಗ ಸಮುದಾಯದವರು ಭಕ್ತಿಯಿಂದ ಮಾಡುತ್ತಿದ್ದಾರೆ. ರಥೋತ್ಸವದ ದಿನ ಹೂವು, ಬಾಳೆ, ಕಬ್ಬು, ಬಿದಿರು, ಮಾವಿನಕಾಯಿ ಗೊಂಚಲು, ಹಲಸಿನ ಕಡಿಗೆ, ಬಾಳೆಗೊನೆ, ತಳಿರು ತೋರಣಗಳಿಂದ ಅಲಂಕರಿಸಿ ಶ್ರೀ ಕೋಟಿಲಿಂಗೇಶ್ವರ ದೇವರನ್ನು ರಥದಲ್ಲಿ ಕೂರಿಸಿ ಎಲ್ಲರೂ ಒಂದಾಗಿ ರಥ ಎಳೆದು ಸಂಭ್ರಮಿಸುತ್ತಾರೆ. ರಥಾರೂಢನಾದ ಕೋಟಿಲಿಂಗೇಶ್ವರನ ದರ್ಶನ ಮಾಡಿದರೆ ಮತ್ತೆ ಪುನರ್ಜನ್ಮವಿಲ್ಲ ಎಂಬುದು ನಂಬಿಕೆ. ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಳದ ಶ್ರೀ ರಾಮ ಸೇವಾ ಸಂಘದವರು ಸೇವಾರ್ಥವಾಗಿ ಈ ಬ್ರಹ್ಮರಥವನ್ನು ವಿಶೇಷ ಪುಷ್ಪಾಲಂಕಾರ ಮಾಡಿ ಸಿಂಗರಿಸುವರು.

ನಸುಕಿನ ರಥ ಮುಹೂರ್ತದ ನಂತರ ಪ್ರಾಕಾರ ಶುದ್ಧಿ, ಶತರುದ್ರ, ಗಣಯಾಗ, ಮಧ್ಯಾನ್ಹ ಮುಹೂರ್ತೋತ್ಸವ, ಸಂಜೆ ಪ್ರದೋಷ ಪೂಜೆ, ರಾತ್ರಿ ಮಹಾಪೂಜೆಗಳನ್ನು ನಡೆಸಲಾಯಿತು.

ಫೆ. 10ರ ಗುರುವಾರ ನೂತನ ಧ್ವಜ ಸ್ಥಂಭ ಪ್ರತಿಷ್ಠೆ, 15ರ ಮಂಗಳವಾರ ಬ್ರಹ್ಮಕಲಶೋತ್ಸವ ಹಾಗೂ 16ರ ಬುಧವಾರ ವಿಶೇಷ ಶ್ರೀಮನ್ಮಹಾರಥೋತ್ಸವಗಳು ನಡೆಯಲಿವೆ.

ಹೊರೆಕಾಣಿಕೆ : ಈ ಉತ್ಸವಗಳ ಸಂದರ್ಭದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳ ಭಕ್ತರು, ಅಭಿಮಾನಿಗಳು ದೊಡ್ಡಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ಅವರು ಹಾಗೂ ಸಿಬಂದಿ ವರ್ಗದವರಿಗೆ ಪ್ರತಿದಿನವೂ ಊಟೋಪಚಾರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಉದ್ದೇಶಕ್ಕಾಗಿ ಹೆಚ್ಚಿನ ಮಟ್ಟದ ತರಕಾರಿ, ದವಸ – ಧಾನ್ಯಗಳ ಅವಶ್ಯಕತೆಯಿದ್ದು, ಆಸಕ್ತ ದಾನಿಗಳು ಸೇವಾ ರೂಪದಲ್ಲಿ ಇವನ್ನು ನೀಡುವ ಅವಕಾಶವಿದೆ. ಹೊರೆಕಾಣಿಕೆ, ದೇಣಿಗೆ ಹಾಗೂ ಕಲಶ ಸೇವೆಗಳನ್ನು ನೀಡುವವರು 9611197096 ಅಥವಾ 9448843906 .ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು. ಫೆ.13ರ ಆದಿತ್ಯವಾರ ಮಧ್ಯಾನ್ಹ 2 ಗಂಟೆಗೆ ಕೋಟೇಶ್ವರದ ಪ್ರಾಥಮಿಕ ಶಾಲಾ ವಠಾರದಿಂದ ಹೊರೆಕಾಣಿಕೆ ಮೆರವಣಿಗೆ ಹೊರಡುತ್ತದೆ. ಎಲ್ಲ ಉತ್ಸವಗಳನ್ನೂ ಸರ್ಕಾರದ ಕೋವಿಡ್ ರಕ್ಷಣಾ ಮಾರ್ಗಸೂಚಿಗಳನ್ವಯ ನಡೆಸಲಾಗುತ್ತಿದೆ. ದೇವಾಲಯದ ಒಳಗೆ ಪ್ಲಾಸ್ಟಿಕ್ ನಿಷೇಧಿಸಲಾಗಿದೆ.

Click Here

LEAVE A REPLY

Please enter your comment!
Please enter your name here