ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :” ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎನ್ನುವ ಹಾಗೆ ಇಂದಿನ ಶಾಲಾ ಚುನಾವಣೆ ಮಕ್ಕಳಿಗೆ ಮುಂದಿನ ಸಾರ್ವಜನಿಕ ಚುನಾವಣೆಗೆ ಭಾಗವಹಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಶಾಲಾ ನಾಯಕ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಮುಖ್ಯೋಪಾಧ್ಯಾಯಿನಿ ಗಾಯತ್ರಿ ಅಡಿಗರ ನೇತೃತ್ವದಲ್ಲಿ ಶ್ರೀಲತಾರವರ ಯೋಜನೆಯಂತೆ ಚುನಾವಣೆ ನಡೆಸಲಾಯಿತು.
ಮತದಾರರ ಪಟ್ಟಿ, ನಾಮಪತ್ರ ಸಲ್ಲಿಕೆ, ಚುನಾವಣೆ ಪ್ರಚಾರ, ಎಲ್ಲವೂ ಕಟ್ಟುನಿಟ್ಟಾಗಿ ಪಾಲಿಸಿ ಚುನಾವಣಾ ದಿನದ ಘೋಷಣೆ ಮಾಡಲಾಗಿತ್ತು. 10ನೆಯ ತರಗತಿಯಿಂದ ನಾಯಕ ಸ್ಥಾನಕ್ಕೆ ಮತ್ತು 9ನೆಯ ತರಗತಿಯಿಂದ ಉಪನಾಯಕ ಸ್ಥಾನಕ್ಕೆ ಉಮೇದು ದಾರರು ನಾಮಪತ್ರ ಸಲ್ಲಿಸಿದರು. ತಂತ್ರಜ್ಞಾನದ ವಿಶೇಷ ಅನುಭವಿ ಶಿಕ್ಷಕ ಗಣೇಶ ಶೆಟ್ಟಿಗಾರರ ಸಹಕಾರದೊಂದಿಗೆ EVM- electronic voting machine ಮೊಬೈಲ್ ಗಳಲ್ಲಿ ಸಜ್ಜುಗೊಂಡಿತು. ಕಂಟ್ರೋಲ್ ಯುನಿಟ್, ಬೆಲೆಟ್ ಯುನಿಟ್ ಎರಡು ಸ್ಥಾನಗಳಿಗೆ ಬೇರೆ ಬೇರೆಯಾಗಿರಿಸಿ ಮಕ್ಕಳಿಂದ ಮತದಾನ ಮಾಡಿಸಲಾಯಿತು.
ಚುನಾವಣೆಯ ನಿಯಮದಂತೆ ಮತದಾರರ ಪಟ್ಟಿಯಲ್ಲಿದ್ದಂತೆ ಹೆಸರು ಕರೆದು ಬೆರಳಿಗೆ ಗುರುತಿನ ಶಾಯಿ ಹಚ್ಚುವುದನ್ನು ಹಿಡಿದು ಎಲ್ಲವೂ ಕಟ್ಟುನಿಟ್ಟಾಗಿ ಪಾಲಿಸಲಾಯಿತು. ಚುನಾವಣೆಯ ಮೊದಲು ಅಣಕು ಮತದಾನ, ನಂತರ ಮತ ಎಣಿಕೆ ಅಭ್ಯರ್ಥಿಗಳ ಸಮಕ್ಷಮದಲ್ಲಿ ಮಾಡಲಾಯಿತು. ನಾಯಕ ಸ್ಥಾನಕ್ಕೆ ಓರ್ವ ಹುಡುಗಿ ಸೇರಿ ಮೂವರು ಸ್ಪರ್ಧಿಸಿದ್ದರು. ಉಪನಾಯಕ ಸ್ಥಾನಕ್ಕೆ ತಲಾ ಓರ್ವ ಹುಡುಗಿ ಹಾಗೂ ಹುಡುಗ ಸ್ಪರ್ಧಿಸಿದ್ದರು. ಎಣಿಕೆಯ ಬಳಿಕ ಮುಖ್ಯೋಪಾಧ್ಯಾಯಿನಿಯವರು ನಾಯಕನಾಗಿ ನಾಗಾರ್ಜುನ ಹಾಗೂ ಉಪನಾಯಕನಾಗಿ ದಿಶಾಂತ್ ಆಯ್ಕೆಯಾಗಿದ್ದಾರೆ ಎಂದು ಪೋಷಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.











