ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಹೊಲಿಗೆ ಎಂದರೆ ಎರಡು ವಸ್ತುಗಳನ್ನು ಸೇರಿಸುವುದು. ಹೊಲಿಗೆ ಯನ್ನೇ ವೃತ್ತಿಯಾಗಿಸಿಕೊಂಡ ಟೈಲರ್ ಗಳು ನಿಜಾರ್ಥದಲ್ಲಿ ಸಮಾಜದಲ್ಲಿ ಅನುಬಂಧವನ್ನೇ ಬೆಸೆಯುತ್ತಾರೆ. ಎಲ್ಲ ಉದ್ಯೋಗಿಗಳಿಗೂ ಅವರವರ ಉದ್ಯೋಗಗಳನ್ನು ನಿಭಾಯಿಸಲು ಟೈಲರ್ ಗಳಿಲ್ಲದಿದ್ದರೆ ಅಸಾಧ್ಯ. ಇಂತಹ ವೃತ್ತಿಬಾಂಧವರು ಸೂಕ್ತ ಸರ್ಕಾರಿ ಸವಲತ್ತಿಲ್ಲದೆ ತೊಂದರೆಗೊಳಗಾಗಿದ್ದಾರೆ. ಟೈಲರ್ಸ್ ಅಸೋಸಿಯೇಷನ್ ನವರು ಸಂಘಟಿತರಾಗಿ ಸರ್ಕಾರದ ಗಮನ ಸೆಳೆಯಬೇಕು ಎಂದು ಪತ್ರಕರ್ತ ಕೆ. ಜಿ. ವೈದ್ಯ ಕರೆನೀಡಿದರು.

ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಕುಂದಾಪುರ ಕ್ಷೇತ್ರ ಸಮಿತಿ ಮತ್ತು ಎಲ್ಲಾ ವಲಯ ಸಮಿತಿಗಳ ಆಶ್ರಯದಲ್ಲಿ ನಡೆದ ಟೈಲರ್ಸ್ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರದ ಬಿ. ಆರ್. ರಾವ್ ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಎ. ಎಸ್. ಎನ್. ಹೆಬ್ಬಾರ್ ವಹಿಸಿದ್ದರು.
ಟೈಲರ್ಸ್ ದಿನಾಚರಣೆಯ ಅಂಗವಾಗಿ ಕುಂದಾಪುರ ಕ್ಷೇತ್ರ ಸಮಿತಿಯ ವತಿಯಿಂದ ಬಿ. ಆರ್. ರಾವ್ ಶಾಲೆಯ ಒಂದರಿಂದ ಆರನೆಯ ತರಗತಿಯ ವಿದ್ಯಾರ್ಥಿಗಳಿಗೆ ಸಮವಸ್ತ್ರಗಳನ್ನು ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ಲಿಂಗಪ್ಪ ಪ್ರಾಸ್ತಾವಿಕ ಮಾತುಗಳನ್ನಾಡಿ, ಟೈಲರ್ ವೃತ್ತಿಯ ಹಿರಿಮೆ ಸಾರುವ ಸ್ವರಚಿತ ಕವನ ವಾಚಿಸಿದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಲತಾ ಭಟ್, ಟೈಲರ್ಸ್ ಅಸೋಸಿಯೇಷನ್ ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೀವ, ಮಾಜಿ ಪ್ರಧಾನ ಕಾರ್ಯದರ್ಶಿ ಕೆ. ವಿ. ನಾಗರಾಜ್, ನಗರ ಸಮಿತಿ ಅಧ್ಯಕ್ಷ ರಾಘವೇಂದ್ರ ಶುಭ ಕೋರಿದರು. ಲತಾ ಭಟ್ ಮತ್ತು ಕ್ಷೇತ್ರ ಸಮಿತಿ ಅಧ್ಯಕ್ಷ ರಾಜೀವರನ್ನು ಸನ್ಮಾನಿಸಲಾಯಿತು. ಸಭಿಕರ ಪರವಾಗಿ ವಸಂತಿ ಪಂಡಿತ್ ಮಾತನಾಡಿ ಟೈಲರ್ ವೃತ್ತಿ ಹಿರಿಮೆಯನ್ನು ಬಣ್ಣಿಸಿದರು.
ಪ್ರೇಮಾ ಸ್ವಾಗತಿಸಿದರು. ಕ್ಷೇತ್ರ ಸಮಿತಿ ಮಾಜಿ ಅಧ್ಯಕ್ಷ ಮಧುಸೂಧನ್ ಆಚಾರ್, ಸತ್ಯಸಾಯಿ ಸೇವಾ ಸಮಿತಿಯ ಸಾಯಿನಾಥ್ ಶೇಟ್, ಅಸೋಸಿಯೇಷನ್ ನ ವಿವಿಧ ಸಮಿತಿಗಳ ಪದಾಧಿಕಾರಿಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಸುಧಾಕರ ಕೆ. ಎನ್. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.











