ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ: ಬುಧವಾರ ಬೆಳಿಗ್ಗೆಯಿಂದ ನಾಡಾ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಉಡುಪಿ ಜಿಲ್ಲಾ ಕೊರಗ ಸಂಘಟನೆಗಳು ಹಾಗೂ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಂಘಟನಾ ಸಮಿತಿಯ ನೇತೃತ್ವದಲ್ಲಿ ಡಾ. ಮಹಮ್ಮದ್ ಫೀರ್ ವರದಿ ಜ್ಯಾರಿಗೆ ಆಗ್ರಹಿಸಿ ಆರಂಭಗೊಂಡಿದ್ದ ಧರಣಿ ಸತ್ಯಾಗ್ರಹಕ್ಕೆ ಉಡುಪಿ ಜಿಲ್ಲಾಡಳಿತ ಮಣಿದಿದೆ.
ಉಡುಪಿ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದ ಧರಣಿ ನಿರತರ ಆಗ್ರಹಕ್ಕೆ ಮಣಿದ ಪ್ರಭಾರ ಉಪವಿಭಾಗಾಧಿಕಾರಿ ಶೋಭಾಲಕ್ಷ್ಮಿ ಅವರು ಜಿಲ್ಲಾಧಿಕಾರಿಗಳ ಪರವಾಗಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಜುಲೈ 5ರಂದು ಬೆಳಿಗ್ಗೆ 11 ಘಂಟೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರಗ ಸಮುದಾಯಗಳ ಭೂಮಿ ಹಕ್ಕುಗಳಿಗೆ ಸಂಬಂಧಿಸಿದಂತೆ ವಿಶೇಷ ಸಭೆ ನಡೆಸಿ ಬೇಡಿಕೆ ಈಡೇರಿಸುವ ಬಗ್ಗೆ ಲಿಖಿತ ರೂಪದಲ್ಲಿ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಭರವಸೆ ಮೇರೆಗೆ ಧರಣಿ ಸತ್ಯಾಗ್ರಹವನ್ನು ಜುಲೈ 5ರವರೆಗೆ ಹಿಂತೆಗೆದುಕೊಂಡಿದ್ದೇವೆ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕ ಶ್ರೀಧರ ನಾಡಾ ತಿಳಿಸಿದ್ದಾರೆ.











