ಕುಂದಾಪುರ ಮಿರರ್ ಸುದ್ದಿ…
ಕೋಟ: ಕೋಡಿ ಕನ್ಯಾಣ ಸೋಮ ಬಂಗೇರ ಸರಕಾರಿ ಪ್ರೌಢಶಾಲೆಯ ಬೆಳ್ಳಿಹಬ್ಬ ರಜತಾಕ್ಷರ ಕಾರ್ಯಕ್ರಮದ ಚಾಲನೆ ಡಿ.3ರಂದು ಪ್ರೌಢಶಾಲೆಯ ಸಭಾಂಗಣದಲ್ಲಿ ಜರಗಿತು.
ಈ ಪ್ರಯುಕ್ತ ಕೋಡಿ ಗ್ರಾ.ಪಂ. ಅಧ್ಯಕ್ಷ ಪ್ರಭಾಕರ ಮೆಂಡನ್ ಅವರ ಅಧ್ಯಕ್ಷತೆಯಲ್ಲಿ ಧ್ವಜಾರೋಹಣ ನೆರವೇರಿತು.
ಬ್ರಹ್ಮಾವರ ತಾಲೂಕು ಶಿಕ್ಷಣಾಧಿಕಾರಿ ರಂಗನಾಥ ಕೆ. ಮಾತನಾಡಿ, ಶಿಕ್ಷಣ ಕ್ಷೇತ್ರದಲ್ಲಿ ವಾರ್ಷಿಕೋತ್ಸವ, ರಜತ ಮಹೋತ್ಸವಗಳು ಸಂಸ್ಥೆಯ ಮೈಲಿಗಲ್ಲಾಗಿದೆ. ಅದೇ ರೀತಿ ಕೋಡಿ ಕನ್ಯಾಣ ಪ್ರೌಢಶಾಲೆಯಲ್ಲಿ ಇಂದು ರಜತ ಮಹೋತ್ಸವ ಆಚರಣೆಯಾಗುತ್ತಿರುವುದು ಅತ್ಯಂತ ಖುಷಿಯ ವಿಚಾರ. ಸಂಸ್ಥೆ ಇನ್ನಷ್ಟು ಎತ್ತರಕ್ಕೇರಲಿ. ಇನ್ನಷ್ಟು ಯಶಸ್ಸು ಪಡೆಯಲಿ ಎಂದರು.
ಈ ಸಂದರ್ಭ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆಗಳ ವಿಜೇತ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ತಾಲೂಕು ದೈ.ಶಿಕ್ಷಣ ಪರಿವೀಕ್ಷಣಾಧಿಕಾರಿ ಪದ್ಮಾವತಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಶ್ರೀನಿವಾಸ ಬಂಗೇರ,ಸ್ಥಳ ದಾನಿಗಳಾದ ಮಾಧವ ಉಪಾಧ್ಯ, ಗ್ರಾ.ಪಂ. ಸದಸ್ಯ ಕೃಷ್ಣ ಪೂಜಾರಿ, ಗೀತಾ ಖಾರ್ವಿ, ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಕ್ಷರ್ಯ, ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣ ಮಾಸ್ಟರ್ ಕೋಡಿಕನ್ಯಾಣ, ಸ್ಥಳೀಯರಾದ ಮಹಾಬಲ ಕುಂದರ್, ಕೋಡಿ ಗ್ರಾ.ಪಂ. ಪಿಡಿಒ ರವೀಂದ್ರ ರಾವ್, ಗ್ರಾಮ ಲೆಕ್ಕಾಧಿಕಾರಿ ಗಿರೀಶ್ ಕೆ., ಪದವಿ ಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲ ರಾಘವೇಂದ್ರ ಕೆ., ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಸಂಪಾ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ರಾಧಿಕಾ ಸ್ವಾಗತಿಸಿ, ಶಿಕ್ಷಕಿಯರಾದ ವಸುಧಾ ರಾವ್ ಕಾರ್ಯಕ್ರಮ ನಿರೂಪಿಸಿ, ನಳಿನಿ ಭಟ್ ವಂದಿಸಿದರು.











