ಭಾರತದ ಒಟ್ಟು ಅಡಿಕೆ GST ಸಂಗ್ರಹದಲ್ಲಿ ಕರ್ನಾಟಕದ ಪಾಲು ಶೇ.76 ಕ್ಕಿಂತ ಹೆಚ್ಚು

0
15

Click Here

Click Here

2025–26ರ ಆರ್ಥಿಕ ವರ್ಷದಲ್ಲಿ ಕರ್ನಾಟಕದ ಅಡಿಕೆಯಿಂದ 379.34 ಕೋಟಿ ರೂ. GST ಸಂಗ್ರಹ; 5 ವರ್ಷಗಳಲ್ಲಿ ರಾಜ್ಯದ ಕೊಡುಗೆ ದುಪ್ಪಟ್ಟು

“ರಾಜ್ಯದ ಗ್ರಾಮೀಣ ಆರ್ಥಿಕತೆಯ ಆಧಾರಸ್ತಂಭವಾಗಿರುವ ನಮ್ಮ ಅಡಿಕೆ ಬೆಳೆಗಾರರ ಹಿತಾಸಕ್ತಿಗಳ ರಕ್ಷಣೆ ನಿಟ್ಟಿನಲ್ಲಿ ಎಲ್ಲ ಕ್ರಮಗಳಿಗೆ ನನ್ನ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯಲಿವೆ”_ – ಬಿ.ವೈ.ರಾಘವೇಂದ್ರ, ಸಂಸದರು, ಶಿವಮೊಗ್ಗ ಲೋಕಸಭಾ ಕ್ಷೇತ್ರ

ಕುಂದಾಪುರ ಮಿರರ್ ಸುದ್ದಿ…
ನವದೆಹಲಿ :ದೇಶದ ಅಡಿಕೆ ಆಧಾರಿತ ಆರ್ಥಿಕತೆಯಲ್ಲಿ ಕರ್ನಾಟಕ ಪ್ರಬಲ ಪಾತ್ರವನ್ನು ವಹಿಸುತ್ತಲೇ ಇದ್ದು, ದೇಶದ ಒಟ್ಟು ಅಡಿಕೆ ಮತ್ತು ಅಡಿಕೆ ಆಧಾರಿತ ಉತ್ಪನ್ನಗಳ GST ಸಂಗ್ರಹದಲ್ಲಿ ಶೇ.76% ಕ್ಕಿಂತ ಅಧಿಕ ಪಾಲು ಹೊಂದಿದೆ. ಪ್ರಸಕ್ತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲಿ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರು ರಾಜ್ಯವಾರು GST ಸಂಗ್ರಹ ವಿವರಗಳ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವಾಲಯ ನೀಡಿರುವ ಮಾಹಿತಿಯಿಂದ ಇದು ಬಹಿರಂಗವಾಗಿದೆ.

Click Here

ಕೇಂದ್ರ ವಿತ್ತ ಸಚಿವಾಲಯ ನೀಡಿರುವ ರಾಜ್ಯವಾರು ದತ್ತಾಂಶದ ಪ್ರಕಾರ, ಭಾರತ 2025–26ನೇ ಹಣಕಾಸು ವರ್ಷದಲ್ಲಿ ಅಡಿಕೆ ಮತ್ತು ಅಡಿಕೆ ಆಧಾರಿತ ಉತ್ಪನ್ನಗಳಿಂದ 496.34 ಕೋಟಿ ರೂ. GST ಸಂಗ್ರಹಿಸಿದ್ದು, ಇದರಲ್ಲಿ ಕರ್ನಾಟಕವೇ 379.34 ಕೋಟಿ ರೂ.ಗಳಷ್ಟು – ಅಂದರೆ ಶೇ. 76.42% ರಷ್ಟು ಕೊಡುಗೆ ನೀಡಿದೆ. ಹಾಗೆಯೇ, ವರ್ಷದಿಂದ ವರ್ಷಕ್ಕೆ ಕರ್ನಾಟಕದ ಪಾಲು ಕೂಡ ಏರಿಕೆಯಾಗುತ್ತಲೇ ಇದ್ದು, ಈ ಅಂಕಿ ಅಂಶಗಳು, ಇಡೀ ಅಡಿಕೆ, ಒಡೆದ ಅಡಿಕೆ ಸೇರಿದಂತೆ ಎಲ್ಲಾ ಅಡಿಕೆಗಳಿಂದ HSN (ಹಾರ್ಮೋನೈಸ್ಡ್ ಸಿಸ್ಟಮ್ ಆಫ್ ನಾಮನ್ಕ್ಲೆಚರ್) ಕೋಡ್‌ಗಳ ಅಡಿಯ GST ಸಂಗ್ರಹವನ್ನು ಒಳಗೊಂಡಿದೆ. ರಾಜ್ಯದ GST ಸಂಗ್ರಹ 2021–22ನೇ ಹಣಕಾಸು ವರ್ಷದಲ್ಲಿ 172.62 ಕೋಟಿ ರೂ. ನಿಂದ 2025–26ನೇ ಹಣಕಾಸು ವರ್ಷದಲ್ಲಿ 379.34 ಕೋಟಿ ರೂ.ಗೆ ಏರಿಕೆಯಾಗಿದೆ. ಅಂದರೆ, ಕಳೆದ ಐದು ವರ್ಷಗಳಲ್ಲಿ ಸುಮಾರು 120% ಹೆಚ್ಚಳವಾಗಿದೆ. ಇದೇ ಪ್ರವೃತ್ತಿ ಪ್ರಸಕ್ತ ಹಣಕಾಸು ವರ್ಷದಲ್ಲೂ ಮುಂದುವರೆದಿದ್ದು, 2026–27ನೇ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಕರ್ನಾಟಕ ಈ ವಲಯದಿಂದ 90.02 ಕೋಟಿ ರೂ. GST ಸಂಗ್ರಹಿಸಿದೆ. ಇದೇ ಅವಧಿಯಲ್ಲೂ ರಾಷ್ಟ್ರೀಯ GST ಸಂಗ್ರಹ 117.99 ಕೋಟಿ ರೂ.ಗಳಾಗಿದ್ದು, ಇದರಲ್ಲಿ ರಾಜ್ಯದ ಕೊಡುಗೆ ಸರಿಸುಮಾರು 76.3% ರಷ್ಟಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಂಸದ ಬಿ.ವೈ.ರಾಘವೇಂದ್ರ, “ಈ ಅಂಕಿ-ಅಂಶಗಳು ಕರ್ನಾಟಕದಲ್ಲಿ ಅಡಿಕೆ ಬೆಳೆಯ ಅಪಾರ ಆರ್ಥಿಕ ಪ್ರಾಮುಖ್ಯತೆಯನ್ನು ಮತ್ತು ನಮ್ಮ ರೈತರು ರಾಷ್ಟ್ರೀಯ ಆರ್ಥಿಕತೆಗೆ ನೀಡುತ್ತಿರುವ ಕೊಡುಗೆಯ ಪ್ರಾಮುಖ್ಯತೆಯನ್ನು ತಿಳಿಸಿಕೊಡುತ್ತಿವೆ. ನಮ್ಮ ಮಲೆನಾಡು ಮತ್ತು ಕರಾವಳಿ ಪ್ರದೇಶಗಳು ಲಕ್ಷಾಂತರ ಅಡಿಕೆ ಬೆಳೆಗಾರರ ಕುಟುಂಬಗಳಿಗೆ ನೆಲೆಯಾಗಿದ್ದು, ಅವರ ಜೀವನೋಪಾಯವೇ ಅಡಿಕೆ ಕೃಷಿಯನ್ನು ಅವಲಂಬಿಸಿದೆ. ಅವರೆಲ್ಲರ ಪರವಾಗಿ ಸಂಸತ್ತಿನಲ್ಲಿ ನಿರಂತರ ಧ್ವನಿಯೆತ್ತುವ ಜೊತೆಗೆ ಸದೃಢ ನೀತಿಗಳು, ವೈಜ್ಞಾನಿಕ ಸಂಶೋಧನೆ, ರೋಗ ನಿರ್ವಹಣೆ, ಮಾರುಕಟ್ಟೆ ಸ್ಥಿರತೆ ಮತ್ತು ನಮ್ಮ ಬೆಳೆಗಾರರ ​​ದೀರ್ಘಕಾಲೀನ ಹಿತಾಸಕ್ತಿಗಳನ್ನು ರಕ್ಷಿಸುವಂತಹ ಎಲ್ಲ ಅಗತ್ಯ ಕ್ರಮಗಳಿಗೆ ನನ್ನ ಪ್ರಾಮಾಣಿಕ ಪ್ರಯತ್ನಗಳು ಮುಂದುವರಿಯಲಿವೆ”_ ಅವರು ಹೇಳಿದರು.

Click Here

LEAVE A REPLY

Please enter your comment!
Please enter your name here