ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ನೇತೃತ್ವದಲ್ಲಿ ಕಾರ್ಮಿಕರ ಐಕ್ಯತೆ ಜನತೆಯ ಸೌಹಾರ್ದತೆಗಾಗಿ ಕುಂದಾಪುರದ ಆರ್ ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸಿಐಟಿಯು 15 ನೇ ರಾಜ್ಯ ಸಮ್ಮೇಳನ ನವೆಂಬರ್ 15-17 ವರೆಗೆ ನಡೆಯಲಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೇಳಿದರು.
ಅವರು ನ.4ರಂದು ಕುಂದಾಪುರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ನ.15 ರಂದು ಬೆಳಿಗ್ಗೆ 10.30ಕ್ಕೆ ಸಿಐಟಿಯು ಅಖಿಲ ಭಾರತ ಅಧ್ಯಕ್ಷೆ ಡಾ.ಹೇಮಲತಾ ಸಿಐಟಿಯು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಸಿಐಟಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಮಾಜಿ ರಾಜ್ಯ ಸಭಾ ಸದಸ್ಯರಾದ ತಪನ್ ಸೇನ್ ಮತ್ತು ಉಪಾಧ್ಯಕ್ಷ ಎ.ಕೆ. ಪದ್ಮನಾಭನ್ ಮಾರ್ಗದರ್ಶನ ನೀಡಲಿದ್ದಾರೆ. ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಮೀನಾಕ್ಷಿ ಸುಂದರಂ ಹಾಗೂ ಸಿಐಟಿಯು ರಾಜ್ಯ ಮುಖಂಡರೂ ಭಾಗವಹಿಸಲಿದ್ದಾರೆ. ಸಿಐಟಿಯು ರಾಜ್ಯ ಅಧ್ಯಕ್ಷ ಎಸ್. ವರಲಕ್ಷ್ಮಿ ರಾಜ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಜ್ಯದ 31 ಜಿಲ್ಲೆಗಳಿಂದ ವಿವಿಧ ಕಾರ್ಮಿಕರ ನಡುವೆ ಅವರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ 130 ಮಹಿಳಾ ಪ್ರತಿನಿಧಿಗಳು ಸೇರಿದಂತೆ 420 ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಮ್ಮೇಳನದ ಕೊನೆಯ ದಿನವಾದ ನವೆಂಬರ್ 17 ರಂದು ಮಧ್ಯಾಹ್ನ 2.30 ಗಂಟೆಗೆ ಕುಂದಾಪುರ ಶಾಸ್ತ್ರಿ ವೃತ್ತದಿಂದ ಬೃಹತ್ ಮೆರವಣಿಗೆ ಹಾಗೂ ನೆಹರು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದ್ದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಪನ್ ಸೇನ್ ಪ್ರಧಾನ ಭಾಷಣ ಮಾಡಲಿದ್ದಾರೆ.ಈ ಮೆರವಣಿಗೆಯಲ್ಲಿ ಜಿಲ್ಲೆಯಲ್ಲಿ ಸಿಐಟಿಯುಗೆ ಸಂಯೋಜನೆಗೊಂಡಿರುವ ಎಲ್ಲಾ ಕಾರ್ಮಿಕ ಸಂಘಗಳ ಸದಸ್ಯರು ಭಾಗವಹಿಸಲಿದ್ದಾರೆ ಎಂದರು.
15ನೇ ರಾಜ್ಯ ಸಮ್ಮೇಳನ ಯಶಸ್ಸಿಗೆ ಕಾರ್ಮಿಕರ ಹಿತೈಷಿಗಳು, ಲೇಖಕರು, ಕವಿಗಳು, ಜನಪರ ಹೋರಾಟಗಾರರೂ ಸೇರಿದಂತೆ ವಿಶಾಲವಾದ ಸ್ವಾಗತ ಸಮಿತಿ ರಚನೆ ಮಾಡಲಾಗಿದೆ. ಸಮ್ಮೇಳನ ಅತ್ಯಂತ ವ್ಯವಸ್ಥಿತವಾಗಿ ವ್ಯಾಪಕವಾಗಿ ಪ್ರಚಾರ ಮಾಡಲು ಕಾರ್ಮಿಕರು ಗ್ರಾಮ ಗ್ರಾಮಗಳಲ್ಲಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
2014ರ ನಂತರ ದೇಶದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಾರ್ಮಿಕ ವರ್ಗವನ್ನು ಕೇಂದ್ರಿಕರಿಸಿ ವ್ಯಾಪಕ ದಾಳಿ ನಡೆಸುತ್ತಿದೆ. ಸ್ವಾತಂತ್ರ್ಯ ಪೂರ್ವದಿಂದ ಇತ್ತೀಚಿನವರೆಗೆ ಕಾರ್ಮಿಕರು ಸಮರಧೀರ ಚಳವಳಿ ಮೂಲಕ ಗಳಿಸಿದ 44 ಕಾರ್ಮಿಕ ಕಾನೂನುಗಳಲ್ಲಿ 15 ಕಾನೂನುಗಳನ್ನು ರದ್ದುಗೊಳಿಸಿ ಉಳಿದ 29 ಕಾನೂನುಗಳನ್ನು ವಿಲೀನಗೊಳಿಸಿ 4 ಸಂಹಿತೆಗಳನ್ನಾಗಿ ರೂಪಿಸಿ ಶ್ರಮಿಕರನ್ನು ಬಂಡವಾಳದ ಗುಲಾಮರನ್ನಾಗಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಸುತ್ತಿದೆ. ಇದರಿಂದ ಕಾರ್ಖಾನೆಗಳಲ್ಲಿ ದುಡಿಯುತ್ತಿರುವ ಕೋಟ್ಯಂತರ ಕಾರ್ಮಿಕರಿಗೆ, ಕಟ್ಟಡ, ಹಂಚು, ಬೀಡಿ ಮತ್ತಿತ್ತರ ಕಾರ್ಮಿಕರ ಸೌಲಭ್ಯಗಳಿಗೆ ಕತ್ತರಿ ಬೀಳಲಿದೆ. ಸ್ಕೀಂ ನೌಕರರಾದ ಬಿಸಿಯೂಟ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗುತ್ತಿಗೆ ಕಾರ್ಮಿಕರು, ಹೊರಗುತ್ತಿಗೆ, ಟ್ರೈನಿ, ಅಪ್ರೆಂಟಿಸ್ ಮೊದಲಾದ ಹೆಸರಿನಲ್ಲಿ ಕಡಿಮೆ ಕೂಲಿಗೆ ದುಡಿಸಿಕೊಳ್ಳುತ್ತಿರುವುದು ಹೆಚ್ಚಳ ಗೊಂಡಿದೆ. ಅಂಗನವಾಡಿ ನೌಕರರಿಗೆ ಗ್ರಾಚ್ಯುವಿಟಿ ನೀಡಬೇಕೆಂದು ಸುಪ್ರಿಂಕೋರ್ಟ್ ತೀರ್ಪು ನೀಡಿ 6 ತಿಂಗಳು ಕಳೆದರೂ ಜಾರಿಯಾಗಿಲ್ಲ ಎಂದು ಆರೋಪಿಸಿದರು.
ನಮ್ಮ ದೇಶದ ಆರ್ಥಿಕ ಬೆನ್ನೆಲುಬಾಗಿದ್ದ ಸಾರ್ವಜನಿಕ ಉದ್ಯಮಗಳನ್ನು ಕೆಲವೇ ವ್ಯಕ್ತಿಗಳ ಹಿತಕೋಸ್ಕರ ಖಾಸಗೀಕರಿಸಿ ಅಭಿವೃದ್ಧಿ ಎಂದು ಬಿಂಬಿಸಲು ಹೊರಟಿದೆ. ಇಂತಹ ನೀತಿಗಳ ವಿರುದ್ಧ ದೇಶಾದಾದ್ಯಂತ ಸಿಐಟಿಯು ಮುತುವರ್ಜಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳು ಐಕ್ಯತೆಯಿಂದ ಹತ್ತಾರು ಹೋರಾಟ, ಮುಷ್ಕರಗಳನ್ನು ಸಂಘಟಿಸಿದೆ.
ಸ್ವಾತಂತ್ರ್ಯ ಗಳಿಸಿದ 75 ವರ್ಷಗಳ ನಂತರವೂ ದೇಶದ ರೈತನ ಬೆಳೆಗಳಿಗೆ ಬೆಲೆಗಳಿಲ್ಲದೇ ಆತ್ಮಹತ್ಯೆ ಮುಂದುವರಿದಿದೆ. ಈ ಹಿಂದೆ ಅತ್ಯಲ್ಪ ರಕ್ಷಣೆಗಿದ್ದ ಕಾನೂನುಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ರದ್ದುಗೊಳಿಸಿ ನೂತನ ಕೃಷಿ ಕಾಯ್ದೆ ತಂದಿರುವುದು ರಾಜ್ಯದಲ್ಲಿ ಇಂದಿಗೂ ಜಾರಿಯಲ್ಲಿದೆ. ದೇಶದ ಐನೂರಕ್ಕೂ ಅಧಿಕ ರೈತ ಸಂಘಟನೆಗಳು ನಡೆಸಿದ ಐತಿಹಾಸಿಕ ಹೋರಾಟಗಳು ಸ್ಫೂರ್ತಿದಾಯಕ. ಈ ಹೋರಾಟಗಳನ್ನು ಮುನ್ನಡೆಸಲು ಕಾರ್ಮಿಕ ವರ್ಗ ದೃಢವಾದ ಐಕ್ಯತಾ ರೈತರ ಜೊತೆ ಸಾಧಿಸಲು ಸಮ್ಮೇಳನ ಒತ್ತು ನೀಡಲಿದೆ. ಬೆಲೆ ಏರಿಕೆ ಮತ್ತು ನಿರುದ್ಯೋಗದಿಂದ ಜನಸಾಮಾನ್ಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಲೆಗಳನ್ನು ನಿಯಂತ್ರಿಸಬೇಕಾದ ಸರ್ಕಾರಗಳು ತೆರಿಗೆ ಹೆಚ್ಚಿಸುವ ಮೂಲಕ ತಾವು ಬೆಲೆ ಏರಿಕೆಗೆ ಕಾರಣವಾಗಿವೆ ಎಂದರು.
ಸರ್ಕಾರದ ಇಂತಹ ನೀತಿಗಳಿಂದ ಕಾರ್ಮಿಕ ವರ್ಗ ಎದುರಿಸುತ್ತಿರುವ ಸಮಸ್ಯೆಗಳು, ಜನಸಾಮಾನ್ಯರ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಚರ್ಚಿಸಿ ಮುಂದಿನ ಮೂರು ವರ್ಷಗಳಲ್ಲಿ ಸಿಐಟಿಯು ಸಂಘಟನೆ ತನ್ನ ಹೋರಾಟಗಳನ್ನು ನಿರ್ಣಯಿಸಲಿದೆ ಎಂದು ಹೇಳಿದರು.
ಸುದ್ಧಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಗೌರವ ಅಧ್ಯಕ್ಷ ಕೆ.ಶಂಕರ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಸುರೇಶ ಕಲ್ಲಾಗರ, ಸ್ವಾಗತ ಸಮಿತಿ ಕೋಶಾಧಿಕಾರಿ ಎಚ್.ನರಸಿಂಹ, ಪ್ರಚಾರ ಸಮಿತಿಯ ಚಂದ್ರಶೇಖರ್ ವಿ ಉಪಸ್ಥಿತರಿದ್ದರು.











