ಕೊಡ್ಲಾಡಿ :ಗುರುಕುಲ ಸಂಸ್ಥೆಯಿಂದ ಕೊಡ್ಲಾಡಿ ಸರ್ಕಾರಿ ಶಾಲೆಯ ನೂತನ ಕಟ್ಟಡ ‘ಕದಂಬ’ ಲೋಕಾರ್ಪಣೆ

0
416

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕೊಡ್ಲಾಡಿ: ಕಲಿಕೆಗೆ ಭಾಷೆ ಎಂದಿಗೂ ಅಡ್ಡಿಯಾಗಲ್ಲ. ಅದರಲ್ಲೂ ಚೀನಾ, ಜಪಾನ್‌ನಂತಹ ದೇಶಗಳು ಮಾತೃಭಾಷೆಯಲ್ಲಿಯೇ ಉನ್ನತ ಶಿಕ್ಷಣವನ್ನು ಬೋಧಿಸುತ್ತಿದೆ. ಆದರೆ ನಮ್ಮಲ್ಲಿ ಕನ್ನಡ ಶಾಲೆಗಳು ಕಳೆಗುಂದುತ್ತಿರುವುದು ಬೇಸರದ ಸಂಗತಿ. ಕನ್ನಡ ಶಾಲೆಗಳನ್ನು ಹೆಚ್ಚಿಸುವ ಬದಲು ಇರುವುದನ್ನು ಉಳಿಸಿಕೊಂಡು, ಉನ್ನತೀಕರಣಗೊಳಿಸುವುದು ಇಂದಿನ ಅಗತ್ಯ. ತರಗತಿಗೊಬ್ಬರು ಶಿಕ್ಷಕರನ್ನು ನೀಡುವ ಯೋಗ್ಯತೆಯಿಲ್ಲದ ಸರಕಾರದಿಂದ ಪ್ರಗತಿ ಹೇಗೆ ಸಾಧ್ಯ ಎಂದು ಮೂಡಬಿದಿರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಪ್ರಶ್ನಿಸಿದರು.

ಅವರು ಶನಿವಾರ ಸಂಜೆ ಬಾಂಡ್ಯ ಎಜುಕೇಶನಲ್ ಟ್ರಸ್ಟ್‌ನ ವಕ್ವಾಡಿ ಗುರುಕುಲ ಪಬ್ಲಿಕ್ ಶಾಲೆಯಿಂದ ದತ್ತು ಸ್ವೀಕೃತವಾದ ಕೊಡ್ಲಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುಕುಲ ಸಂಸ್ಥೆಯಿಂದ ಕೊಡಮಾಡಿದ ನೂತನ ಶಾಲಾ ಕಟ್ಟಡ ‘ಕದಂಬ’ ವನ್ನು ಲೋಕಾರ್ಪಣೆಗೊಳಿಸಿ, ಮಾತನಾಡಿದರು.

ಪೂರ್ವಜರ ಚಿಂತನೆಯ ಕನ್ನಡ ಶಾಲೆಗಳನ್ನು ಕಾಲ-ಕಾಲಕ್ಕೆ ಅಭಿವೃದ್ಧಿ ಪಡಿಸುವ ಕೆಲಸ ಊರವರದು. ಸಮಾಜದ ಪರಿಕಲ್ಪನೆ ಕೇವಲ ಸರಕಾರಕ್ಕೆ ಮಾತ್ರವಲ್ಲ, ಎಲ್ಲರಲ್ಲಿಯೂ ಇರಬೇಕು. ತನ್ನೂರಿನ ಶಾಲಾಭಿವೃದ್ಧಿಗೆ ಮುಂದಾಗಿರುವ ಸುಭಾಶ್ಚಂದ್ರ ಶೆಟ್ಟಿ ಹಾಗೂ ಅನುಪಮ ಶೆಟ್ಟಿಯವರ ಗುರುಕುಲ ಸಂಸ್ಥೆಯ ಕಾರ್ಯ ಮಾದರಿಯಾಗಿದ್ದು, ದೇವರು ಮೆಚ್ಚುವ ಕೆಲಸ ಎಂದು ಶ್ಲಾಘಿಸಿದ ಅವರು, ಅನೇಕ ವರ್ಷಗಳಿಂದ ಉಚಿತವಾಗಿ ನಡೆಸುತ್ತಿರುವ ಕನ್ನಡ ಶಾಲೆಯ ಫಲಿತಾಂಶ ಉನ್ನತವಾಗಿದ್ದು, ನಮ್ಮ ಇತರೆ ಶಿಕ್ಷಣ ಸಂಸ್ಥೆಗಳಿಗಿಂತ ಈ ಶಾಲೆ ಬಗ್ಗೆ ಅತೀವ ಪ್ರೀತಿ ಎಂದರು.

Click Here

ಆರೆಸ್ಸೆಸ್ ಮಂಗಳೂರು ವಿಭಾಗ ಕಾರ್ಯವಾಹ ಡಾ| ವಾದಿರಾಜ ಗೋಪಾಡಿ ಮಾತನಾಡಿ, ಇಂದಿನ ಸಾಧಕರ ಪಟ್ಟಿಯಲ್ಲಿ ಸಿಗುವ ಬಹುತೇಕರು ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಶಾಲೆಯಲ್ಲಿ ಓದಿದವರಾಗಿದ್ದಾರೆ. ಕನ್ನಡ ಎನ್ನುವುದು ಕೇವಲ ಭಾಷೆಯಾಗಿರದೇ ಸಂಸ್ಕೃತಿಯ ಪ್ರತೀಕವಾಗಿದೆ. ಭಾವನೆ ಸಹಿತ ಅನೇಕ ಸಂಗತಿಗಳನ್ನು ವ್ಯಕ್ತಪಡಿಸಲು ಮಾತೃಭಾಷೆಯಾದ ಕನ್ನಡದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಗುರುಕುಲ ವಿದ್ಯಾಸಂಸ್ಥೆಯು ಕನ್ನಡ ಶಾಲೆಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ಶಿಕ್ಷಣ ನಾಲ್ಕು ಗೋಡೆಗೆ ಸೀಮಿತವಾಗಿರಬಾರದು. ರಾಜರ ಆಳ್ವಿಕೆಯಲ್ಲಿ ಸಮಾಜದ ಮೇಲೆ ಯಾವುದೇ ದುಷ್ಪರಿಣಾಮಗಳಿರಲಿಲ್ಲ. ಆದರೆ ರಾಜಕೀಯ ವ್ಯವಸ್ಥೆಯಲ್ಲಿ ಅದು ಬದಲಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಸಂಸ್ಥಾಪಕ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಬಾಂಡ್ಯ ಸುಬ್ಬಣ್ಣ ಶೆಟ್ಟಿ, ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಅನುಪಮ ಎಸ್. ಶೆಟ್ಟಿ ಉಪಸ್ಥಿತರಿದ್ದರು.

ಗುರುಕುಲ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಕೆ.ಸಿ. ರಾಜೇಶ್ ಪ್ರಸ್ತಾವಿಸಿ, ಶಾಲಾ ಮುಖ್ಯೋಪಾಧ್ಯಾಯ ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಗುರುಕುಲ ಪಬ್ಲಿಕ್ ಶಾಲಾ ಸಂಯೋಜಕಿ ವಿಶಾಲಾ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿ, ಸಹ ಶಿಕ್ಷಕಿ ಆಶ್ರಿತಾ ವಂದಿಸಿದರು.

Click Here

LEAVE A REPLY

Please enter your comment!
Please enter your name here