ಕುಂದಾಪುರ ಮಿರರ್ ಸುದ್ದಿ…

ಸಿದ್ದಾಪುರ: ಜ್ಞಾನಸರಸ್ವತಿ ಪಿ.ಯು. ಕಾಲೇಜು, ಸಿದ್ದಾಪುರದಲ್ಲಿ *ಜ್ಞಾನಪರ್ವ-2026* ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆ ಕಾರ್ಯಕ್ರಮವನ್ನು ಸಂಭ್ರಮ ಹಾಗೂ ಸಡಗರದಿಂದ ನಡೆಸಲಾಯಿತು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ, ಸೃಜನಶೀಲತೆ ಹಾಗೂ ಸಾಮರ್ಥ್ಯವನ್ನು ಅನಾವರಣಗೊಳಿಸುವ ಉದ್ದೇಶವನ್ನು ಹೊತ್ತ ಈ ಕಾರ್ಯಕ್ರಮದ ಬಗ್ಗೆ ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಗಿ ನಾಗಣ್ಣ ಖ್ಯಾತಿಯ ಕುಂದಾಪುರದ ಹಾಸ್ಯ ಕಲಾವಿದರಾದ ನಾಗರಾಜ್ ತೆಕ್ಕಟ್ಟೆ ಅವರು ಜ್ಞಾನಸರಸ್ವತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಒದಗಿಸಲಾಗುತ್ತಿರುವ ಅತ್ಯುತ್ತಮ ಶೈಕ್ಷಣಿಕ ಸೌಲಭ್ಯಗಳು ಹಾಗೂ ಉತ್ತಮ ವಾತಾವರಣವನ್ನು ಅವರು ಶ್ಲಾಘಿಸುವುದರ ಜೊತೆಗೆ ಸುಮುಖ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ನೀಡಲಾಗುತ್ತಿರುವ ಪ್ರೋತ್ಸಾಹ ಅಭಿನಂದನೀಯವಾಗಿದೆ ಎಂದು ಹೇಳಿದರು. ಶಿಕ್ಷಣದ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು ಮತ್ತು ತಮ್ಮ ಬಾಲ್ಯದ ದಿನಗಳನ್ನು ತಿಳಿ ಹಾಸ್ಯದ ಜೊತೆಗೆ ಹಂಚಿಕೊಂಡು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.
ಸ್ಪರ್ಧೆಗಳ ತೀರ್ಪುಗಾರರಾದ ಪ್ರಜ್ಞಾ ಶೆಟ್ಟಿ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ವಿಶಿಷ್ಟವಾದ ಪ್ರತಿಭೆ ಮತ್ತು ಸಾಮರ್ಥ್ಯ ಅಡಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ. ಪಠ್ಯದ ಜೊತೆಗೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಸೃಜನಶೀಲತೆ ಹೆಚ್ಚುತ್ತದೆ ಎಂದು ತಿಳಿಸಿದರು.
ಪುಷ್ಪಾವತಿ ಕಿಣಿ ಅವರು ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಶ್ಲಾಘಿಸಿ, ವಿದ್ಯಾರ್ಥಿಗಳು ತಮ್ಮಲ್ಲಿರುವ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉತ್ತಮ ಸಾಧನೆ ಮಾಡುವತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.
ಇನ್ನೋರ್ವ ತೀರ್ಪುಗಾರರಾದ ಎಸ್.ಪ್ರವೀಣ್ ಕುಮಾರ್ ಶೆಟ್ಟಿಯವರು ಮಾತನಾಡಿ ಪ್ರತಿಭಾವಂತ ವಿದ್ಯಾರ್ಥಿಗಳ ಕನಸುಗಳ ನನಸಾಗಿಸುವ ಪಣತೊಟ್ಟು ನಿಂತ ಸುಮುಖ ಎಜುಕೇಷನಲ್ ಟ್ರಸ್ಟ್ ನ ಅಧ್ಯಕ್ಷರನ್ನು ಹಾಗೂ ಉಪನ್ಯಾಸಕರು,ಆಡಳಿತ ಮಂಡಳಿಯ ಬಗೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಂಸ್ಥೆಯ ಅಧ್ಯಕ್ಷರಾದ ಬಿ.ಎಸ್.ಸುರೇಶ್ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಿ ಅಧ್ಯಕ್ಷೀಯ ಭಾಷಣದಲ್ಲಿ ಬೆಳಿಗ್ಗೆ ಯಿಂದ ಸಂಜೆಯ ತನಕ ತಾವು ನೋಡಿ ಖುಷಿ ಪಟ್ಟ ಸಂಗತಿಗಳನ್ನು ಹಂಚಿಕೊಳ್ಳುತ್ತಾ ಭವಿಷ್ಯದಲ್ಲಿ ಜ್ಞಾನಸರಸ್ವತಿ ವಿದ್ಯಾಸಂಸ್ಥೆ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳಿದರು.
ಜ್ಞಾನಪರ್ವ 2026 ರ ಪ್ರತಿಭಾ ಪ್ರದರ್ಶನದಲ್ಲಿ ಪಾಲ್ಗೊಂಡ ತಂಡಗಳಲ್ಲಿ ಚಾಂಪಿಯನ್ ಶಿಪ್ ಅನ್ನು
ದ್ವಿತೀಯ ಪಿಯುಸಿ CA/CS ವಿಭಾಗದ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು. ಪ್ರಥಮ ಪಿಯುಸಿ ಬಿ.ಎ.ಎಸ್.ಸಿಎಸ್ ಪ್ರಥಮ ರನ್ನರ್ ಅಪ್ ಹಾಗೂ ದ್ವಿತೀಯ ಪಿಯುಸಿ Non-CA/CS ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ರನ್ನರ್ ಅಪ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಪಾಂಡುರಂಗ ಪಡಿಯಾರ್, ಕಾಲೇಜಿನ ಎಚ್.ಆರ್. ಜಯಶೇಖರ್ ಶೇಖರ್, ಪ್ರಾಂಶುಪಾಲರಾದ ಅಮರೇಶ್ ಕುಮಾರ್ ಹೆಗ್ಡೆ, ಉಪ ಪ್ರಾಂಶುಪಾಲರಾದ ಹರ್ಷ ಶೆಟ್ಟಿ, ಹಾಗೂ ಉಪನ್ಯಾಸಕ, ಉಪನ್ಯಾಸಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿ, ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸುವ ಜ್ಞಾನಪರ್ವ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ ಹಾಗೂ ಸೃಜನಶೀಲತೆಯನ್ನು ಮೂಡಿಸಿತು.
ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕರಾದ ನಾಗರಾಜ್ ಗುಳ್ಳಾಡಿ ಹಾಗೂ ಮಂಜುನಾಥ್ ಸಿ. ಪಿ. ಅವರು ನಿರ್ವಹಿಸಿದರು. ಹಾಗೂ ಗಿರೀಶ್ ರವರು ಸಹಕರಿಸಿದರು.












