ಕುಂದಾಪುರ ಮಿರರ್ ಸುದ್ದಿ…
ಬಾರಕೂರು: ಇಲ್ಲಿನ ಸುಜ್ಞಾನ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ (ಜೂ. 17) ಸಂಸ್ಕೃತ ಭಾಷಾ ಮಾಹಿತಿ ಕಾರ್ಯಾಗಾರವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಬಾರಕೂರಿನ ನ್ಯಾಷನಲ್ ಹೈಸ್ಕೂಲಿನ ಮುಖ್ಯ ಶಿಕ್ಷಕಿಯಾದ ಹೇಮಾವತಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ನ್ಯಾಷನಲ್ ಹೈಸ್ಕೂಲು, ಬಾರಕೂರಿನಲ್ಲಿ ಸಂಸ್ಕೃತ ಹಾಗೂ ಇಂಗ್ಲಿಷ್ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಜಿ.ಪಿ. ಪ್ರಭಾಕರ ತುಮರಿ ಅವರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿಯನ್ನು ನೀಡಿದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ತಮ್ಮ ಉಪನ್ಯಾಸದಲ್ಲಿ ಸಂಸ್ಕೃತ ಭಾಷೆಯ ಇತಿಹಾಸ, ಅದರ ಬೆಳವಣಿಗೆಯ ಪಥ, ಇತರೆ ಭಾಷೆಗಳ ಮೇಲೆ ಸಂಸ್ಕೃತದ ಪ್ರಭಾವ, ಭಾರತೀಯ ಜ್ಞಾನ ಪರಂಪರೆಯಲ್ಲಿ ಸಂಸ್ಕೃತದ ಸ್ಥಾನಮಾನ, ನಿಸರ್ಗಸ್ನೇಹಿ ಜೀವನಕ್ಕೆ ಪೂರಕವಾದ ಆಯುರ್ವೇದದ ಅಂಶಗಳು ಹಾಗೂ ನಮ್ಮ ದೈನಂದಿನ ಜೀವನದಲ್ಲಿ ಬಳಕೆಯಾಗುವ ಸಂಸ್ಕೃತ ಪದಗಳ ಮಹತ್ವದ ಕುರಿತು ವಿವರವಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಪ್ರಕಾಶ್ ಆಚಾರ್ಯ ಅವರು ಸಂಸ್ಕೃತ ಶ್ಲೋಕವನ್ನು ಪಠಿಸುವ ಮೂಲಕ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಾಗಾರದ ರೂಪುರೇಷೆಗಳನ್ನು ವಿವರಿಸಿದ ಅವರು, “ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯ ಮಹತ್ವ ಮತ್ತು ಆಳವನ್ನು ಅರಿತುಕೊಂಡು, ಅದರ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಈ ಕಾರ್ಯಾಗಾರವು ವಿದ್ಯಾರ್ಥಿಗಳಲ್ಲಿ ಕೇವಲ ಭಾಷೆಯ ಬಗೆಗಿನ ಅರಿವು ಮೂಡಿಸುವುದಕ್ಕೆ ಮಾತ್ರ ಸೀಮಿತವಾಗದೆ, ಯುವಜನತೆಗೆ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಮೌಲ್ಯಗಳನ್ನು ಪರಿಚಯಿಸುವಲ್ಲಿ ಸಂಪೂರ್ಣ ಯಶಸ್ವಿಯಾಯಿತು.
ಕಾಲೇಜಿನ ಉಪನ್ಯಾಸಕಿ ಪ್ರಗತಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಾಗಾರದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ಸಂಸ್ಕೃತ ವಿಭಾಗದ ವಿದ್ಯಾರ್ಥಿಗಳು ಹಾಗೂ ಭಾಷಾಸಕ್ತ ವಿದ್ಯಾರ್ಥಿಗಳು ಭಾಗವಹಿಸಿದರು.












