77ನೇ ಸಂವಿಧಾನ ಅಂಗೀಕಾರ ದಿನಾಚರಣೆ : ತಲ್ಲೂರಿನಿಂದ ಕಾವ್ರಾಡಿವರೆಗೆ ಅಹಿಂದ ಜಾಗೃತಿ ರಥಯಾತ್ರೆ
ಉದಯ್ ಕುಮಾರ್ ತಲ್ಲೂರು ನೇತೃತ್ವದಲ್ಲಿ ಸಂವಿಧಾನದ ಅರಿವಿನ ಪಯಣಕ್ಕೆ ಗ್ರಾಮ ಗ್ರಾಮಗಳಲ್ಲೂ ಅದ್ದೂರಿ ಸ್ವಾಗತ!

ಕುಂದಾಪುರ ಮಿರರ್ ಸುದ್ದಿ….
ಕುಂದಾಪುರ: ಪ್ರಜ್ಞೆ, ಪರಿವರ್ತನೆ, ಸಮಾನತೆ ಹಾಗೂ ಸ್ವತಂತ್ರ ರಾಜ್ಯಾಧಿಕಾರದ ಆಶಯದೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) (ಭೀಮಘರ್ಜನೆ) ಉಡುಪಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ, ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ಅವರ ನೇತೃತ್ವದಲ್ಲಿ ನವೆಂಬರ್ 26ರಂದು 77ನೇ ಸಂವಿಧಾನ ಅಂಗೀಕಾರ ದಿನಾಚರಣೆಯ ಸವಿನೆನಪಿಗಾಗಿ ತಲ್ಲೂರಿನಿಂದ ಕಾವ್ರಾಡಿವರೆಗೆ ‘ಅಹಿಂದ ಜಾಗೃತಿ ರಥಯಾತ್ರೆ’ ಹಾಗೂ ಕಾವ್ರಾಡಿಯಲ್ಲಿ ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು.
ಸಂವಿಧಾನದ ಮಹತ್ವ, ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ, ಮೀಸಲಾತಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಈ ಜಾಗೃತಿ ರಥಯಾತ್ರೆಗೆ ಗ್ರಾಮ ಗ್ರಾಮಗಳಲ್ಲಿಯೂ ಅಭೂತಪೂರ್ವ ಸ್ವಾಗತ ದೊರೆಯಿತು.
ಸಂವಿಧಾನ ಅಂಗೀಕಾರ ದಿನ ಹಬ್ಬವಾಗಬೇಕು!
ತಲ್ಲೂರು ಜಂಕ್ಷನ್‌ನಲ್ಲಿ ಆಯೋಜಿಸಿದ್ದ ರಥಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಕೆಡಿಪಿ ಸದಸ್ಯ ಹಾಗೂ ಪಂಚಗಂಗಾ ಸಹಕಾರ ಸಂಘದ ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ ಬಾಳಿಕೆರೆ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಅವರ ಭಾವಚಿತ್ರ ಪ್ರತಿಯೊಂದು ಮನೆಯಲ್ಲಿಯೂ ಇರಬೇಕು. ಸಂವಿಧಾನ ಅಂಗೀಕಾರ ದಿನವನ್ನು ಪ್ರತಿಯೊಬ್ಬ ಭಾರತೀಯನೂ ಹಬ್ಬದಂತೆ ಆಚರಿಸಬೇಕು ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ವ್ಯವಸ್ಥಾಪಕ ಗುರುಮೂರ್ತಿ, ತಲ್ಲೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮಾಶಂಕರ್, ಸಂಜೀವಿನಿ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ ಹಾಗೂ ತಂಡದ ಸದಸ್ಯರು, ಅಂಗನವಾಡಿ ಶಿಕ್ಷಕಿಯರಾದ ಜ್ಯೋತಿ, ಜಯಲಕ್ಷ್ಮಿ , ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸಂಜು ದೇವಾಡಿಗ, ಕೃಷ್ಣ ಪೂಜಾರಿ, ರಾಧಾಕೃಷ್ಣ ಶೇರುಗಾರ್ ಉಪಸ್ಥಿತರಿದ್ದರು. ದೀಪಾ ಶೆಟ್ಟಿ ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ಮಾತನಾಡಿ, ಮಹಿಳೆಯರ ಹಕ್ಕುಗಳಿಗಾಗಿ ಅಂಬೇಡ್ಕರ್ ನಡೆಸಿದ ಹೋರಾಟ, ಸಾಮಾಜಿಕ ನ್ಯಾಯ, ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಹಾಗೂ ಮೀಸಲಾತಿಯ ಮಹತ್ವವನ್ನು ಎಳೆಎಳೆಯಾಗಿ ವಿವರಿಸಿದರು.
ತಲ್ಲೂರು ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ದೀಪ್ತಿ ಸತೀಶ್ ಅವರು ನೀಲಿ ಧ್ವಜವನ್ನು ಬೀಸುವ ಮೂಲಕ ಅಹಿಂದ ಜಾಗೃತಿ ರಥಯಾತ್ರೆಗೆ ಚಾಲನೆ ನೀಡಿದರು.
ಹಟ್ಟಿಯಂಗಡಿಯಲ್ಲಿ ಸಂವಿಧಾನ ರಥಕ್ಕೆ ಸ್ವಾಗತ
ತಲ್ಲೂರಿನಿಂದ ಹಟ್ಟಿಯಂಗಡಿ ಗ್ರಾಮ ಪಂಚಾಯತ್‌ಗೆ ಆಗಮಿಸಿದ ಅಹಿಂದ ಜಾಗೃತಿ ರಥಯಾತ್ರೆಯನ್ನು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೇಣುಕಾ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ತೋಟ್‌ಬೈಲು ಸಂತೋಷ್ ಕುಮಾರ್ ಶೆಟ್ಟಿ, ಮತ್ತ ಬಿಲ್ಲವ ಹಾಗೂ ಪಂಚಾಯತ್ ಸಿಬ್ಬಂದಿ ಸ್ವಾಗತಿಸಿದರು.
ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಅಂಬೇಡ್ಕರ್ ಅವರ ಕೊಡುಗೆಗಳನ್ನು ಸ್ಮರಿಸಿ ರಥಯಾತ್ರೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಕುಮಾರ್ ಹಟ್ಟಿಯಂಗಡಿ, ಗ್ರಾಮಸ್ಥರು ಹಾಗೂ ಸಂಜೀವಿನಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಅಂಬೇಡ್ಕರ್ ಈ ದೇಶದ ಶಕ್ತಿ : ಸುದೇಶ್ ಕುಮಾರ್ ಶೆಟ್ಟಿ
ಹಟ್ಟಿಯಂಗಡಿಯಿಂದ ಮಾವಿನಕಟ್ಟೆ ಮೂಲಕ ಗುಲ್ವಾಡಿ ಗ್ರಾಮ ಪಂಚಾಯತ್‌ಗೆ ಆಗಮಿಸಿದ ರಥಯಾತ್ರೆಯನ್ನು ಪಂಚಾಯತ್ ವತಿಯಿಂದ ಸ್ವಾಗತಿಸಲಾಯಿತು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಅಂಬೇಡ್ಕರ್ ಈ ದೇಶದ ಶಕ್ತಿ. ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನ ನ್ಯಾಯ ದೊರಕಿಸುವ ಆಶಯ ಹೊಂದಿದ್ದ ಮಹಾನ್ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಶೋಭಾ, ಸದಸ್ಯರಾದ ಸುರೇಂದ್ರ ಶೆಟ್ಟಿ, ಚಂದ್ರ ಪೂಜಾರಿ, ಪಂಚಾಯತ್ ಸಿಬ್ಬಂದಿ ಗಣೇಶ್ ಗುಲ್ವಾಡಿ, ಸಂತೋಷ್, ಮುಸ್ಲಿಂ ಮುಖಂಡ ಯಾಕುಬ್ ಖಾದರ್ ಗುಲ್ವಾಡಿ, ಸಂಜೀವಿನಿ ಸಂಘದ ಸದಸ್ಯರು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರು ಉಪಸ್ಥಿತರಿದ್ದರು.
ಮಾಜಿ ಅಧ್ಯಕ್ಷ ಸುದೇಶ್ ಕುಮಾರ್ ಶೆಟ್ಟಿ ಅವರು ಧ್ವಜವನ್ನು ಬೀಸುವ ಮೂಲಕ ರಥಯಾತ್ರೆಯ ಮುಂದಿನ ಪಯಣಕ್ಕೆ ಚಾಲನೆ ನೀಡಿದರು.
ಕರ್ಕುಂಜೆಯಲ್ಲಿ ರಥಯಾತ್ರೆಗೆ ಅದ್ದೂರಿ ಸ್ವಾಗತ
ಗುಲ್ವಾಡಿ–ಮಾವಿನಕಟ್ಟೆಯಿಂದ ಹೊರಟ ಅಹಿಂದ ಜಾಗೃತಿ ರಥಯಾತ್ರೆಗೆ ಕರ್ಕುಂಜೆ ಗ್ರಾಮ ಪಂಚಾಯತ್‌ನಲ್ಲಿ ಅದ್ದೂರಿ ಸ್ವಾಗತ ದೊರೆಯಿತು. ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸಂತೋಷ್ ಪೂಜಾರಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆಗಳ ಕುರಿತು ಮಾತನಾಡಿದರು.
ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯೆ ನಾಗರತ್ನ ಹಾಗೂ ಎಸ್‌ಎಲ್‌ಆರ್‌ಎಂ ಘಟಕದ ಸಿಬ್ಬಂದಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ರಥಯಾತ್ರೆಗೆ ಚಾಲನೆ ನೀಡಲಾಯಿತು.
ಅಂಪಾರಿನಲ್ಲಿ ಸಂವಿಧಾನದ ಅರಿವಿನ ಸಂದೇಶ
ಕರ್ಕುಂಜೆಯಿಂದ ಅಂಪಾರಿಗೆ ಆಗಮಿಸಿದ ರಥಯಾತ್ರೆಯನ್ನು ಅಂಪಾರು ಗ್ರಾಮ ಪಂಚಾಯತ್ ಕಾರ್ಯದರ್ಶಿ ಉದಯ್ ಸ್ವಾಗತಿಸಿ, ಸಂವಿಧಾನದ ಪೀಠಿಕೆಯನ್ನು ವಾಚಿಸಿದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಕಿಣಿ ಹಾಗೂ ಮಾಜಿ ಉಪಾಧ್ಯಕ್ಷ ಸತೀಶ್ ಶೆಟ್ಟಿ ಹಡಾಳಿ ಅವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಸುರೇಶ್ ಮೂಡುಬಗೆ, ಬಾಲಕೃಷ್ಣ ನಾಯಕ್, ಸಂಜು ಬಳ್ಕೂರು ಹಾಗೂ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಬಳಿಕ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಉಪಾಧ್ಯಕ್ಷರು ಧ್ವಜವನ್ನು ಬೀಸುವ ಮೂಲಕ ರಥಯಾತ್ರೆಗೆ ಚಾಲನೆ ನೀಡಿದರು.
ಕಾವ್ರಾಡಿಯಲ್ಲಿ ಸಂವಿಧಾನ ಜಾಗೃತಿಯ ಬಹಿರಂಗ ಸಭೆ
ಅಂಪಾರಿನಿಂದ ಹೊರಟ ಅಹಿಂದ ಜಾಗೃತಿ ರಥಯಾತ್ರೆ ಕಾವ್ರಾಡಿಗೆ ಆಗಮಿಸಿದಾಗ ಕಾವ್ರಾಡಿ ಗ್ರಾಮ ಪಂಚಾಯತ್ ವತಿಯಿಂದ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ವಿಜಯ್ ಪುತ್ರನ್, ಬಾಬು ಹಳ್ನಾಡು, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಮುಸ್ಲಿಂ ಮುಖಂಡರು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿ ಉಪಸ್ಥಿತರಿದ್ದರು.
ಸಮಾನತೆಯ ಸಮಾಜ ನಿರ್ಮಾಣವೇ ಅಂಬೇಡ್ಕರ್ ಆಶಯ : ಉದಯ್ ಕುಮಾರ್ ತಲ್ಲೂರು
ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ್ ಕುಮಾರ್ ತಲ್ಲೂರು ಅವರು, ಸಮಾಜದ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಹಾಗೂ ಪ್ರಾತಿನಿಧ್ಯ ದೊರೆಯಬೇಕೆಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಜನಸಂಖ್ಯೆಗೆ ಅನುಗುಣವಾದ ಪ್ರಾತಿನಿಧ್ಯ ಮತ್ತು ಮೀಸಲಾತಿಯ ಮಹತ್ವದ ಕುರಿತು ವಿವರಿಸಿದ ಅವರು, ವಿಶೇಷವಾಗಿ ಮಹಿಳೆಯರ ಹಕ್ಕುಗಳು ಹಾಗೂ ಸಬಲೀಕರಣಕ್ಕಾಗಿ ಅಂಬೇಡ್ಕರ್ ಸಲ್ಲಿಸಿದ ಕೊಡುಗೆಗಳನ್ನು ಸ್ಮರಿಸಿದರು. ಅಂಬೇಡ್ಕರ್ ಅವರ ವಿಚಾರಧಾರೆಗಳು ಹಾಗೂ ಸಂವಿಧಾನದ ಆಶಯಗಳ ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಮಂಜುನಾಥ ಗುಡ್ಡೆಯಂಗಡಿ, ತಾಲೂಕು ಸಂಚಾಲಕ ಕೆ.ಎಸ್. ವಿಜಯ್ ಕುಂದಾಪುರ, ಖಜಾಂಚಿ ಸಂದೀಪ್ ಆಜ್ರಿ, ಜಿಲ್ಲಾ ಸಂಘಟನಾ ಸಂಚಾಲಕ ಸಂದೇಶ್ ನಾಡ, ಸತೀಶ್ ಮೂಡುಬಿದ್ರೆ, ಮಂಗಳೂರು ತಾಲೂಕು ಸಂಚಾಲಕ ಜಯಣ್ಣ, ತಾಲೂಕು ಸಂಚಾಲಕ ಅಶೋಕ್ ಕರ್ಕುಂಜೆ, ಚಂದ್ರ ಸಿದ್ದಾಪುರ, ಸತ್ಯನಾರಾಯಣ ಬೆಳ್ಳಾಲ, ವಸಂತ ವಂಡ್ಸೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅರುಣ್ ಉಪ್ಪಿನಕುದ್ರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ತಲ್ಲೂರಿನಿಂದ ಹಟ್ಟಿಯಂಗಡಿ, ಗುಲ್ವಾಡಿ, ಕರ್ಕುಂಜೆ, ಅಂಪಾರು ಮಾರ್ಗವಾಗಿ ಕಾವ್ರಾಡಿವರೆಗೆ ಸಾಗಿದ ಈ ಅಹಿಂದ ಜಾಗೃತಿ ರಥಯಾತ್ರೆ ಕೇವಲ ಒಂದು ರಥಯಾತ್ರೆಯಾಗಿ ಉಳಿಯದೆ, ಸಂವಿಧಾನದ ಅರಿವು ಮೂಡಿಸುವ, ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನೆ ಮನೆಗೆ ತಲುಪಿಸುವ ಹಾಗೂ ಸಾಮಾಜಿಕ ಸಮಾನತೆಯ ಸಂದೇಶ ಸಾರುವ ಅರ್ಥಪೂರ್ಣ ಜಾಗೃತಿ ಪಯಣವಾಗಿ ಮೂಡಿಬಂತು. ವಿವಿಧ ಸಮುದಾಯಗಳ ಮುಖಂಡರು, ಸರ್ಕಾರಿ ಅಧಿಕಾರಿಗಳು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಪಾಲ್ಗೊಳ್ಳುವಿಕೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.












