ಕಾರ್ಕಡ – ಅಗ್ನಿಪಥ್ ಆಯ್ಕೆಯಾದ ಇರ್ವರಿಗೆ ಅಭಿನಂದನೆ
ಕುಂದಾಪುರ ಮಿರರ್ ಸುದ್ದಿ…
ಕೋಟ :ದೇಶ ಸೇವೆ ಮಿಗಿಲಾಗಿ ಇನ್ನಾವ ಸೇವೆಯೂ ಮಹತ್ತರ ಸ್ಥಾನ ನೀಡಲು ಸಾಧ್ಯವಿಲ್ಲ ಎಂದು ನಿವೃತ್ತ ಯೋಧ ಅಗ್ನಿಪಥ್ ತರಬೇತುದಾರ ತೆಕ್ಕಟ್ಟೆ ರವಿಚಂದ್ರ ಶೆಟ್ಟಿ ಹೇಳಿದ್ದಾರೆ.
ಮಂಗಳವಾರ ಕಾರ್ಕಡ ಪರಿಸರದಲ್ಲಿ ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾದ ಕಾರ್ಕಡ ಪರಿಸರದ ಅಕ್ಷತ್ ಪೂಜಾರಿ ಹಾಗೂ ಕಾರ್ತಿಕ್ ದೇವಾಡಿಗ ಇವರುಗಳಿಗೆ ಕಾರ್ಕಡ ಗ್ರಾಮಸ್ಥರು ಹಾಗೂ ಗೆಳೆಯರು ಕಾರ್ಕಡ ಪಡುಬೈಲು ಇವರ ವತಿಯಿಂದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ಅಗ್ನಿಪಥ್ ಮೂಲಕ ದೇಶದ ಸೇನೆಯನ್ನುಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯ ಇದರಿಂದ ಎಲ್ಲಾ ರೀತಿಯ ತರಬೇತಿಗಳು ಸಿಗುತ್ತದೆ.ದೇಶದ ಸೈನಿಕರಾಗವ ಜೊತೆಗೆ ನಿರುದ್ಯೋಗ ಸಮಸ್ಯೆ ಬಗೆಹರಿಸಬಹುದಾಗಿದೆ. ಪ್ರತಿಯೊರ್ವ ಯುವ ಮನಸ್ಸುಗಳಲ್ಲಿ ಛಲ ಇರಬೇಕು ದೇಶ ಕಾಯುವ ಹಾಗೂ ದೇಶಾಭಿಮಾನದ ಕಿಚ್ಚು ಇರಬೇಕು,ಇದಕ್ಕೆ ಮನೆಯವರು ಪ್ರೋತ್ಸಾಹ ನೀಡಬೇಕು.ಅಗ್ನಿಪಥ್ ಯೋಜನೆ ಜಿಲ್ಲೆಯ ಸಾಕಷ್ಟು ಭಾಗಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಆಯ್ಕೆಯಾದ ಇರ್ವರಿಗೆ ಅಭಿನಂದಿಸುವ ಗ್ರಾಮಸ್ಥರ ಅಭಿಮಾನ ದೇಶಕ್ಕೆ ನೀಡಿದ ಮಹಾ ಗೌರವಗಳಾಗಿವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಅಗ್ನಿಪಥ್ ಮೂಲಕ ಆಯ್ಕೆಯಾದ ಇರ್ವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪ.ಪಂ ಅಧ್ಯಕ್ಷೆ ಸುಲತಾ ಎಸ್ ಹೆಗ್ಡೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಯೋಧರಾದ ಗಣೇಶ್ ಅಡಿಗ ಪಾರಂಪಳ್ಳಿ,ಲಕ್ಷ್ಮಣ್ ನಾಯರಿ,ಬ್ರಹ್ಮಾವರ
ಪೋಲಿಸ್ ಠಾಣೆಯ ಸಹಾಯಕ ಠಾಣಾಧಿಕಾರಿ ಗೋಪಾಲ್ ಪೂಜಾರಿ, ಬಾರಕೂರು ಐಟಿಐ ಕಾಲೇಜಿನ ಶಿಕ್ಷಕ ಭಾಸ್ಕರ್ ಉಪಾಧ್ಯ, ನಿವೃತ್ತ ಅಧ್ಯಾಪಕ ದಾಸ ನಾಯರಿ ಮತ್ತಿತರರು ಉಪಸ್ಥಿತರಿದ್ದರು. ಪ.ಪಂ ಸದಸ್ಯ ರಾಜು ಪೂಜಾರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಸ್ಥಳೀಯರಾದ ಚಂದ್ರಕಾಂತ್ ನಾಯರಿ ನಿರೂಪಿಸಿದರು.











