ಕುಂದಾಪುರ ಮಿರರ್ ಸುದ್ದಿ…
ಕೋಟೇಶ್ವರ :ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು. ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ಜಂಟಿ ಕಾರ್ಯನಿರ್ವಾಹಕರಾದ ಕೆ. ಸುಭಾಶ್ಚಂದ್ರ ಶೆಟ್ಟಿಯವರು ಎನ್ ಸಿ ಸಿ ವಿದ್ಯಾರ್ಥಿಗಳಿಂದ ಗೌರವ ರಕ್ಷೆ ಸ್ವೀಕರಿಸಿ ಧ್ವಜಾರೋಹಣಗೈದು ಮಾತನಾಡುತ್ತಾ ಸ್ವತಂತ್ರ ಭಾರತದ ಕನಸು ನನಸಾಗಿ 80 ವರ್ಷಗಳು ಸಂದಿವೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾತ್ಮರ ತ್ಯಾಗ ಬಲಿದಾನ ವ್ಯರ್ಥವಾಗದೆ ಬಲಿಷ್ಠ ಭಾರತ ನಿರ್ಮಾಣಕ್ಕೆ ಇಂದಿನ ಯುವ ಜನತೆ ಬದ್ಧರಾಗಬೇಕೆಂದರು. ಸರ್ವರಿಗೂ ಸ್ವಾತಂತ್ರ್ಯ ದಿನ ಶುಭಾಶಗಳನ್ನು ತಿಳಿಸಿದರು.
ಗುರುಕುಲ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರಾದ ಡಾ. ರೂಪಾ ಶೆಣೈ ರವರು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ತಿಳಿಸುತ್ತಾ.. ಪಾಶ್ಚಾತ್ಯ ರ ದಬ್ಬಾಳಿಕೆಯಿಂದ ಮುಕ್ತರಾಗಿ ಎಂಟು ದಶಕಗಳನ್ನು ಕಳೆದ ಈ ಶುಭ ದಿನದಲ್ಲಿ ಸಾಮಾಜಿಕವಾಗಿ,ಸಾಂಸೃತಿಕವಾಗಿ ಮತ್ತು ಆರ್ಥಿಕವಾಗಿ ಬಲಿಷ್ಠ ಭಾರತದ ಪರಿಕಲ್ಪನೆಯನ್ನು ನಾವೆಲ್ಲಾ ಆತ್ಮ ಪೂರ್ವಕವಾಗಿ ಒಪ್ಪಿಕೊಂಡು ಜಾಗತಿಕ ಮಟ್ಟದಲ್ಲಿ ದೇಶ ಗುರುತಿಸುವಂತಾಗಲು ಶ್ರಮಿಸಬೇಕೆಂದರು.
ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂದೀಪ್ ನಾಯ್ಕ್ ರವರು ಸ್ವಾತಂತ್ಯ ದಿನದ ಶುಭಾಶಯ ತಿಳಿಸುತ್ತಾ ಭಾರತದ ಭವಿಷ್ಯ ಯುವ ಜನತೆಯನ್ನವಲಂಭಿಸಿದೆ. ಪರಾವಲಂಬಿಯಾಗದೆ ಎಲ್ಲರೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದರು. ಎನ್ ಸಿ ಸಿ ಕೆಡೆಟ್ ಸೃಷ್ಠಿ ಸಂತೋಷ ಸ್ವಾತಂತ್ರ್ಯದಿನದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳಿಂದ ದೇಶದ ಐಕ್ಯತೆಯನ್ನು ಸಾರುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
ವಿದ್ಯಾರ್ಥಿ ವಿದ್ಯಾರ್ಥಿನಿಯರು ದೇಶಭಕ್ತಿ ಗೀತೆಗಳನ್ನು ಹಾಡುವ ಮೂಲಕ ವಿವಿಧ ಪ್ರಹಸನ, ನೃತ್ಯಗಳನ್ನು ನಡೆಸಿಕೊಟ್ಟರು. ಜಲಿಯನ್ ವಾಲಾಭಾಗ್ ದುರಂತ, ಸತಿ ಸಹಗಮನ ಪದ್ಧತಿ, ದೇಶದ ಭವಿಷ್ಯ ಮತ್ತು ಪ್ರಾಚೀನ ಕಾಲದಲ್ಲಿ ನಡೆದ ಹೋರಾಟ ಇವುಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು
ನಡೆಸಿಕೊಟ್ಟರು. ಶಿಕ್ಷಕಿ ಕೀರ್ತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಇಂಗ್ಲೀಷ್ ಉಪನ್ಯಾಸಕಿ ಸೌಜನ್ಯರವರು ವಂದಿಸಿದರು.












