Category: ಸುದ್ದಿ

  • ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ವೃತ್ತಿ ಕೌಶಲ್ಯ (Think 𝙱ig 𝙶row 𝙱ig’) ಕಾರ್ಯಾಗಾರ

    ಹೆಮ್ಮಾಡಿಯ ಜನತಾ ಪದವಿಪೂರ್ವ ಕಾಲೇಜಿನಲ್ಲಿ ವೃತ್ತಿ ಕೌಶಲ್ಯ (Think 𝙱ig 𝙶row 𝙱ig’) ಕಾರ್ಯಾಗಾರ

    ಕುಂದಾಪುರ ಮಿರರ್ ಸುದ್ದಿ…

    ಹೆಮ್ಮಾಡಿ :ಜನತಾ ಪದವಿಪೂರ್ವ ಕಾಲೇಜು ಹೆಮ್ಮಾಡಿಯಲ್ಲಿ ಜೆಸಿಐ ಸಿಟಿ ಕುಂದಾಪುರ ಆಯೋಜನೆಯ ‘Think 𝙱ig 𝙶row 𝙱ig’ ಶೀರ್ಷಿಕೆ ಅಡಿಯಲ್ಲಿ ವೃತ್ತಿ ಕೌಶಲ್ಯ ಕಾರ್ಯಕ್ರಮ ನಡೆಯಿತು.

    ಸಂಪನ್ಮೂಲ ವ್ಯಕ್ತಿಯಾಗಿ ಜೆಸಿಐ ಕ್ಯೂನಿ ಡಿ ಕೊಸ್ಟಾ ಆಗಮಿಸಿ ವಿದ್ಯಾರ್ಥಿಗಳಿಗೆ ವೃತ್ತಿ ಕೌಶಲ್ಯದ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದರು.

    ಸಮಾರಂಭದಲ್ಲಿ ಜೆಸಿಐ ಸಿಟಿ ಕುಂದಾಪುರದ ಅಧ್ಯಕ್ಷರಾದ ರಾಘವೇಂದ್ರ ಕುಲಾಲ್, ಜೆಸಿಐ ನಿಕಟಪೂರ್ವ ಅಧ್ಯಕ್ಷರುಗಳಾದ ಹುಸೆನ್‌ ಹೈಕಾಡಿ, ಮತ್ತು ವಿಜಯ ಕುಮಾರ್ ಹಾಗೂ ಜನತಾ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕರಾದ ಹರ್ಷ ಶೆಟ್ಟಿ ಉಪಸ್ಥಿತರಿದ್ದರು.

    ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಬೋಧಕ/ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಅಭಿಜಿತ್ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

  • ಕುಂದಾಪುರ: ಸಮುದಾಯದಿಂದ “ಬುದ್ಧನ ಬೆಳಕಿನಲ್ಲಿ” ತಿಂಗಳ ಓದು ಕಾರ್ಯಕ್ರಮ

    ಕುಂದಾಪುರ: ಸಮುದಾಯದಿಂದ “ಬುದ್ಧನ ಬೆಳಕಿನಲ್ಲಿ” ತಿಂಗಳ ಓದು ಕಾರ್ಯಕ್ರಮ

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಸಮುದಾಯ ಕುಂದಾಪುರ ಕಳೆದ ಐದು ವರ್ಷಗಳಿಂದ ಪ್ರತಿ ತಿಂಗಳೂ ಆಯೋಜಿಸುತ್ತಿರುವ “ತಿಂಗಳ ಓದು” ಪ್ರಯುಕ್ತ ಮೇ ತಿಂಗಳ ಓದು ‘ಬುದ್ಧನ ಬೆಳಕಿನಲ್ಲಿ’ ಕಾರ್ಯಕ್ರಮವು ಭಾನುವಾರ ಕುಂದಾಪುರದ ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉಡುಪಿಯ ವಕೀಲ ಹಾಗೂ ಸಂಬುದ್ಧ ಟ್ರಸ್ಟ್ ನ ಕಾರ್ಯದರ್ಶಿ ಮಂಜುನಾಥ್ ವಿ ನಡೆಸಿಕೊಟ್ಟರು.

    ಬುದ್ಧ ಪೂರ್ಣಿಮೆ ಪ್ರಯುಕ್ತ ನಡೆಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾನ್ಯವಾಗಿ ಸಿದ್ದಾರ್ಥ ನಡುರಾತ್ರಿಯಲ್ಲಿ ತನ್ನ ಕಂದ ರಾಹುಲ ಪತ್ನಿ ಯಶೋಧರೆಯನ್ನು ತೊರೆದು ಯಾರಿಗೂ ಹೇಳದೆ ಅರಮನೆಯನ್ನು ತೊರೆದು ಹೋದ ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಇದೆ. ಆದರೆ ಸಿದ್ದಾರ್ಥ ಬಾಲ್ಯದಿಂದಲೂ ಕರುಣೆ ಅನುಕಂಪ ಮಾನವೀಯ ಗುಣಗಳೊಂದಿಗೆ ಸತ್ಯ, ಅಹಿಂಸೆ ಹಾಗೂ ನ್ಯಾಯದ ಪರವಾಗಿ ತನ್ನದೇ ಆದ ಪರಿಕಲ್ಪನೆಗಳನ್ನು ರೂಡಿಸಿಕೊಂಡಿದ್ದ. ಸಿದ್ದಾರ್ಥ ದೇಶಾಂತರ ಹೋಗಲು ಕಾರಣವಾದ ಅಂಶವೆಂದರೆ, ರೋಹಿಣಿ ನದಿಯ ವಿವಾದದಲ್ಲಿ ಶಾಕ್ಯ ಸಂಘದ ನಿಯಮದಂತೆ ದೇಶಾಂತರ ಹೋಗುವ ಶಿಕ್ಷೆಯನ್ನು ಆಯ್ದುಕೊಂಡ ಸಿದ್ದಾರ್ಥ ತನ್ನ ಹೆಂಡತಿ ಮತ್ತು ಕುಟುಂಬದ ಸದಸ್ಯರೆಲ್ಲರ ಗಮನಕ್ಕೂ ತಂದು ಎಲ್ಲರನ್ನು ಒಪ್ಪಿಸಿ ಹಾಡು ಹಗಲಿನಲ್ಲೇ ದೇಶಾಂತರ ಹೊರಡುವ ತೀರ್ಮಾನ ಕೈಗೊಳ್ಳುತ್ತಾನೆ. ಇಂತಹ ಸತ್ಯಕ್ಕೆ ವಿರುದ್ಧವಾಗಿ
    ಕನ್ನಡ ಸಾಹಿತ್ಯದಲ್ಲಿ ಅನೇಕ ತಪ್ಪು ಸಂದೇಶ ನೀಡುವ ಸಂಕಥನಗಳು ಹುಟ್ಟಿಕೊಂಡಿವೆ. ಅದೇ ಸತ್ಯವೆಂದು ನಂಬಿದವರು ಹಾಗೆ ನಂಬುವವರು ಈಗಲೂ ಇದ್ದಾರೆ. ಎಂದು ಅವರು ಹೇಳಿದರು.

    ನಂತರ ಮಾತನಾಡಿದ ಶ್ರೀ ಶಾರದಾ ಕಾಲೇಜು ಬಸ್ರೂರು ಇದರ ನಿವೃತ್ತ ಪ್ರಾಂಶುಪಾಲ ಡಾ.ಎಂ ದಿನೇಶ್ ಹೆಗ್ಡೆ, ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ ಅವರ ಮೇಲೆ ಬೌದ್ಧ ಚಿಂತನೆಗಳ ಪ್ರಭಾವಗಳನ್ನು ವಿವರಿಸಿದರು. ವೇದಿಕೆಯಲ್ಲಿದ್ದ ಭಂಡಾರ್ ರ್ಕಾರ್ಸ್ ಕಾಲೇಜಿನ ನಿವೃತ್ತ ಕನ್ನಡ ಪ್ರಾಧ್ಯಾಪಕಿ ರೇಖಾ ಬನ್ನಾಡಿ, ಬುದ್ಧನ ಚಿಂತನೆಗಳು ಇಂದಿಗೂ ಎಷ್ಟು ಪ್ರಸ್ತುತ ಎಂದು ವಿವರಿಸಿದರು.

    ಪ್ರಾಸ್ತಾವಿಸಿ ಮಾತನಾಡಿದ ಸಮುದಾಯದ ಅಧ್ಯಕ್ಷ ಡಾ.ಸದಾನಂದ ಬೈಂದೂರು, ಇತ್ತೀಚಿಗೆ ನಿಧನರಾದ ಸಾಹಿತಿ ಲಕ್ಕೂರು ಆನಂದ, ಎಸ್ ಎಪ್ ಐ, ಸಮುದಾಯ ಮುಂತಾದ ಪ್ರಗತಿಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡ ಸಾಹಿತಿ ಆರ್ ಜಯಕುಮಾರ್ ಹಾಗೂ ಸ್ಥಳೀಯ ಪರಿಸರ ಪ್ರೇಮಿ ಡಾಕ್ಟರ್ ಎಚ್ ಎಸ್ ಮಲ್ಲಿ ಅವರಿಗೆ ಸಮುದಾಯ ಸಂಘಟನೆಯ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ, ಸಮುದಾಯ ನಡೆದು ಬಂದ ಹಾದಿ, ತಿಂಗಳ ಓದಿನ ಕಾರ್ಯಕ್ರಮವನ್ನು ವಿವರಿಸಿ ಸ್ವಾಗತಿಸಿದರು.

    ಗಣೇಶ್ ಶೆಟ್ಟಿ, ಚಿನ್ನ ಗಂಗೇರ ಹಾಗೂ ಅವಂತಿ ಬುದ್ಧನ ನಲ್ನುಡಿಗಳನ್ನು ವಾಚಿಸಿದರು. ಸ್ಥಳೀಯ ಪ್ರಾಧ್ಯಾಪಕರು ಶಿಕ್ಷಕರು, ವಕೀಲರು, ವೈದ್ಯರು, ಸಮುದಾಯದ ಹಿತೈಷಿಗಳು ಬುದ್ಧಿಷ್ಟ್ ಸೊಸೈಟಿ ಆಫ್ ಇಂಡಿಯಾ, ಕುಂದಾಪುರ ತಾಲೂಕು ದಲಿತ ಸಂಘರ್ಷ ಸಮಿತಿಯ ಸದಸ್ಯರು, ಸಂಬುದ್ಧ ಟ್ರಸ್ಟ್ ನ ಪದಾಧಿಕಾರಿಗಳು, ಕುಂದಾಪುರ ಸಮುದಾಯದ ಹಿತೈಷಿಗಳು ಸದಸ್ಯರು ಉಪಸ್ಥಿತರಿದ್ದರು.

    ಪುಸ್ತಕ ಸರಸ್ವತಿ ವತಿಯಿಂದ ಬುದ್ಧನ ಕುರಿತಾದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ತಿಮ್ಮಪ್ಪ ಗುಲ್ವಾಡಿ ನಿರ್ವಹಿಸಿದರು. ಬಾಲಕೃಷ್ಣ ಕೆ ಎಂ ಹಾಗೂ ವಿಕ್ರಂ ಕೆ ಎಸ್ ಸಹಕರಿಸಿದರು. ಕುಂದಾಪುರ ಸಮುದಾಯದ ಕಾರ್ಯದರ್ಶಿ ವಾಸುದೇವ ಗಂಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

  • ಕೋಟತಟ್ಟು- ಕೊರಗ ಸಮುದಾಯದ ಮನೆ ನಿರ್ಮಾಣಕ್ಕೆ ಧನಸಹಾಯ ಹಸ್ತಾಂತರ

    ಕೋಟತಟ್ಟು- ಕೊರಗ ಸಮುದಾಯದ ಮನೆ ನಿರ್ಮಾಣಕ್ಕೆ ಧನಸಹಾಯ ಹಸ್ತಾಂತರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ಕೋಟತಟ್ಟು ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಚಿಟ್ಟಿಬೆಟ್ಟು ಪರಿಶಿಷ್ಟ ಪಂಗಡ ಸಮುದಾಯದವರಿಗೆ 8 ಹೊಸ ಮನೆ ನಿರ್ಮಾಣದ ಸಮಿತಿಗೆ ಇತ್ತೀಚಿಗೆ ಕೋಟ ಜಾಮಿಯಾ ಮಸೀದಿಯಿಂದ 25,000 ರೂಪಾಯಿಯ ಚೆಕ್ಕನ್ನು ಹಸ್ತಾಂತರಿಸಿದರು.

    ಈ ಸಂದರ್ಭದಲ್ಲಿ ಕೋಟ ಜಾಮಿಯ ಮಸೀದಿ ಅಧ್ಯಕ್ಷ ಕೆ.ಎಂ ಸಲೀಂ ಮಾತನಾಡಿ ಸಮಿತಿಯ ಸದಸ್ಯರೆಲ್ಲರೂ ತುಂಬು ಸಂತೋಷದಿಂದ ಈ ಮೊತ್ತವನ್ನು ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಕಾರ ನೀಡುವುದಾಗಿ ಹೇಳಿದರಲ್ಲದೆ ಹಾಗೂ ಪರಿಶಿಷ್ಟ ಪಂಗಡದ ಸಮುದಾಯದವರಿಗೆ 8 ಮನೆಗಳನ್ನು ಕಟ್ಟಿಕೊಡುವ ಕೋಟತಟ್ಟು ಗ್ರಾಮ ಪಂಚಾಯಿತನ ಈ ಕಾರ್ಯ ಪ್ರಶಂಸನೆಯ ಎಂದರು.

    ಈ ಸಂದರ್ಭದಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಸತೀಶ್ ಕುಂದರ್ ಬಾರಿಕೆರೆ, ಉಪಾಧ್ಯಕ್ಷೆ ಸರಸ್ವತಿ ,ಸದಸ್ಯೆ ಸೀತಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್,ಮಸೀದಿ ಕಾರ್ಯದರ್ಶಿ ಬಶೀರ್, ಉಪಾಧ್ಯಕ್ಷ ವಾಹಿದ್ ಆಲಿ , ಕೋಶಾಧಿಕಾರಿ ಅಬ್ದುಲ್ ಬಸಿರ್ ಸದಸ್ಯರಾದ ಅಬ್ದುಲ್ ಸಿರಾಜ್ ಬಾರಿಕೆರೆ, ಇಬ್ರಾಹಿ ಪಡುಕೆರೆ ಹಾಗೂ ಚಿಟ್ಟಿಬೆಟ್ಟು ಫಲಾನುಭವಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಆಲೂರು :ಕೊರಗ ಕುಟುಂಬಗಳಿಗೆ ಭೂಮಿ ಹಂಚಿಕೆ ವಿಳಂಬ ಆಗ್ರಹಿಸಿ : ಆದಿವಾಸಿ ಸಂಘಟನೆಯಿಂದ ಪ್ರತಿಭಟನೆ

    ಆಲೂರು :ಕೊರಗ ಕುಟುಂಬಗಳಿಗೆ ಭೂಮಿ ಹಂಚಿಕೆ ವಿಳಂಬ ಆಗ್ರಹಿಸಿ : ಆದಿವಾಸಿ ಸಂಘಟನೆಯಿಂದ ಪ್ರತಿಭಟನೆ

    ತಹಸೀಲ್ದಾರ್ ರಿಂದ ಜೂ.10ರಂದು ಜಂಟೀ ಸಭೆಯ ಭರವಸೆ ಹಿನ್ನೆಲೆ ಪ್ರತಿಭಟನೆ ವಾಪಾಸ್

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ: ಆಲೂರು ಕೊರಗ ಸಮುದಾಯದವರಿಗೆ ಡಾ. ಮಹಮ್ಮದ್ ಫೀರ್ ವರದಿ ಪ್ರಕಾರ ಭೂಮಿ ನೀಡಲು ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯ ವಿಳಂಬ ನೀತಿಯನ್ನು ಖಂಡಿಸಿ ಸೋಮವಾರ ಆಲೂರು ಗ್ರಾಮ ಪಂಚಾಯತ್ ಎದುರು ಕರ್ನಾಟಕ ಆದಿವಾಸಿ ಪಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ, ಉಡುಪಿ. ಇವರ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.

    ಪ್ರತಿಭಟನೆ ಸಂದರ್ಭ ಮಾತನಾಡಿದ ಜಿಲ್ಲಾ ಸಂಚಾಲಕ ಶ್ರೀಧರ ನಾಡಾ, ಡಾ. ಮಹಮ್ಮದ್ ಪೀರ್ ವರದಿ ಪ್ರಕಾರ ಕುಂದಾಪುರ ತಾಲೂಕಿನ ಆಲೂರು ಗಾಮ ಪಂಚಾಯತ್ ವ್ಯಾಪಿಯ ಕೊರಗ ಕುಟುಂಬಗಳಿಗೆ ತಲಾ ಒಂದು ಎಕರೆಯಂತೆ ಭೂಮಿ ನೀಡಲು ಈ ಹಿಂದೆ ಆಲೂರು ಗ್ರಾಮ ಪಂಚಾಯತ್ ಎದುರು ನಡೆದ ಪ್ರತಿಭಟನೆಯ ಪರಿಣಾಮ ಒಂದನೇ ಹಂತದಲ್ಲಿ 10 ಎಕರೆ ಭೂಮಿ ಸರ್ವೆ ನಡೆಸಿ ಭೂಮಿ ಗುರುತಿಸಲಾಗಿತ್ತು. ಈವರೆಗೆ ಸರ್ವೆ ಆಗಿರುವ 10 ಎಕರೆ ಭೂಮಿ ಕೇವಲ 8 ಕೊರಗ ಕುಟುಂಬಗಳಿಗೆ ಮಾತ್ರ ಪ್ರಯೋಜನವಾಗಿದ್ದು, 2 ನೇ ಹಂತದಲ್ಲಿ ಆಲೂರು ಗ್ರಾಮದಲ್ಲಿ 7 ಎಕರೆ ಮತ್ತು ಹರ್ಕೂರು ಗ್ರಾಮದಲ್ಲಿ 5 ಎಕರೆ ಲಭ್ಯವಿರುವ ಸರ್ಕಾರಿ ಭೂಮಿಯ ದಾಖಲೆಯೋಂದಿಗೆ ಈಗಾಗಲೇ ಸರ್ವೆ ನಡೆಸಲು ಕುಂದಾಪುರ ತಹಶಿಲ್ದಾರ್ ಕ್ರಮ ವಹಿಸಿ ಹತ್ತು ತಿಂಗಳು ಕಳೆದರು ಸರ್ವೆ ಇಲಾಖೆ ಸರ್ವೆ ನಡೆಸಿಲಿಲ್ಲ ಎಂದು ಆರೋಪಿಸಿದರು.

    ಕೊರಗ ಸಮುದಾಯದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕುಂದುಕೊರತೆ ಸಭೆಯಲ್ಲಿ ನಮ್ಮ ಆಹವಾಲು ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆಲೂರಿನ ಒಡೆಯರ ಭೂಮಿಯಲ್ಲಿ ವಾಸವಿರುವ 3 ಕೊರಗ ಕುಟುಂಬಗಳಿಗೆ ಅವರ ಹೆಸರಿಗೆ ಭೂಮಿ ಮಾಡಿಕೊಡುವ ಭರವಸೆ ನೀಡಿ 2 ವರ್ಷ ಕಳೆದರೂ ಇದುವರೆಗೆ ಭರವಸೆ ಈಡೇರಿಲ್ಲ ಎಂದ ಅವರು, 2016 ರಿಂದ ಭೂಮಿಗಾಗಿ ಹೋರಾಟ ಮಾಡುತ್ತಾ ಬೇಡಿಕೆ ಸಲ್ಲಿಸಿದರು ಇದುವರೆಗೆ ಭೂಮಿ ನೀಡಲು ವಿಳಂಬ ಮಾಡಲಾಗುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

    ಸ್ಥಳಕ್ಕಾಗಮಿಸಿದ ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿರುವುದರಿಂದ ಜೂನ್ 10 ರಂದು ಜಂಟೀ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದರು.

    ಈ ಸಂದರ್ಭ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಕೈಗೊಂಡ ಪ್ರತಿಭಟನಾಕಾರರು, ಒಂದು ವೇಳೆ ಜೂನ್ 10ರಂದು ಸಮಸ್ತೆ ಬಗೆಹರಿಯದೇ ಇದ್ದಲ್ಲಿ ಅದೇ ದಿನ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

    ಪ್ರತಿಭಟನೆಯ ಸಂದರ್ಭ ರಾಜ್ಯ ಸಮಿತಿ ಸದಸ್ಯರಾದ ಕೃಷ್ಣಾ ಇನ್ನಾ ಹಾಗೂ ಗಣೇಶ್ ಆಲೂರು, ಆಲೂರು ಘಟಕ ಸಂಚಾಲಕಿ ರೇವತಿ ಆಲೂರು, ರಾಜು ಬೆಟ್ಟಿನ ಮನೆ, ರಾಜೀವ್ ಪಡುಕೋಣೆ ಹಾಗೂ ಕೊರಗ ಸಮುದಾಯ ಆಲೂರು, ಗ್ರಾ.ಪಂ.ಪಿಡಿಓ ರೂಪಾ ಗೋಪಿ, ಗ್ರಾ.ಪಂ.ಅಧ್ಯಕ್ಷ ರಾಜೇಶ್ ಎನ್. ದೇವಾಡಿಗ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರವಿ ಶೆಟ್ಟಿ, ವಂಡ್ಸೆ ಕಂದಾಯ ಇಲಾಖೆ ಅಧಿಕಾರಿ ರಾಘವೇಂದ್ರ, ಭೂ ಪರಿವೀಕ್ಷಣಾಧಿಕಾರಿ ವಾಲೇಕರ್ ಈ ಸಂದರ್ಭ ಹಾಜರಿದ್ದರು.

  • ಕೋಟ :ಪರಿಸರ ಜಾಗೃತಿ ಸಂಘಟನೆಗೆ ಮಾತ್ರವಲ್ಲ ಜನಸಾಮಾನ್ಯರಲ್ಲಿ ಬರಬೇಕು – ಗೋಪಾಲ್ ಪೂಜಾರಿ

    ಕೋಟ :ಪರಿಸರ ಜಾಗೃತಿ ಸಂಘಟನೆಗೆ ಮಾತ್ರವಲ್ಲ ಜನಸಾಮಾನ್ಯರಲ್ಲಿ ಬರಬೇಕು – ಗೋಪಾಲ್ ಪೂಜಾರಿ

    ವಿಶ್ವ ಪ್ಲಾಸ್ಟಿಕ್ ಮುಕ್ತ ದಿನ ವಿಶೇಷ, ಕೊಮೆ ಬೀಚ್ ಕ್ಲಿನಿಂಗ್

    ಕುಂದಾಪುರ ಮಿರರ್ ಸುದ್ದಿ…
    ಕೋಟ: ಪರಿಸರದ ಜಾಗೃತಿ ಸಂಘಟನೆಗಳಿಗೆ ಮಾತ್ರವಲ್ಲದೆ ಜನಸಾಮಾನ್ಯರಲ್ಲಿ ಮೂಡಬೇಕು ಎಂದು ಕೊಮೆ ಕೊರವಡಿ ವಿವಿದೋದ್ದೇಶ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲ್ ಪೂಜಾರಿ ಹೇಳಿದರು.

    ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಮಣೂರು ಫ್ರೆಂಡ್ಸ್, ಹಂದಟ್ಟು ಮಹಿಳಾ ಬಳಗ ಕೋಟ, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ,ಗೀತಾನಂದ ಫೌಂಡೇಶನ್ ಮಣೂರು ಇವರುಗಳ ಸಹಯೋಗದೊಂದಿಗೆ ತೆಕ್ಕಟ್ಟೆ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕ ಇದರ ಸಂಯೋಜನೆಯೊಂದಿಗೆ 209ನೇ ಭಾನುವಾರ ಹಾಗೂ ವಿಶ್ವ ಪ್ಲಾಸ್ಟಿಕ್ ಮುಕ್ತ ದಿನದ ಅಂಗವಾಗಿ ಕೊಮೆ ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ ಪರಿಸರದ ಬಗ್ಗೆ ಕೀಳರಿಮೆ ಬಿಡಿ ಅದರ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ. ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲಂದರಲ್ಲಿ ಎಸೆಯಬೇಡಿ ಹೊಳೆ ತೊರೆ, ಸಮುದ್ರಕ್ಕೆ ಸೇರುವ ಪ್ಲಾಸ್ಟಿಕ್ ಜೀವ ಸಂಕುಲಗಳಿಗೆ ಸಂಕಷ್ಟ ತಂದೊಡ್ಡುತ್ತಿದೆ ಸಮುದ್ರದ ಕಿನಾರೆಯಲ್ಲಿ ತ್ಯಾಜ್ಯದ ರಾಶಿ ನೋಡಲಾಸಾಧ್ಯವಾಗಿದೆ. ಈ ಬಗ್ಗೆ ಈಗಾಲೇ ಜಾಗೃತರಾಗುವುದು ಒಳಿತು ಪಂಚವರ್ಣದ ಪರಿಸರ ಕಾಳಜಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಕಾರ್ಯವೈರಿಯ ಬಗ್ಗೆ ಅಭಿನಂದಿಸಿದರು.

    ಕೋಟ ಪಂಚವರ್ಣದ ಅಧ್ಯಕ್ಷ ಅಜಿತ್ ಆಚಾರ್, ಪಂಚವರ್ಣ ಮಹಿಳಾ ಮಂಡಲದ ಪ್ರಧಾನಕಾರ್ಯದರ್ಶಿ ವಸಂತಿ ಹಂದಟ್ಟು, ತೆಕ್ಕಟ್ಟೆ ಗ್ರಾ.ಪಂ ಎಸ್ ಎಲ್ ಆರ್ ಎಂ ಘಟಕದ ಮುಖ್ಯಸ್ಥೆ ರೇವತಿ ತೆಕ್ಕಟ್ಟೆ, ಹಂದಟ್ಟು ಮಹಿಳಾ ಬಳಗದ ಸುಜಾತ , ಮಣೂರು ಫ್ರೆಂಡ್ಸ್ ನ ದಿನೇಶ್ ಆಚಾರ್ ,ಪಂಚವರ್ಣ ಯುವಕ ಮಂಡಲದ ಸಂಚಾಲಕ ಅಮೃತ್ ಜೋಗಿ ಇದ್ದರು.

    ಕಾರ್ಯಕ್ರಮವನ್ನು ಪಂಚವರ್ಣ ಮಹಿಳಾ ಮಂಡಲದ ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.

  • ಕೋಟ :ಡಿ.ಎಸ್.ಎಸ್ ಕೋಟ ಹೋಬಳಿಯಲ್ಲಿ 25ನೇ ವರ್ಷದ ಉಚಿತ ನೋಟ್ ಪುಸ್ತಕ, ಪ್ರತಿಭಾ ಪುರಸ್ಕಾರ

    ಕೋಟ :ಡಿ.ಎಸ್.ಎಸ್ ಕೋಟ ಹೋಬಳಿಯಲ್ಲಿ 25ನೇ ವರ್ಷದ ಉಚಿತ ನೋಟ್ ಪುಸ್ತಕ, ಪ್ರತಿಭಾ ಪುರಸ್ಕಾರ

    ಕುಂದಾಪುರ ಮಿರರ್ ಸುದ್ದಿ…

    ಕೋಟ: ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳನ್ನು ಸಮರ್ಥವಾಗಿ ವಿರೋಧಿಸಿದ ಬುದ್ಧ, ಸಾವಿತ್ರಿ ಬಾಯಿ ಪುಲೆ, ಅಂಬೇಡ್ಕರ್ ಹೋರಾಡಿ, ಜಾತಿವಾದಿಗಳ, ವೈದಿಕ ಕರ್ಮಟಗಳ ವಿರುದ್ಧ ಹೋರಾಡಿ ದಲಿತರಿಗೆ ಅಸ್ಫೃಶ್ಯತೆಯಿಂದ ಬಳಲುತ್ತಿದ್ದ ಸಮುದಾಯಗಳಿಗೆ ಶಿಕ್ಷಣ ಹಕ್ಕನ್ನು ಕೊಟ್ಟವರು. ಅವರ ಆದರ್ಶಗಳನ್ಬು ನಾವು ಅನುಸರಿಸಬೇಕಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ.) (ಅಂಬೇಡ್ಕರ್ ವಾದ) ಬೆಂಗಳೂರು ಇದರ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಹೇಳಿದರು.

    ಅವರು ಭಾನುವಾರ ಕೋಟ ಸಿ.ಎ ಬ್ಯಾಂಕ್ ಪ್ರಧಾನ ಕಛೇರಿಯ ಬಿ.ಸಿ. ಹೊಳ್ಳ ಸಹಕಾರ ಸಭಾಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ,) ಕೋಟ ಹೋಬಳಿ ಶಾಖೆ ಹಮ್ಮಿಕೊಂಡ 25ನೇ ವರ್ಷದ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ “ಅಕ್ಷರದಕ್ಕರೆ – 2024” (ಎದೆಗೆ ಬೀಳಲಿ… ಅಕ್ಷರ) ಕಾರ್ಯಕ್ರಮವನ್ನು ಉದ್ಘಾಟಿಸಿ, ಡಾ.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

    ಶಿಕ್ಷಣ ಭ್ರಷ್ಟಾಚಾರದಿಂದಾಗಿ, ಖಾಸಗೀ ಶಿಕ್ಷಣ ಸಂಸ್ಥೆಗಳ ಲಾಭಿಯಿಂದಾಗಿ ಸರ್ಕಾರೀ ಶಾಲೆಗಳು ಮುಚ್ಚುವ ಸ್ಥಿತಿಗೆ ಬಂದಿವೆ. ಆದರೂ ಬದಿಗೊತ್ತಲ್ಪಟ್ಟ ಸಮಯದಾಯವೇ ಇರುವ ಸರ್ಕಾರೀ ಶಾಲೆಗಳ ವಿದ್ಯಾರ್ಥಿಗಳು ಇದೀಗ ಅತೀ ಹೆಚ್ಚು ಅಂಕಗಳನ್ನು ಪಡೆಯುತ್ತಿದ್ದಾರೆ. ಹಾಗಾಗಿ ಸರ್ಕಾರೀ ಶಾಲೆಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮದು ಎಂದರು.

    ಶಿಕ್ಷಣದ ಮೂಲಕ ಬೆಳೆದು ಅಸ್ಪೃಶ್ಯತೆ ನಿವಾರಣೆಯ ಪಣ ತೊಟ್ಟು ದಲಿತ ಸಮುದಾಯಗಳನ್ನು ಸಮಾನತೆಯತ್ತ ಕೊಂಡೊಯ್ಯುವಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಕಿಕೊಟ್ಟ ದಾರಿ ನಮಗೆಲ್ಲ ಆದರ್ಶ ಎಂದು ಉಚಿತ ನೋಟ್ ಪುಸ್ತಕಗಳನ್ನು ವಿತರಿಸಿದ ಗೀತಾ ಪೌಂಡೇಶನ್ ಕೋಟ ಮಣೂರು ಇದರ ಪ್ರವರ್ತಕ ಆನಂದ ಸಿ ಕುಂದರ್ ಹೇಳಿದರು.

    ಕಳೆದ 25 ವರ್ಷಗಳಿಂದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಕೋಟ ಹೋಬಳಿ ಶಾಖೆಯ ಕಳೆದ 25 ವರ್ಷಗಳ ಸಾಧನೆ ಹಾಗೂ ನಡೆದು ಬಂದ ದಾರಿಯನ್ನು ವಕೀಲ, ಜಿಲ್ಲಾ ಸಂ. ಸಂಚಾಲಕ ಟಿ. ಮಂಜುನಾಥ ಗಿಳಿಯಾರು ಪ್ರಾಸ್ತಾವಿಸಿ ಮಾತನಾಡಿದರು.

    ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟ ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ಡಾ| ಕೆ. ಕೃಷ್ಣ ಕಾಂಚನ್ ಅವರನ್ನು, ಯಕ್ಷಗಾನ ಭಾಗವತ ನವೀನ್ ಕೋಟ, ಡಾನ್ಸ್ ಕರ್ನಾಟಕ ಡಾನ್ಸ್ ಗೆ ಪ್ರವೇಶ ಪಡೆದ ನಿಖಿತಾ ಅವರನ್ನು ಸನ್ಮಾನಿಸಲಾಯಿತು. ಎಸ್.ಎಸ್.ಎಲ್.ಸಿ, ಪಿ.ಯುಸಿ ಹಾಗೂ ಪದವಿ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು.

    ಉಡುಪಿ ಜಿಲ್ಲಾ ಸಂಚಾಲಕ ಸುಂದರ್ ಮಾಸ್ಟರ್, ಜಿಲ್ಲಾ ಮಹಿಳಾ ಒಕ್ಕೂಟದ ಸಂಚಾಲಕಿ ಗೀತಾ ಸುರೇಶ್ ಕುಮಾರ್, ರಾಜ್ಯ ಸಮಿತಿ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಜಿಲ್ಲಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ, ವಾಸುದೇವ ಮುದೂರು, ಎನ್.ಎ. ನೇಜಾರು, ವಿವಿಧ ತಾಲೂಕುಗಳ ಸಂಚಾಲಕರಾದ ಕೆ.ಸಿ ರಾಜು ಬೆಟ್ಟನಮನೆ, ನಾಗರಾಜ ಉಪ್ಪುಂದ, ಶ್ರೀನಿವಾಸ ವಡ್ಡರ್ಸೆ, ಮಂಜುನಾಥ ನಾಗೂರು, ಸುರೇಶ ಹಕ್ಲಾಡಿ, ನಾಗರಾಜ ಸಟ್ವಾಡಿ, ಸುರೇಶ ಮೂಡುಬಗೆ, ಚಂದ್ರಶೇಖರ ಕೂರ್ಗಿ, ಪ್ರಭಾಕರ ಮಲೂರು, ಗಣೇಶ ಕಾರ್ತಟ್ಟು, ರವಿ ಹರ್ತಟ್ಟು. ಉಮೇಶ ಕೋಟತಟ್ಟು. ಕೃಷ್ಣ ಗಂಡಕೆರೆ, ಐತ ಕಾರ್ಕಡ, ಕರುಣಾಕರ ಕೆದೂರು. ಚೈತ್ರಾ ಮಣೂರು, ಸ್ವಪ್ಪಾ ರತ್ನಾಕರ ಮಧುವನ, ಸಕೇಶ ಉಪ್ಲಾಡಿ, ಗೋಪಾಲ ಗಿಳಿಯಾರು, ವಾಸುದೇವ ಗುಳ್ಳಾಡಿ, ಉಮೇಶ ಪಡುಕರೆ. ಮಹೇಶ ಕಾರ್ಕಡ, ಕುಸುಮ ಕಟ್ಕೆರೆ ಗಣೇಶ ಮಾಣಿಕಟ್ಟು. ಮಂಜುನಾಥ ಮಧುವನ, ಜೋಗಿ ಹೆಗ್ಗುಂಜೆ, ನಾಗೇಶ ಪಡುಕರೆ ಮೊದಲಾದವರು ಉಪಸ್ಥಿತರಿದ್ದರು.

    ಕೋಟ ಹೋಬಳಿ ಶಾಖೆಯ ಸಂಚಾಲಕ ನಾಗರಾಜ ಪಡುಕೆರೆ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ಯಾಮಸುಂದರ್ ತೆಕ್ಕಟ್ಟೆ ಸ್ವಾಗತಿಸಿದರು. ಅಕ್ಷರದಕ್ಕರೆಯ ಮಹತ್ವವನ್ನು ವಿವರಿಸಿದರು. ಜಿಲ್ಲಾ ಸಮಿತಿ ಸದಸ್ಯ ಕುಮಾರ್ ಕೋಟ ವಂದಿಸಿದರು. ಉಪನ್ಯಾಸಕರಾದ ಮಂಜುನಾಥ ಕೆ.ಎಸ್., ನಾಗರಾಜ ಗುಳ್ಳಾಡಿ, ಅದ್ಯಾಪಕ ಸಂತೋಷ ಕುಮಾರ್ ಪಡುಕೆರೆ ನಿರ್ವಹಿಸಿದರು.

  • ಕೋಟ :ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯತೆ ಇದೆ – ಡಾ.ಸುಮಂಗಲ

    ಕೋಟ :ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯತೆ ಇದೆ – ಡಾ.ಸುಮಂಗಲ

    ಪಂಚವರ್ಣ ಮಹಿಳಾ ಮಂಡಲದ ಅರಿವು ನಿಮ್ಮಗಿರಲಿ ನೆರವು 9ನೇ ಮಾಲಿಕೆ

    ಕುಂದಾಪುರ ಮಿರರ್ ‌ಸುದ್ದಿ…
    ಕೋಟ: ಮಹಿಳೆಯರು ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವ ಅಗತ್ಯತೆ ಇದೆ ಎಂದು ತೆಕ್ಕಟ್ಟೆ ಶ್ರೀ ದೇವಿ ಕ್ಲಿನಿಕ್ ವೈದ್ಯೆ ಡಾ.ಸುಮಂಗಲ ಹೇಳಿದರು.

    ಕೋಟದ ಪಂಚವರ್ಣ ಮಹಿಳಾ ಮಂಡದ ಆಶ್ರಯದಲ್ಲಿ ಮಾತೃ ಸಂಸ್ಥೆ ಪಂಚವರ್ಣ ಯುವಕ ಮಂಡಲ ಹಾಗೂ ಕೋಟ ಗ್ರಾ.ಪಂ ಸಹಯೋಗದೊಂದಿಗೆ ಅರಿವು ನಿಮ್ಮಗಿರಲಿ ನೆರವು 9ನೇ ಮಾಲಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾಹಿತಿ ನೀಡಿ ಪ್ರಸ್ತುತ ಕಾಲಘಟ್ಟದಲ್ಲಿ ಮಹಿಳೆಯರಿಗೆ ಸ್ತನ, ಗರ್ಭಕೋಶದ ಕ್ಯಾನ್ಸರ್ ಅತಿಯಾಗಿ ಕಾಣುತ್ತಿದ್ದೇವೆ. ದೈಹಿಕವಾಗಿ ವಿವಿಧ ರೋಗಗಳು ವ್ಯಾಪಿಸಿಕೊಳ್ಳುತ್ತಿದೆ ಇದರ ಭಾಗವಾಗಿ ನಮ್ಮ ಆಹಾರ ಕ್ರಮ, ದೈನಂದಿನ ಜೀವನ ಪದ್ದತಿಯ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯತೆಯನ್ನು ಒತ್ತಿ ಹೇಳಿದರು. ಮಾಸಿಕವಾಗಿರುವ ಕೆಲವು ಅಂಶಗಳ ಬಗ್ಗೆ ಮಾಹಿತಿ ನೀಡಿದ ಅವರು ಹದಿಹರೆಯದ ಮಕ್ಕಳ ಸಮಸ್ಯೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.

    ಕಾರ್ಯಕ್ರಮವನ್ನು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ ಉದ್ಘಾಟಿಸಿದರು.

    ಅಧ್ಯಕ್ಷತೆಯನ್ನು ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ವಹಿಸಿದ್ದರು.

    ಮುಖ್ಯ ಅಭ್ಯಾಗತರಾಗಿ ಕೋಟದ ಶಿಶು ಮಂದಿರ ವ್ಯವಸ್ಥಾಪಕಿ ಭಾಗ್ಯವಾದಿರಾಜ್, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್, ಕಾರ್ಕಡ ಗೆಳೆಯರ ಬಳಗ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ,ತರಬೇತುದಾರೆ ಆರತಿ ರಾಜ್ ಮತ್ತಿತರರು ಇದ್ದರು.

    ಪಂಚವರ್ಣ ಮಹಿಳಾ ಮಂಡಲ ಪ್ರಧಾನಕಾರ್ಯದರ್ಶಿ ವಸಂತಿ ಹಂದಟ್ಟು ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ಪ್ರಾಸ್ತಾವನೆ ಸಲ್ಲಿಸಿ ನಿರೂಪಿಸಿದರು. ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ವಂದಿಸಿದರು.

  • ಕೋಟ :ಬೇಸಿಗೆ ಶಿಬಿರದಲ್ಲಿ ಮಿಂದೆದ್ದ ಪಾಂಡೇಶ್ವರ ಶಿಬಿರಾರ್ಥಿ ಪುಟಾಣಿಗಳು

    ಕೋಟ :ಬೇಸಿಗೆ ಶಿಬಿರದಲ್ಲಿ ಮಿಂದೆದ್ದ ಪಾಂಡೇಶ್ವರ ಶಿಬಿರಾರ್ಥಿ ಪುಟಾಣಿಗಳು

    ಕುಂದಾಪುರ ಮಿರರ್ ಸುದ್ದಿ…

     

    ಕೋಟ: ಇಲ್ಲಿನ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಪಾಂಡೇಶ್ವರ, ಪಾಂಡೇಶ್ವರ ಗ್ರಾಮಪಂಚಾಯತ್, ಮಹಿಳಾ ಮಂಡಲ ಪಾಂಡೇಶ್ವರ, ಸ್ನೇಹ ಸಂಜೀವಿನಿ ಒಕ್ಕೂಟ ಇವರುಗಳ ಸಂಯುಕ್ತ ಆಶ್ರಯದಲ್ಲಿ ಒಂದು ವಾರಗಳ ಬೇಸಿಗೆ ಶಿಬಿರ ಶಿಬಿರಾರ್ಥಿ ಪುಟಾಣಿಗಳ ಕಲರವ ಮೈಳೈಸಿತು.

    ಉದ್ಘಾಟನೆಗೊಂಡ ದಿನದಿಂದ ಸಾಮಾನ್ಯವಾಗಿ ಒಂದನೇಯ ತರಗತಿ ಮಕ್ಕಳಿಂದ ಹಿಡಿದು 8ನೇ ತರಗತಿ ವರೆಗೆ ಶಿಬಿರಾರ್ಥಿ ಪುಟಾಣಿಗಳು ವಿವಿಧ ರೀತಿಯ ಚಟುವಟಿಯಲ್ಲಿ ತಮ್ಮ ಕ್ರೀಯಾಶೀಲತೆಯನ್ನು ಮೆರೆಯುವುದರೊಂದಿಗೆ ಕಲೆ, ಚಿತ್ರಕಲೆ, ನೃತ್ಯ, ಸಂಗೀತ, ಕವನ ರಚನೆ ಸೇರಿದಂತೆ ಪರಿಸರ ಜಾಗೃತಿ, ಸಾಹಿತ್ಯಿಕ ಚಟುವಟಿಕೆಗಳು ಶಿಬಿರದಲ್ಲಿ ವಿಶೇಷವಾಗಿ ಗಮನ ಸೆಳೆಯಿತು.

    ಮೊಬೈಲ್, ಟಿವಿ ತಂತ್ರಜ್ಞಾನ ಕಾಲಘಟ್ಟದಲ್ಲಿ ಮಕ್ಕಳನ್ನು ಒಂದೆಡೆ ಸೇರಿಸಿ ಅವರಿಗೆ ಬೇಕಾಗುವ ಉಪಯುಕ್ತ ಮಾಹಿತಿಯ ಜತೆಗೆ ಕ್ರೀಯಾಶೀಲತ್ವವನ್ನು ಮೈಗೂಡಿಸುವ ಕಾರ್ಯಕ್ರಮ ಗ್ರಾಮಸ್ಥರ ಪ್ರಶಂಸೆಗೆ ಪಾತ್ರವಾಯಿತು.

    ಸರಕಾರಿ ಕಾರ್ಯಕ್ರಮ
    ಗ್ರಂಥಾಲ ಏರ್ಪಡಿಸಿದ ಈ ಕಾರ್ಯಕ್ರಮ ಸರಕಾರಿ ಕಾರ್ಯಕ್ರಮವಾದರೂ ಖಾಸಗಿ ಶಿಬಿರಕ್ಕೆ ಸರಿಸಾಟಿ ಇಲ್ಲ ಎನ್ನುವಂತೆ ಮೈಳೈಸಿತು.ಮೇ ತಿಂಗಳ ರಜಾ ದಿನಗಳಲ್ಲಿ ಪುಟಾಣಿಗಳು ಶಿಬಿರವನ್ನು ಅರ್ಥಪೂರ್ಣವಾಗಿ ಕಳೆದರು. ಮಕ್ಕಳ ಮನೆಯವರಂತು ಸಮಾರೋಪದಲ್ಲಿ ಗ್ರಂಥಪಾಲಕಿ ಸೇರಿದಂತೆ ಆಯೋಜಕ ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.

    ಮಕ್ಕಳ ಮನೋವಿಕಾಸಕ್ಕೆ ನಾಂದಿ
    ಸಮಾರೋಪ ಕಾರ್ಯಕ್ರಮದಲ್ಲಿ ಮಹಿಳಾ ಮಂಡಲ ಪಾಂಡೇಶ್ವರ ಇದರ ಕಾರ್ಯದರ್ಶಿ ಜ್ಞಾನೇಶ್ವರಿ ಉಡುಪ ಮಾತನಾಡಿ ಮಕ್ಕಳ ಮನೋವಿಕಾಸಕ್ಕೆ ಶಿಬಿರಗಳು ಸಹಕಾರಿ ಪ್ರಸ್ತುತ ಆಂಗ್ಲ ಮಾಧ್ಯಮದ ವ್ಯಾಮೂಹದ ನಡುವೆಯೂ ಕನ್ನಡ ಮಾಧ್ಯಮದ ಮಕ್ಕಳ ಕ್ರೀಯಾಶೀಲತೆ ಅತ್ಯದ್ಭುತ, ಶಿಬಿರಗಳು ಸಾಹಿತಿಕ ಕೇಂದ್ರವಾಗಿ ಮಕ್ಕಳಲ್ಲಿ ಓದುವ ಹವ್ಯಾಸಕ್ಕೆ ನಾಂದಿಯಾಗಬೇಕು, ಮೊಬೈಲ್ ಗಳಿನಿಂದ ಹೊರಬರಬೇಕಾದರೆ ಇಂಥಹ ಶಿಬಿರಗಳು ಬಹುಪಾತ್ರ ವಹಿಸುತ್ತವೆ ಎಂದು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

    ಈ ಸಂದರ್ಭದಲ್ಲಿ ಪಾಂಡೇಶ್ವರ ಗ್ರಾಮಪಂಚಾಯತ್ ಉಪಾಧ್ಯಕ್ಷ ವೈ ಬಿ ರಾಘವೇಂದ್ರ, ವಿದ್ಯೋದಯ ಹಿರಿಯ ಪ್ರಾಥಮಿಕ ಶಾಲೆ ಯಡಬೆಟ್ಟು ಇದರ ಮುಖ್ಯ ಶಿಕ್ಷಕಿ ಇಂದಿರಾ, ಸಂಜೀವಿನಿ ಒಕ್ಕೂಟದ ಕವಿತಾ, ಪಾಂಡೇಶ್ವರ ಮಹಿಳಾ ಮಂಡಲದ ಅಧ್ಯಕ್ಷೆ ಸಂಪನ್ಮೂಲ ವ್ಯಕ್ತಿ ಸುಮಿತ್ರ ಸುಧಾಕರ್ ,ಗ್ರಂಥಪಾಲಕಿ ಜ್ಯೋತಿ , ಸಂಜೀವಿನಿ ಒಕ್ಕೂಟದ ಉಷಾ ಗಣೇಶ್ ಪೂಜಾರಿ, ಪಾಂಡೇಶ್ವರ ಗ್ರಾ.ಪಂ ಸದಸ್ಯೆ ಸುಜಾತ ವೆಂಕಟೇಶ ಇದ್ದರು.

  • “ಆಳ್ವಾಸ್ ಪ್ರಗತಿ -2024” – ಬೃಹತ್ ಉದ್ಯೋಗ ಮೇಳ: ಪ್ರಮುಖ ಉದ್ಯೋಗ ವಲಯಗಳಲ್ಲಿ ಸುವರ್ಣಾವಕಾಶಗಳು

    “ಆಳ್ವಾಸ್ ಪ್ರಗತಿ -2024” – ಬೃಹತ್ ಉದ್ಯೋಗ ಮೇಳ: ಪ್ರಮುಖ ಉದ್ಯೋಗ ವಲಯಗಳಲ್ಲಿ ಸುವರ್ಣಾವಕಾಶಗಳು

    ಕುಂದಾಪುರ ಮಿರರ್ ಸುದ್ದಿ…

    ಕುಂದಾಪುರ :ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಶೈಕ್ಷಣಿಕ ಕ್ಷೇತ್ರದ ಉತ್ಕೃಷ್ಟ ಉದಾಹರಣೆಯಾಗಿ, ಇಡೀ ದೇಶದಲ್ಲಿ ಕ್ರೀಡಾ ಹಾಗೂ ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಳಿಂದ ಹೆಗ್ಗುರುತಾಗಿ ಬೆಳೆಯುತ್ತಿದೆ. “ಆಳ್ವಾಸ್ ಪ್ರಗತಿ” ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು 2007ರಿಂದ ನಡೆಸಿಕೊಂಡು ಬರುತ್ತಿರುವ ಬೃಹತ್ ಉದ್ಯೋಗ ಮೇಳವಾಗಿದ್ದು, ಸಂಸ್ಥೆಯ ಸಿಎಸ್‍ಆರ್ ಚಟುವಟಿಕೆಯ ಭಾಗವಾಗಿ ಗ್ರಾಮೀಣ ಭಾಗದ ಪ್ರತಿಭಾವಂತ ಉದ್ಯೋಗಾಕಾಂಕ್ಷಿಗಳಿಗೆ ಉಚಿತವಾಗಿ ವಿಶೇಷ ಔದ್ಯೋಗಿಕ ನೆರವು ನೀಡುವ ಉದ್ದೇಶವನ್ನು ವ್ಯವಸ್ಥಿತವಾಗಿ ಪೂರೈಸುತ್ತಾ ಬಂದಿದ್ದು, ಜೂನ್ 7 ಹಾಗೂ 8ರಂದು ಇಲ್ಲಿನ ವಿದ್ಯಾಗಿರಿಯ ಕಾಲೇಜು ಆವರಣದಲ್ಲಿ ನಡೆಯಲಿದೆ ಎಂದು ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರಸಾದ್ ಶೆಟ್ಟಿ ತಿಳಿಸಿದರು.

    ಅವರು ಕುಂದಾಪುರದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

    ಆಳ್ವಾಸ್ ಶಿಕ್ಷಣ ಪತಿಷ್ಠಾನದವತಿಯಿಂದ ಆಯೋಜಿಸಲ್ಪಡುತ್ತಿರುವ ಬೃಹತ್ ಉದ್ಯೋಗ ಮೇಳ ಈ ಬಾರಿ 14ನೇ ಆವೃತ್ತಿಯದ್ದಾಗಿದೆ. ಬ್ಯಾಂಕಿಂಗ್ ಮತ್ತು ಹಣಕಾಸು, ಐಟಿ, ಐಟಿಎಸ್, ಮ್ಯಾನುಫ್ಯಾಕ್ಚರಿಂಗ್, ಹೆಲ್ತ್‌ಕೇರ್ ಮತ್ತು ಫಾರ್ಮಾ, ಮಾರಾಟ ಮತ್ತು ಚಿಲ್ಲರೆ ವ್ಯಾಪಾರ, ಆಟೋಮೊಬೈಲ್, ಹಾಸ್ಪಿಟಾಲಿಟಿ, ಟೆಲಿಕಾಂ, ಮಾಧ್ಯಮ, ಶಿಕ್ಷಣ ಮತ್ತು ಎನ್‍ಜಿಓಗಳನ್ನು ಪ್ರತಿನಿಧಿಸುವ ಉನ್ನತ ಕಂಪೆನಿಗಳು ಆಳ್ವಾಸ್ ಪ್ರಗತಿಯಲ್ಲಿ ನೇಮಕಾತಿ ನಡೆಸಲಿವೆ. ಈ ಕಂಪೆನಿಗಳು ಪದವಿ ಮತ್ತು ಸ್ನಾತಕೋತ್ತರ ಪದವೀಧರರು, ವೈದ್ಯಕೀಯ ಮತ್ತು ಪ್ಯಾರಾ ಮೆಡಿಕಲ್, ಇಂಜಿನಿಯರಿಂಗ್, ಕಲಾ, ವಾಣಿಜ್ಯ ಹಾಗೂ ಮ್ಯಾನೇಜ್‍ಮೆಂಟ್, ಬೇಸಿಕ್ ಸೈನ್ಸ್, ನರ್ಸಿಂಗ್, ಐಟಿಐ, ಡಿಪ್ಲೊಮಾ, ಪಿಯುಸಿ ಎಸ್‍ಎಸ್‍ಎಲ್‍ಸಿ ಹಾಗೂ ಇತರ ಅರ್ಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ ಎಂದರು.

    ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಕಂಪೆನಿಗಳ ವಿವರ ಹಾಗೂ ನವೀಕೃತ ಮಾಹಿತಿಗಳನ್ನು ಅಧಿಕೃತ ವೆಬ್‍ಸೈಟ್ www.alvaspragati.comನಲ್ಲಿ ಪ್ರಕಟಿಸಲಾಗಿದೆ. ಆಳ್ವಾಸ್ ಪ್ರಗತಿಯಲ್ಲಿ ಭಾಗವಹಿಸುವ ಎಲ್ಲಾ ಅಭ್ಯರ್ಥಿಗಳು ಈ ವೆಬ್‍ಸೈಟ್‍ನಲ್ಲಿ ಕಡ್ಡಾಯವಾಗಿ ಉಚಿತ ಆನ್‍ಲೈನ್ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅಲ್ಲದೇ ಆಳ್ವಾಸ್ ಸಂಸ್ಥೆಯ ಪರಿಣತ ತಂಡದಿಂದ `ಆಳ್ವಾಸ್ ಪ್ರಗತಿ’ಯಲ್ಲಿ ಉದ್ಯೋಗ ನೀಡುವ ಕಂಪೆನಿಗಳ ಮಾಹಿತಿ, ಸಂದರ್ಶನಾ ಕೌಶಲ್ಯಗಳ ತರಬೇತಿಯನ್ನು ವಿವಿಧ ಕಡೆಗಳಲ್ಲಿ ನೀಡಲಾಗುವುದು ಎಂದರು.
    200ಕ್ಕೂ ಅಧಿಕ ಕಂಪೆನಿಗಳು ಈ ಮೇಳದಲ್ಲಿ ಭಾಗವಹಿಸುವ ನಿರೀಕ್ಷೆ ಇರುವುದರಿಂದ ವಿವಿಧ ಕಾಲೇಜುಗಳ ಪ್ರಾಂಶುಪಾಲರಿಗೆ ಮುಂಚಿತವಾಗಿ ತಿಳಿಸಿ, ಅಲ್ಲಿನ ವಿದ್ಯಾರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಲು ಉತ್ತೇಜಿಸಲಾಗುತ್ತಿದೆ ಎಂದರು.

    ಆಳ್ವಾಸ್ ಪ್ರಗತಿಗೆ ಈವರೆಗೆ 134 ಕಂಪನಿಗಳು ನೋಂದಾಯಿಸಿಕೊಂಡಿದ್ದು ಮತ್ತು ಹೆಚ್ಚುವರಿಯಾಗಿ 70 ಕಂಪನಿಗಳು ಪಾಲ್ಗೊಳ್ಳುವ ಭರವಸೆ ನೀಡಿವೆ. ಒಟ್ಟು 200ಕ್ಕೂ ಅಧಿಕ ಕಂಪೆನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಎಂಬಿಎ, ಎಂ.ಕಾಂ, ಬಿ.ಕಾಂ, ಬಿಬಿಎ, ಬಿಎಸ್ಸಿ, ಬಿಎ, ಬಿಸಿಎ ಪದವೀಧರರು ಮತ್ತು ಸ್ನಾತಕೋತ್ತರ ಪದವೀಧರರಿಗೆ ಹೈದರಬಾದ್‍ನ ಫ್ಯಾಕ್ಟ್‍ಸೆಟ್ ಸಂಸ್ಥೆ, ಇಎಕ್ಸ್‍ಎಲ್ ಸರ್ವೀಸ್, ಮಹೀಂದ್ರಾ ಫಿನಾನ್ಸ್, ಪ್ರತಿಷ್ಠಿತ ಬ್ಯಾಂಕ್‍ಗಳಾದ ಎಚ್‍ಡಿಎಫ್‍ಸಿ, ಆ್ಯಕ್ಸಿಸ್, ಐಡಿಎಫ್‍ಸಿ ಫಸ್ಟ್ ಬ್ಯಾಂಕ್, ಬಂಧನ್ ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳು ಬಹುಅವಕಾಶಗಳನ್ನು ನೀಡಲಿವೆ.

    ಲಾಜಿಸ್ಟಿಕ್ ಸಪ್ಲೈ ಚೈನ್ ಕಂಪೆನಿ ಫ್ಲಿಪ್‍ಕಾರ್ಟ ಎಂಬಿಎ ಹಾಗೂ ಇಂಜಿನಿಯರಿಂಗ್ ಪದವೀಧರರಿಗೆ ಅವಕಾಶ ನೀಡಲಿದೆ. ಪ್ರತಿಷ್ಠಿತ ಇವೈ ಕಂಪೆನಿ ಬಿಕಾಂ ಹಾಗೂ ಎಂಬಿಎ ಪದವೀಧರರನ್ನು ನೇಮಿಸಿಕೊಳ್ಳಲಿದೆ. ಮ್ಯಾಕ್ಸ್ ಹೈಪರ್ ಮಾರ್ಕೆಟ್, ಜಾಯ್ ಅಲುಕ್ಕಾಸ್ ಯಾವುದೇ ಪದವಿ ಹಿನ್ನಲೆಯವರನ್ನು ನೇಮಕಾತಿ ಮಾಡಿಕೊಳ್ಳಲಿದೆ. ಅಮೆಜಾನ್ ಕಂಪೆನಿ ಯಾವುದೇ ಪದವಿ ಹಿನ್ನಲೆಯವರನ್ನು ಆಯ್ಕೆ ಮಾಡಿಕೊಳ್ಳಲಿದೆ. ಟೆಕ್ ಮಹೇಂದ್ರ, ಎಕ್ಸ್‍ರ್ಪಟೈಸ್ ಕಂಪೆನಿಯು ಇಂಜಿನಿಯರಿಂಗ್ ಪದವಿಯ ಉದ್ಯೋಗಾಕಾಂಕ್ಷಿಗಳನ್ನು ನೇಮಕ ಮಾಡಿಕೊಳ್ಳಲಿದೆ. ಉತ್ಪಾದನಾ ವಲಯದಲ್ಲಿ ಕಿರ್ಲೋಸ್ಕರ್ ಟೊಯೋಟಾ ಟೆಕ್ಸಟೈಲ್ ಮೆಷಿನರಿ, ಉಷಾ ಆರ್ಮರ್ ಮುಂತಾದ ಕಂಪೆನಿಗಳು ಭಾಗವಹಿಸಲಿವೆ. ಐಟಿ ವಲಯದಲ್ಲಿ ಇನ್ಫೋಮೆಟಿಕಾ, ಇಜಿಡಿಕೆ ಪ್ರೈ. ಲಿ, ವೆಲಂಕಣಿ ಸಾಫ್ಟವೇರ್ ಪ್ರೈ.ಲಿ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ದಿಯಾ ಸಿಸ್ಟಮ್ಸ್, 24*7, ಕಾನ್ಸೆಂಟ್ರಿಕ್ಸ್, ವಿನ್‍ಮ್ಯಾನ್ ಸಾಫ್ಟ್‍ವೇರ್ ಕಂಪೆನಿಗಳು ಯಾವುದೇ ಹಿನ್ನಲೆಯ ಪದವೀಧರರನ್ನು ನೇಮಿಸಿಕೊಳ್ಳಲಿವೆ. ಮಾರಾಟ ವಲಯದಲ್ಲಿ ಕಲ್ಟ್‍ಫಿಟ್, ಐಟಿಸಿ ಲಿಮಿಟೆಡ್, ಬ್ಲೂಸ್ಟೋನ್ ಜ್ಯುವೆಲ್ಲರಿಗಳು ಪದವೀಧರರಿಗೆ ಉದ್ಯೋಗ ನೀಡಲಿವೆ. ಅಜಾಕ್ಸ್ ಇಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ಬುಹ್ಲರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ನೆಕ್ಸ್ಟೀರ್ ಆಟೋಮೋಟಿವ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ವಂಡರ್ಲಾ ಹಾಲಿಡೇಸ್‍ನಂತಹ ಕಂಪೆನಿಗಳು ಮೆಕ್ಯಾನಿಕಲ್ ಇಂಜಿನಿಯರ್‍ಗಳಿಗೆ 50ಕ್ಕೂ ಹೆಚ್ಚಿನ ಉದ್ಯೋಗಾವಕಾಶ ನೀಡಲಿವೆ. ವೋಲ್ವೋಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮಹಿಳಾ ಮೆಕ್ಯಾನಿಕಲ್ ಪದವೀಧರರಿಗೆ ಉದ್ಯೋಗ ನೀಡಲಿದೆ. ಆ್ಯಂಥಮ್ ಬಯೋ, ರೆಸಿ ಫಾರ್ಮಾ, ಹೈದರಾಬಾದ್‍ನ ಎಂಎಸ್‍ಎನ್ ಲ್ಯಾಬೋರೇಟರೀಸ್ ಹಾಗೂ ಹಿಟಿರೋ ಲ್ಯಾಬ್ಸ್ ಎಂಎಸ್ಸಿ ಹಾಗೂ ಬಿಎಸ್ಸಿ ಪದವೀಧರರಿಗೆ ಉದ್ಯೋಗ ಕಲ್ಪಿಸಲಿವೆ. ಸನ್ಸೆರಾ ಇಂಜಿನಿಯರಿಂಗ್ ಲಿಮಿಟೆಡ್., ಏರೋಸ್ಪೇಸ್ ಡಿವಿಶನ್, ಸೆರಾಟಿಜಿಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಕಿರ್ಲೋಸ್ಕರ್ ಟೊಯೋಟಾ ಟೆಕ್ಸ್‍ಟೈಲ್ ಮೆಷಿನರಿ ಪ್ರೈ ಲಿಮಿಟೆಡ್, ವೋಲ್ವೋ ಗ್ರೂಪ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಸುಂದರಂ ಆಟೋ ಕಾಂಪೆÇನೆಂಟ್ಸ್ ಲಿಮಿಟೆಡ್, ಹಿಮಾಲಯ ವೆಲ್ನೆಸ್, ಮಾಂಡೋವಿ ಮೋಟಾರ್ಸ್, ಪ್ರಥಮ್ ಮೋಟಾರ್ಸ್, ಅರವಿಂದ್ ಮೋಟಾರ್ಸ್, ಸುಪ್ರೀಮ್ ಆಟೋ ಮತ್ತು ಇನ್ನೂ ಅನೇಕ ಕಂಪೆನಿಗಳು ಐಟಿಐ ಹಾಗೂ ಡಿಪ್ಲೊಮೋ ಅಭ್ಯರ್ಥಿಗಳಿಗೆ ಉದ್ಯೋಗ ನೀಡಲಿವೆ.
    ನರ್ಸಿಂಗ್ ಪದವೀಧರ ಅಭ್ಯರ್ಥಿಗಳಿಗೆ ಪ್ರಮುಖ ಆಸ್ಪತ್ರೆಗಳಾದ ಹಿರಾನಂದನಿ ಆಸ್ಪತ್ರೆ, ಮುಂಬೈಯ ಅಪೆÇಲೊ ಆಸ್ಪತ್ರೆ, ಕೆಎಂಸಿ ಆಸ್ಪತ್ರೆ ಹಾಗೂ ಇನ್ನಿತರ ವೈದ್ಯಕೀಯ ಸಂಸ್ಥೆಗಳು ಉದ್ಯೋಗ ನೀಡಲಿವೆ. ಎಂದರು.
    ಈ ತನಕ 31,896 ಉದ್ಯೋಗಗವಕಾಶ:
    ಸಂಸ್ಥೆಯು ಈವರೆಗೆ 20 ಬೃಹತ್ ಉದ್ಯೋಗ ಮೇಳಗಳನ್ನು ಬಹಳ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದೆ. ಸರ್ಕಾರ ಮತ್ತು ಸಾಮಾಜಿಕ ಸಂಸ್ಥೆಗಳ ಸಹಯೋಗದೊಂದಿಗೆ ಚಿಕ್ಕಬಳ್ಳಾಪುರ, ಮಂಗಳೂರು, ಬೆಳ್ತಂಗಡಿ ಮತ್ತು ಬಂಟ್ವಾಳ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಉದ್ಯೋಗ ಮೇಳಗಳನ್ನು ಆಯೋಜಿಸಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಇದಕ್ಕಾಗಿ ಈವರೆಗೆ ಸುಮಾರು 5 ಕೋಟಿಗಳಷ್ಟು ಹಣವನ್ನು ವ್ಯಯಿಸಿದೆ. ಕರ್ನಾಟಕವು ಸೇರಿದಂತೆ ಕೇರಳ, ತಮಿಳುನಾಡು ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಅಭ್ಯರ್ಥಿಗಳು ಈ ಉದ್ಯೋಗ ಮೇಳದ ಹೆಚ್ಚಿನ ಲಾಭ ಪಡೆದಿದ್ದಾರೆ. ಒಟ್ಟು 1,60,000 ಆಕಾಂಕ್ಷಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರೆ, 55,564 ಅಭ್ಯರ್ಥಿಗಳು ವಿವಿಧ ಕಂಪೆನಿಗಳಿಗೆ ಶಾರ್ಟ್ ಲೀಸ್ಟ್ ಗೊಂಡಿದ್ದಾರೆ. ಪ್ರತೀ ಉದ್ಯೋಗ ಮೇಳದಲ್ಲಿ ಸುಮಾರು 200ರಷ್ಟು ಪ್ರತಿಷ್ಠಿತ ಕಂಪನಿಗಳು ಪಾಲ್ಗೊಂಡು, ಇಲ್ಲಿವರೆಗೆ ಒಟ್ಟು 31,896 ಉದ್ಯೋಗಗಳನ್ನು ನೀಡಿವೆ. ಆಳ್ವಾಸ್ ಪ್ರಗತಿಯಲ್ಲಿ ನಿರುದ್ಯೋಗ ಪರಿಹರಿಸುವ ಪ್ರಭಾವಶಾಲಿ ಪ್ರಯತ್ನವನ್ನು ಫ್ರಾನ್ಸ್ ಟಿವಿ ಸೇರಿದಂತೆ ವಿವಿಧ ಮಾಧ್ಯಮಗಳು ಗಮನ ಸೆಳೆದಿವೆ ಎಂದರು.

    ವಿಶೇಷ ಸೂಚನೆ:
    ಹೊರ ಜಿಲ್ಲೆಗಳಿಂದ ಬರುವ ಉದ್ಯೋಗಾಕಾಂಕ್ಷಿಗಳಿಗೆ ಜೂನ್ 6ರಿಂದ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಐಟಿಐ, ಡಿಪ್ಲೋಮಾ ಹಿನ್ನಲೆಯವರಿಗೆ ಆಳ್ವಾಸ್‍ನಿಂದ ಬಸ್ಸಿನ ವ್ಯವಸ್ಥೆ ಒದಗಿಸಲಾಗುವುದು.

    ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
    9008907716, 9663190590, 7975223865, 9741440490. ಅಭ್ಯರ್ಥಿಗಳ ನೊಂದಾವಣೆ ಹಾಗೂ ಉದ್ಯೋಗ ನೀಡಲಿರುವ ಕಂಪೆನಿಗಳ ಮಾಹಿತಿಗೆ:www.alvaspragati.com
    ಕಂಪೆನಿಗಳ ನೊಂದಾವಣೆ ಹಾಗೂ ಇತರ ಮಾಹಿತಿಗೆ: 8971250414 ಸಂಪರ್ಕಿಸಬಹುದು ಎಂದರು.

    ಅಭ್ಯರ್ಥಿಗಳು ಲಗತ್ತಿಸಬೇಕಾದ ಅಗತ್ಯ ದಾಖಲಾತಿಗಳು:
    *5-10 ಪಾಸ್‍ಪೋರ್ಟ್ ಭಾವಚಿತ್ರಗಳು

    *ಸಂಪೂರ್ಣ ಶೈಕ್ಷಣಿಕ ಮಾಹಿತಿಗಳನ್ನೊಳಗೊಂಡ ರೆಸ್ಯೂಮೆ

    *ಅಂಕ ಪಟ್ಟಿಗಳು (ನೆರಳಚ್ಚು ಪ್ರತಿಗಳು) (XEROX)

    *ಆನ್‍ಲೈನ್ ರಿಜಿಸ್ಟ್ರೇಶನ್ ನಂಬರ್/ಐಡಿ

    * ಅಭ್ಯರ್ಥಿಗಳು ಉದ್ಯೋಗ ಮೇಳದಂದು ಬೆಳಿಗ್ಗೆ 8 ಗಂಟೆಗೆ ವಿದ್ಯಾಗಿರಿ ಕ್ಯಾಂಪಸ್‍ನಲ್ಲಿ ಹಾಜರಿರಬೇಕು.

    ಸುದ್ಧಿಗೋಷ್ಠಿಯಲ್ಲಿ ಆಳ್ವಾಸ್ ಪ್ರಗತಿ 2024ರ ಐಟಿಇಎಸ್ ಸೆಕ್ಟರ್ ಮುಖ್ಯಸ್ಥರಾದ ಡಾ.ಗುರುಪ್ರಸಾದ್ ಪೈ ಬಿ ಉಪಸ್ಥಿತರಿದ್ದರು.

  • ಕುಂದಾಪುರ ತಾಲೂಕು ಆಸ್ಪತ್ರೆ ಅವ್ಯವಸ್ಥೆಯ ಆಗರ: ಕ್ರಮಕ್ಕೆ ಸ್ಥಳೀಯರ ಆಗ್ರಹ

    ಕುಂದಾಪುರ ತಾಲೂಕು ಆಸ್ಪತ್ರೆ ಅವ್ಯವಸ್ಥೆಯ ಆಗರ: ಕ್ರಮಕ್ಕೆ ಸ್ಥಳೀಯರ ಆಗ್ರಹ

    ಕುಂದಾಪುರ ಮಿರರ್ ಸುದ್ದಿ…
    ಕುಂದಾಪುರ: ಕುಂದಾಪುರ ತಾಲೂಕು ಆಸ್ಪತ್ರೆ ಸಂಪೂರ್ಣವಾಗಿ ಅವ್ಯವಸ್ಥೆಯಿಂದ ಕೂಡಿದ್ದಲ್ಲದೇ ಆಸ್ಪತ್ರೆ ಕೊಳಚೆ ನೀರಿನಿಂದ ಸ್ಥಳೀಯರಿಗೆ ಸಮಸ್ಯೆ ಉಂಟಾಗುತ್ತಿದೆ ಸ್ಥಳೀಯ ನಿವಾಸಿ ರತ್ನಾಕರ ಶೆಟ್ಟಿ ಹಾಗೂ ನೆರೆಕರೆಯವರು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಲಿಖಿತ ಮನವಿ ನೀಡಿದ್ದಾರೆ.
    ಸರ್ಕಾರಿ ಆಸ್ಪತ್ರೆಯ ಕೊಳಚೆ ನೀರನ್ನು ಯಾವುದೇ ಶುಚಿಗೊಳಿಸದೇ ನೇರವಾಗಿ ರಸ್ತೆ ಬದಿಯ ಸಾರ್ವಜನಿಕ ತೋಡಿಗೆ ಹರಿ ಬಿಡುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಆರೋಪಿಸಲಾಗಿದೆ. ಅಲ್ಲದೇ ಅಸ್ಪತ್ರೆಯ ಹಿಂಭಾಗದಲ್ಲಿರುವ ಸಾರ್ವಜನಿಕ ಚರಂಡಿಯನ್ನೂ ತಕ್ಷಣ ಸರಿಪಡಿಸಬೇಕು ಎಂದಿದ್ದಾರೆ.
    ಸರ್ಕಾರೀ ಆಸ್ಪತ್ರೆಯ ಅಪರೇಶನ್ ಕೊಠಡಿಯಲ್ಲಿ ಸರಿಯಾದ ವ್ಯವಸ್ಥೆ ಇರುವುದಿಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸೆಗೆ ಸರಿಯಾದ ಮಾರ್ಗದರ್ಶನ ನೀಡುವ ಸಂಪರ್ಕ ಅಧಿಕಾರಿ ಇರುವುದಿಲ್ಲ, ನಿಯೋಜಿತ ವೈದ್ಯಾಧಿಕಾರಿ, ಕರ್ತವ್ಯ ನಿರ್ವಹಿಸದೆ ಆಸ್ಪತ್ರೆಯನ್ನು ಅವ್ಯವಸ್ಥೆಗೊಳಿಸಿದ್ದು, ತಕ್ಷಣ ಆಡಳಿತ ಮಂಡಳಿ ಮುಖ್ಯಸ್ಥರನ್ನು ಬದಲಾಯಿಸಬೇಕು ಆಗ್ರಹಿಸಿದ್ದಾರೆ.
    ಉತ್ತಮ ಆಡಳಿತ ನಿರ್ವಹಣೆ ಮಾಡುವ ವೈದ್ಯಾಧಿಕಾರಿಯನ್ನು ನೇಮಿಸಬೇಕಾಗಿ ಜಿಲ್ಲಾ ಮುಖ್ಯಸ್ಥ ವೈದ್ಯಾಧಿಕಾರಿಯಲ್ಲಿ ನಮ್ಮ ಮನವಿಯನ್ನು ಸಲ್ಲಿಸುತ್ತೇವೆ. ಅತೀ ಶಿಘ್ರವಾಗಿ ಸಾರ್ವಜನಿಕರ ಈ ಅಹವಾಲನ್ನು ತಕ್ಷಣ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ಆಗು-ಹೋಗುಗಳಿಗೆ ನೀವೆ ಹೊಣೆಗಾರರಾಗುತ್ತೀರಿ ಎಂದು ಎಚ್ಚರಿಸಿದ್ದಾರೆ.