ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ : ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅತಿ ದೊಡ್ಡ ವಾರ್ಷಿಕ ಜಾತ್ರೆ ಕೊಡಿಹಬ್ಬಕ್ಕೆ ಕ್ಷಣಗಣನೆ ಪ್ರಾರಂಭವಾಗಿದೆ. ದೇವಳ ವಠಾರದಲ್ಲಿ ಸಾರ್ವಜನಿಕ ಭಕ್ತಾಭಿಮಾನಿಗಳು ಹಾಗೂ ವಿವಿಧ ಇಲಾಖೆಗಳ ಸಭೆ ನಡೆಸಿ ಹಬ್ಬದ ಪೂರ್ವ ತಯಾರಿಗಳ ಬಗ್ಗೆ ಚರ್ಚಿಸಲಾಯಿತು. ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವರ ವಾರ್ಷಿಕ ಬ್ರಹ್ಮ ರಥೋತ್ಸವವು ಕೊಡಿಹಬ್ಬ ಎಂದೇ ವಿಶ್ವ ಖ್ಯಾತಿ ಗಳಿಸಿದೆ.

ಸಭಾಧ್ಯಕ್ಷತೆ ವಹಿಸಿದ್ದ ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ ಗಣ್ಯರೊಡಗೂಡಿ ಹಬ್ಬದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿದರು. ಇದುವರೆಗೆ ಕೈಗೊಂಡ ತಯಾರಿ ಕ್ರಮಗಳ ಬಗ್ಗೆ ವಿವರ ನೀಡಿ, ಸಭಿಕರ ಸಲಹೆಗಳನ್ನು ಕೇಳಿದರು.
ಮೆಸ್ಕಾಮ್ ಅಧಿಕಾರಿ ಸುನಿಲ್ ಮಾತನಾಡಿ, ಹಬ್ಬದಲ್ಲಿ ಸ್ಥಾಪಿಸುವ ಸಾವಿರಾರು ಅಂಗಡಿಗಳವರು ವಿದ್ಯುತ್ ಸಂಪರ್ಕಕ್ಕಾಗಿ ಮೊದಲೇ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು ಮತ್ತು ಅನುಮತಿ ಪಡೆದಷ್ಟೇ ಸಂಪರ್ಕಗಳನ್ನು ಜೋಡಿಸಬೇಕು ಎಂದು ಮನವಿ ಮಾಡಿದರು. ಒಂದುವೇಳೆ ಹೆಚ್ಚುವರಿ ಮತ್ತು ಅಪಾಯಕಾರಿ ಸಂಪರ್ಕ ಕಂಡುಬಂದರೆ, ಅಂತವರಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದೂ ಎಚ್ಚರಿಸಿದರು. ಪೇಟೆಯಾದ್ಯಂತ ವಿದ್ಯುತ್ ಲೈನ್ ಮತ್ತು ಟ್ರಾನ್ಸ್ಫಾರ್ಮರ್ ಗಳನ್ನು ಪರಿಶೀಲಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಆರೋಗ್ಯಾಧಿಕಾರಿ ರಮೇಶ್ ಶೆಟ್ಟಿ, ಕೋಟೇಶ್ವರ ಮತ್ತು ಎರಡು ಕಿ ಮಿ ವ್ಯಾಪ್ತಿಯಲ್ಲಿ ಕ್ಲೋರಿನೇಷನ್ ಮಾಡಲಾಗುವುದು. ಅಂಗಡಿಗಳವರು ಮತ್ತು ಸರ್ಕಸ್ ಕಂಪೆನಿಯವರು ಕಸ, ತ್ಯಾಜ್ಯಗಳನ್ನು ಹರಡದೆ ಸ್ವಚ್ಛತೆಗೆ ಗಮನ ನೀಡಬೇಕು. ಆಹಾರ ಪದಾರ್ಥ ವ್ಯಾಪಾರಿಗಳು ಬಿಸಿ ನೀರಿನ ಬಳಕೆ ಮಾಡಬೇಕು ಮತ್ತು ಖಾದ್ಯ ಪದಾರ್ಥಗಳನ್ನು ತೆರೆದಿಡಬಾರದು ಎಂದು ತಿಳಿಸಿದರು. ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಣಿ ಭಾಗ್ಯಲಕ್ಷ್ಮೀ, ಈ ಬಾರಿ ಆರೋಗ್ಯ ಕಾರ್ಯಕರ್ತರ ಸ್ಪೆಷಲ್ ಟೀಮ್ ರಚಿಸಿ ಉಸ್ತುವಾರಿ ನಡೆಸಲಾಗುವುದು ಎಂದರು. ಇಲಾಖೆಯ ಮಳಿಗೆಯಲ್ಲಿ ಡಾಕ್ಟರ್, ನರ್ಸ್ ಸೇವೆ, ಪ್ರಥಮ ಚಿಕಿತ್ಸೆ, ಆಂಬ್ಯುಲೆನ್ಸ್ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಸಭೆ ಆರಂಭಗೊಂಡರೂ ಪೊಲೀಸ್ ಅಧಿಕಾರಿಗಳು ಬಾರದಿರುವುದರ ಬಗ್ಗೆ ಸಭಿಕರು ಆಕ್ರೋಶಗೊಂಡರು. ಸಮಿತಿ ಸದಸ್ಯ ಸುರೇಶ್ ಬೆಟ್ಟಿನ್ ತಾವು ಅಧಿಕೃತ ನೋಟೀಸು ನೀಡಿರುವುದಾಗಿ ತಿಳಿಸಿದರೂ ಅಸಮಾಧಾನ ಮುಂದುವರೆಯಿತು. ಕಳೆದ ಫೆಬ್ರವರಿಯಲ್ಲಿ ನಡೆದ ವಿಶೇಷ ಬ್ರಹ್ಮ ರಥೋತ್ಸವದಲ್ಲಿ ಸಂಭವಿಸಿದ್ದ ಸಣ್ಣ ಅವಘಡದಲ್ಲಿ ಓರ್ವ ಭಕ್ತ ಗಾಯಗೊಂಡಿದ್ದ ನೆನಪು ಹಸಿರಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪೊಲೀಸರ ಮೇಲೆ ಅಸಮಾಧಾನ ಉಂಟಾಗಿತ್ತು.
ಕಾರ್ಯಕ್ರಮ ನಿರ್ವಹಿಸುತ್ತಿದ್ದ ಕೆ. ಜಿ. ವೈದ್ಯ ಸಭಿಕರನ್ನು ಸಮಾಧಾನಿಸಿ, ಪ್ರಕರಣವೊಂದರ ತನಿಖೆಗಾಗಿ ಪೊಲೀಸ್ ವರಿಷ್ಠಾಧಿಕಾರಿಗಳು ಬಂದಿದ್ದರಿಂದ ಅಧೀನ ಅಧಿಕಾರಿಗಳು ಸಭೆಗೆ ಹಾಜರಾಗಲು ವಿಳಂಬವಾಗಿರುವ ಕಾರಣವನ್ನು ವಿವರಿಸಿದರು. ಅದೇ ವೇಳೆ ಪೊಲೀಸ್ ಅಧಿಕಾರಿ ಅಶೋಕ್ ಆಗಮನವಾಗುತ್ತಿದ್ದಂತೆ ಮತ್ತೆ ಸಭಿಕರು ಭದ್ರತೆಯ ಬಗ್ಗೆ ಅವರಿಗೆ ಪ್ರಶ್ನೆಗಳ ಸುರಿಮಳೆಗೈದರು. ಸಮಾಧಾನದಿಂದಲೇ ಉತ್ತರಿಸಿದ ಅಧಿಕಾರಿ ಅಶೋಕ್, ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ಕ್ರಮಗಳನ್ನೂ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಸಾರ್ವಜನಿಕರೂ ಇಲಾಖೆ ಮತ್ತು ವ್ಯವಸ್ಥಾಪನಾ ಸಮಿತಿಯವರೊಂದಿಗೆ ಸಹಕರಿಸಿ, ಊರ ಉತ್ಸವ ಸಾಂಗವಾಗಿ ನೆರವೇರುವಂತೆ ಮಾಡಬೇಕು ಎಂದು ಮನವಿ ಮಾಡಿದರು. ಹಬ್ಬದ ಮೊದಲು ವರಿಷ್ಠಾಧಿಕಾರಿಗಳು ಆಗಮಿಸಿ ಭದ್ರತಾ ವ್ಯವಸ್ಥೆ ಬಗ್ಗೆ ಪರಿಶೀಲಿಸುವರು ಎಂದು ತಿಳಿಸಿದರು.
ಕೋಟೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಕೃಷ್ಣ ಗೊಲ್ಲ ಪಂಚಾಯತ್ ನ ಜವಾಬ್ದಾರಿಗಳನ್ನು ವಿವರಿಸಿ, ಸಿಬಂದಿಗಳ ಕೊರತೆ ಇದ್ದರೂ, ಯರವಲು ಸೇವೆ ಪಡೆದು, ರಾತ್ರಿ 2 ಗಂಟೆಯಿಂದಲೇ ತ್ಯಾಜ್ಯ ವಿಲೇವಾರಿ ನಡೆಸಲಾಗುವುದು. ಅಂಗಡಿ, ಸರ್ಕಸ್ ಗಳವರಿಗೆ ಅನುಮತಿ ನೀಡುವಾಗಲೇ ಷರತ್ತು ವಿಧಿಸಲಾಗುವುದು. ಐತಿಹಾಸಿಕ ಉತ್ಸವವನ್ನು ಲೋಪ ಬಾರದಂತೆ ಯಶಸ್ವಿಗೊಳಿಸಲು ಗ್ರಾಮಾಡಳಿತ ಸರ್ವ ಯತ್ನಗಳನ್ನೂ ಮಾಡಲಾಗುವುದು ಎಂದರು.
ಸಮಿತಿಯ ಪೂರ್ವಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಉತ್ಸವಗಳ ಯಶಸ್ಸಿನಲ್ಲಿ ಇಲಾಖೆಗಳು ಮಾತ್ರವಲ್ಲದೆ ಸಾರ್ವಜನಿಕರ ಸಹಭಾಗಿತ್ವ ಪ್ರಮುಖವಾಗಿದೆ. ಕೇವಲ ಲೋಪದೋಷಗಳನ್ನು ಬೊಟ್ಟು ಮಾಡುವುದಕ್ಕಿಂತ ಹಾಗಾಗದಂತೆ ಸಹಕಾರ ನೀಡಬೇಕು ಎಂದು ಸಲಹೆ ಮಾಡಿದರು.
ಸದಸ್ಯ ಸುರೇಶ್ ಬೆಟ್ಟಿನ್ ಮಾತನಾಡಿ, ದೇವಾಲಯದಲ್ಲಿನ ಪೂಜೆ, ಧಾರ್ಮಿಕ ವಿಧಿಗಳು, ಸಂಪ್ರದಾಯಕ್ಕೆ ಧಕ್ಕೆ ಉಂಟಾಗದಂತೆ ಕ್ರಮವಹಿಸಲಾಗುವುದು. ಸಾರ್ವಜನಿಕ ಭಕ್ತಾಭಿಮಾನಿಗಳು, ಎಲ್ಲಾ ಸಂಘಟನೆಗಳವರು ತುಂಬು ಸಹಕಾರ ನೀಡಬೇಕು ಎಂದು ವಿನಂತಿಸಿದರು.
ಇನ್ನುಳಿದಂತೆ ಸ್ವಯಂ ಸೇವಾ ವ್ಯವಸ್ಥೆ, ವಾಹನ ನಿಲುಗಡೆ, ದೇವಳ ಮತ್ತು ನಗರ ಸಿಂಗಾರ, ಮಹಾ ಸಂತರ್ಪಣೆ, ಕಣ್ಗಾವಲು ಮತ್ತು ಭದ್ರತೆ ಮೊದಲಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಬೀಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ, ಪಿಡಿಓ ಗಣೇಶ್, ಸದಸ್ಯ ವಾದಿರಾಜ ಹೆಬ್ಬಾರ್, ಕೋಟೇಶ್ವರ ಗ್ರಾಮ ಪಂಚಾಯತ್ ಪಿಡಿಓ ದಿನೇಶ್ ನಾಯ್ಕ್, ಸದಸ್ಯರು, ವಿವಿಧ ಸಂಘಟನೆಗಳವರು, ದೇವಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರು, ಅರ್ಚಕ ವೃಂದದವರು, ವಿವಿಧ ದೇವಳ ಸಮಿತಿಯವರು ಉಪಸ್ಥಿತರಿದ್ದು ಸಲಹೆ ಸೂಚನೆಗಳನ್ನು ನೀಡಿದರು. ಸಮಿತಿ ಸದಸ್ಯೆ ಚಂದ್ರಿಕಾ ಧನ್ಯ ಸ್ವಾಗತಿಸಿದರು. ಕೆ. ಜಿ. ವೈದ್ಯ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ನ.10ರಂದು ದೇವರ ಬ್ರಹ್ಮರಥವನ್ನು ಸಜ್ಜುಗೊಳಿಸುವ ಕಾರ್ಯಾರಂಭಗೊಂಡಿದ್ದು, ದಶಂಬರ್ 8 ರ ಗುರುವಾರ ವೈಭವದ ರಥೋತ್ಸವ ನಡೆಯಲಿದೆ.











