ಕುಂದಾಪುರ ಮಿರರ್ ಸುದ್ದಿ…
ಬೈಂದೂರು :ಜನಸಾಮಾನ್ಯರ ನಡುವೆ ಇರುವ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿ ಭಾರತೀಯ ಜನತಾ ಪಕ್ಷ ನೀಡಿದೆ. ಮೇ 13ರಂದು ಅವರು ಪ್ರಜಾತಂತ್ರದ ದೇಗುಲವನ್ನು ಗುರುರಾಜ್ ಗಂಟಿಹೊಳೆಯವರು ಪ್ರವೇಶ ಮಾಡುತ್ತಾರೆ. ಬಡವರ ನಡುವೆ ಇರುವ ಯುವಜನರ ಉತ್ಸಾಹದ ಸಂಕೇತ ವಿಧಾನಸಭೆ ಪ್ರವೇಶವೇ ಪ್ರಜಾತಂತ್ರ ವ್ಯವಸ್ಥೆಯ ಸೊಬಗು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ನಾಮಪತ್ರ ಸಲ್ಲಿಕೆಯ ಅಂಗವಾಗಿ ನಡೆದ ಬಿಜೆಪಿ ಸಮಾವೇಶದಲ್ಲಿ ಅವರು ಮಾತನಾಡಿದರು.
ಇದು ವ್ಯಕ್ತಿಗಳ ನಡುವೆ ನಡೆಯುವ ಚುನಾವಣೆಯಲ್ಲ, ಸೈದ್ದಾಂತಿಕವಾದಂತಹ ನಡುವೆ ನಡೆಯುವ ಚುನಾವಣೆ, ಇದು ಭಯೋತ್ಪಾದನೆ ವೈಭವೀಕರಿಸು ಮತ್ತು ವಿರೋಧಿಸುವವರ ನಡುವೆ ನಡೆಯುವ ಚುನಾವಣೆ ಎನ್ನುವ ರೀತಿಯಲ್ಲಿ ಹೇಳಿದ್ದೇನೆಯೇ ಹೊರತು ಗೋಪಾಲ ಪೂಜಾರಿಯವರನ್ನು ಭಯೋತ್ಪಾದಕ ಎಂದು ಹೇಳಿಲ್ಲ. ಸ್ವಾಭಾವಿಕವಾಗಿ ಹೇಳುವ ಮಾತನ್ನೇ ಅಂದು ಹೇಳಿದ್ದೇನೆ. ಆದರೆ ಗೋಪಾಲ ಪೂಜಾರಿಯವರು ಅದನ್ನು ರಾಜಕಾರಣದ ವಿಚಾರವಾಗಿ ಬಳಸಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದು ರಾಜಕೀಯ ತಂತ್ರಗಾರಿಕೆ ಎಂದು ಅಭಿಪ್ರಾಯ ಪಟ್ಟರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗ 23 ಬಿಜೆಪಿ, ಪರಿವಾರದ ಜನರ ಕಗ್ಗೊಲೆಯಾಯಿತು. 1700ಕ್ಕೂ ಜನರ ಮೇಲಿನ ಪ್ರಕರಣ ವಾಪಸ್ಸು ಪಡೆಯಲಾಯಿತು. ಭಯೋತ್ಪಾದನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವವರನ್ನು ಮತ್ತೆ ಏನು ಹೇಳಬೇಕು. ರಾಜ್ಯದಲ್ಲಿ ಭಯೋತ್ಪಾದನೆ ನಿಗ್ರಹ ಮಾಡಲು ಬಿಜೆಪಿ ಅಧಿಕಾರಕ್ಕೆ ಬರಲೇಬೇಕು. ಗುರುರಾಜ ಗಂಟಿಹೊಳೆಯಂತಹ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಭಯೋತ್ಪಾದಕರು ಬೈಂದೂರು ಭಾಗಕ್ಕೆ ತಲೆ ಹಾಕುವುದಿಲ್ಲ. ಬೈಂದೂರಿನ ಚೌಕಿದಾರ ಗುರುರಾಜ ಗಂಟಿಹೊಳೆ ಆಗುತ್ತಾರೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ ಈ ಚುನಾವಣೆಯಲ್ಲಿ 1 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗುರುರಾಜ ಗಂಟಿಹೊಳೆ ಗೆಲುವು ಸಾಧಿಸಲಿದ್ದಾರೆ. ಗುರುರಾಜ ಗಂಟಿಹೊಳೆಯ ಹಿಂದೆ ಯುವ ಶಕ್ತಿ ಇದೆ. ಕಾರ್ಯಕರ್ತರು ಪೂರ್ಣ ಶ್ರಮವಹಿಸಿ ಅವರನ್ನು ಗೆಲ್ಲಿಸಿಕೊಡಲಿದ್ದಾರೆ. ರಾಜಕೀಯ ಪಕ್ಷಗಳಿಗೆ ಕಾರ್ಯಕರ್ತರೇ ಮುಖ್ಯ. ಕಾರ್ಯಕರ್ತರು ಯಾವತ್ತೂ ಮಾಜಿ ಆಗಲಾರ. ಡಬ್ಬಲ್ ಇಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಮಾತ್ರ ಅಭಿವೃದ್ದಿ ವೇಗವಾಗುತ್ತದೆ. ಬೈಂದೂರು ಕ್ಷೇತ್ರದಲ್ಲಿ 780 ಕೋಟಿ ವೆಚ್ಚದ ಪ್ರತಿ ಮನೆಗೂ ಕುಡಿಯುವ ನೀರು ನೀಡುವ ಯೋಜನೆ ಪ್ರಗತಿಯಲ್ಲಿದೆ. ಮರವಂತೆ ಹೊರಬಂದರು ಅಭಿವೃದ್ದಿಗೆ 80 ಕೋಟಿ ಟೆಂಡರ್ ಆಗಿದೆ ಎಂದರು.
ಸಚಿವ ಸುನಿಲ್ ಕುಮಾರ್ ಮಾತನಾಡಿ ತುಷ್ಟೀಕರಣದ ರಾಜಕಾರಣ ಕಾಂಗ್ರೆಸ್ ಮಾಡುತ್ತದೆ. ಬಿಜೆಪಿ ಸರ್ವವ್ಯಾಪ್ತಿ ರಾಜಕಾರಣ ಮಾಡುತ್ತದೆ. ಜನ ಆಲೋಚನೆ ಮಾಡಿ ಮತ ಚಲಾಯಿಸಬೇಕು. ಉಡುಪಿ ಜಿಲ್ಲೆಯ ಐದು ಸ್ಥಾನಗಳನ್ನು ಬಿಜೆಪಿಯನ್ನು ಗೆಲ್ಲಿಸಬೇಕು ಎಂದರು.
ಅಭ್ಯರ್ಥಿ ಗುರುರಾಜ ಗಂಟಿಹೊಳೆ ಮಾತನಾಡಿ, ಬಿಜೆಪಿಯ ಕಾರ್ಯಕರ್ತರಲ್ಲಿ ನಾಳೆಯ ನಿರೀಕ್ಷೆ ಇರುವುದಿಲ್ಲ ನಾನು ಒಬ್ಬ ಸಾಮಾನ್ಯ ಕಾರ್ಯಕರ್ತ. ಪಕ್ಷ ಅವಕಾಶ ನೀಡಿದೆ. ಜನ ಆಶೀರ್ವಾದ ಮಾಡಿದರೆ ನಿಷ್ಠೆಯಿಂದ ಕೆಲಸ ಮಾಡುತ್ತೇನೆ. ನಾವು ಚುನಾವಣೆ ಬಂದಾಗ ವೇಷ ಕಟ್ಟುವವರಲ್ಲ. ನಾವು ನಿರಂತರವಾಗಿ ಜನರ ಜೊತೆಗೆ ಇರುತ್ತೇವೆ ಎಂದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ, ಉದಯಕುಮಾರ್ ಶೆಟ್ಟಿ, ಪಕ್ಷದ ಉಸ್ತುವಾರಿ ಬ್ರಿಜೇಶ್ ಚೌಟ, ಪ್ರಣಯ ಕುಮಾರ ಶೆಟ್ಟಿ, ಸುರೇಶ ಬಟ್ವಾಡಿ, ಬಿ ಕಿಶೋರ್ ಕುಮಾರ್, ಸುರೇಶ ಶೆಟ್ಟಿ ಬಿಎಸ್. ರೋಹಿತ್ ಕುಮಾರ್ ಶೆಟ್ಟಿ, ಪ್ರಿಯದರ್ಶಿನಿ ದೇವಾಡಿಗ, ಕೃಷ್ಣಪ್ರಸಾದ್ ಅಡ್ಯಂತಾಯ, ಆನಂದ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಕ್ಷೇತ್ರಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರ್ವಹಿಸಿದರು.