ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಕೋಟಿ ಚೆನ್ನಯ್ಯ ಸಮಾನತೆ, ಸಾಮಾಜಿಕ ನ್ಯಾಯದ ಸಂಕೇತ. ಅವರ ಹೆಸರಿನಲ್ಲಿ ಉಡುಪಿ ಜಿಲ್ಲೆಯಲ್ಲಿ ಅದು ಸಹ ರಾಜ್ಯದಲ್ಲೇ ಪ್ರಥಮ ಬಾರಿಗೆ ಕೋಟಿ ಚೆನ್ನಯ್ಯ ಸೇನಾ ಪೂರ್ವ ತರಬೇತಿ ಶಾಲೆ ಆರಂಭಿಸಲಿದ್ದೇವೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉಡುಪಿಗೆ ಆಗಮಿಸಿ ಶಾಲೆಯನ್ನು ಉದ್ಘಾಟಿಸಲಿದ್ದಾರೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ನುಡಿದರು.
ಭಾನುವಾರ ಇಲ್ಲಿನ ನಾರಾಯಣಗುರು ಕಲ್ಯಾಣ ಮಂಟಪದ ಸಭಾಭವನದಲ್ಲಿ ಬಿಲ್ಲವ ಸಮಾಜ ಸೇವಾ ಸಂಘ ಹಮ್ಮಿಕೊಂಡ 30ನೇ ವರ್ಷದ ವಿದ್ಯಾರ್ಥಿವೇತನ ವಿತರಣೆ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಬಿಲ್ಲವ ಸೇವಾ ಸಂಘ ಮಾದರಿ ಸಂಘ. ಸುರೇಶ್ ಎಸ್.ಪೂಜಾರಿಯಂತಹ ಹಿರಿಯರು ಇದರ ಆಧಾರಸ್ತಂಭಗಳು. ಜಾತಿ ಸಂಘಟನೆಯ ಬಲವರ್ಧನೆಯ ಮೂಲಕ ಪ್ರಜಾಪ್ರಭುತ್ವದ ಆಶಯ ಗಟ್ಟಿಗೊಳಿಸಲು ಶಿಕ್ಷಣ, ಸಂಘಟನೆಗೆ ಆದ್ಯತೆ ನೀಡಬೇಕು. ನಾರಾಯಣಗುರು ಅಭಿವೃದ್ಧಿ ನಿಗಮದ ಮೂಲಕ ರಾಜ್ಯದಲ್ಲಿ 400 ನಾರಾಯಣಗುರು ವಸತಿ ಶಾಲೆ ಮಂಜೂರಾಗಿದೆ. ಕರಾವಳಿಯ ನಾಲ್ಕು ಜಿಲ್ಲೆಗಳಲ್ಲೂ ಶಾಲೆಗೆ ಮಂಜೂರಾತಿ ದೊರಕಿದೆ. ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಈಗಾಗಲೆ ಶಾಲೆ ಆರಂಭಗೊಂಡಿದೆ. ಮುಂದಿನ ದಿನಗಳಲ್ಲಿ ರಾಜ್ಯದ 30 ಜಿಲ್ಲೆಗಳಲ್ಲೂ ಶಾಲೆ ಆರಂಭಿಸಲಾಗುವುದು ಎಂದು ಅವರು ಹೇಳಿದರು.
ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಅಧ್ಯಕ್ಷ ಸುರೇಶ್ ಎಸ್.ಪೂಜಾರಿ ಸಮಾರಂಭ ಉದ್ಘಾಟಿಸಿ ಮಾತನಾಡಿ ಸಮಾಜ ಶಿಕ್ಷಣದ ಮೂಲಕ ಉನ್ನತ ಸ್ಥಾನಕ್ಕೇರಬೇಕೆಂಬ ಸಂಕಲ್ಪದೊಂದಿಗೆ ನಡೆಸಿಕೊಂಡು ಬಂದ ಚಟುವಟಿಕೆಗಳು ಇಂದು ನೆಮ್ಮದಿ ನೀಡುತ್ತಿದೆ. ಸಮಾಜ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರಿಯುತ್ತಿದೆ ಎಂದರು. ಮುಖ್ಯ ಅತಿಥಿ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಸಾಧಕರನ್ನು ಸನ್ಮಾನಿಸಿ, ವಿದ್ಯಾರ್ಥಿವೇತನ ವಿತರಿಸಿದರು. ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ವಿನಯಕುಮಾರ ಸೊರಕೆ ಪ್ರತಿಭಾ ಪುರಸ್ಕಾರ ವಿತರಿಸಿದರು. ಬೆಂಗಳೂರು ಉದ್ಯಮಿ ಡಾ.ಗೋವಿಂದ ಬಾಬು ಪೂಜಾರಿ, ಹುಬ್ಬಳ್ಳಿ ಉದ್ಯಮಿ ವಿಜಯ್ ಪಿ.ಪೂಜಾರಿ, ಡೈನಾಮಿಕ್ ಇನ್ಪೊಟೆಕ್ ಆಡಳಿತ ನಿರ್ದೇಶಕ ಧೀರಜ್ ಹೆಜಮಾಡಿ, ನಾರಾಯಣಗುರು ಯುವಕ ಮಂಡಲ ಅಧ್ಯಕ್ಷ ಅಜಿತ್ ಪೂಜಾರಿ ರಂಗನಹಿತ್ಲು, ಬಿಲ್ಲವ ಮಹಿಳಾ ಘಟಕ ಅಧ್ಯಕ್ಷೆ ಸುಮನಾ ಬಿದ್ಕಲ್‍ಕಟ್ಟೆ, ಬಿಲ್ಲವ ಸಮಾಜ ಸೇವಾ ಸಂಘದ ಕೋಶಾಧಿಕಾರಿ ಶಿವಾನಂದ ಗಂಗೊಳ್ಳಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಾಧಕರಾದ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಕಂಚಿನ ಪದಕ ವಿಜೇತ ಗುರುರಾಜ್ ಪೂಜಾರಿ, ಕೃಷಿಕ ಗಂಗಾಧರ ಪೂಜಾರಿ ಕೋಡಿ, ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ಉದಯ ಪೂಜಾರಿ ಬಳ್ಕೂರು, ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಪವನ್ ನಾಗೇಶ್ ಪೂಜಾರಿ, ವಿಶಿಷ್ಟ ಚೇತನ ವಿಶೇಷ ಪ್ರತಿಭೆ ರಿತೀಶ್ ಎಂ.ಬಿಲ್ಲವ, ಪಿಎಚ್‍ಡಿ ಪದವಿ ಪಡೆದಿರುವ ಡಾ.ಲತಾ ಪೂಜಾರಿ, ಅಂತರಾಷ್ಟ್ರೀಯ ಛಾಯಾಗ್ರಹಣ ಪ್ರಶಸ್ತಿ ವಿಜೇತ ಅಮೃತ್ ಬೀಜಾಡಿ, ಮಿಸ್ ಫೇಸ್ ಆಫ್ ಇಂಡಿಯಾ ಸುಶ್ಮಿತಾ ಮಾಧವ ಪೂಜಾರಿ, ರಾಜ್ಯಮಟ್ಟದ ಭಾಷಣ ಸ್ಪರ್ಧೆ ವಿಜೇತೆ ಪ್ರಗತಿ ಜಿ.ಪೂಜಾರಿ, ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ನಾಗರಾಜ ಪೂಜಾರಿ ಉಳ್ಳೂರು, ದಿವ್ಯ ತೇಜ ಪೂಜಾರಿ, ಸುಮನ್ ವಿ.ಪೂಜಾರಿ, ಎಂಬಿಎ ಪರೀಕ್ಷೆಯಲ್ಲಿ ಚಿನ್ನದ ಪದಕ ವಿಜೇತೆ ಶ್ವೇತಾ ಎಂ.ಪೂಜಾರಿ, ಬಿಸಿಎ ಪರೀಕ್ಷೆಯಲ್ಲಿ ಚಿನ್ನದ ಪದಕ ಪಡೆದ ದೀಕ್ಷಾ ಜಿ.ಪೂಜಾರಿ, ರಾಷ್ಟ್ರಮಟ್ಟದ ಕ್ರೀಡಾಪಟು ಅಶ್ಮಿತ್ ಸಿ.ಪೂಜಾರಿ, ರಾಜ್ಯಮಟ್ಟದ ಕ್ರೀಡಾಪಟು ಶ್ವೇತಾ ಅಮಾಸೆಬೈಲು, ರಾಜ್ಯಮಟ್ಟದ ಅತ್ಲೆಟಿಕ್ ಪೂರ್ಣಿಮಾ ಪೂಜಾರಿ ತಲ್ಲೂರು ಅವರನ್ನು ಸನ್ಮಾನಿಸಲಾಯಿತು. ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಸ್ನಾತಕೋತ್ತದ ಪದವಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿವೇತನ ವಿತರಿಸಲಾಯಿತು.
ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಗಣೇಶ ವಿಠಲವಾಡಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕರಾದ ನರೇಂದ್ರ ಕೋಟ ಮತ್ತು ಸತೀಶ್ ಕಾರ್ಯಕ್ರಮ ನಿರ್ವಹಿಸಿದರು. ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕøತಿಕ ದತ್ತಿ ಸಂಸ್ಥೆಯ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ ವಂದಿಸಿದರು.











