ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಗಾಳಿಗೊಡ್ಡಿದ ದೀಪದಂತೆ ಬೆಳಗುವುದನ್ನು ಸವಾಲಾಗಿ ಸ್ವೀಕರಿಸಿದಾಗ ಸುತ್ತಲೂ ಬೆಳಕಾಗುತ್ತದೆ. ದೀಪ ಗಾಳಿಯ ಜೊತೆಗೆ ಸೆಣಸುತ್ತಾ ಸಮಾಜಕ್ಕೆ ಬೆಳಕು ನೀಡುವಂತೆ ಮನುಷ್ಯನೂ ಬದುಕಿನೊಂದಿಗೆ ಸೆಣಸುತ್ತಾ ಸಮಾಜಕ್ಕೆ ಬೆಳಕಾದಾಗ ಜನ್ಮ ಸಾರ್ಥಕವಾಗುತ್ತದೆ ಎಂದು ಬಾರ್ಕೂರು ಇಗರ್ಜಿಯ ಧರ್ಮ ಗುರು ರೆ. ಫಾ. ಫಿಲಿಪ್ ನೇರಿ ಆರನ್ಹಾ ಹೇಳಿದರು.
ಅವರು ಪಡುಕೋಣೆ ಗ್ರೆಗರಿ ಪ್ರೌಢಶಾಲೆ ಮೈದಾನದಲ್ಲಿ ಪಡುಕೋಣೆ ಎಜುಕೇಶನ್ ಮತ್ತು ಸ್ಪೋರ್ಟ್ಸ್ ಪ್ರಮೋರ್ಟ್ಸ್ ವತಿಯಿಂದ ದಿವಂಗತ ಸುರೇಶ ಪಡುಕೋಣೆ ಹಾಗೂ ದಿವಂಗತ ಪ್ರಭು ಆರ್ಥರ್ ಪೀರೇರಾ ಇವರ ಸ್ಮರಣಾರ್ಥ ನಡೆದ ವಾಲಿಬಾಲ್ ಹಾಗೂ ಕ್ರಿಕೆಟ್ ಪಂದ್ಯಾಟ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಸಮಾರಂಭ ಉದ್ಘಾಟಿಸಿ ಮುಂಬೈ ಉದ್ಯಮಿ ನಾಗರಾಜ್ ಪಡುಕೋಣೆ ಮಾತನಾಡಿ, ಪಡುಕೋಣೆ ಊರಿನ ಹೆಸರನ್ನು ಜಗದಗಲ ಪಸರಿಸಬೇಕು ಇಲ್ಲಿಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಶಿಕ್ಷಣ ಹಾಗೂ ಕ್ರೀಡಾ ಪಟುಗಳಿಗೆ ಹೆಚ್ಚಿನ ನೆರವು ನೀಡಬೇಕು ಎನ್ನುವ ಉದ್ದೇಶದಿಂದ ಹುಟ್ಟಿಕೊಂಡ ಪಡುಕೋಣೆ ಎಜುಕೇಶನ್ ಮತ್ತು ಸ್ಪೋರ್ಟ್ಸ್ ಪ್ರಮೋರ್ಟ್ಸ್ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಪಡುಕೋಣೆ ಇಗರ್ಜಿಯ ಧರ್ಮಗುರು ರೆ. ಫಾ. ಫ್ರಾನ್ಸಿಸ್ ಕರ್ನೆಲಿಯೋ ಅಧ್ಯಕ್ಷತೆವಹಿಸಿದ್ದರು. ಮುಂಬೈ ಹೋಟೆಲ್ ಉದ್ಯಮಿ ಸುರೇಶ್ ಪೂಜಾರಿ, ನಾಡ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಶೆಟ್ಟಿ ಬಡಾಕೆರೆ, ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಫಿಲಿಪ್ ಡಿ ಸಿಲ್ವ, ಬೆಂಗಳೂರು ಹೋಟೆಲ್ ಉದ್ಯಮಿ ದಿನಕರ ಶೆಟ್ಟಿ, ಮುಂಬೈ ಉದ್ಯಮಿ ಒಸ್ವಲ್ಡ್ ಫ್ರಾನ್ಸಿಸ್ ಡಿ’ಸೋಜ, ಹಾಸನ ಉದ್ಯಮಿ ಪ್ರತೀಶ್ ಕುಮಾರ್ ಶೆಟ್ಟಿ, ಬೆಂಗಳೂರು ಉದ್ಯಮಿ ಶಿವ ಪೂಜಾರಿ ಆನಗೋಡ, ಕುಸುಮ ನಾಗರಾಜ್ ಪಡುಕೋಣೆ,ಊರಿನ ಹಿರಿಯರಾದ ಅನಂತ ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭ ಸಮಾಜ ಸೇವಕರಾದ ನಾಗರಾಜ್ ಪಡುಕೋಣೆ, ವೆನಾನ್ಸಿಯಸ್ ಪಿರೇರ, ಸುರೇಶ ಎಸ್ ಪಡುಕೋಣೆ ಹಾಗೂ ವಾಲಿಬಾಲ್ ಆಟಗಾರ ವಿನೀಶ್ ಡಿ’ಸೋಜ, ಕುಸ್ತಿ ಪಟು ನಿಶ್ಚಲ್ ಡಿ’ಸೋಜರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸ್ಥಾಪಕಾಧ್ಯಕ್ಷ ಜೋಸೆಫ್ ಡಿ ‘ಸಿಲ್ವ ಸ್ವಾಗತಿಸಿದರು. ಸ್ಮಿತಾ ಡಿಸೋಜ ಹಾಗೂ ಸರಿಟಾ ಪಾಯ್ಸ್ ಕಾರ್ಯಕ್ರಮ ನಿರೂಪಿಸಿ ಸಚಿನ್ ಅಲ್ಮೇಡಾ ವಂದಿಸಿದರು.











