ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ದೇವವಳಗಳ ವತಿಯಿಂದ ನಡೆಸಲ್ಪಡುವ ಯಕ್ಷಗಾನ ಮೇಳಗಳು ಪೌರಣಿಕ ಪ್ರಸಂಗಗಳನ್ನು ಸೇವೆಯಾಟವಾಗಿ ಆಡಿಸುತ್ತಿರುವುದರಿಂದ ಧಾರ್ಮಿಕ ನೆಲೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತವೆ ಎಂದು ಆಜ್ರಿ ಚೋನಮನೆ ಶ್ರೀಶನೀಶ್ವರ ದೇವಳದ ಧರ್ಮದರ್ಶಿ ಅಶೋಕ ಶೆಟ್ಟಿ ಚೋನಮನೆ ಹೇಳಿದರು.
ಅವರು ಆಜ್ರಿ ಚೋನಮನೆ ಶ್ರೀಶನೀಶ್ವರ ದೇವಳದಲ್ಲಿ ಆಜ್ರಿ ಚೋನಮನೆ ಶ್ರೀಶನೀಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ 2022-23 ನೇ ಸಾಲಿನ ತಿರುಗಾಟದ ಪ್ರಥಮ ದೇವರ ಸೇವೆ ಆಟಕ್ಕೆ ಕಲಾವಿದರಿಗೆ ಗೆಜ್ಜೆ ಹಾಗೂ ಪ್ರಸಾದವನ್ನು ನೀಡಿ ಮೇಳದ ತಿರುಗಾಟಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಭಕ್ತಾಧಿಗಳು ಹರಕೆ ರೂಪದಲ್ಲಿ ನೀಡುವ ಯಕ್ಷಗಾನ ಬೆಳಕಿನ ಸೇವೆಯಾಟವು ಕಾಲಮಿತಿಗೆ ಸಿಮೀತವಾಗದೇ ಸಂಜೆ ಪೂಜೆಯೊಂದಿಗೆ ರಾತ್ರಿ ಆರಂಭಗೊಂಡು ಮುಂಜಾನೆಯ ಬ್ರಾಹ್ಮೀ ಮೂಹೂರ್ತದ ತನಕ ನಡೆಸಲ್ಪಡುವುದು ಶ್ರೇಷ್ಠವಾಗಿದೆ. ಕ್ಷೇತ್ರ ಮಹಿಮೆ ಸೇರಿದಂತೆ ಪೌರಾಣಿಕ ಪ್ರಸಂಗಳ ಯಕ್ಷಗಾನ ಸೇವೆಯಾಟವನ್ನು ಮಧ್ಯ ರಾತ್ರಿ ತನಕ ಆಡಿ ನಂತರ ನಿಲ್ಲಿಸುವುದು ಸಮಂಜಸವಲ್ಲ, ಕಲಾಭಿಮಾನಿಗಳ ಯಕ್ಷಗಾನ ಮೇಳಗಳು ಬೇರೆಯಾಗಿವೆ, ಭಕ್ತರ ಯಕ್ಷಗಾನ ಮೇಳಗಳು ಬೇರೆಯಾಗಿವೆ. ಭಕ್ತರ ಮೇಳದ ಸೇವೆಯಾಟಕ್ಕೆ ರಾತ್ರಿಯಿಂದ ಬೆಳಿಗ್ಗೆ ಮುಗಿಯುವ ತನಕ ಜನರು ಇರುವುದಕ್ಕಿಂತ ಮುಖ್ಯವಾಗಿ ಪೂರ್ಣ ಪ್ರಮಾಣದ ಸಮಯದ ತನಕ ಯಕ್ಷಗಾನ ಸೇವೆ ನಡೆಸುವುದು ಸೂಕ್ತವಾಗಿದೆ. ಧಾರ್ಮಿಕತೆಯ ನೆಲೆಯಲ್ಲಿ ಪೌರಾಣಿಕ ಪ್ರಸಂಗಗಳ ಯಕ್ಷಗಾನ ಸೇವೆಯಾಟವು ಪಾವಿತ್ರ್ಯತೆಯನ್ನು ಹೊಂದಿರುವುದರಿಂದ ರಾತ್ರಿಯಿಂದ ಬೆಳಗಿನ ತನಕ ನಡೆಸುವುದಕ್ಕೆ ನಮ್ಮ ಮೇಳದಲ್ಲಿ ಪ್ರಥಮ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂದರು.
ಯಕ್ಷಗಾನ ಮೇಳದ ತಿರುಗಾಟದ ಪ್ರಥಮ ಸೇವೆಯಾಟದ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಗಣಪತಿ ಪೂಜೆ, ದೇವರ ಸಂದರ್ಶನ ಸೇವೆ, ಗೆಜ್ಜೆ ಸೇವೆ, ಕಲಾವಿದರಿಂದ ರಾಜ ಸತ್ಯವೃತ ಯಕ್ಷಗಾನ ಸೇವೆಯಾಟ ನಡೆಯಿತು.
ಮಂಜುನಾಥ ಪೂಜಾರಿ ಪಾತ್ರಿಗಳು ಗಿಳಿಯಾರು ಕೋಟ, ಸಂಜೀವ ಕುಲಾಲ್ ಉಳ್ತೂರು,ಪಾತ್ರಿಗಳು. ಸುಬ್ರಹ್ಮಣ್ಯ ಗಾಣಿಗ ತಗ್ಗರ್ಸೆ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.











