ತಹಸೀಲ್ದಾರ್ ರಿಂದ ಜೂ.10ರಂದು ಜಂಟೀ ಸಭೆಯ ಭರವಸೆ ಹಿನ್ನೆಲೆ ಪ್ರತಿಭಟನೆ ವಾಪಾಸ್

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಆಲೂರು ಕೊರಗ ಸಮುದಾಯದವರಿಗೆ ಡಾ. ಮಹಮ್ಮದ್ ಫೀರ್ ವರದಿ ಪ್ರಕಾರ ಭೂಮಿ ನೀಡಲು ಕಂದಾಯ ಇಲಾಖೆ ಹಾಗೂ ಸರ್ವೆ ಇಲಾಖೆಯ ವಿಳಂಬ ನೀತಿಯನ್ನು ಖಂಡಿಸಿ ಸೋಮವಾರ ಆಲೂರು ಗ್ರಾಮ ಪಂಚಾಯತ್ ಎದುರು ಕರ್ನಾಟಕ ಆದಿವಾಸಿ ಪಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಸಂಘಟನಾ ಸಮಿತಿ, ಉಡುಪಿ. ಇವರ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ಸಂದರ್ಭ ಮಾತನಾಡಿದ ಜಿಲ್ಲಾ ಸಂಚಾಲಕ ಶ್ರೀಧರ ನಾಡಾ, ಡಾ. ಮಹಮ್ಮದ್ ಪೀರ್ ವರದಿ ಪ್ರಕಾರ ಕುಂದಾಪುರ ತಾಲೂಕಿನ ಆಲೂರು ಗಾಮ ಪಂಚಾಯತ್ ವ್ಯಾಪಿಯ ಕೊರಗ ಕುಟುಂಬಗಳಿಗೆ ತಲಾ ಒಂದು ಎಕರೆಯಂತೆ ಭೂಮಿ ನೀಡಲು ಈ ಹಿಂದೆ ಆಲೂರು ಗ್ರಾಮ ಪಂಚಾಯತ್ ಎದುರು ನಡೆದ ಪ್ರತಿಭಟನೆಯ ಪರಿಣಾಮ ಒಂದನೇ ಹಂತದಲ್ಲಿ 10 ಎಕರೆ ಭೂಮಿ ಸರ್ವೆ ನಡೆಸಿ ಭೂಮಿ ಗುರುತಿಸಲಾಗಿತ್ತು. ಈವರೆಗೆ ಸರ್ವೆ ಆಗಿರುವ 10 ಎಕರೆ ಭೂಮಿ ಕೇವಲ 8 ಕೊರಗ ಕುಟುಂಬಗಳಿಗೆ ಮಾತ್ರ ಪ್ರಯೋಜನವಾಗಿದ್ದು, 2 ನೇ ಹಂತದಲ್ಲಿ ಆಲೂರು ಗ್ರಾಮದಲ್ಲಿ 7 ಎಕರೆ ಮತ್ತು ಹರ್ಕೂರು ಗ್ರಾಮದಲ್ಲಿ 5 ಎಕರೆ ಲಭ್ಯವಿರುವ ಸರ್ಕಾರಿ ಭೂಮಿಯ ದಾಖಲೆಯೋಂದಿಗೆ ಈಗಾಗಲೇ ಸರ್ವೆ ನಡೆಸಲು ಕುಂದಾಪುರ ತಹಶಿಲ್ದಾರ್ ಕ್ರಮ ವಹಿಸಿ ಹತ್ತು ತಿಂಗಳು ಕಳೆದರು ಸರ್ವೆ ಇಲಾಖೆ ಸರ್ವೆ ನಡೆಸಿಲಿಲ್ಲ ಎಂದು ಆರೋಪಿಸಿದರು.
ಕೊರಗ ಸಮುದಾಯದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಕುಂದುಕೊರತೆ ಸಭೆಯಲ್ಲಿ ನಮ್ಮ ಆಹವಾಲು ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಆಲೂರಿನ ಒಡೆಯರ ಭೂಮಿಯಲ್ಲಿ ವಾಸವಿರುವ 3 ಕೊರಗ ಕುಟುಂಬಗಳಿಗೆ ಅವರ ಹೆಸರಿಗೆ ಭೂಮಿ ಮಾಡಿಕೊಡುವ ಭರವಸೆ ನೀಡಿ 2 ವರ್ಷ ಕಳೆದರೂ ಇದುವರೆಗೆ ಭರವಸೆ ಈಡೇರಿಲ್ಲ ಎಂದ ಅವರು, 2016 ರಿಂದ ಭೂಮಿಗಾಗಿ ಹೋರಾಟ ಮಾಡುತ್ತಾ ಬೇಡಿಕೆ ಸಲ್ಲಿಸಿದರು ಇದುವರೆಗೆ ಭೂಮಿ ನೀಡಲು ವಿಳಂಬ ಮಾಡಲಾಗುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.
ಸ್ಥಳಕ್ಕಾಗಮಿಸಿದ ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಮಾತನಾಡಿದ ಅವರು, ಚುನಾವಣಾ ನೀತಿ ಸಂಹಿತೆ ಜ್ಯಾರಿಯಲ್ಲಿರುವುದರಿಂದ ಜೂನ್ 10 ರಂದು ಜಂಟೀ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದರು.
ಈ ಸಂದರ್ಭ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ತೀರ್ಮಾನ ಕೈಗೊಂಡ ಪ್ರತಿಭಟನಾಕಾರರು, ಒಂದು ವೇಳೆ ಜೂನ್ 10ರಂದು ಸಮಸ್ತೆ ಬಗೆಹರಿಯದೇ ಇದ್ದಲ್ಲಿ ಅದೇ ದಿನ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪ್ರತಿಭಟನೆಯ ಸಂದರ್ಭ ರಾಜ್ಯ ಸಮಿತಿ ಸದಸ್ಯರಾದ ಕೃಷ್ಣಾ ಇನ್ನಾ ಹಾಗೂ ಗಣೇಶ್ ಆಲೂರು, ಆಲೂರು ಘಟಕ ಸಂಚಾಲಕಿ ರೇವತಿ ಆಲೂರು, ರಾಜು ಬೆಟ್ಟಿನ ಮನೆ, ರಾಜೀವ್ ಪಡುಕೋಣೆ ಹಾಗೂ ಕೊರಗ ಸಮುದಾಯ ಆಲೂರು, ಗ್ರಾ.ಪಂ.ಪಿಡಿಓ ರೂಪಾ ಗೋಪಿ, ಗ್ರಾ.ಪಂ.ಅಧ್ಯಕ್ಷ ರಾಜೇಶ್ ಎನ್. ದೇವಾಡಿಗ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರವಿ ಶೆಟ್ಟಿ, ವಂಡ್ಸೆ ಕಂದಾಯ ಇಲಾಖೆ ಅಧಿಕಾರಿ ರಾಘವೇಂದ್ರ, ಭೂ ಪರಿವೀಕ್ಷಣಾಧಿಕಾರಿ ವಾಲೇಕರ್ ಈ ಸಂದರ್ಭ ಹಾಜರಿದ್ದರು.











