Category: ವಿಶೇಷ

  • ಬಸ್ರೂರಿನ ಗುಡಿಗಾರ್ ಕಟ್ಟೆ ಬಳಿ ಬೃಹತ್ ಶಿಲಾಯುಗದ ನಿಲಿಸುಗಲ್ಲು‌ ಪತ್ತೆ

    ಬಸ್ರೂರಿನ ಗುಡಿಗಾರ್ ಕಟ್ಟೆ ಬಳಿ ಬೃಹತ್ ಶಿಲಾಯುಗದ ನಿಲಿಸುಗಲ್ಲು‌ ಪತ್ತೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ತಾಲೂಕಿನ ಬಸ್ರೂರು‌ ಗ್ರಾಮದ ಬಸ್ಟಾಂಡ್ ನಿಲ್ದಾಣದ ಸಮೀಪ ಬೃಹತ್ ಶಿಲಾಯುಗದ ನಿಲಿಸು‌ಗಲ್ಲು‌ ಪತ್ತೆಯಾಗಿದೆ.

    ಸಾಮಾನ್ಯ ಶಕ ಪೂರ್ವ ವರ್ಷ (ಕ್ರಿ.ಪೂ)೧ ಸಾಮಾನ್ಯ ಶಕ. ವರ್ಷ(ಕ್ರಿ.ಶ) ರಿಂದ. ೧ ರ ಅಂದರೆ ಸರಿ‌ ಸುಮಾರು ಎರಡು‌ ಸಾವಿರ ವರ್ಷದ ಪ್ರಾಚೀನವಾದ ನಿಲಿಸು ಗಲ್ಲು ಪತ್ತೆಯಾಗಿದೆ.

    ಅಳತೆ: ಮಣ್ಣಿನ ಮೇಲ್ಭಾಗದ ಎತ್ತರ 4.51 ಅಡಿ ಅಂದರೆ 130cm, ಮೇಲ್ಭಾಗದ ದಪ್ಪ 20 cm ಹಾಗೂ ಮಧ್ಯಭಾಗದ ದಪ್ಪ 40 cm ಕಲ್ಲು ತ್ರಿಕೋನ ಶೈಲಿಯಲ್ಲಿ ಕಂಡು‌ ಬಂದಿದೆ.

    ನಿಲಿಸುಗಲ್ಲು
    ಇತಿಹಾಸದಲ್ಲಿ ಸಮಾಧಿಯ ಸ್ಥಳದಲ್ಲಿ ನೆನಪಿನ ಕಲ್ಲುಗಳನ್ನು ಹಾಕಲಾಗುತ್ತಿದ್ದರು. ಬೃಹತ್ ಶಿಲಾಯುಗದ ಸಮಾಧಿ ಸ್ಥಳದಲ್ಲಿ ಸಮಾಧಿಯ ಸಂಕೇತವಾಗಿ ಈ ರೀತಿಯ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು. ಆ ಕಲ್ಲುಗಳಿಗೆ ನಿಲಿಸುಗಲ್ಲು ಅಧವಾ ಮೆನ್ಹಿರ್ ಎಂದು ಕರೆಯುತ್ತಾರೆ.

    ಡಾ.ಪಿ.ಗುರುರಾಜ್ ಭಟ್ ಇವರ ಸ್ಟಡಿ ಆಫ್ ತುಳುವ ಹಿಸ್ಟರಿಯಲ್ಲಿ‌ ಬಸ್ರೂರು ಸರಕಾರಿ ಪ್ರೌಢ ಶಾಲೆಯ ಆಟದ ಮೈದಾನದಲ್ಲಿದ್ದ ಬಂಡೆ ಕಲ್ಲು ಶಿಲ್ಪವಿರುವುದರ ಬಗ್ಗೆ ಮಾಹಿತಿ ನೀಡಿದ್ದರು. ಕಳೆದ ನಾಲ್ಕೈದು ವರ್ಷದ ಹಿಂದೆ ತಿರುಮಲ‌ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ‌ ಬೃಹತ್ ಶಿಲಾಯುಗದ ನಿಲಿಸು ಗಲ್ಲು ಇರುವ ಬಗ್ಗೆ ಬೆಳಕಿಗೆ ಚೆಲ್ಲಿದ್ದು,ಇದೀಗ ಎರಡನೇ‌ ನಿಲಿಸುಗಲ್ಲು‌ ಪತ್ತೆಯಾಗಿದೆ.

    ಸರಿ ಸುಮಾರು ಐದು ಅಡಿ ಉದ್ದ ಇರುವ ಈ ಕಲ್ಲು ಕಾಂಪೌಂಡ್ ಗೆ ತಾಗಿಕೊಂಡಿದ್ದು ,ಕೆಳ ಭಾಗ ದಪ್ಪವಾಗಿದ್ದು ಮೇಲ್ಭಾಗ ಸ್ವಲ್ಪ ಸಪೂರವಾಗಿ ಕಂಡು‌ಬಂದಿದೆ.

    ನಿಲಿಸುಗಲ್ಲುಗಳನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ಜಿಲ್ಲಾ ಸಂಚಾಲಕರಾದ ಪ್ರದೀಪ ಕುಮಾರ್ ಬಸ್ರೂರು ಪತ್ತೆ ಹಚ್ಚಿದ್ದು ಇವರಿಗೆ ಮಾರ್ಗದರ್ಶನವನ್ನು ಭಾರತೀಯ ಇತಿಹಾಸ ಸಂಕಲನ‌ ಸಮಿತಿ ರಾಜ್ಯ ಕಾರ್ಯದರ್ಶಿ ಕೃಷ್ಣಮೂರ್ತಿ ಆರ್ , ನಿವೃತ್ತ ಪ್ರೊ ಟಿ. ಮುರುಗೇಶ್, ಕೆ.ಬಿ. ಶಿವತಾರಕ, ಧನಪಾಲ್ (ಕರ್ನಾಟಕ ಇತಿಹಾಸ ಅಕಾದೆಮಿ ಕಾರ್ಯಕಾರಿಣಿ ಸದಸ್ಯರು), ಶ್ರೇಯಾಸ್ ಭಟ್ ಹಾಗೂ ಗೌತಮ್ ಹಾಗೂ ಕವಿತಾ ಆಚಾರ್ಯ ಮುದೂರು, ಸಹಕಾರದಲ್ಲಿ ಪತ್ತೆ ಹಚ್ಚಲಾಗಿದೆ.

    ಬಸರೂರು/ಬಸ್ರೂರು/ ಬಸುರೆಪಟ್ಟಣ ಎಂದು ಚಾರಿತ್ರಿಕವಾಗಿ ಗುರುತಿಸಲ್ಪಟ್ಟಿರುವ ಇಂದಿನ ಬಸ್ರೂರು ಕುಂದಾಪುರ ನಗರದ ದು ಒಂದು ಭಾಗ. ಆದರೆ, ಪ್ರಾಚೀನ ತುಳುನಾಡಿನ ಬಂದರು ನಗರ, ವಾಣಿಜ್ಯ ಕೇಂದ್ರ. ಈ ನಗರದ ಕೋಟಿ ಆಂಜನೇಯ ದೇವಾಲಯದ ಬಳಿ, ಬೃಹತ್ ಶಿಲಾಯುಗದ ನಿಲ್ಸ್ ಕಲ್ ಪತ್ತೆಯಾಗಿತ್ತು. ಈಗ, ಇದೇ ಬಸ್ರೂರಿನಲ್ಲಿ ಮತ್ತೊಂದು ಬೃಹತ್ ಶಿಲಾಯುಗದ ನಿಲ್ಸ್ ಕಲ್ ಪತ್ತೆಯಾಗಿದೆ. ಸುಮಾರು ೫ ಅಡಿ ಎತ್ತರದ ಈ ನಿಲುವುಗಲ್ಲು, ಪಶ್ಚಿಮೋತ್ತರವಾಗಿ ಮುಖಮಾಡಿದೆ. ಸ್ಥಳೀಯ ನೀಸ್ ಅಥವಾ ಪಾಂಡುಕಲ್ಲನ್ನು ಈ ಸಮಾಧಿ ರಚನೆ ಬಳಸಲಾಗಿದೆ. ಆದ್ದರಿಂದ ಇದು ಸರಿ ಸುಮಾರು ಸಾಮಾನ್ಯ ಶಕ ಪೂರ್ವ(ಕ್ರಿ.ಪೂ) ೧ ಅಥವಾ ಸಾಮನ್ಯ ಶಕ(ಕ್ರಿ.ಶಕ )೧ ನೇ ಶತಮಾನದ ರಚನೆ ಆಗಿರಬಹುದೆಂದು ಇತಿಹಾಸ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. – ಪ್ರೋ. ಟಿ.ಮುರುಗೇಶಿ, ನಿವೃತ್ತ ಸಹ ಪ್ರಾಧ್ಯಾಪಕರು, ಸ್ಥಾಪಕ ಸದಸ್ಯರು ಆದಿಮ‌ ಕಲಾ ಟ್ರಸ್ಟ್ (ರಿ) ಉಡುಪಿ

    ಬೃಹತ್ ಶಿಲಾಯುಗ ಅಥವಾ Iron age ಇದರ ಕಾಲ ಸುಮಾರು ಸಾಮಾನ್ಯ ಪೂರ್ವ ಶಕ (ಕ್ರಿ.ಪೂ) 1000 ವರ್ಷಗಳು. ತಮ್ಮ ಆಪ್ತರ ಶವಗಳನ್ನು ಹೂಳುವಾಗ ನೆನಪಿಗಾಗಿ ಇಂತಹ ಕಲ್ಲುಗಳನ್ನು ವಿವಿಧ ಗಾತ್ರ ಮತ್ತು ಆಕಾರಗಳಲ್ಲಿ ಇಡುತ್ತಿದ್ದರು. ಅವುಗಳೆಂದರೆ…..Menhirs (single upright stones), Topikallu, dolmens, (chambers of stones with a capstone), cists (underground box-like burials), stone circles, and unique structures like hood stones and rock-cut chambers. ಈ ಕಲ್ಲುಗಳು ಪ್ರಪಂಚದ ವಿವಿಧ ಸಂಸ್ಕೃತಿಗಳಲ್ಲೂ ಕಂಡುಬರುತ್ತದೆ. ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಇದು ಕಾಣಬಹುದು.

    ಪ್ರದೀಪ್ ಬಸ್ರೂರು ಅವರು ಶೋಧಿಸಿರುವ ಈ ಕಲ್ಲು ಎಂದು ಪ್ರೊಫೆಸರ್ ಟಿ ಮುರುಗೇಶ್ ಅವರು ನೀಡಿರುವ ಹೇಳಿಕೆಯ ಪ್ರಕಾರ ಸ್ಪಷ್ಟವಾಗುತ್ತದೆ. ಆದ್ದರಿಂದ ಸಂಶೋಧನೆಯನ್ನು ಇನ್ನು ಮುಂದುವರಿಸಿ ಅದರ ಅಕ್ಕಪಕ್ಕ ಈಗಲೂ ಯಾವುದಾದರೂ ಸ್ಮಶಾನ ಅಥವಾ ಬರಿಯಲ್ ಗ್ರೌಂಡ್ ಇರುವ ಲಕ್ಷಣಗಳನ್ನು ಗುರುತಿಸಿದರೆ ಸಂಶೋಧನೆಗೆ ಇನ್ನಷ್ಟು ಮಹತ್ವ ಸಿಗುತ್ತದೆ. – ಕೃಷ್ಣಮೂರ್ತಿ ಆರ್ , ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ತಜ್ಞರು, ಬೆಂಗಳೂರು.

  • ಕುಂದಾಪುರದ ವಡೇರಹೋಬಳಿಯ ‘ಪ್ರಕೃತಿ’ ನಿವಾಸದಲ್ಲಿ ಪುರಾಣ ಕಥೆಗಳನ್ನು ಹೇಳುವ ಗೊಂಬೆಗಳ ಆರಾಧನೆ

    ಕುಂದಾಪುರದ ವಡೇರಹೋಬಳಿಯ ‘ಪ್ರಕೃತಿ’ ನಿವಾಸದಲ್ಲಿ ಪುರಾಣ ಕಥೆಗಳನ್ನು ಹೇಳುವ ಗೊಂಬೆಗಳ ಆರಾಧನೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ನವರಾತ್ರಿಗೆ ಗೊಂಬೆಗಳನ್ನು ಕೂರಿಸುವ ಪದ್ದತಿ ಕಳೆದ ಎರಡು ವರ್ಷದಿಂದ ಕುಂದಾಪುರಕ್ಕೂ ಪಸರಿಸಿದೆ. ಕುಂದಾಪುರದ ವಡೇರಹೋಬಳಿಯ ‘ಪ್ರಕೃತಿ’ ನಿವಾಸದ ಹಿರಿಯ ಫಾರ್ಮಸಿ ಅಧಿಕಾರಿ ಬಿ.ಎಮ್. ಚಂದ್ರಶೇಖರ ಮತ್ತು ಶೀಲಾ ಚಂದ್ರಶೇಖರ ಅವರ ಮನೆಯಲ್ಲಿ ಕಳೆದ ಎರಡು ವರ್ಷದ ನವರಾತ್ರಿಯಿಂದ ಈ ಗೊಂಬೆ ಕೂರಿಸುವ ಪ್ರಕ್ರಿಯೆ ನಡೆಯುತ್ತಿದೆ. ಇವರ ಸೊಸೆ ಐಶ್ವರ್ಯ ಅವಿನವ್ ತನ್ನ ತವರು ಭಾಗದ ಆಚರಣೆಯನ್ನು ಇಲ್ಲಿಗೂ ಪರಿಚಯಿಸಿದ್ದಾರೆ. ಹಲವು ವೈವಿಧ್ಯಮಯ, ಪುರಾಣ ಕಥೆಗಳನ್ನು ಹೇಳುವ ಗೊಂಬೆಗಳ ಆರಾಧನೆ ಪರಿಸರದ ಜನರ ಕುತೂಹಲ ಕೆರಳಿಸಿದೆ. ವಿಶೇಷವಾಗಿ ಮಕ್ಕಳನ್ನು ಆಕರ್ಷಿಸಿದೆ.

    ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಅವಿನವ್ ಬಿ ಹಾಗೂ ಐಶ್ವರ್ಯ ಪಿ ದಂಪತಿ ಕಳೆದ ವರ್ಷದಿಂದ ಕುಂದಾಪುರದಲ್ಲಿ ನವರಾತ್ರಿ ಆಚರಣೆ ಮಾಡುತ್ತಿದ್ದಾರೆ.

    ಈ ಗೊಂಬೆಗಳು ಕಥೆಯನ್ನು ಹೇಳುತ್ತವೆ.
    ಪೌರಾಣಿಕ ಕಥೆಗಳನ್ನು ಪರಿಣಾಮಕಾರಿಯಾಗಿ ಹೇಳುವಂತೆ ಗೊಂಬೆಗಳ ಜೋಡಣೆ ಮಾಡಿದ್ದಾರೆ. ಈ ಗೊಂಬೆ ಕುರಿಸುವಿಕೆಯಲ್ಲಿ ಪ್ರಧಾನವಾದುದು ಪಟ್ಟದ ಗೊಂಬೆಗಳು. ರಾಜರಾಣಿಯ ಗೊಂಬೆಗಳು ಪ್ರಧಾನವಾಗಿರುತ್ತದೆ. ಇಲ್ಲಿ ಐಶ್ವರ್ಯ ಅವರು ಮೇಲ್ಬಾಗವನ್ನು ಬೆಳ್ಳಿಬೆಟ್ಟವನ್ನಾಗಿ ರೂಪಿಸಿದ್ದಾರೆ. ಶಿವಪಾರ್ವತಿ ಷಣ್ಮುಖ ಗಣಪತಿ ಹಾಗೂ ಶಿವಗಣಗಳು ಕೈಲಾಸ ಪರಿಕಲ್ಪನೆಯಲ್ಲಿ ಕಂಡು ಬಂದರೆ ಗಣಪತಿ ಚತುರ್ಥಿ ಧರೆಗೆ ಹೊರಟಂತಹ ಗೊಂಬೆ ಇದೆ. ಬಳಿಕ ಮೈಸೂರು ದಸರ ಗೊಂಬೆಗಳನ್ನು ಜೋಡಿಸಿದ್ದಾರೆ. ನಂತರದ ಸಾಲುಗಳಲ್ಲಿ ದಶಾವತರಾದ ಗೊಂಬೆಗಳು, ದ್ರೋಣರ ಗುರುಕುಲ, ಕೃಷ್ಣನ ಬಾಲ್ಯಲೀಲೆಗಳು, ಪುರಾಣದ ಮಹತ್ವದ ಸನ್ನಿವೇಶದ ಗೊಂಬೆಗಳು, ಮದುವೆಯ ದಂಪತಿಗಳು ಹೀಗೆ ನೂರಾರು ಗೊಂಬೆಗಳು ಪುರಾಣದ ಎಳೆಯನ್ನು ಅತ್ಯಂತ ಸುಂದರವಾಗಿ ಕಟ್ಟಿಕೊಡುವಂತಿವೆ.

    ಪುರಾಣದ ಕಥೆ ಹೇಳುವ ಗೊಂಬೆಗಳ ಜೊತೆಯಲ್ಲಿ ವಾಸ್ತವದ ಆಕರ್ಷಣೆ ಹಾಗೂ ಗ್ರಾಮಾಂತರ ಪ್ರದೇಶದ ಜನಜೀವನವನ್ನು ತಿಳಿಸುವ ಗೊಂಬೆಗಳು ಇವೆ.ಹಳ್ಳಿಯ ಬದುಕು, ಕೃಷಿ, ಮೃಗಾಲಯ, ಪ್ರಾಣಿ ಪಕ್ಷಿಗಳು ಇತ್ಯಾದಿ ಗೊಂಬೆಗಳು ಆಧುನಿಕತೆಯ ಕಥೆಯನ್ನು ಹೇಳುವಂತಿವೆ.

    ಒಟ್ಟಾರೆಯಾಗಿ ಕುಂದಾಪುರದ ‘ಪ್ರಕೃತಿ’ ಗೊಂಬೆಗಳಿಂದ ಗಮನ ಸಳೆದಿದೆ. ಮಾಯಾಲೋಕವೇ ಇಲ್ಲಿ ಸೃಷ್ಟಿಯಾಗಿದೆ. ಗೊಂಬೆ ಕುರಿಸುವ ಪದ್ದತಿ ಇರುವ ಮನೆಗಳಲ್ಲಿ ಗೊಂಬೆಗಳ ಸಂಗ್ರಹವೂ ಒಂದು ಹವ್ಯಾಸ. ಐಶ್ವರ್ಯ ಅವರು ಬೇರೆ ಬೇರೆ ಕಡೆ ಹೋದಾಗಲೆಲ್ಲ ಗೊಂಬೆಗಳನ್ನು ಖರೀದಿಸುತ್ತಾರೆ. ಚೆನ್ನಪಟ್ಟಣದ ಮರದ ಗೊಂಬೆಗಳು ಇಲ್ಲಿವೆ. ಮೈಸೂರು ಗೊಂಬೆಗಳು ಇವೆ. ಪ್ರದೇಶವಾರು ವೈವೀದ್ಯತೆಯ ಗೊಂಬೆಗಳು ಇವರ ಸಂಗ್ರಹದಲ್ಲಿದೆ.

    ಗೊಂಬೆಗಳನ್ನು ಕುರಿಸುವುದು ಒಂದು ಶ್ರದ್ದಾ ಧಾರ್ಮಿಕ ನಂಬಿಕೆ ಹಾಗೂ ಆಚರಣೆ. ಅದಕ್ಕೊಂದು ಆಚರಣಾ ಕ್ರಮವಿದೆ.ಒಂಭತ್ತು ದಿನಗಳ ಕಾಲ ಪೂಜೆ , ನೈವೇದ್ಯ ಮಾಡಬೇಕು. ಒಂದೊಂದು ದಿನ ಒಂದೊಂದು ಬಗೆಯ ತಿನಿಸು ನೈವೇದ್ಯಕ್ಕೆ ಮಾಡಲಾಗುತ್ತದೆ. ಗೊಂಬೆಗಳನ್ನು ನೋಡಲು ಮಕ್ಕಳು ಆಗಮಿಸುತ್ತಾರೆ. ಮಕ್ಕಳು ಗೊಂಬೆಗಳನ್ನು ನೋಡುತ್ತಾ ಪುರಾಣ ಲೋಕಕ್ಕೆ ಹೋಗಿಬಿಡುತ್ತಾರೆ. ಮಕ್ಕಳ ಮನಸ್ಸನ್ನು ಅತ್ಯಂತ ವೇಗವಾಗಿ ಪ್ರವೇಶ ಮಾಡುವುದು ಇದೇ ಗೊಂಬೆಗಳು. ಹಾಗಾಗಿ ಮಕ್ಕಳಿಗೆ ಗೊಂಬೆಗಳೆಂದರೆ ವಿಶೇಷ ಆಕರ್ಷಣೆ. ಮಕ್ಕಳ ಮನಸ್ಸು ಕೂಡಾ ಅರಳುತ್ತದೆ.

    ಗೊಂಬೆ ಕುರಿಸುವ ಪದ್ದತಿಯನ್ನು ಸೊಸೆ ಪರಿಚಯಿಸಿದ್ದಕ್ಕೆ ಚಂದ್ರಶೇಖರ ಶೀಲಾವತಿ ದಂಪತಿಗಳು ಅತೀವ ಖುಷಿ ಪಟ್ಟಿದ್ದಾರೆ. ಸಾಮಾಜಿಕ, ಧಾರ್ಮಿಕವಾಗಿ ಗುರುತಿಸಿಕೊಂಡಿರುವ ಚಂದ್ರಶೇಖರ ಈ ಆಚರಣೆಯಿಂದ ನಮಗೆ ಮಾತ್ರವಲ್ಲ ಪರಿಸರದ ಜನರಿಗೂ ಖುಷಿಯಾಗಿದೆ ಎನ್ನುತ್ತಾರೆ.

    ಐಶ್ವರ್ಯ ವೃತ್ತಿಯಲ್ಲಿ ಇಂಜಿನಿಯರ್ ಆದರೂ ಕೂಡಾ ಧಾರ್ಮಿಕ, ಆಚಾರ ವಿಚಾರಗಳಲ್ಲಿ ವಿಶೇಷ ಆಸಕ್ತಿ ಇಟ್ಟುಕೊಂಡವರು. ಪತಿಯ ಮನೆಯಲ್ಲಿ ತವರಿನ ಹಬ್ಬ ಆಚರಿಸಲು ಸಂಭ್ರಮವಾಗುತ್ತದೆ. ವರ್ಷದಿಂದ ವರ್ಷಕ್ಕೆ ಗೊಂಬೆಗಳ ಸಂಖ್ಯೆಯೂ ಜಾಸ್ತಿಯಾಗುತ್ತಿದೆ. ಇನ್ನಷ್ಟು ಗೊಂಬೆಗಳನ್ನು ಸಂಗ್ರಹಿಸಬೇಕು ಎನ್ನುತ್ತಾರೆ.

    ಚಂದ್ರಶೇಖರ್ ಅವರು ಹಿರಿಯ ಫಾರ್ಮಸಿ ಅಧಿಕಾರಿ. ವೃತ್ತಿಯ ಜತೆಯಲ್ಲಿ ರೋಟರಿ ಕ್ಲಬ್ ಮತ್ತಿತ್ತರ ಸಮಾಜಸೇವಾ ಸಂಸ್ಥೆಗಳಲ್ಲಿ ಗುರುತಿಸಿಕೊಂಡವರು. ಮಕ್ಕಳು ಅವಿನವ್, ಅಮಿತ್. ಇಬ್ಬರು ಇಂಜಿನಿಯರ್. ಬೆಂಗಳೂರಿನಲ್ಲಿ ವೃತ್ತಿನಿರತರಾದರೂ ಕೂಡಾ ಮಕ್ಕಳು ಹಬ್ಬದ ಸಂದರ್ಭದಲ್ಲಿ ಮನೆಯಲ್ಲಿ ತಂದೆತಾಯಿಗಳೊಂದಿಗೆ ಹಬ್ಬವನ್ನು ಆಚರಿಸಿಕೊಳ್ಳುತ್ತಾರೆ.

  • ವಕ್ವಾಡಿ :ಗುರುಕುಲ ವಿದ್ಯಾಸಂಸ್ಥೆಯಲ್ಲಿ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ “ಸಸ್ಯಾಮೃತ”

    ವಕ್ವಾಡಿ :ಗುರುಕುಲ ವಿದ್ಯಾಸಂಸ್ಥೆಯಲ್ಲಿ ಸಾಂಪ್ರದಾಯಿಕ ಸಸ್ಯ ಪದಾರ್ಥಗಳ ಪರಿಚಯ “ಸಸ್ಯಾಮೃತ”

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ನಾವು ಆಯುರ್ವೇದ, ಯೋಗ, ಪ್ರಾಣಾಯಾಮದಂತಹ ಉತ್ತಮ ಪರಂಪರೆಯನ್ನು ಹೊಂದಿದ್ದೇವೆ. ಇದನ್ನು ವಿದೇಶಿಗರು ಅರಿತುಕೊಂಡು, ಅನುಸರಿಸುತ್ತಿದ್ದಾರೆ. ವಿಪರ್‍ಯಾಸವೆಂದರೆ ನಾವು ಇದನ್ನು ಅನುಸರಿಸದೇ, ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಇದರಿಂದಲೇ ಮಾನಸಿಕ ಒತ್ತಡ ಹೆಚ್ಚಳ, ಕಾಯಿಲೆಗಳು ಹೆಚ್ಚಾಗುತ್ತಿದೆ. ಬದಲಾದ ನಮ್ಮ ಜೀವನ ಪದ್ಧತಿ ನಮ್ಮನ್ನು ವಿನಾಶದ ಅಂಚಿಗೆ ಕರೆದುಕೊಂಡು ಹೋಗುತ್ತಿದೆ ಎಂದು ಆಯುರ್ವೇದ ವೈದ್ಯ, ಹೂಡೆಯ ಬೀಚ್ ಹೀಲಿಂಗ್ ಹೋಮ್‌ನ ನಿರ್ದೇಶಕ ಡಾ| ಮೊಹಮ್ಮದ್ ರಫೀಕ್ ಹೇಳಿದರು.

    ಅವರು ರವಿವಾರ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ನ ವಕ್ವಾಡಿಯ ಗುರುಕುಲ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ ಪಾರಂಪರಿಕ ಆಹಾರ ಪದ್ಧತಿಯ ಕುರಿತಂತೆ ಅರಿವು ಮೂಡಿಸುವ 1೦ ನೇ ವರ್ಷದ ‘ಸಸ್ಯಾಮೃತ’ ಅನ್ನುವ ವಿಶಿಷ್ಟ ಕಾರ್‍ಯಕ್ರಮದಲ್ಲಿ ಮಾತಾನಾಡಿದರು.

    ಪ್ರತಿ 7೦ ರಲ್ಲಿ ಒಬ್ಬರಿಗೆ ಕ್ಯಾನ್ಸರ್ ಇದೆ. ಪ್ರಪಂಚದಲ್ಲಿಯೇ ಅತೀ ಹೆಚ್ಚು ಹೃದಯಾಘಾತ ಸಂಭವಿಸುತ್ತಿರುವ ದೇಶ ಭಾರತ. ೧೦-೧೨ ವರ್ಷದವರೆಗೆ ಸಹ ಹೃದಯಘಾತ ಆಗುತ್ತಿದೆ. ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಂದಾಗಿ ದೇಶದ ಬಹುಪಾಲು ಹಣ ಆರೋಗ್ಯಕ್ಕಾಗಿಯೇ ವಿನಿಯೋಗ ಆಗುತ್ತಿದೆ. ನಾವು ಬಳಸುವ ಪ್ರತಿಯೊಂದು ಆಹಾರಗಳಲ್ಲಿಯೂ ರಾಸಾಯನಿಕ ಸೇರಿದ್ದು, ೯೧ ರಲ್ಲಿ ಕ್ಯಾರೆಟ್‌ನಲ್ಲಿ ಕೇವಲ ೦.೦೧ ರಷ್ಟಿದ್ದ ರಾಸಾಯನಿಕವಿಂದು ಶೇ. ೧೮ ರಷ್ಟಿದೆ. ಹಣ ಕೊಟ್ಟು ನಾವೇ ಕಾಯಿಲೆ ಖರೀದಿ ಮಾಡುತ್ತಿದ್ದೇವೆ. ಮನೆಯ ತರಕಾರಿ, ಮನೆಯ ಆಹಾರ ಹೆಚ್ಚೆಚ್ಚು ಸೇವಿಸಿ ಎಂದರು.

    ಆಲೂರು ಚಿತ್ರಕೂಟ ಆಯುರ್ವೇದ ಹಾಸ್ಪಿಟಲ್‌ನ ಡಾ. ನೀಲಾ ಎಸ್. ಮಾತನಾಡಿದರು.

    ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆಯ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿದರು.

    ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕ ಸುಭಾಶ್ಚಂದ್ರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕ ವೃಂದ, ಸಿಬಂದಿ ಉಪಸ್ಥಿತರಿದ್ದರು.

    ಟ್ರಸ್ಟ್‌ನ ಜಂಟಿ ಆಡಳಿತ ನಿರ್ದೇಶಕಿ ಅನುಪಮ ಎಸ್. ಶೆಟ್ಟಿ ಪ್ರಸ್ತಾವಿಸಿ, ಸ್ವಾಗತಿಸಿದರು. ಶಿಕ್ಷಕಿಯರಾದ ವಿಶಾಲ ನಿರೂಪಿಸಿ, ಶಾಂತಾ ಪರಿಚಯಿಸಿದರು.

    ಹಿಂದಿನ ಕಾಲದಂತೆ ಆಷಾಢ ಮಾಸದಲ್ಲಿ ಆರೋಗ್ಯ ದೃಷ್ಟಿಯಿಂದ ಪಾರಂಪರಿಕ ಆಹಾರ ಪದ್ಧತಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವಂತಹ ಔಷಧಿಯ ಗುಣವುಳ್ಳ ಸಸ್ಯ ಪದಾರ್ಥಗಳಿಂದಲೇ ತಯಾರಿಸಿದ ೨೯ ಬಗೆಯ ಖಾದ್ಯಗಳನ್ನು ಬಸ್ರೂರಿನ ಬಾಣಸಿಗ ಮಹಾಬಲ ಹರಿಕಾರ್ ನೇತೃತ್ವದ ತಂಡ ತಯಾರಿಸಿ, ಬಂದವರಿಗೆ ಉಣಬಡಿಸಿದರು. ಮುರಿಯ ಕಷಾಯ, ಜಾಯಿಕಾಯಿ ಉಪ್ಪಿನಕಾಯಿ, ಕೆಸುವಿನ ಸೊಪ್ಪಿನ ಚಟ್ನಿ, ಸಂದು ಬಳ್ಳಿ ಚಟ್ನಿ, ಮಾತಂಗಿ ಸೊಪ್ಪಿನ ಚಟ್ನಿ, ಬಾಳೆದಿಂಡಿನ ಪಚ್ಚಡಿ, ಕಣಿಲೆ ಪಲ್ಯ, ಗಜಗಂಡ ಪಲ್ಯ, ಪತ್ರೋಡೆ ಪಲ್ಯ, ಚೂರು ಮೆಣಸಿನ ಸಾಸುವೆ, ಪತ್ರೋಡೆ ಗಾಲಿ, ಮಡಿವಾಳ ಸೊಪ್ಪಿನ ಇಡ್ಲಿ, ಪಾಂಡವ ಹರಿವೆ ಸೊಪ್ಪಿನ ಸಾಂಬಾರ್, ಕರಿ ಕೆಸುವಿನ ಮೇಲೊಗರ, ಉರಗ ತಂಬಳಿ, ಬೂದು ನೇರಳೆ ತಂಬುಳಿ, ಬಿಲ್ವಪತ್ರೆ ತಂಬಳಿ, ಚಗಟೆ ಸೊಪ್ಪಿನ ಬೋಂಡ, ಉಂಡಲಕಾಯಿ, ಹಲಸಿನ ಹಣ್ಣಿನ ಹೋಳಿಗೆ, ಬಾಳೆ ಎಲೆ ಹಲ್ವಾ, ಗೆಣಸಲೆ, ಸಾಮೆ ಅಕ್ಕಿ ಪಾಯಸ, ಅನ್ನ, ಮಜ್ಜಿಗೆ ಹುಲ್ಲಿನ ಮಜ್ಜಿಗೆ ಸಹಿತ ತರಹೇವಾರಿ ಖಾದ್ಯಗಳನ್ನು ಸಿದ್ಧಪಡಿಸಲಾಗಿತ್ತು.

  • ಮರವಂತೆ :ಆಷಾಡದಲ್ಲೊಂದು ಅದ್ದೂರಿಯ ಜಾತ್ರೆ: ಮರವಂತೆ ಶ್ರೀ ಮಹರಾಜ ಸ್ವಾಮಿ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಜಾತ್ರೆಯ ಸಂಭ್ರಮ

    ಮರವಂತೆ :ಆಷಾಡದಲ್ಲೊಂದು ಅದ್ದೂರಿಯ ಜಾತ್ರೆ: ಮರವಂತೆ ಶ್ರೀ ಮಹರಾಜ ಸ್ವಾಮಿ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಜಾತ್ರೆಯ ಸಂಭ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಮರವಂತೆಯ ನದಿ-ಕಡಲು ನಡುವಿನ, ಹೆದ್ದಾರಿ ಅಂಚಿನ ಮಾರಸ್ವಾಮಿಯ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಕರ್ಕಾಟಕ ಅಮಾವಾಸ್ಯೆ ಜಾತ್ರೆ ಭಾನುವಾರ ಸಂಪನ್ನಗೊಂಡಿತು.

    ಮಳೆ ಬಿಡುವು ನೀಡಿದ್ದರಿಂದ ಬೆಳಗಿನಿಂದಲೇ ಜಿಲ್ಲೆಯ ವಿವಿಧೆಡೆಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತು. ಕೆಲವರು ಸಮುದ್ರ ಮತ್ತು ನದಿಗಳಲ್ಲಿ ಪವಿತ್ರ ಸ್ನಾನ ಮಾಡಿ ಶ್ರೀ ದೇವರ ದರ್ಶನ ಪಡೆದು ಅಭಿಷೇಕ, ಪೂಜೆ, ಅರ್ಪಣೆ ಸಲ್ಲಿಸಿದರು. ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

    ದೇವಾಲಯದೊಳಗೆ ಆಡಳಿತ ಮಂಡಳಿ ಮತ್ತು ಸೇವಾ ವರ್ಗದ ಸದಸ್ಯರು ಸ್ವಯಂಸೇವಕರ ಜತೆ ಸೇರಿ ಶುಚಿತ್ವ, ಪೂಜೆ, ಭಕ್ತರ ಆಗಮನ-ನಿರ್ಗಮನ, ಪ್ರಸಾದ ವಿತರಣೆ ಸುಗಮವಾಗಿ ನಡೆಯಲು ಅಗತ್ಯ ವ್ಯವಸ್ಥೆ ಕಲ್ಪಿಸಿದ್ದರು. ಜಾತ್ರೆಯ ಅಂಗವಾಗಿ ದೇವಾಲಯಕ್ಕೆ ಆಕರ್ಷಕ ಪುಷ್ಪಾಲಂಕಾರ ಮಾಡಲಾಗಿತ್ತು. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡು ಬಂದಿತು.

    ಒಂದೆಡೆ ಸಮುದ್ರ, ಇನ್ನೊಂದೆಡೆ ನದಿ, ನಡುವೆ ಹಾದು ಹೋಗುವ ಹೆದ್ದಾರಿ ಕಾರಣದಿಂದ ತೀರ ಕಿರಿದಾದ ಭೂಪ್ರದೇಶದ ಇಲ್ಲಿ ಅಮಾವಾಸ್ಯೆಯ ಪರ್ವದಲ್ಲಿ ಪಾಲ್ಗೊಳ್ಳಲು ಬರುವ ಸಹಸ್ರಾರು ಭಕ್ತರ ಸುರಕ್ಷತೆಗಾಗಿ ಮತ್ತು ಹೆದ್ದಾರಿಯಲ್ಲಿ ಎಡೆಬಿಡದೆ ಸಂಚರಿಸುವ ವಾಹನಗಳ ಜತೆಗೆ ಜಾತ್ರೆಗೆ ಬರುವ ಅಸಂಖ್ಯ ವಾಹನಗಳ ಸುಗಮ ಸಂಚಾರ, ನಿಲುಗಡೆ ಮತ್ತು ಜನದಟ್ಟಣೆಯ ನಿಯಂತ್ರಣ, ಸಮುದ್ರ ಮತ್ತು ನದಿಸ್ನಾನ ಮಾಡುವವರ ಬಗೆಗೆ ವಹಿಸಬೇಕಾದ ಎಚ್ಚರದ ಕುರಿತು ಗಂಗೊಳ್ಳಿ ಪೊಲೀಸರು, ಕರಾವಳಿ ಕಾವಲು ಪಡೆ ಪೊಲೀಸರು, ಕುಂದಾಪುರ ಸಂಚಾರಿ ಪೋಲಿಸರು ಅಗತ್ಯ ಕ್ರಮಕೈಗೊಂಡಿದ್ದರು.

    ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ.ನಾಯಕ್ ಹಾಗೂ ಸದ್ಯರು, ದೇವಸ್ಥಾನದ ಅರ್ಚಕರು ಉಪಸ್ಥಿತರಿದ್ದರು. ಕುಂದಾಪುರ ಡಿವೈಎಸ್‍ಪಿ ಬೆಳ್ಳಿಯಪ್ಪ, ಬೈಂದೂರು ಪೊಲೀಸ್ ವೃತ್ತ ನಿರೀಕ್ಷಕ ಸವಿತ್ರತೇಜ ಮಾರ್ಗದರ್ಶನದಂತೆ ಗಂಗೊಳ್ಳಿ ಪೊಲೀಸ್ ಠಾಣೆಯ ಉಪನಿರೀಕ್ಷಕ ಹರೀಶ್ ಆರ್. ಹಾಗೂ ವಿವಿಧ ಪೊಲೀಸ್ ಠಾಣೆಗಳ ಉಪನಿರೀಕ್ಷರು ಬಂದೋಬಸ್ತ್ ಮಾಡಿದ್ದರು.

  • ಮಡಾಮಕ್ಕಿ: ಹಂಜಾ ಎಡ್ಮಲೆ ರಸ್ತೆಗೆ ಕಾಯಕಲ್ಪಕ್ಕೆ ಜಿಲ್ಲಾಡಳಿತ ಸಿದ್ಧತೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸ್ಪಂದನೆ, 150 ಕುಟುಂಬಗಳಿಗೆ ಇನ್ನು ನಿರಾಳ

    ಮಡಾಮಕ್ಕಿ: ಹಂಜಾ ಎಡ್ಮಲೆ ರಸ್ತೆಗೆ ಕಾಯಕಲ್ಪಕ್ಕೆ ಜಿಲ್ಲಾಡಳಿತ ಸಿದ್ಧತೆ, ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಸ್ಪಂದನೆ, 150 ಕುಟುಂಬಗಳಿಗೆ ಇನ್ನು ನಿರಾಳ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ನಕ್ಸಲ್ ಪೀಡಿತ ಪ್ರದೇಶವಾದ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಜಾ – ಕಾರಿಮನೆ – ಎಡ್ಮಲೆ ರಸ್ತೆಯ ಕಾಯಕಲ್ಪಕ್ಕೆ ಉಡುಪಿ ಜಿಲ್ಲಾಡಳಿತ ಮುಂದಾಗಿದೆ. ಇಲ್ಲಿನ ಸಂಪರ್ಕ ರಸ್ತೆ ಸಮಸ್ಯೆ ಬಗ್ಗೆ ಕುಂದಾಪುರ ಮಿರರ್ ಜುಲೈ 21ರಂದು ಸಚಿತ್ರ ವರದಿ ಪ್ರಸಾರ ಮಾಡಿತ್ತು.

    ಕರ್ನಾಟಕದ ಚಿರಾಪುಂಜಿ ಎಂದೇ ಪ್ರಸಿದ್ಧವಾದ ಆಗುಂಬೆಯ ತಪ್ಪಲಿನ ಗ್ರಾಮವಾದ ಮಡಾಮಕ್ಕಿ, ಕಾಡುಗಳಿಂದ ಕೂಡಿದ ಪ್ರದೇಶ. ಕಳೆದ ಹತ್ತು ದಿನಗಳಿಂದ ವಿಪರೀತ ಬಿದ್ದ ಮಳೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ರಸ್ತೆಯಾದ ಹಂಜಾ – ಕಾರಿಮನೆ – ಎಡ್ಮಲೆ ಸಂಪರ್ಕಿಸುವ ಸುಮಾರು 2.50 ಕಿ.ಮೀ. ಕಚ್ಚಾ ರಸ್ತೆಯು ಸಂಪೂರ್ಣ ಶಥಿಲಗೊಂಡಿತ್ತು. ಈ ಭಾಗದಲ್ಲಿ ಸುಮಾರು 150 ಕುಟುಂಬಗಳಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಶಾಲೆಗೆ ಹೋಗಲು, ಕೆಲಸಕ್ಕೆ ಹೋಗಲು ಪರದಾಡುವಂತಾಗಿತ್ತು.

    ಈ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು. ವರದಿ ಗಮನಿಸಿದ ಸ್ಥಳೀಯ ನಾಯಕರು ವಿಧಾನಪರಿಷತ್ ಸದಸ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಅವರಿಗೆ ಮಾಹಿತಿ ನೀಡಿದ್ದರು. ಭಂಡಾರಿಯವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಗಮನಕ್ಕೆ ತಂದು ಕಾಮಗಾರಿ ಆರಂಭಿಸುವಂತೆ ಸೂಚಿಸಿದ್ದಾರೆ. ಅದರಂತೆ ಗುರುವಾರ ಜಲ್ಲಿ ಹಾಕುವ ಕೆಲಸ ಪ್ರಾರಂಭಗೊಂಡಿದೆ. ಇದರಿಮದಾಗಿ ಈ ರಸ್ತೆ ಬಳಸುವ ಸುಮಾರು 150 ಕುಟುಂಬಗಳು ನಿರಾಳವಾಗಿದ್ದಾರೆ.

  • ಮಡಾಮಕ್ಕಿ: ದುಸ್ತರವಾದ ಹಂಜಾ ರಸ್ತೆ: ನಡೆದಾಡಲೂ ಸಾಧ್ಯವಾಗುತ್ತಿಲ್ಲ ಕುಗ್ರಾಮದ ಈ ರಸ್ತೆ

    ಮಡಾಮಕ್ಕಿ: ದುಸ್ತರವಾದ ಹಂಜಾ ರಸ್ತೆ: ನಡೆದಾಡಲೂ ಸಾಧ್ಯವಾಗುತ್ತಿಲ್ಲ ಕುಗ್ರಾಮದ ಈ ರಸ್ತೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ದೇಶ ಅಭಿವೃದ್ಧಿ ಹೊಂದುತ್ತಿದೆ, ಆಧುನಿಕತೆ‌ ಮುಂದುವರೆಯುತ್ತಿದೆ, ನಾವು ಸಾಕಷ್ಟು ತಂತ್ರಜ್ಞಾನಿಗಳಾಗುತ್ತಿದ್ದೇವೆ ಎನ್ನುವ ನಮಗೆ ನಮ್ಮೂರಿನ ಕುಗ್ರಾಮದ‌ ಮೂಲಭೂತ ಸೌಕರ್ಯಗಳಲ್ಲಿ ಒಂದಾದ ರಸ್ತೆಯಲ್ಲಿ ನಡೆದಾಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿ ಇದೆ‌ ಎಂದರೆ ಏನಾಗಬಹುದು?

    ಹೌದು, ನಕ್ಸಲ್ ಪೀಡಿತ ಪ್ರದೇಶ ಎಂದು ಗುರುತಿಸಲ್ಪಟ್ಟ ಪ್ತದೇಶಗಳಲ್ಲಿ ಒಂದಾದ ಹೆಬ್ರಿ ತಾಲೂಕಿನ ಮಡಾಮಕ್ಕಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಂಜಾ – ಕಾರಿಮನೆ – ಎಡ್ಮಲೆ ಸಂಪೂರ್ಣ ಹದಗೆಟ್ಟು ಹೋಗಿದೆ. ಇಲ್ಲಿ ವಾಹನಗಳಲ್ಲಿ ಸಂಚರಿಸುವುದು ಬಿಡಿ, ನಡೆದು ಸಾಗುವುದು ಅಸಾಧ್ಯವಾದ ಮಾತಾಗಿದೆ.

    ಕರ್ನಾಟಕದ‌ ಚಿರಾಪುಂಜಿ ಎಂದೇ ಪ್ರಸಿದ್ಧವಾದ ಆಗುಂಬೆಯ ತಪ್ಪಲಿನ ಗ್ರಾಮವಾದ ಮಡಾಮಕ್ಕಿ, ಕಾಡುಗಳಿಂದ ಕೂಡಿದ ಪ್ರದೇಶ. ಕಳೆದ ಹತ್ತು ದಿನಗಳಿಂದ ಸುಮಾರು 250 ರಿಂದ 315 ಮಿಲಿ ಮೀಟರ್ ಮಳೆ ಬಿದ್ದಿದ್ದು ವಿಪರೀತ ಮಳೆಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ರಸ್ತೆಯಾದ ಹಂಜಾ – ಕಾರಿಮನೆ – ಎಡ್ಮಲೆ ಸಂಪರ್ಕಿಸುವ ಸುಮಾರು 2.50 ಕಿ.ಮೀ. ಕಚ್ಚಾ ರಸ್ತೆಯು ಸಂಪೂರ್ಣ ಶಥಿಲಗೊಂಡಿದೆ. ಈ ಭಾಗದಲ್ಲಿ ಸುಮಾರು 150 ಕುಟುಂಬಗಳಿದ್ದು, ಇಲ್ಲಿನ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ ಶಾಲೆಗೆ ಹೋಗಲು, ಕೆಲಸಕ್ಕೆ‌ ಹೋಗಲು ಪರದಾಡುವಂತಾಗಿದೆ.

  • ಕುಂದಾಪುರ :ಅಕ್ಷರ ಲೋಕದ ಕನಸುಗಾರರಾದ ಗಣೇಶ ಮೊಗವೀರರವರ ಆಡಳಿತದಲ್ಲಿ ನಾವುಂದದ ಶುಭದಾ ಆಂಗ್ಲ ಮಾಧ್ಯಮ ಶಾಲೆ

    ಕುಂದಾಪುರ :ಅಕ್ಷರ ಲೋಕದ ಕನಸುಗಾರರಾದ ಗಣೇಶ ಮೊಗವೀರರವರ ಆಡಳಿತದಲ್ಲಿ ನಾವುಂದದ ಶುಭದಾ ಆಂಗ್ಲ ಮಾಧ್ಯಮ ಶಾಲೆ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಸವಾಲುಗಳನ್ನೇ ಸಾಧ್ಯತೆಯನ್ನಾಗಿಸಿಕೊಂಡು, ಬದುಕಲ್ಲಿ ಯಶ ಕಂಡವರು ಗಣೇಶ ಮೊಗವೀರರವರು.
    ಮೂಲತ‌‌‌‌‌‌: ಹೆಮ್ಮಾಡಿಯವರಾದ ಇವರು ತೀರ ಬಡ ಕುಟುಂಬದಲ್ಲಿ ಜನಿಸಿದವರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಮ್ಮಾಡಿಯಲ್ಲಿ, ಪ್ರೌಢ ಶಿಕ್ಷಣವನ್ನು ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರದಲ್ಲಿ ವ್ಯಾಸಾಂಗ ಮಾಡಿ ಆ ಮೂಲಕ ಅಂದು 1996-97ರಲ್ಲಿ ಹೆಮ್ಮಾಡಿ ಪರಿಸರದಲ್ಲಿ
    ಆಂಗ್ಲ ಮಾಧ್ಯಮದಲ್ಲಿ ಓದಿದ ಪ್ರಥಮ ವಿದ್ಯಾರ್ಥಿಯಾಗಿ ಹೊರಹೊಮ್ಮಿರುತ್ತಾರೆ. ಪದವಿ ಪೂರ್ವ ಶಿಕ್ಷಣವನ್ನು S.V ಪದವಿಪೂರ್ವ ಕಾಲೇಜು ಗಂಗೊಳ್ಳಿಯಲ್ಲಿ, ಪದವಿ ಶಿಕ್ಷಣವನ್ನು ಕುಂದಾಪುರದ ಭಂಡಾರ್ಕರ್ಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಮುಗಿಯುತ್ತಿದ್ದಂತೆ ಬಾಲ್ಯದಲ್ಲಿಯೇ ತಾನಿಟ್ಟುಕೊಂಡ ಜಿಲ್ಲಾಧಿಕಾರಿಯಾಗಬೇಕೆಂಬ ಕನಸನ್ನು ಈಡೇರಿಸಿಕೊಳ್ಳಲು ಉನ್ನತ ವಿದ್ಯಾಭ್ಯಾಸ ಹಾಗೂ ತರಬೇತಿಗಾಗಿ ಮುಂಬೈ ಹಾಗೂ ದೆಹಲಿಯಲ್ಲಿ ಎರಡು ವರ್ಷ I.A.S ತರಬೇತಿಯನ್ನು ಪಡೆದು, ತನ್ನ ಸ್ನಾತಕೋತ್ತರ ಶಿಕ್ಷಣವನ್ನು ಮುಂದುವರೆಸುತ್ತಾ ಸ್ನಾತಕೋತ್ತರ ಪದವಿಗಳಾದ M.Sc Mathematics ಹಾಗೂ M.sc Statistics ಪದವಿಯನ್ನು ಕ್ರಮವಾಗಿ ಮುಂಬೈ ವಿಶ್ವವಿದ್ಯಾಲಯ ಹಾಗೂ ಮಂಗಳೂರು ವಿಶ್ವವಿದ್ಯಾಲಯಗಳಲ್ಲಿ ಪೂರ್ಣಗೊಳಿಸಿದರು. 2011ರಲ್ಲಿ ಗಣಿತ ಉಪನ್ಯಾಸಕರಾಗಿ ವೃತ್ತಿಯನ್ನು ಪ್ರಾರಂಭಿಸಿ ದೂರದ ಊರುಗಳಾದ ಮಂಗಳೂರು, ಭಟ್ಕಳ, ಹೊನ್ನಾವರ, ಕುಮಟ, ಅಂಕೋಲ, ಕಾರವಾರ ಹಾಗೂ ಉಡುಪಿ, ಬೈಂದೂರು ಕುಂದಾಪುರಗಳಲ್ಲಿಯೂ ವಿದ್ಯಾರ್ಥಿಗಳಿಗೆ ಗಣಿತ ಪಾಠವನ್ನು ಹೇಳಿಕೊಟ್ಟು ಅಕ್ಷರದ ಅಮೃತವನ್ನು ಉಣಬಡಿಸಿ ವಿದ್ಯಾರ್ಥಿಗಳಲ್ಲಿ ಗಣಿತ ವಿಷಯದಲ್ಲಿನ ಭಯವನ್ನು ದೂರ ಮಾಡಿದ ಪ್ರಸಿದ್ಧ ಗಣಿತ ಉಪನ್ಯಾಸಕರು ಶ್ರೀ ಗಣೇಶ ಮೋಗವೀರ‌ರವರು.ತನ್ನ ಒಂಬತ್ತು ವರ್ಷಗಳ ಉಪನ್ಯಾಸಕ ವೃತ್ತಿಯನ್ನು ಪೂರ್ಣಗೊಳಿಸುತ್ತಿರುವಾಗಲೇ
    ತನ್ನ ಗುರುಗಳಾದಂತಹ, ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಿಕೊಂಡ ಚಿತ್ರ ಕಾರಂತ್ ರವರ ಮಾರ್ಗದರ್ಶನದಲ್ಲಿ ಬೆಳೆದ ಪ್ರತಿಭಾನ್ವಿತ ಶಿಷ್ಯ ಗಣೇಶ ಮೊಗವೀರರಿಗೆ ಕುಂದಾಪುರದ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನಲ್ಲಿ‌ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದರು. ಕೆಲವು ವರ್ಷಗಳ ಕಾಲ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ಕಾಲೇಜನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ಇವರಿಗೆ ಸಲ್ಲುತ್ತದೆ. ಭವಿಷ್ಯದಲ್ಲಿ ತನ್ನದೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಬೇಕು ಎನ್ನುವ ಅವರ ಮಹದಾಸೆಗೆ ಸ್ಪೂರ್ತಿಯಾಗಿ 2022-23ರಲ್ಲಿ ಹೆಮ್ಮಾಡಿಯಲ್ಲಿ ಜನತಾ ಸ್ವತಂತ್ರ ಪದವಿಪೂರ್ವ ಕಾಲೇಜನ್ನು ಆರಂಭಿಸಿದರು. ಪ್ರಸ್ತುತ ಸಮರ್ಪಣಾ ಎಜುಕೇಶನಲ್ ಟ್ರಸ್ಟ್ (ರಿ) ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಾಗೂ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಬಲಿಷ್ಟ ಉಪನ್ಯಾಸಕರ ತಂಡವನ್ನು ಕಟ್ಟಿಕೊಂಡು ಆ ಮೂಲಕ ಸ್ಪರ್ಧಾತ್ಮಕತೆಯ ಈ ಯುಗದಲ್ಲಿ ಸ್ಪರ್ಧಾತ್ಮಕತೆಗೆ ಅನುಗುಣವಾಗಿ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿದ್ದಾರೆ.
    ತಾನು ಶಿಕ್ಷಣ ಪಡೆಯುವಾಗ ಪಡೆದ ಕಷ್ಟಗಳು ತನ್ನೂರಿನ ಕರಾವಳಿ ಭಾಗದ ವಿದ್ಯಾರ್ಥಿಗಳಿಗೆ ಸಮಸ್ಯೆಗಳಾಗಬಾರದು ಎನ್ನುವ ಉದ್ದೇಶ ಅವರದಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಾದ CET/NEET/JEE ಕೋಚಿಂಗ್ ಪಡೆಯಲು ಮಂಗಳೂರು ಬೆಂಗಳೂರು ದೂರದ ಹೊರ ಜಿಲ್ಲೆಗಳಿಗೆ ಹೋಗುವ ಬದಲು ತನ್ನ ಸ್ವಂತ ಊರಾದ ಹೆಮ್ಮಾಡಿಯಲ್ಲೆ ತನ್ನ ಕಾಲೇಜಿನಲ್ಲಿಯೇ ಅತ್ಯುತ್ತಮ ಕೋಚಿಂಗ್ ನೀಡಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಆ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪ್ರತಿನಿತ್ಯ ತರಬೇತಿಯೂ ನಡೆಯುತ್ತಿದೆ. ಕಾಲೇಜು ಪ್ರಾರಂಭದ ಪ್ರಥಮ ವರ್ಷದಲ್ಲಿಯೇ ದ್ವಿತೀಯ ಪಿ.ಯು.ಸಿ.ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ ನೂರು ಫಲಿತಾಂಶ ಹಾಗೂ ರಾಜ್ಯಕ್ಕೆ 6ನೇ Rank ಪಡೆದು,CET,NEET,JEE ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ
    ಅತ್ಯುತ್ತಮ ಸಾಧನೆಯೊಂದಿಗೆ ಹಲವಾರು Rankಗಳನ್ನು ಪಡೆಯುವುದರ ಮೂಲಕ ಪ್ರಾರಂಭಿಕ ವರ್ಷದಲ್ಲಿಯೇ ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕಾಲೇಜು ಇದಾಗಿದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ವಲಯದಲ್ಲಿ ಕಾಲೇಜು ಇತಿಹಾಸವನ್ನೇ ಸೃಷ್ಟಿ ಮಾಡಿದೆ. ಒಟ್ಟಾರೆಯಾಗಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಯೇ ಪ್ರಥಮ ಆದ್ಯತೆ ಯಾಗಿದೆ.

    ಗಣೇಶ ಮೊಗವೀರರವರ ವಿಶೇಷ ಸಾಧನೆಗಳು :-

    ನವ ದೆಹಲಿಯಲ್ಲಿ ಆಲ್ ಇಂಡಿಯಾ University ಆಯೋಜಿಸಿದ MOSPI (Ministry of Statistics and Program Implementation)
    15 ದಿನಗಳ ವಿಶೇಷ ಕ್ಯಾಂಪ್ ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಪ್ರತಿನಿಧಿಸಿರುತ್ತಾರೆ.

    ಸಂಪನ್ಮೂಲ ವ್ಯಕ್ತಿಯಾಗಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

    Wisdom ED & ಅಭಿಜ್ಞಾ ಎಜುಕೇಶನ್ ಪ್ರೈವೇಟ್ ಲಿಮಿಟೆಡ್ ಇವರು ಕೊಡಮಾಡುವ “Out standing young Faculty Award 2022″ನೀಡಿ ಗೌರವಿಸಿರುತ್ತಾರೆ.

    ಪದವಿಪೂರ್ವ ಕಾಲೇಜಿನ ಕನಸು‌ ನನಸಾಗುತ್ತಿದ್ದಂತೆ ತನ್ನದೇ ಆದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯನ್ನು ಆರಂಭಿಸುವ ಇವರ ಕನಸು ಸಾಕಾರಗೊಳ್ಳುತ್ತಿದೆ. ಮುಂದಿನ ವರ್ಷ 2024-25ನೇ ಶೈಕ್ಷಣಿಕ ವರ್ಷದಿಂದ ನಾವುಂದ ಶುಭದಾ ಆಂಗ್ಲ ಮಾಧ್ಯಮ ಶಾಲೆಯನ್ನು ಸಮರ್ಪಣಾ ಎಜುಕೇಶನಲ್ ಟ್ರಸ್ಟ್‌ (ರಿ) ನೂತನ ಆಡಳಿತ ಮಂಡಳಿಗೆ ಒಳಪಟ್ಟಿದ್ದು ಗಣೇಶ ಮೊಗವೀರರವರ ಸಾರಥ್ಯದಲ್ಲಿ ವಿಶೇಷ ವಿನೂತನ ಚಟುವಟಿಕೆಗಳೊಂದಿಗೆ ಮುನ್ನಡೆಸುವ ಯೋಜನೆ ರೂಪಿಸಿಕೊಂಡಿದ್ದಾರೆ.

    ಶುಭದಾ ಆಂಗ್ಲ ಮಾಧ್ಯಮ ಶಾಲೆಯ ವಿಶಿಷ್ಟತೆಗಳು

    ಅತ್ಯುತ್ತಮ ಇಂಗ್ಲಿಷ್ ಸಂವಹನದ ಕಲಿಕೆಯೇ ಮೊದಲ ಆದ್ಯತೆ.

    ಅತ್ಯಾಧುನಿಕವಾದ ಸೌಲಭ್ಯಗಳೊಂದಿಗೆ ಆಕರ್ಷಕವಾದ Play School.

    ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗೆ KAS,IAS,IPS,CET,NEET,JEE, CA/CS ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ (Foundation)ನೀಡಲಾಗುವುದು.

    ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಸೇವಾ ಅನುಭವ ಹೊಂದಿರುವ ನುರಿತ ಅನುಭವಿಶಾಲಿ ಶಿಕ್ಷಕ ವೃಂದ.

    ಆಧುನಿಕ ಶಿಕ್ಷಣಕ್ಕೆ ಪೂರಕವಾಗಿ ಸ್ಮಾರ್ಟ್ ಕ್ಲಾಸ್ ಗಳು.

    ಸುಸಜ್ಜಿತವಾದ ಗಣಕಯಂತ್ರ (Computer) ಪ್ರಯೋಗಾಲಯ.

    ಸುಸಜ್ಜಿತವಾದ ಶಾಲಾ ಗ್ರಂಥಾಲಯ.

    ವಿಜ್ಞಾನ ವಿಷಯಕ್ಕೆ ಅನುಗುಣವಾಗಿ ಅತ್ಯಾಧುನಿಕವಾದ ಪ್ರಯೋಗಾಲಯ.

    ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಕ್ರೀಡೆ, ಕಲೆ,ಸಾಹಿತ್ಯ ಈ ಪ್ರಮುಖ ಕ್ಷೇತ್ರಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಂಗೀತ, ಭರತನಾಟ್ಯ, ಯಕ್ಷಗಾನ, ಕರಾಟೆ,ಚೆಸ್,ಅಬಾಕಸ್, ಡ್ರಾಯಿಂಗ್ Art & Craft, ಜಾದೂ, ಗೊಂಬೆಯಾಟ,
    ಸ್ಕೇಟಿಂಗ್, ಟೇಬಲ್ ಟೆನ್ನಿಸ್ , ಬಾಸ್ಕೆಟ್ ಬಾಲ್, ಕಬಡ್ಡಿ, ವಾಲಿಬಾಲ್, ಹ್ಯಾಂಡ್ ಬಾಲ್, ತ್ರೋ ಬಾಲ್ ಇತ್ಯಾಧಿ…
    ಈ ಪ್ರಮುಖ ಕಲಾ ವಿಭಾಗಗಳಿಗೆ ಹಾಗೂ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳಿಗೆ ಅನುಭವಿಶಾಲಿ ಶಿಕ್ಷಕರಿಂದ ಅತ್ಯುತ್ತಮ ತರಬೇತಿ ನೀಡಲಾಗುವುದು.

    ವ್ಯಕ್ತಿತ್ವ ವಿಕಸನ ತರಬೇತಿ(Management Training).

    ಸುಸಜ್ಜಿತವಾದ ಹಾಗೂ ಆಧುನಿಕ ಶೈಲಿಯ ಶೌಚಾಲಯಗಳು.

    ಶುಚಿ-ರುಚಿಯಾದ ಮಧ್ಯಾಹ್ನದ ಊಟದ ವ್ಯವಸ್ಥೆ.

    ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಶಾಲಾ ಬಸ್ ವ್ಯವಸ್ಥೆ.

    ವಿದ್ಯಾರ್ಥಿಗಳ ಕಲಿಕಾ ಪ್ರಗತಿಗಾಗಿ ವಿಶೇಷವಾದ ಹಾಗೂ ವಿನೂತನವಾದ ಯೋಜನೆಗಳು.

    ಪ್ರೀತಿಯ ಪೋಷಕರೇ ನಿಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ನೀಡಲು ಹಾಗೂ ಅವರ ಭವಿಷ್ಯವನ್ನು ಉಜ್ವಲಗೊಳಿಸಲು
    ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಆಯ್ಕೆ ನಿಮ್ಮದಾಗಲಿ.

    ಬುಕ್ಕಿಂಗ್ ಗಾಗಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಿ.

    8951371853, 8105451726, 9731488501.

  • ಕುಂದಾಪುರದಲ್ಲೊಂದು ವಿಶೇಷ – ನಮ್ಮನಿ ಮದಿ

    ಕುಂದಾಪುರದಲ್ಲೊಂದು ವಿಶೇಷ – ನಮ್ಮನಿ ಮದಿ

    Video:

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರದಲ್ಲೊಂದು ವಿಶೇಷ – ನಮ್ಮನಿ ಮದಿ
    ಮದುವೆ ಎಂದರೆ ಅದು ಸಂಬಂಧಗಳನ್ನು ಬೆಸೆಯುವ ಕಾರ್ಯಕ್ರಮ. ಇಡೀ ಕೂಡು ಕುಟುಂಬ ಒಂದಾಗಿ ಸಂಭ್ರಮಿಸುವ ಹಬ್ಬ. ಆದರೆ ಇಂದು ಮದುವೆ ಕಲ್ಯಾಣ ಮಂಟಪಕ್ಕಷ್ಟೇ ಸೀಮಿತವಾಗಿ ಬಿಟ್ಟಿವೆ. ಹಳೆಯ ಕಾಲದ ಸಂಪ್ರದಾಯ, ಸಂಸ್ಕೃತಿ, ಆಚಾರ ವಿಚಾರಗಳು ಸಂಪೂರ್ಣ ಅವನತಿ ಸೇರಿವೆ. ಕುಟುಂಬದಲ್ಲೊಂದು ಮದುವೆ ನಡೆಯುತ್ತದೆ ಎಂದಾಗ ಇಡೀ ಕುಟುಂಬವೇ ಒಂದಾಗಿ ಒಂದಿಷ್ಟು ದಿನ ಸಂಭ್ರಮ ಪಡುವುದನ್ನು ಕಾಣಬಹುದು.

    ಇಂಥಹ ಒಂದು ಹಳೆಯ ನೆನಪುಗಳನ್ನು ಕೆದಕುವ ಕೌಟುಂಬಿಕ ವ್ಯವಸ್ಥೆಯ ಮಹತ್ವಿಕೆಯನ್ನು ತಿಳಿಯ ಪಡಿಸುವ ಮದುವೆ ಕುಂದಾಪುರದ ಫೆರ್ರಿ ರಸ್ತೆಯ ನಾಗಣ್ಣ ಕಂಪೌಂಡ್ನಲ್ಲಿ ನಡೆಯುತ್ತಿದೆ. ಇದು ಮೂರು ದಿನಗಳ ಮದುವೆ. ಹಲವು ವಿಶೇಷಗಳನ್ನು ಈ ಮದುವೆ ಹೊಂದಿವೆ. ಮೂರು ದಿನಗಳ ಕಾಲ ಮದುವೆ ಮನೆಯಲ್ಲಿ ಹಬ್ಬದ ವಾತವಾರಣ, ನಮ್ಮನಿ ಮದಿ-ಕೌಟುಂಬಿಕ ಜಾತ್ರೆ ಎಂಬ ಹೆಸರಿನಲ್ಲಿ ನಡೆಯುತ್ತಿದೆ.
    ಕಾರ್ತಿಕ್ ಬಿ ಮತ್ತು ಡಾ ಸುಮತಿ ಕೆ ಅವರ ವಿವಾಹವು ಡಿ.25 ಸೋಮವಾರ ಕುಂದಾಪುರ ಆರ್.ಎನ್ ಎಸ್ ಕಲ್ಯಾಣ ಭವನದಲ್ಲಿ ನಡೆಯಲಿದೆ. ಅದಕ್ಕೆ ಪೂರಕವಾಗಿ ಡಿ.22ರಿಂದ ಡಿ.26 ಮಂಗಳವಾರದ ತನಕ ವರನ ಮನೆಯಲ್ಲಿ ನಮ್ಮನಿ ಮದಿ-ಕೌಟುಂಬಿಕ ಜಾತ್ರೆ ನಡೆಯುತ್ತಿದೆ.

    ಶುಕ್ರವಾರ ಬೆಳಿಗ್ಗೆ ಹಳದಿ ಶಾಸ್ತ್ರ, ಕೌಟುಂಬಿಕ ಜಾತ್ರೆಯ ಉದ್ಘಾಟನೆ ನಡೆಯಿತು. ಫೆರ್ರಿ ರಸ್ತೆ ಉದ್ಯಾವನದ ಬಳಿಯಿಂದ ಅಲಂಕೃತ ಎತ್ತಿನ ಗಾಡಿಯಲ್ಲಿ ವರನನ್ನು ಮನೆಗೆ ಕರೆದು ತರಲಾಯಿತು. ಮಂಗಳವಾದ್ಯ, ವರನ ಕುಟುಂಬಿಕರು, ಬಂಧು ಬಳಗ, ಸ್ನೇಹಿತರ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಸಂಜೆ ಕುಟುಂಬದಲ್ಲಿ ಮಹಿಳೆ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಶ್ರೀಮತಿ ಪೂರ್ಣಿಮಾ ಸುರೇಶ ಉಪನ್ಯಾಸ ನೀಡಿದರು. ಸಂಜೆ ನಾಗಣ್ಣ ನಶ್ಯ ಉದ್ಯಮಕ್ಕೆ ನೂರು ವರ್ಷಗಳು ಸಂಭ್ರಮಾಚರಣೆ ನಡೆಯಿತು. ಬಳಿಕ ಆದರ್ಶ ದಂಪತಿಗಳು, ರಾತ್ರಿ ಡಿಸ್ಕೋ ಜಾಕಿ ಕಾರ್ಯಕ್ರಮ ನಡೆಯಿತು.
    ಡಿ.23ರಂದು ಕುಟುಂಬದಲ್ಲಿ ಸಂಸ್ಕಾರ ಉಪನ್ಯಾಸ ನಡೆಯಿತು. ಕೆ.ವಿ ರಮೇಶ್ ಮೂಡಬಿದಿರೆ ಉಪನ್ಯಾಸ ನೀಡಲಿದ್ದಾರೆ. ಸಂಜೆ ಮನೋರಂಜನಾ ಆಟಗಳು, ನಾಟ್ಯಾಯನ-ವಿದುಷಿ ಅಯೆನಾ ವಿ.ರಮೇಶ ಮೂಡುಬಿದಿರೆ ಮತ್ತು ತಂಡದವರಿಂದ. ರಾತ್ರಿ 8 ಗಂಟೆಗೆ ಕಥೆಯಲ್ಲ ಜೀವನ -ಕುಟುಂಬ ಸದಸ್ಯರಿಂದ ನಾಟಕ, ರಾತ್ರಿ 10 ಗಂಟೆಗೆ ಡಿಸ್ಕೋ ಜಾಕಿ ಡಿ.ಜೆ ನಡೆಯಲಿದೆ.
    ಡಿ.24 ಆದಿತ್ಯವಾರ ಹಿಂದು ಕುಟುಂಬ ಆಚಾರ ವಿಚಾರ ಉಪನ್ಯಾಸ ನಡೆಯಲಿದ್ದು ವಾದಿರಾಜ್ ಭಟ್ ಗೋಪಾಡಿ ನೆಡೆಸಿಕೊಡಲಿದ್ದಾರೆ. ಸಂಜೆ ಗೀತ ಗಾಯನ, ಕಿರು ಪ್ರಹಸನ ಗುಲಾಬಿ ತೋಟ, ನೃತ್ಯ ಪ್ರದರ್ಸನ, ಏಕಪಾತ್ರಾಭಿನಯ, ಸ್ಪೀಕ್ ಅಂತ್ಯಾಕ್ಷರಿ, ಡಿಸ್ಕೋ ಜಾಕಿ ಡಿಜೆ ನಡೆಯಲಿದೆ.

    ಡಿ.25ರಂದು ಮದುವೆ ಸಂಭ್ರಮ ನಡೆಯಲಿದೆ. ಸಂಜೆ 5ರಿಂದ ಕುಟುಂಬ ಸದಸ್ಯರ ಸಮಾರಂಭದ ಅವಲೋಕನ, 6 ಗಂಟೆಗೆ ಯಕ್ಷಗಾನ ಚಂದ್ರಹಾಸ ನಡೆಯಲಿದೆ. ಡಿ.26ರಂದು ಸತ್ಯನಾರಾಯಣ ಪೂಜೆ, ಸಮಾರಂಭದ ಸಮಾರೋಪ, ವಿದಾಯ ಕೂಟ ನಡೆಯಲಿದೆ.

    ಮನೆಯಲ್ಲಿಯೇ ‘ನಾಗಣ್ಣ ಕ್ಯಾಂಟಿನ್’ ತೆರೆಯಲಾಗಿದೆ. ಇಲ್ಲಿ ಊಟ ಉಪಹಾರದ ವ್ಯವಸ್ಥೆ ನಿರಂತರವಾಗಿರುತ್ತದೆ. ಈ ವಿಶಿಷ್ಟ ಕಾರ್ಯಕ್ರಮದ ಬಗ್ಗೆ ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷರಾದ ಬಿ.ಕಿಶೋರ್ ಕುಮಾರ್ ಕುಂದಾಪುರ ಅವರು ಮಾಹಿತಿ ನೀಡಿ ಈ ಹಿಂದೆ ಇದೇ ಮಾದರಿಯಲ್ಲಿ ಮದುವೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಅದು ಯಶಸ್ವಿಯಾಗಿತ್ತು. ಈ ಬಾರಿ ಕಾರ್ತಿಕ್ ಮದುವೆಯನ್ನು ಕೂಡಾ ಅಡಂಬರವಲ್ಲ ಅದ್ದೂರಿಯಾಗಿ ಮಾಡುತ್ತಿದ್ದೇವೆ. ಇದು ಕುಟುಂಬ ಸದಸ್ಯರ ಸಂಭ್ರಮ-ಜಾತ್ರೆ. ಕುಟುಂಬ ಸದಸ್ಯರು ಎಲ್ಲಾ ಒಟ್ಟಾಗಿ ಸಂಭ್ರಮಿಸುವುದು ಇದರ ಉದ್ದೇಶ. ಕುಟುಂಭದ ಬಾಂಧವ್ಯದ ಮಹತ್ವಿಕೆ ಅರ್ಥ ಮಾಡಿಕೊಳ್ಳುವುದು, ಕುಟುಂಬ ಸದಸ್ಯರ ಪ್ರತಿಭಾ ಪ್ರದರ್ಶನ ವೇದಿಕೆಯಾಗಿಯೂ ಈ ಕಾರ್ಯಕ್ರಮ ನಡೆಯಲಿದೆ ಎಂದರು.

  • ಉಡುಪಿ : ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಮದುವೆಯ ಸಂಭ್ರಮ

    ಉಡುಪಿ : ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಮದುವೆಯ ಸಂಭ್ರಮ

    ಕುಂದಾಪುರ ಮಿರರ್ ‌ಸುದ್ದಿ…

    ಉಡುಪಿ: ನಿಟ್ಟೂರಿನ ರಾಜ್ಯ ಮಹಿಳಾ ನಿಲಯದಲ್ಲಿ ಡಿಸೆಂಬರ್ 19 ರ ಸಂಜೆ ಮಂಗಳವಾರದಿಂದ ಬುಧವಾರ ಮಧ್ಯಾಹ್ನದ ವರೆಗೆ ಮದುವೆ ಸಂಭ್ರಮದ ಕಳೆಯು ಕಟ್ಟಿತ್ತು. ಸಂಜೆ ಮೆಹಂದಿ ಕಾರ್ಯಕ್ರಮ ನಡೆದರೆ, ಬೆಳಗ್ಗೆ ಎರಡು ಜೋಡಿಗಳ ವಿವಾಹ ಮಹೋತ್ಸವವು ಅಧಿಕಾರಿಗಳು, ಗಣ್ಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸಾಂಪ್ರದಾಯಿಕವಾಗಿ ನಡೆಯಿತು.

    ವಿವಾಹ ನಿಶ್ಚಯ ಕಾರ್ಯಕ್ರಮ ಜಿಲ್ಲಾಡಳಿತದ ನೇತೃತ್ವದಲ್ಲಿ ಕಳೆದ ಎರಡು ತಿಂಗಳಿನಿಂದ ವರರ ಆರೋಗ್ಯ, ನಡತೆ, ಅವರು ಗಳಿಸಿರುವ ಆದಾಯ, ನಡತೆ ಮತ್ತಿತರ ವಿವರಗಳನ್ನು ಕಲೆ ಹಾಕುವುದರೊಂದಿಗೆ ಜಿಲ್ಲಾಡಳಿತ, ವರನ ಗುರು ಹಿರಿಯರು ಒಪ್ಪಿಗೆ ನೀಡಿದರು.

    ತುಮಕೂರು ಮೂಲದ 32 ವರ್ಷ ಪ್ರಾಯದ ಶೀಲಾ ರವರು ಕಳೆದ 4 ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಿದ್ದು, ಅನಾಥೆಯಾದ ಇವರನ್ನು ಕುಂದಾಪುರ ತಾಲೂಕಿನ ಬೆದ್ರಾಡಿಯ ಮಹಾಬಲ ಶಾಸ್ತ್ರೀಯ ಸುಪುತ್ರರಾದ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳುತ್ತಿದ್ದ 43 ವರ್ಷದ ಗಣೇಶ್ ಶಾಸ್ತ್ರೀ ಅವರೊಂದಿಗೆ ಹಾಗೂ ಭದ್ರಾವತಿ ಮೂಲದ 21 ವರ್ಷ ಪ್ರಾಯದ ಕುಮಾರಿ ಅವರು ಕಳೆದ ಎರಡು ವರ್ಷಗಳಿಂದ ಮಹಿಳಾ ನಿಲಯದಲ್ಲಿ ವಾಸವಿದ್ದು, ಪೋಷಕರಿಲ್ಲದ ಇವರನ್ನು ಯಲ್ಲಾಪುರ ಮೂಲದ ನಂದೊಳ್ಳಿ ಅಣಲಗಾರದ ಹಾಲಿ ಬೆಳ್ಳಂಜೆಯಲ್ಲಿ ಪುರೋಹಿತ ಕೆಲಸ ನಿರ್ವಹಿಸುತ್ತಿರುವ 29 ವರ್ಷ ಪ್ರಾಯದ ಸತ್ಯನಾರಾಯಣ ಶ್ರೀಧರ ಭಟ್ಟ ಅವರೊಂದಿಗೆ ಮದುವೆ ನೆರವೇರಿತು.

    ಮದುವೆ ಮುಹೂರ್ತದ ಶುಭ ಸಂದರ್ಭದಲ್ಲಿ ನವ ಜೋಡಿಗಳಿಗೆ ಧಾರೆ ಮುಹೂರ್ತದಲ್ಲಿ ಶಾಸಕ ಯಶ್‌ಪಾಲ್ ಸುವರ್ಣ, ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ ಎಸ್, ಹಿರಿಯ ಸಿವಿಲೆ ನ್ಯಾಯಾಧೀಶೆ ಶ್ಯಾಮಲಾ ಎಸ್, ಮಹಿಳಾ ನಿಲಯದ ಅಧೀಕ್ಷಕಿ ಪುಷ್ಪಾರಾಣಿ, ವಿವಿಧ ಮಹಿಳಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸಮಾಜ ಸೇವಕರು ಸೇರಿದಂತೆ ಮತ್ತಿತರರು ಆಶೀರ್ವದಿಸಿದರು.

    ವಿವಾಹ ಸಂಭ್ರಮವು ಖಾಸಗಿ ಮದುವೆಗಿಂತ ಕಡಿಮೆ ಇಲ್ಲದಂತೆ ಮದುವೆ ಚಪ್ಪರ, ಸ್ವಾಗತ ದ್ವಾರ, ಮಹಿಳಾ ಮಣಿಗಳು ಬಂದವರನ್ನು ತಂಪು ಪಾನೀಯ ಹಾಗೂ ಗುಲಾಬಿ ಹೂ ನೀಡುವುದರೊಂದಿಗೆ ಆಮಂತ್ರಿತರನ್ನು ಸ್ವಾಗತಿಸುತ್ತಿದ್ದರು.

    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಮ್ಮ ಕುಟುಂಬದ ಮದುವೆಯಲ್ಲಿ ಆಮಂತ್ರಿತರನ್ನು ಸ್ವಾಗತಿಸುವ ರೀತಿಯಲ್ಲಿ ಸ್ವಾಗತಿಸಿ, ನಗುನಗುತ್ತಾ ಪ್ರತಿಯೊಬ್ಬರನ್ನು ಮಾತನಾಡುತ್ತಿದ್ದರು. ಅರ್ಚಕರು ಶಾಸ್ತ್ರೋಕ್ತವಾಗಿ ಅಗ್ನಿ ಸಾಕ್ಷಿಯಾಗಿ ಮದುವೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಿದರೆ, ಆಮಂತ್ರಿತರು ವಧು- ವರರಿಗೆ ಉಡುಗೊರೆಗಳನ್ನು ನೀಡುತ್ತಿರುವುದು ಸಹ ವಿಶೇಷೆವಾಗಿತ್ತು. ನವಜೋಡಿಯೊಂದಿಗೆ ಫೋಟೋ ಸೆಷನ್‌ನಲ್ಲಿ ನಗುನಗುತ್ತಾ ಭಾಗವಹಿಸುತ್ತಿದ್ದರು. ಮಹಿಳಾ ನಿಲಯದ ಸಹಪಾಠಿಗಳ ಮುಖದಲ್ಲಿಯೂ ಸಹ ಉತ್ಸಾಹ, ಸಂತೋಷ ಮಡುಗಟ್ಟಿತ್ತು. ನವಜೋಡಿಗಳ ಮುಖದಲ್ಲಿಯೂ ಸಹ ಮನೋಲ್ಲಾಸ ಎದ್ದು ಕಾಣುತ್ತಿತ್ತು. ಬಂದ ಆಮಂತ್ರಿತರು ಲಾಡು, ಹೋಳಿಗೆ, ಊಟದ ರಸದೌತಣ ಸವಿದರು.

    ವರರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ ಕಳೆದ 2-3 ವರ್ಷಗಳಿಂದ ವಧುವಿನ ಅನ್ವೇಷಣೆಯಲ್ಲಿದ್ದು, ಸ್ನೇಹಿತರು ರಾಜ್ಯ ಮಹಿಳಾ ನಿಲಯದಲ್ಲಿ ಹೆಣ್ಣು ಮಕ್ಕಳು ಇರುವ ಬಗ್ಗೆ ತಿಳಿಸಿದಾಗ ನಾವು ಅಧಿಕಾರಿಗಳನ್ನು ಸಂಪರ್ಕಿಸಿ, ಅವರೊಂದಿಗೆ ವಿಶ್ವಾಸ ಗಳಿಸಿ, ಜಿಲ್ಲಾಡಳಿತ, ನಮ್ಮ ಗುರು-ಹಿರಿಯರು ಹಾಗೂ ವಧುವಿನ ಒಪ್ಪಿಗೆಯೊಂದಿಗೆ ಈ ಮದುವೆ ನಡೆಯಿತು. ಇದು ನನಗೆ ಸಂತೋಷದಾಯಕವಾದುದು. ಭವಿಷ್ಯದಲ್ಲಿ ಉತ್ತಮ ಜೀವನ ನಡೆಸುವುದಾಗಿ ತಿಳಿಸಿದರೆ, ವಧು ರವರು ಅಧಿಕಾರಿ ವರ್ಗದವರು ಮುಂದಿನ ದಿನಗಳಲ್ಲಿ ಉತ್ತಮ ಜೀವನ ನಡೆಸುವ ಉದ್ದೇಶದಿಂದ ನಮ್ಮ ಒಪ್ಪಿಗೆ, ನೀತಿ-ನಿಯಮಗಳ ಅನ್ವಯ ಸಂಗಾತಿಯನ್ನಾಗಿಸಿರುವುದು ಮಗುಳುನಗೆಯ ನಾಚಿಕೆಯೊಂದಿಗೆ ಸಂತಸದಾಯಕ ಎಂದರು.

    ಉಡುಪಿಯ ರಾಜ್ಯ ಮಹಿಳಾ ನಿಲಯವು 1976 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈವರೆಗೆ 24 ಮಹಿಳೆಯರ ವಿವಾಹವು ಈ ಸಂಸ್ಥೆಯಲ್ಲಿ ನಡೆದಿದೆ. ಪ್ರಸ್ತುತ 63 ಜನ ಮಹಿಳೆಯರು ಹಾಗೂ 5 ಜನ ಮಕ್ಕಳು ಇದ್ದಾರೆ. ಇವರಲ್ಲಿ ಮೂರು ಹೆಣ್ಣು ಮಕ್ಕಳು ಕಾಲೇಜು ಶಿಕ್ಷಣವನ್ನು ಹೊಂದುತ್ತಿದ್ದರೆ, ಬಾಕಿ ಉಳಿದ ಮಹಿಳೆಯರು ಊದು ಬತ್ತಿ, ಮೇಣದ ಬತ್ತಿ ಸೇರಿದಂತೆ ಮತ್ತಿತರ ತಯಾರಿಕಾ ಚಟುವಟಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

  • ಕೇಂದ್ರ ಸರಕಾರ ನೀಡುವ `ಬಿಲಿಯನೇರ್ ರೈತ ಪ್ರಶಸ್ತಿ’ಗೆ ಕುಂದಾಪುರ ತೆಕ್ಕಟ್ಟೆಯ ರಮೇಶ್ ನಾಯಕ್ ಆಯ್ಕೆ, ಗುರುವಾರ ಪ್ರಧಾನಿಯಿಂದ ಪ್ರಶಸ್ತಿ ಪ್ರದಾನ

    ಕೇಂದ್ರ ಸರಕಾರ ನೀಡುವ `ಬಿಲಿಯನೇರ್ ರೈತ ಪ್ರಶಸ್ತಿ’ಗೆ ಕುಂದಾಪುರ ತೆಕ್ಕಟ್ಟೆಯ ರಮೇಶ್ ನಾಯಕ್ ಆಯ್ಕೆ, ಗುರುವಾರ ಪ್ರಧಾನಿಯಿಂದ ಪ್ರಶಸ್ತಿ ಪ್ರದಾನ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೃಷಿಯಿಂದಲೇ ವಾರ್ಷಿಕ 1 ಕೋಟಿ ರು.ಗೂ ಹೆಚ್ಚು ವಹಿವಾಟು ನಡೆಸುತ್ತಿರುವ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತೆಕ್ಕಟೆ ಗ್ರಾಮದ ಪ್ರಗತಿಪರ ಕೃಷಿಕ, ಹೈನೋದ್ಯಮಿ ರಮೇಶ್ ನಾಯಕ್ ಅವರು ಕೇಂದ್ರ ಸರ್ಕಾರ ನೀಡುವ `ಬಿಲಿಯನೇರ್ ರೈತ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ. ಡಿ.7ರ ಗುರುವಾರ ನವದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಮೇಶ್ ನಾಯಕ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಂದ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

    ಪ್ರಗತಿಪರ ಕೃಷಿಕ ಹಾಗೂ ಉದ್ಯಮಿಯಾಗಿರುವ ರಮೇಶ್ ನಾಯಕ್, ವೈವಿಧ್ಯಮಯ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕುಂದಾಪುರ ತಾಲೂಕಿನ ಕೆದೂರು ಗ್ರಾಮದಲ್ಲಿ ರುವ ತಮ್ಮ 13 ಎಕರೆ ಜಾಗದಲ್ಲಿ ಅವರು ಕೃಷಿ ಮಾಡುತ್ತಿದ್ದಾರೆ. 11 ವಿವಿಧ ಜಾತಿಯ, 1,634 ವಿವಿಧ ತಳಿಯ ಹಣ್ಣಿನ ಗಿಡ ನೆಟ್ಟು ನೈಸರ್ಗಿಕ ಕೃಷಿಯ ಮೂಲಕ ಉತ್ತಮ ಫಸಲು ಬೆಳೆಯುತ್ತಿದ್ದಾರೆ.

    ಇಂಗು ಗುಂಡಿಯಿಂದ ತೆಗೆಯಲಾದ ಮಣ್ಣನ್ನು ಉಪಯೋಗಿಸಿ 30 ಸಾವಿರ ಅನಾನಸ್ ಗಿಡ ನಾಟಿ ಮಾಡಿದ್ದಾರೆ. 2 ಗಿಡಗಳ ಮಧ್ಯದಲ್ಲಿ ಪಪ್ಪಾಯಿ ಗಿಡಗಳನ್ನು ಅಂತರದ ಬೆಳೆಯಾಗಿ ಬೆಳೆಸಿದ್ದಾರೆ. ಈ ನಡುವೆ, 285 ಹಲಸು ಹಾಗೂ 500 ಡ್ರಾಗನ್ ಫೂಟ್ ಸೇರಿ ಒಟ್ಟು 1,634 ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ತಮ್ಮ ತೋಟದಲ್ಲಿ ಬೆಳೆದಿದ್ದಾರೆ. ವಾರ್ಷಿಕವಾಗಿ ಸುಮಾರು 1 ಕೋಟಿ ರು.ಗೂ ಅಧಿಕ ವಹಿವಾಟು ನಡೆಸುತ್ತಿದ್ದಾರೆ. ತಮ್ಮ ಹೊಲದಲ್ಲಿ ಇಂಗು ಗುಂಡಿಗಳನ್ನು ತೋಡಿ, ಅಂತರ್ಜಲದ ಮಟ್ಟ ಹೆಚ್ಚಲು ಕಾರಣರಾಗಿದ್ದಾರೆ. ಕೃಷಿ ಜೊತೆಗೆ ಹೈನುಗಾರಿಕೆಯನ್ನೂ ನಡೆಸುತ್ತಿದ್ದಾರೆ. ಆ ಮೂಲಕವೂ ಆದಾಯ ಗಳಿಸುತ್ತಿದ್ದಾರೆ. ಜೊತೆಗೆ, ತೆಕ್ಕಟ್ಟೆಯಲ್ಲಿ ಅವರು ರೈಸ್ ಮಿಲ್ ಕೂಡ ಹೊಂದಿದ್ದಾರೆ.

    ಪ್ರಶಸ್ತಿ ಆಯ್ಕೆಯಾಗಿದ್ದು ಸಂತೋಷವನ್ನು ನೀಡಿದೆ
    `ಬಿಲಿಯನೇರ್‍ರೈತ ಪ್ರಶಸ್ತಿ’ಗೆ ಆಯ್ಕೆ ಯಾಗಿದ್ದಕ್ಕೆ ತುಂಬಾ ಖುಷಿಯಾಗಿದೆ. ಕೃಷಿ ಉದ್ದೇಶಕ್ಕಾಗಿ ಜಾಗ ಖರೀದಿ ಮಾಡಿರಲಿಲ್ಲ. ಕೃಷಿಯನ್ನು ಉದ್ಯಮವನ್ನಾಗಿ ಮಾಡ ಬೇಕು ಎನ್ನುವ ವ ಆಸೆ ಇತ್ತು. ಹೀಗಾಗಿ, ಮೊದಲೇ ಖರೀದಿಸಿದ್ದ 13 ಎಕರೆ ಜಾಗದಲ್ಲಿ ಕೃಷಿ ಮಾಡಿದ್ದೇನೆ. ಆರು ತಿಂಗಳು ಅಲೆದಾಟ ನಡೆಸಿ, ಪ್ರಗತಿ ಪರ ಕೃಷಿಕರ ಬಳಿ ತೆರಳಿ ಅವರಿಂದ ಮಾಹಿತಿ ಪಡೆ ದುಕೊಂಡು ಕೃಷಿ ಮಾಡುತ್ತಿದ್ದೇನೆ. ನಾನೇನು ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ. ಬ್ರಹ್ಮಾವರ ಕೃಷಿ ಕೇಂದ್ರದವರು ಶಿಫಾರಸು ಮಾಡಿದ್ದರು ಈ ಹಿನ್ನಲ್ಲೆಯಲ್ಲಿ ಪ್ರಧಾನಮಂತ್ರಿಗಳ ಮೂಲಕ ಪ್ರಶಸ್ತಿ ಸ್ವೀಕರಿಸುವುದೆ ನನ್ನ ಭಾಗ್ಯವಾಗಿದೆ –ರಮೇಶ್ ನಾಯಕ್, ಕೃಷಿಕರು ತೆಕ್ಕಟ್ಟೆ