ಕುಂದಾಪುರ ಮಿರರ್ ಸುದ್ದಿ…
ವಂಡ್ಸೆ: ಇಂಗ್ಲೆಂಡ್‍ನ ಬರ್ಮಿಂಗ್ ಹ್ಯಾಂನಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಯ್ಟ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ವಿಜೇತರಾಗಿ ಹುಟ್ಟೂರಿಗೆ ಆಗಮಿಸಿದ ಕ್ರೀಡಾಸಾಧಕ ಗುರುರಾಜ ಪೂಜಾರಿ ವಂಡ್ಸೆ ಮೇಲ್ಪೇಟೆ ಫ್ರೆಂಡ್ಸ್ ವತಿಯಿಂದ ಭವ್ಯ ಸ್ವಾಗತ, ಗೌರವ ನೀಡಲಾಯಿತು.
ಗುರುರಾಜ್ ಪೂಜಾರಿಯ ಸ್ನೇಹಿತವರ್ಗ, ಮೇಲ್ಪೇಟೆ ಫ್ರೆಂಡ್ಸ್‍ನ ಸದಸ್ಯರು ಆತ್ಮೀಯವಾಗಿ ಸಾಧಕ ಸ್ನೇಹಿತನನ್ನು ಬರ ಮಾಡಿಕೊಂಡು ಅಭಿನಂದಿಸಿದರು. ಗುರುರಾಜ ಪೂಜಾರಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಲಾಯಿತು. ಸ್ನೇಹಿತರು ನೀಡಿದ ಪ್ರೀತಿಯ ಸನ್ಮಾನವನ್ನು ಆತ್ಯಂತ ಆತ್ಮೀಯತೆಯಿಂದ ಸ್ವೀಕರಿಸಿದ ಗುರುರಾಜ್ ಪೂಜಾರಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಗ್ರಾಮ ಪಂಚಾಯತಿ ಸದಸ್ಯ ಗೋವರ್ದನ್ ಜೋಗಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಸಂಜೀವ ಪೂಜಾರಿ ವಂಡ್ಸೆ, ಶ್ರೀನಿವಾಸ ಪೂಜಾರಿ ಕಲ್ಮಡಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಉದಯ ಕೆ.ನಾಯ್ಕ್ ವಂಡ್ಸೆ, ಗ್ರಾ.ಪಂ. ಮಾಜಿ ಸದಸ್ಯ ಗುಂಡು ಪೂಜಾರಿ ಹರವರಿ, ಬಾಲಕೃಷ್ಣ ಶ್ಯಾನುಭಾಗ್, ಕೃಷ್ಣ ದುರ್ಗಾಶ್ರೀ, ಹಾಗೂ ಮೇಲ್ಪೇಟೆ ಫ್ರೆಂಡ್ಸ್‍ನ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಉಪಸ್ಥಿತರಿದ್ದರು.











