Video:
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ವಕ್ವಾಡಿ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪ್ರತಿಷ್ಠಾ ವರ್ಧಂತ್ಯುತ್ಸವ ಎಪ್ರಿಲ್ 25 ಮಂಗಳವಾರ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ರಂಗಮಂಟಪ ಉದ್ಘಾಟನೆಯನ್ನು ಕುಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನೆರವೇರಿಸಿದರು.
ಆಶೀರ್ವಚನ ಮಾತುಗಳನ್ನಾಡಿದ ಅವರು, ಸಂಸ್ಕಾರ, ಆಚಾರ, ವಿಚಾರಗಳಿಂದ ಉತ್ತಮ ವ್ಯಕ್ತಿತ್ವದಿಂದ ಆದರ್ಶ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಆ ಹಿನ್ನೆಲೆಯಲ್ಲಿ ದೇಗುಲಗಳು ಭಕ್ತಿಯ ಜಾಗೃತಿ ಕೇಂದ್ರಗಳು. ಭಕ್ತರು ಇಲ್ಲಿ ಶುದ್ಧ ಮನಸ್ಸಿನಿಂದ ಭಗವಂತನ ಪ್ರಾರ್ಥಿಸಿ ಭಗವಂತನ ಅನುಗ್ರಹ ಪಡೆಯಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪ್ರವೀಣ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಶುಭ ಹಾರೈಸಿದರು.
ಆಯುರ್ವೇದ ವೈದ್ಯರಾದ ಡಾ. ವಿಜಯ ಮಂಜ ಧಾರ್ಮಿಕ ಪ್ರವಚನ ನೀಡಿದರು. ಅನುವಂಶಿಕ ಮೊಕ್ತೇಸರರಾದ ವಿ. ಲಕ್ಷ್ಮಿ ನಾರಾಯಣ ಹೊಳ್ಳ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ ಯೋಜನಾಧಿಕಾರಿ ನಾರಾಯಣ ಪಾಲನ್, ವೇದಮೂರ್ತಿಗಳಾದ ಸುಬ್ರಹ್ಮಣ್ಯ ಐತಾಳ್, ಕೃಷ್ಣ ಐತಾಳ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವಕ್ವಾಡಿ ಪ್ರವೀಣ ಕುಮಾರ್ ಶೆಟ್ಟಿ, ವೇದಮೂರ್ತಿ ಸುಬ್ರಹ್ಮಣ್ಯ ಐತಾಳ್, ಗುತ್ತಿಗೆದಾರ ಸತ್ಯನಾರಾಯಣ ಶೆಟ್ಟಿ, ದ್ಯಾಗಳ ಮನೆ ದಿನಕರ ಶೆಟ್ಟಿ, ಲೆಕ್ಕ ಪರಿಶೋಧಕ ಚಂದ್ರಶೇಖರ್ ಶೆಟ್ಟಿ, ಗುತ್ತಿಗೆದಾರ ರಂಜಿತ್ ಕುಮಾರ್ ಶೆಟ್ಟಿ ಮೊದಲಾದ ದಾನಿಗಳನ್ನು ಸಮ್ಮಾನಿಸಲಾಯಿತು.
ನಿವೃತ್ತ ಮುಖ್ಯ ಶಿಕ್ಷಕ ವೇಣುಗೋಪಾಲ ಹೆಗ್ಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಷತಾ ಗಿರೀಶ್ ಐತಾಳ್ ಮತ್ತು ಶಿಕ್ಷಕ ಸದಾನಂದ ಶೆಟ್ಟಿ ನಿರೂಪಿಸಿದರು. ಅರ್ಚಕ ಗಿರೀಶ್ ಐತಾಳ್ ವಂದಿಸಿದರು.
ಬೆಳಿಗ್ಗೆಯಿಂದ ಶ್ರೀ ದೇವರಿಗೆ ಪಂಚವಿಂಶತಿ ಕಲಶಾಭಿಷೇಕ, ಕಲಾ ಹೋಮ, ಶತರುದ್ರಾಭೀಷೇಕ ಹಾಗೂ ನಾಗದೇವರಿಗೆ ಕಲಾಶಾಭಿಷೇಕ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಅಪರಾಹ್ನ 2 ಗಂಟೆಯಿಂದ ಭಕ್ತಿ ಸಂಗೀತ ಕಾರ್ಯಕ್ರಮ ಐತಾಳ್ ಸಹೋದರಿಯರು ಕೋಟೇಶ್ವರ ಇವರಿಂದ ನಡೆಯಿತು.
ಸಂಜೆ ವಿಜಯಕುಮಾರ್ ಕೊಡಿಯಾಲ್ ಬೈಲು ನಿರ್ದೇಶನದ ಕಲಾಸಂಗಮ ಕಲಾವಿದರಿಂದ ಕಾಂತಾರ ಖ್ಯಾತಿಯ ಸ್ವರಾಜ್ ಶೆಟ್ಟಿ ಅಭಿನಯದ ಶಿವಧೂತ ಗುಳಿಗ ನಾಟಕ ಪ್ರದರ್ಶನಗೊಂಡಿತು. ರಾತ್ರಿ 8 ಗಂಟೆಗೆ ರಂಗಪೂಜೆ, ಬಲಿ ಉತ್ಸವ ನಡೆಯಿತು.











