ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಮಹಿಳೆಯರನ್ನು ಭೂಮಿ ತಾಯಿಗೆ ಹೋಲಿಸುತ್ತಾರೆ. ಆಕೆ ಭೂಮಿಯಷ್ಟು ಸಹನೆಯನ್ನು ಹೊಂದಿರುತ್ತಾಳೆ. ಸಂಸಾರವನ್ನು ನಿಭಾಯಿಸಲು ಹೆಚ್ಚು ತಾಳ್ಮೆ, ಸಹನೆ ಅವಶ್ಯಕ. ಇಂದಿನ ಸಂಕೀರ್ಣ ವ್ಯವಸ್ಥೆಯಲ್ಲಿ ಮಹಿಳೆಯರ ಪಾತ್ರ ಬದಲಾಗಿದೆ. ಆಕೆಗೆ ಜವಾಬ್ದಾರಿಗಳು ಇನ್ನಷ್ಟು ಹೆಚ್ಚಿವೆ. ಎಷ್ಟೋ ಮಹಿಳೆಯರು ತಮ್ಮ ಗೃಹಕೃತ್ಯದ ಜೊತೆಗೆ ಹೊರಗೂ ದುಡಿಯಬೇಕಾದ ಅನಿವಾರ್ಯತೆ ಬಂದಿದೆ. ಕುಟುಂಬದ ಎಲ್ಲ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮಹಿಳೆಯರು ತಮ್ಮ ಆರೋಗ್ಯದ ವಿಷಯ ಬಂದಾಗ ನಿರ್ಲಕ್ಷ್ಯ ತಾಳುತ್ತಾರೆ. ಇದು ಅಪಾಯಕಾರಿ. ಯಾಕೆಂದರೆ, ಇಂದಿನ ಆಹಾರ ಪದ್ಧತಿ, ಜೀವನ ಶೈಲಿ ಯಾವುದೂ ಆರೋಗ್ಯಕ್ಕೆ ಪೂರಕವಾಗಿಲ್ಲ. ಆದ್ದರಿಂದ ಮಹಿಳೆಯರು ತನ್ನ ಮತ್ತು ಕುಟುಂಬ ಸದಸ್ಯರ ಆಯಾಯ ವಯೋಮಾನದ ಸಹಜವಾದ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಅರಿತಿರಬೇಕು. ವ್ಯತ್ಯಯವಾದರೆ ಸೂಕ್ತ ಔಷಧೋಪಚಾರ ಪಡೆಯಬೇಕು. ಈ ಎಲ್ಲ ಅಂಶಗಳನ್ನು ಪರಿಗಣಿಸಿದಾಗ ಪುರಾಣ ಕಾಲದಿಂದ ಇಂದಿನವರೆಗೂ ಸಮಾಜದಲ್ಲಿ ಮಹಿಳೆಯರ ವಿಶಿಷ್ಟ ಸ್ಥಾನಮಾನ, ಪ್ರಾಮುಖ್ಯತೆ ಅರಿವಾಗುತ್ತದೆ – ಎಂದು ಸಾಲಿಗ್ರಾಮದ ಡಾ. ವಾಣಿಶ್ರೀ ಐತಾಳ ಹೇಳಿದರು.
ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ಮಹಿಳಾ ವೇದಿಕೆಯ ಹತ್ತನೇ ತಾಲೂಕು ಮಹಿಳಾ ಸಮಾವೇಶದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಮನೆಗೆಲಸವೂ ಮಾಡುವ ಗೃಹಿಣಿಯರಿಗೆ ಬೇರೆ ವ್ಯಾಯಾಮ ಯಾಕೆ ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ, ಮನೆಗೆಲಸ ವ್ಯಾಯಾಮವಲ್ಲ ಎಂದ ಅವರು, ಗೃಹಿಣಿಯರ ಆರೋಗ್ಯ ರಕ್ಷಣೆಗೆ ನಿಯಮಿತವಾದ ನಡಿಗೆ, ಯೋಗಾಸನ, ಪ್ರಾಣಾಯಾಮ ಅತ್ಯವಶ್ಯಕ ಎಂದು ಸಲಹೆ ಮಾಡಿದರು.
ನಗರದ ಶ್ರೀ ಕುಂದೇಶ್ವರ ದೇವಾಲಯದ ವಡೇರಹೋಬಳಿ ಪಟೇಲ್ ವೀರಣ್ಣ ಶೆಟ್ಟಿ ಸ್ಮಾರಕ ಶ್ರೀ ಕುಂದೇಶ್ವರ ಬಯಲು ರಂಗಮಂಟಪದಲ್ಲಿ ನಡೆದ ಈ ಸಮಾರಂಭವನ್ನು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾದ ಗೌರವಾಧ್ಯಕ್ಷ, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಾನಂದ ಚಾತ್ರರು ಸಹಧರ್ಮಿಣಿ ಸುಪ್ರಭಾ ಚಾತ್ರರೊಡಗೂಡಿ ಉಧಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಮಹಿಳಾ ವೇದಿಕೆ ಅಧ್ಯಕ್ಷೆ ಶೋಭಾ ಕಲ್ಕೂರ ಮಾತನಾಡಿ, ಜೀವನದಲ್ಲಿ ಬಹುಮುಖ ಪಾತ್ರಗಳನ್ನು ವಹಿಸುವ ಮಹಿಳೆ ಕುಟುಂಬದ ಸಾಂಸ್ಕೃತಿಕ ರಾಯಭಾರಿಯೂ ಹೌದು. ಆಕೆ ಮನೆಯ ಮಕ್ಕಳಿಗೆ ಪುರಾಣ ಕಥೆಗಳು, ಭಜನೆಗಳನ್ನು ತಿಳಿಸಿಕೊಡಬೇಕು. ಇದರಿಂದ ಯುವಜನಾಂಗ ನಮ್ಮ ಶ್ರೇಷ್ಠ ಸಂಸ್ಕೃತಿಯ ಕಡೆಗೆ ಒಲವು ಹೊಂದಲು ಸಾಧ್ಯವಾಗುತ್ತದೆ ಎಂದು ಸಲಹೆ ಮಾಡಿದರು.
ಪರಿಷತ್ ಅಧ್ಯಕ್ಷ ಅನಂತ ಪದ್ಮನಾಭ ಬಾಯಿರಿ ಮಾತನಾಡಿ, ಮಹಿಳೆಯರ ಲ್ಲಿನ ಪ್ರತಿಭೆಯ ವಿಕಸನ ಮತ್ತು ಪ್ರಕಟನೆಗಾಗಿ ವಿಪ್ರ ಮಹಿಳಾ ವೇದಿಕೆ ರೂಪುಗೊಂಡಿದೆ. ಪರಿಷತ್ ನ ಅಂಗಸಂಸ್ಥೆಯಾಗಿ ಇದು ಕಾರ್ಯಾಚರಿಸುತ್ತದೆ ಎಂದರು.
ಪ್ರಧಾನ ಕಾರ್ಯದರ್ಶಿ ರತ್ನಾಕರ ಉಡುಪ, ನಿರಂತರವಾಗಿ 27 ವರ್ಷಗಳಿಂದ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಏಕೈಕ ಸಂಸ್ಥೆ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ತು. ಇಲ್ಲಿ ಪ್ರತಿಭಾವಂತ ಮಹಿಳೆಯರಿಗೇನೂ ಕೊರತೆಯಿಲ್ಲ. ವೇದಿಕೆಯು ನಡೆಸಿದ ವಿಪ್ರ ಗಾನ ಕೋಗಿಲೆ ಎಂಬ ವಿಶಿಷ್ಟ ಕಾರ್ಯಕ್ರಮ ಇಡೀ ರಾಜ್ಯದ ಗಮನ ಸೆಳೆದಿದೆ. ಮಹಿಳಾ ಸಬಲೀಕರಣದ ಸಂದೇಶ ಸಾರಲು ಬೈಕಿನಲ್ಲಿ ಆರು ಸಾವಿರ ಕಿ. ಮೀ. ದೂರದ ಕಾಶ್ಮೀರದವರೆಗೂ ಯಶಸ್ವೀ ಯಾತ್ರೆ ನಡೆಸಿದ ಸಾಕ್ಷಿ ಹೆಗಡೆ ಇಲ್ಲಿದ್ದಾರೆ. ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗಳ ಮೂಲಕ ವಿಪ್ರ ಮಹಿಳೆಯರು ಸಮಾಜದ ಗಮನ ಸೆಳೆದಿದ್ದಾರೆ. ಇಂದು ಮಹಿಳೆಯರಿಗೆ ಆಯ್ಕೆಯ ಅವಕಾಶ ಲಭಿಸಿದೆ. ಇದು ಸಾಧನೆಯ ದಾರಿಯನ್ನು ಸುಗಮಗೊಳಿಸಿದೆ. ಇಂತಹ ಸಮಾವೇಶಗಳು ಸಾಧನೆ ಮಾಡುವವರಿಗೆ ಸ್ಫೂರ್ತಿ ನೀಡುವ, ಸಾಧಿಸಿದವರನ್ನು ಗೌರವಿಸುವ ವೇದಿಕೆಯಾಗಬೇಕು ಎಂದರು.
ಕುಂದಾಪುರ ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಉಡುಪ ಮಾತನಾಡಿ, ಕೇವಲ ಸಂಬಳ ತರುವ ಮಹಿಳೆ ಮಾತ್ರ ಗೌರವಾರ್ಹಳಲ್ಲ, ಗೃಹಿಣಿಯಾಗಿ, ಸಂಸ್ಕಾರ ನೀಡಿ ಉತ್ತಮ ಜನಾಂಗವನ್ನು ರೂಪಿಸುವವರೂ ಗೌರವಕ್ಕೆ ಪಾತ್ರರಾದವರೇ ಎಂದರು.
ಮಹಿಳಾ ಸಬಲೀಕರಣ ಸಂದೇಶ ಸಾರಲು ಸುದೀರ್ಘ ಬೈಕ್ ಯಾನ ನಡೆಸಿದ ವಿದ್ಯಾರ್ಥಿನಿ ಸಾಕ್ಷಿ ಹೆಗಡೆ ಮತ್ತು ಉಪನ್ಯಾಸ ನೀಡಿದ ಡಾ. ವಾಣಿಶ್ರೀ ಐತಾಳರನ್ನು ಸನ್ಮಾನಿಸಲಾಯಿತು.
ತಾಲೂಕು ಮಹಿಳಾ ವೇದಿಕೆ ಅಧ್ಯಕ್ಷೆ ಭಾವನಾ ಭಟ್ ಸಭಾಧ್ಯಕ್ಷತೆ ವಹಿಸಿದ್ದರು.
ಕುಂದಾಪುರ ವಲಯ ಮಹಿಳಾ ವೇದಿಕೆ ಅಧ್ಯಕ್ಷೆ ಶಶಿಕಲಾ ಉಡುಪ, ಕೋಟೇಶ್ವರ ವಲಯಾಧ್ಯಕ್ಷೆ ವಾಣಿಶ್ರೀ ಹೆಬ್ಬಾರ್, ಕುಂಭಾಶಿಯ ಸರಸ್ವತಿ ಹೆಬ್ಬಾರ್, ಉಪ್ಪುಂದದ ಹೇಮಾ ಹೊಳ್ಳ, ಗುಜ್ಜಾಡಿಯ ಸಂಧ್ಯಾ ಕಾರಂತ, ಮರವಂತೆಯ ಶರ್ಮಿಳಾ ಹೆಬ್ಬಾರ್, ಸೌಕೂರು ಚಂದ್ರಾವತಿ ಐತಾಳ, ಬೆಳ್ವೆಯ ಭಾರ್ಗವಿ ಭಟ್, ಕಮಲಶಿಲೆಯ ದೀಪಾ ಭಟ್, ಅಮಾಸೆಬೈಲಿನ ಪವಿತ್ರಾ ಭಾಗವತ್, ಶಂಕರನಾರಾಯಣದ ಪುಷ್ಪಾ ಹತ್ವಾರ್, ಗುಡ್ಡಟ್ಟು ವಲಯದ ಇಂದಿರಾ ಉಡುಪ, ಮಾರಣಕಟ್ಟೆಯ ಉಮಾ ಉಡುಪ, ಬಸ್ರೂರಿನ ವಾಣಿಶ್ರೀ ಅಡಿಗ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಉಡುಪಿ ಜಿಲ್ಲಾ ಮಹಿಳಾ ವಿಭಾಗ ಸಂಚಾಲಕಿ ಶಾಂತಾ ಗಣೇಶ್, ತಾಲೂಕು ಮಹಿಳಾ ವೇದಿಕೆಯ ಗೌರವಾಧ್ಯಕ್ಷೆಯರಾದ ಶೋಭಾ ಅರಸ್ ಮತ್ತು ಅನ್ನಪೂರ್ಣ ಉಡುಪರನ್ನು ಗೌರವಿಸಲಾಯಿತು.
ಪರಿಷತ್ ಮುಖವಾಣಿ ‘ವಿಪ್ರವಾಣಿ’ ಸಂಪಾದಕ ಪ್ರೊ. ಶಂಕರ ರಾವ್, ಕಾಳಾವರ, ಪೂರ್ವಾಧ್ಯಕ್ಷರುಗಳು ಹಾಗೂ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗೌರವಾಧ್ಯಕ್ಷೆ ಅನ್ನಪೂರ್ಣ ಉಡುಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಿಕಟಪೂರ್ವ ಅಧ್ಯಕ್ಷೆ ಪವಿತ್ರಾ ಅಡಿಗ ಸ್ವಾಗತಿಸಿದರು. ಮಂಜುಳಾ ಹೆಬ್ಬಾರ್ ಮತ್ತು ಅಕ್ಷತಾ ಐತಾಳ ಕಾರ್ಯಕ್ರಮ ನಿರೂಪಿಸಿದರು. ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಆರಂಭದಲ್ಲಿ ವಿಪ್ರ ಮಹಿಳೆಯರು ಶ್ರೀ ವಿಷ್ಣು ಸಹಸ್ರನಾಮ ಮತ್ತು ಶತರುದ್ರ ಪಠಣ ನಡೆಸಿದರು.
ಅನ್ನಪೂರ್ಣ ಉಡುಪ, ಜಿ. ಎಸ್. ಭಟ್, ಅನ್ನಪೂರ್ಣ ಕೊಡ್ಲಾಯ, ವಸಂತಿ ಮಿತ್ಯಂತ, ಅವನೀಶ್ ಹೊಳ್ಳ, ರಾಘವೇಂದ್ರ ಅಡಿಗ ಮತ್ತು ಮಂಜುನಾಥ ಭಟ್ ಅತಿಥಿಗಳನ್ನು ಗೌರವಿಸಿದರು. ಸಂಧ್ಯಾ ಅಡಿಗ ವಂದಿಸಿದರು.











