ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಮಂಗಳೂರು ವಿವಿಯಿಂದ ಪದವಿ ಪರೀಕ್ಷಾ ಫಲಿತಾಂಶ ವಿಳಂಬ, ಅಂಕಪಟ್ಟಿ ವಿತರಣೆ ಆಗದಿರುವುದು ಹಾಗೂ ಮೌಲ್ಯಮಾಪನ ವಿಷಯಗಳಲ್ಲಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಬೇಕಾಗಿ ಒತ್ತಾಯಿಸಿ ಕುಂದಾಪುರದಲ್ಲಿ ಶನಿವಾರ ಎಬಿವಿಪಿ ಕುಂದಾಪುರ ಘಟಕದ ನೇತೃತ್ವದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳಿಂದ ಬೃಹತ್ ಪ್ರತಿಭಟನೆ ನಡೆಯಿತು.

ಕುಂದಾಪುರದ ಶಾಸ್ತ್ರಿ ಸರ್ಕಲ್ ಬಳಿಯಿಂದ ಕಾಲ್ನಡಿಗೆ ಜಾಥದ ಮೂಲಕ ಮಿನಿ ವಿಧಾನಸೌಧವರೆಗೆ ಬಂದ ನೂರಾರು ವಿದ್ಯಾರ್ಥಿಗಳು, ವಿವಿಧ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕುಂದಾಪುರದ ಭಂಡಾರ್‌ಕಾರ್‍ಸ್ ಕಾಲೇಜು, ಡಾ| ಬಿ.ಬಿ.ಹೆಗ್ಡೆ ಕಾಲೇಜು, ಬಸ್ರೂರು ಶಾರದಾ ಕಾಲೇಜು, ಬ್ರಹ್ಮಾವರದ ಎಸ್‌ಎಂಎಸ್ ಕಾಲೇಜು, ಕೋಟೇಶ್ವರ ಸರಕಾರಿ ಪ್ರಥಮ ದರ್ಜೆ, ಬಾರ್ಕೂರು ಕಾಲೇಜುಗಳ ನೂರಾರು ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಸಿಗೆ ಮನವಿ
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು ಅವರಿಗೆ ಮನವಿ ಸಲ್ಲಿಸಿದ ವಿದ್ಯಾರ್ಥಿಗಳು ನಮ್ಮ ಹಲವು ಬೇಡಿಕೆಗಳಿಗೆ ಮಂಗಳೂರು ವಿವಿಯವರು ಸ್ಪಂದಿಸುತ್ತಲೇ ಇಲ್ಲ. ಈ ಬಗ್ಗೆ ನಮಗೆ ತ್ವರಿತಗತಿಯಲ್ಲಿ ಸೂಕ್ತ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ವಿವಿಗೆ ಮುತ್ತಿಗೆ ಹಾಕಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು.
ಕುಲಸಚಿವರಿಗೆ ಕರೆ
ಮನವಿ ಸ್ವೀಕರಿಸಿದ ಎಸಿ ಅವರು ವಿವಿಯ ಪರೀಕ್ಷಾಂಗ ಕುಲಸಚಿವ ಪಿ.ಎಲ್.ಧರ್ಮ ಅವರಿಗೆ ಕರೆ ಮಾಡಿ, ವಿದ್ಯಾರ್ಥಿಗಳ ಸಮಸ್ಯೆಯನ್ನು ಅವರ ಗಮನಕ್ಕೆ ತಂದರು. ಬಳಿಕ ಮಾತನಾಡಿದ ಎಸಿ ರಾಜು, ೫ನೇ ಸೆಮಿಸ್ಟರ್ ಅಂಕಪಟ್ಟಿ ಸಿಗದಿರುವ ಸಂಜೆ ಅಥವಾ ಸೋಮವಾರದೊಳಗೆ ತಲುಪುವ ವ್ಯವಸ್ಥೆ ಮಾಡಲಾಗುವುದು. ಕ್ಯಾಂಪಸ್ ಆಯ್ಕೆ ಸಮಸ್ಯೆಯಿದ್ದರೆ, ವಿವಿ ಗಮನಕ್ಕೆ ತಂದು, ಸಂಬಂಧಪಟ್ಟ ಕಂಪೆನಿ ಜತೆ ಮಾತನಾಡಲಾಗುವುದು, ಮೌಲ್ಯಮಾಪನ ಬಗ್ಗೆ ಉಪನ್ಯಾಸಕರು ಬಾರದಿರುವುದರಿಂದ ವಿಳಂಬವಾಗಿದೆ ಎಂದಿದ್ದಾರಲ್ಲದೆ, ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದವರು ಹೇಳಿದರು. ಈ ಬಗ್ಗೆ ವಿವರವಾಗಿ ಪತ್ರವನ್ನು ಬರೆಯಲಾಗುವುದು ಎಂದು ತಿಳಿಸಿದರು.
ಆ.೧೧ರೊಳಗೆ ಬಗೆಹರಿಸಿ
ಎಬಿವಿಪಿ ಕುಂದಾಪುರ ತಾ| ಸಂಚಾಲಕ ಜಯಸೂರ್ಯ ಶೆಟ್ಟಿ ಮಾತನಾಡಿ, ಅಂಕಪಟ್ಟಿ ಸಿಗದೇ ಇತ್ತೀಚೆಗೆ ಕುಂದಾಪುರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕೆಲವರಿಗೆ ಕಂಪೆನಿ ಉದ್ಯೋಗವು ಕೈತಪ್ಪಿ ಹೋಗಿದೆ. ಮೌಲ್ಯಮಾಪನ ವಿಳಂಬ, ಫಲಿತಾಂಶದಲ್ಲಿ ಹಲವಾರು ದೋಷಗಳಿದ್ದು, ಈ ಎಲ್ಲ ಸಮಸ್ಯೆಗಳ ಬಗ್ಗೆ ಆ.೧೧ ರೊಳಗೆ ಸೂಕ್ತ ಉತ್ತರ ಸಿಗಬೇಕಿದೆ. ಇಲ್ಲದಿದ್ದರೆ ವಿದ್ಯಾರ್ಥಿ ಸಮೂಹ ವಿವಿಗೆ ಮುತ್ತಿಗೆ ಹಾಕಲಾಗುವುದು ಎಂದವರು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಮಂಗಳೂರು ವಿಭಾಗ ಸಂಯೋಜಕ ಆಶಿಶ್ ಶೆಟ್ಟಿ, ಪ್ರಮುಖರಾದ ಭಂಡಾರ್‌ಕಾರ್‍ಸ್ ಕಾಲೇಜಿನ ವಿತೇಶ್ ಶೆಟ್ಟಿ, ವೀಕ್ಷಿತ್, ವಿಘ್ನೇಶ್, ಸಾಕ್ಷಿ, ನಾಗೇಶ್, ಪೂರ್ಣಚಂದ್ರ, ಪುನೀತ್, ಅಕ್ಷಯ್, ಸುಜಿತ್, ಭವಿಶ್, ಪ್ರಮೋದ್, ನೂತನ್, ಧನುಶ್, ಬಿ.ಬಿ. ಹೆಗ್ಡೆ ಕಾಲೇಜಿನ ದರ್ಶನ್, ಬಸ್ರೂರು ಕಾಲೇಜಿನ ರಂಜಿತ್, ರಾಹುಲ್, ಪ್ರಜ್ವಲ್, ದೀಪಾ, ಬಾರ್ಕೂರು ಕಾಲೇಜಿನ ವೈಭವಿ, ರಾಹುಲ್, ವಿವೇಕ್, ಎಸ್‌ಎಂಎಸ್ ಕಾಲೇಜಿನ ನಿಶಾನ್, ಕೋಟೇಶ್ವರ ಕಾಲೇಜಿನ ಅಭಿ, ಚೇತನ್, ಮತ್ತಿತರರು ಉಪಸ್ಥಿತರಿದ್ದರು.
೨ ಹಾಗೂ ೪ನೇ ಸೆಮಿಸ್ಟರ್ ಪರೀಕ್ಷೆ ಫಲಿತಾಂಶ ಪ್ರಕಟಗೊಂಡು ತಿಂಗಳಾದರೂ ಅಂಕಪಟ್ಟಿ ಸಿಕ್ಕಿಲ್ಲ. ಕೆಲವು ವಿಭಾಗದ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ. ಇದರಿಂದ ಕ್ಯಾಂಪಸ್ ಮೂಲಕ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಕಂಪೆನಿಗಳಿಗೆ ಅಂಕಪಟ್ಟಿ ಸಲ್ಲಿಸಲಾಗದೇ ಸಮಸ್ಯೆಯಾಗುತ್ತಿದೆ. ಹಲವರನ್ನು ಉದ್ಯೋಗದಿಂದಲೂ ಕೈ ಬಿಡಲಾಗಿದೆ. ಆ.೩ ರಂದು ಪ್ರಕಟವಾದ ೩ ಹಾಗೂ ೫ನೇ ಸೆಮಿಸ್ಟರ್ ಫಲಿತಾಂಶದಲ್ಲಿ ಹಲವು ದೋಷಗಳಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರಲ್ಲಿ ಗೊಂದಲಗಳಿವೆ. ಪ್ರಥಮ ಸೆಮಿಸ್ಟರ್ ಮೌಲ್ಯಮಾಪನ ಆಮೆಗತಿಯಲ್ಲಿ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.











