ಕುಂದಾಪುರ ಮಿರರ್ ಸುದ್ದಿ…
ಕೋಟ :ವಿವೇಕ ಪ.ಪೂ.ಕಾಲೇಜಿನ ಶಾಲಾ ಸಂಸತ್ತಿನ ಉದ್ಘಾಟನೆ ಸಮಾರಂಭವು ಸಂಸ್ಥೆಯ ಎಂ.ಜಿ.ಎಂ. ಸಭಾಂಗಣದಲ್ಲಿ ಇತ್ತೀಚೆಗೆ ಜರುಗಿತು.
ಕಾರ್ಯಕ್ರಮವನ್ನು ವಿವೇಕ ಹಿಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ. ರಮಾಂದ ಭಟ್ ದೀಪ ಬೆಳಗಿಸುವುದರ ಮೂಲಕ ಶಾಲಾ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿ, ‘ದೇಶದ ಸಂಸತ್ ಪ್ರಮುಖ ನಿರ್ಣಯಗಳನ್ನು ಕೈಗೊಂಡು ದೇಶವನ್ನು ನಡೆಸುವಲ್ಲಿ ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೇ ಸಂಸತ್ತಿನ ನಡಾವಳಿ, ಅಲ್ಲಿನ ಕಾರ್ಯ ವಿಧಾನ ಹೇಗೆ ಎಂಬುದಿತ್ಯಾದಿಗಳ ಬಗ್ಗೆ ತಿಳಿಸಲು ಹಾಗೆಯೇ ಅವರಲ್ಲಿ ನಾಯಕತ್ವ ಗುಣ, ಪರಸ್ಪರ ಸಂಬಂಧ, ಕ್ರೀಯಾಶೀಲ ಗುಣ, ದೂರದೃಷ್ಟಿ, ಶಿಸ್ತು, ಸಂಯಮ ಮುಂತಾದ ಗುಣಗಳನ್ನು ಬೆಳೆಸುವುದೇ ವಿದ್ಯಾರ್ಥಿ ಸರ್ಕಾರದ ಮುಖ್ಯ ಉದ್ದೇಶವಾಗಿರುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಏಳವೆಯಿಂದಲೇ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸಮಾಜದಲ್ಲಿ ಉತ್ತಮ ನಾಗರೀಕರಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಕೆ. ಜಗದೀಶ ನಾವಡ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ಸೇವಾ ಮನೋಭಾವ, ಶಿಸ್ತು, ಸಂಯಮ ಮತ್ತು ಸ್ವಚ್ಛತೆಗೆ ಹೆಚ್ಚು ಗಮನ ವಹಿಸಬೇಕು. ಸತ್ಯ, ಪ್ರಾಮಾಣಿಕತನದಿಂದ ಕೆಲಸವನ್ನು ನಿರ್ವಹಿಸುವ ಗುಣವನ್ನು ಬೆಳೆಸಿಕೊಂಡಲ್ಲಿ ಭವಿಷ್ಯದಲ್ಲಿ ಉತ್ತಮ ಜನನಾಯಕನಾಗಲು ಸಾಧ್ಯ ಎಂದು ತಿಳಿಸಿದರು.
ಹಾಗೆಯೇ ವಿದ್ಯಾರ್ಥಿ ಸರಕಾರದ ಸಭಾಪತಿ ಶಿವಾನಿ, ಉಪಸಭಾಪತಿ ಅಭಿಜ್ಞ ಹೊಳ್ಳ ಇವರಿಗೆ ಪ್ರಮಾಣ ವಚನ ಬೋಧಿಸಿದರು. ತದನಂತರ ಸರಕಾರ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗು ಮಂತ್ರಿಮಂಡಲದ ಸರ್ವ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು.
ಪ್ರೌಢಶಾಲಾ ವಿಭಾಗದ ಹಿರಿಯ ಸಹ ಶಿಕ್ಷಕ ವೆಂಕಟೇಶ ಉಡುಪ ಶುಭ ಹಾರೈಸಿದರು.
ವಿದ್ಯಾರ್ಥಿ ಸರಕಾರದ ನಾಯಕ ಶ್ರೀಶ ಆರ್.ನಾಯಕ್ ಸ್ವಾಗತಿಸಿದರು. ಉಪನಾಯಕ ಕೇಶವ ಉಪಾಧ್ಯ ವಂದಿಸಿದರು.
ಉಪನ್ಯಾಸಕ ಶ್ರೀ ಗಣೇಶಕುಮಾರ ಶೆಟ್ಟಿ ಮತ್ತು ಶಿಕ್ಷಕಿ ರತಿ ಬಾೈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವು ಸಂಪನ್ನಗೊಂಡಿತು.











