ಕೊಲ್ಲೂರು ದೇವಸ್ಥಾನದ ವತಿಯಿಂದ ಗೋಶಾಲೆಗೆ 10 ಎಕ್ರೆ ಸ್ಥಳ-ಬಿ.ಎಂ.ಸುಕುಮಾರ ಶೆಟ್ಟಿ
ಕುಂದಾಪುರ: ಕೊಲ್ಲೂರು ದೇವಸ್ಥಾನದ ಶ್ರೀ ವೀರಭದ್ರಸ್ವಾಮಿ ದೇವಸ್ಥಾನ ನಿರ್ಮಾಣಕ್ಕೆ ಪರಮಾತ್ಮನ ಅನುಗ್ರಹ ಬೇಕಾಗುತ್ತದೆ. ಆದಿಪರಾಶಕ್ತಿಯ ಪ್ರೇರಣೆಯಿಂದ ಮಂಜರು ಈ ಸೇವೆ ಮಾಡಿದ್ದಾರೆ. ಇಂಥಹ ಸೇವೆಯ ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಮತ್ತು ಕುಟುಂಬಸ್ಥರು ನೂತನವಾಗಿ ನಿರ್ಮಿಸಿಕೊಟ್ಟಿರುವ ಶ್ರೀ ಅಮ್ಮನವರ ಪರಿವಾರದ ದೇವರಾದ ಶ್ರೀ ವೀರಭದ್ರ ಸ್ವಾಮಿಯ ಶಿಲಾಮಯ ದೇಗುಲದ ಲೋಕಾರ್ಪಣೆ ಕಾರ್ಯಕ್ರಮದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
20 ವರ್ಷಗಳ ಹಿಂದೆ ಕೊಲ್ಲೂರಲ್ಲಿ ಅಷ್ಟಬಂಧ ಬ್ರಹ್ಮಕಲಶ ಆಗಿತ್ತು. 12 ವರ್ಷಕ್ಕೊಮ್ಮೆ ಅಷ್ಟಬಂಧ ಬ್ರಹ್ಮಕಲಶ ಆಗಬೇಕು. 2023ರ ಜನವರಿಯಲ್ಲಿಯಾದರೂ ಈ ಕಾರ್ಯ ನಡೆಸಲು ಸಿದ್ಧತೆಗಳನ್ನು ನಡೆಸಬೇಕಾಗಿದೆ. ದಕ್ಷಿಣ ಭಾರತದಲ್ಲಿ ಮಧುರೆಯ ಮೀನಾಕ್ಷಿ ದೇವಸ್ಥಾನದಷ್ಟೇ ಪ್ರಸಿದ್ಧವಾದ ಈ ದೇವಸ್ಥಾನದಲ್ಲಿ ಸಂಪ್ರದಾಯಗಳ ವ್ಯವಸ್ಥಿತವಾಗಿ ನಡೆಯಬೇಕು. ಹಿಂದೆ 12-30ಕ್ಕೆ ಮಹಾಪೂಜೆ ನಡೆಯುತ್ತಿದ್ದು ಕೊವಿಡ್ ಸಂದರ್ಭದಲ್ಲಿ ಅದನ್ನು 10-30ಕ್ಕೆ ಮಾಡಲಾಯಿತು. ಅದನ್ನು ಮೊದಲಿನ ಸಮಯದಲ್ಲಿಯೇ ನಡೆಸಬೇಕು ಎಂದರು.
ಕೊಲ್ಲೂರು ದೇವಳದ ಹೊರ ಪ್ರಾಕಾರ ಅಭಿವೃದ್ದಿ, ಸುಸಜ್ಜಿತ ಯಾಗ ಶಾಲೆಯ ನಿರ್ಮಾಣ ಆಗಬೇಕಿದೆ. ದೇವಸ್ಥಾನದ ವತಿಯಿಂದ ಗೋಶಾಲೆ ನಿರ್ಮಿಸಲು ಸರಕಾರ 10 ಎಕ್ರೆ ಸ್ಥಳವನ್ನು ಎಳಜಿತ್‍ನಲ್ಲಿ ಗುರುತಿಸಿ ಇವತ್ತು ದೇವಸ್ಥಾನಕ್ಕೆ ಹಸ್ತಾಂತರ ಮಾಡಲಾಗುವುದು. ವ್ಯವಸ್ಥಿತವಾದ ಗೋಶಾಲೆ ಅಲ್ಲಿ ನಿರ್ಮಾಣವಾಗಲಿದೆ ಎಂದರು.
ಶ್ರೀವೀರಭದ್ರ ಸ್ವಾಮಿ ದೇವಳದ ಸೇವಾಕರ್ತರಾದ ಕೃಷ್ಣಮೂರ್ತಿ ಮಂಜರು ಮಾತನಾಡಿ, ಸುಮಾರು 16 ವರ್ಷಗಳ ಕನಸು ಈಗ ಕೈಗೂಡಿದೆ. ಆ ಸದವಕಾಶ ನಮ್ಮ ಪಾಲಿಗೆ ದೊರಕಿದ್ದು ಎಷ್ಟು ಜನ್ಮದ ಪುಣ್ಯ ಫಲವೋ ಗೊತ್ತಿಲ್ಲ. ಈ ಮಹತ್ಕಾರ್ಯದಿಂದ ಲೋಕಕ್ಕೆ ಒಳ್ಳೆದಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ತಹಶೀಲ್ದಾರ್ ಶೋಭಾಲಕ್ಷ್ಮೀ, ದೇವಳದ ಮಾಜಿ ಆಡಳಿತ ಧರ್ಮದರ್ಶಿ ಬಿ.ಅಪ್ಪಣ್ಣ ಹೆಗ್ಡೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ್, ಗೋಪಾಲಕೃಷ್ಣ ನಾಡ, ರತ್ನ ರಮೇಶ್ ಕುಂದರ್, ಸಂಧ್ಯಾ ರಮೇಶ, ಕೊಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷ ಶಿವರಾಮಕೃಷ್ಣ ಭಟ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯ್ಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀ ವೀರಭದ್ರ ದೇವಳದ ಸೇವಾಕರ್ತರಾದ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ದಂಪತಿಗಳು, ನಾಗರಾಜ ಮಂಜ ದಂಪತಿಗಳು, ಶ್ರೀಧರ ಮಂಜ ದಂಪತಿಗಳನ್ನು ಸನ್ಮಾನಿಸಲಾಯಿತು.
ದೇವಳದ ಕಾರ್ಯನಿರ್ವಹಣಾಧಿಕಾರಿ ಎಸ್.ಬಿ.ಮಹೇಶ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಚಿನ್ ಕುಮಾರ್ ಶೆಟ್ಟಿ ಮತ್ತು ಸುಕೇಶ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿ ಗಣೇಶ ಉಡುಪ ವಂದಿಸಿದರು.
ಈ ಸಂದರ್ಭದಲ್ಲಿ ಕೊಲ್ಲೂರು ದೇವಸ್ಥಾನದ ವತಿಯಿಂದ ಎಳಜಿತ್ ಎಂಬಲ್ಲಿ ನಿರ್ಮಿಸಲಾಗುವ ಗೋಶಾಲೆಗೆ 10 ಎಕ್ರೆ ಸ್ಥಳವನ್ನು ಸರಕಾರದ ಮೂಲಕ ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.










