ಕೋವಿಡ್-೧೯ ಲಸಿಕೆ ಕುರಿತ ಸಂದೇಹಗಳನ್ನು ಫೋನ್ ಇನ್ ಮೂಲಕ ಬಗೆಹರಿಸಿದ – ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

0
777

Click Here

Click Here

ಕುಂದಾಪುರ ಮಿರರ್ ಸುದ್ದಿ…
ಉಡುಪಿ: ಕೋವಿಡ್-೧೯ ಲಸಿಕೆ ಪಡೆಯುವ ಕುರಿತಂತೆ ಸಾರ್ವಜನಿಕರ ಹಲವು ಸಮಸ್ಯೆಗಳನ್ನು ಇಂದು ಜಿಲ್ಲಾಧಿಕಾರಿ ಕಚೇರಿ ಕೋರ್ಟ್ಹಾಲ್ ನಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಬಗೆಹರಿಸಿದರು.

ಇಂದು ಬೆಳಗ್ಗೆ ೧೦ ರಿಂದ ೧೧ರ ವರೆಗೆ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ೨೮ ಮಂದಿ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆಯುವ ಕುರಿಂತೆ ತಮ್ಮಲ್ಲಿನ ಗೊಂದಲಗಳು ಮತ್ತು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸಲಹೆಗಾರರಿಂದ ಮಾಹಿತಿ ಪಡೆದರು.


ಕೋವಿಡ್ ನಿಯಂತ್ರಣಕ್ಕೆ ಮಾಸ್ಕ್ ಧರಿಸಬೇಕು, ಕೈಗಳ ಸ್ವಚ್ಚತೆ ಕಾಪಾಡಬೇಕು ಎಂದಿದೆ, ಮಾಸ್ಕ್ ಧರಿಸದ ಕಾರಣ ನಾನೂ ಸಹ ದಂಡ ಕಟ್ಟಿದ್ದೇನೆ. ಆದರೆ ಅನೇಕ ಮಂದಿ ಹೋಟೆಲ್‌ಗಳಲ್ಲಿ ಊಟ ಮಾಡಿದ ಪ್ಲೇಟ್‌ಗಳಲ್ಲಿ ಕೈ ತೊಳೆಯುತ್ತಾರೆ ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಮಣಿಪಾಲದ ಮಾಧವ ಪೈ ಕರೆ ಮಾಡಿದ್ದರು..

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಹೋಟೆಲ್‌ಗಳಲ್ಲಿ ಸರ್ಕಾರ ಸೂಚಿಸಿರುವ ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸುವ ಕುರಿತಂತೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುವಂತೆ ಇಂದೇ ಸೂಚನೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಮೊದಲನೇ ಡೋಸ್ ಲಸಿಕೆ ಆಗಿದೆ, ೨ನೇ ಡೋಸ್ ಪಡೆಯಲು ಮೆಸೇಜ್ ಬಂದಿಲ್ಲ, ನಾನು ಏನು ಮಾಡಬೇಕು ಎಂಬ ಸಾವಿತ್ರಿ ಅವರ ಸಂದೇಹಕ್ಕೆ, ಮೆಸೇಜ್ ಬರದೇ ಇದ್ದರೂ ಸಹ, ನಿಗಧಿತ ಅವಧಿ ಆಗಿದಲ್ಲಿ ಸಮೀಪದ ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುವಂತೆ ಡಿಸಿ ಹೇಳಿದರು.

ಮೊದಲ ಡೋಸ್ ಪಡೆದು ೮೦ ದಿನ ಆಗಿದೆ ಮಹಾಮೇಳದಲ್ಲಿ ಲಸಿಕೆ ಪಡೆಯಬಹುದೇ ಎಂಬ ಮಂಗಳೂರಿನ ರಾಜೇಶ್ ಪ್ರಶ್ನೆಗೆ, ನಿಗಧಿತ ಅವಧಿಗೆ ಮುಂಚೆ ಲಸಿಕೆ ಪಡೆಯಲು ಸಾದ್ಯವಿಲ್ಲ, ಕೋವಿಡ್ ಆಪ್‌ನಲ್ಲಿ ಕೂಡಾ ನಿಮ್ಮ ಮಾಹಿತಿ ಬರುವುದಿಲ್ಲ ಆದ್ದರಿಂದ ೮೪ ದಿನದ ನಂತರವೇ ಲಸಿಕೆ ಪಡೆಯುವಂತೆ ಡಿಸಿ ಹೇಳಿದರು.

ಟಿಬಿ ಇಂದ ಗುಣಮುಖನಾಗಿದ್ದು ಈಗ ಲಸಿಕೆ ಪಡೆಯಬಹುದೇ ಎಂಬ ಮರವಂತೆಯ ಪ್ರಕಾಶ್ ಎಂಬುವವರ ಪ್ರಶ್ನೆಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಾಹಿತಿ ಪಡೆಯುವಂತೆ ತಿಳಿಸಿದರು.

ಎರಡೂ ಡೋಸ್ ಲಸಿಕೆ ಪಡೆದಿದ್ದು, ಈ ಬಗ್ಗೆ ಸರ್ಟಿಫಿಕೇಟ್ ಸಹ ದೊರೆತಿದೆ ಆದರೆ ಈಗಲೂ ಸಹ ಲಸಿಕೆ ಪಡಯುವಂತೆ ಮೆಸೇಜ್ ಬರುತ್ತಿದ್ದು, ಮತ್ತೆ ಲಸಿಕೆ ಪಡೆಯಬೇಕೇ ಎಂಬ ಚಿಟ್ಪಾಡಿಯ ಪವನ್ ಕುಮಾರ್ ಅವರ ಪ್ರಶ್ನೆಗೆ, ಎರಡೂ ಡೋಸ್ ಲಸಿಕೆ ಆಗಿದ್ದರೆ ಮತ್ತೆ ಪಡೆಯುವುದು ಬೇಡ, ಎರಡನೇ ಡೋಸ್ ಪಡೆಯದವರಿಗೆ ಮೆಸೇಜ್ ಬರುತಿದ್ದು, ಈಗಾಗಲೇ ಪಡೆದಿದ್ದಲ್ಲಿ ಈ ಮೇಸೆಜ್‌ನ್ನು ನಿರ್ಲಕ್ಷಿಸಿ ಎಂದೂ ಅದರಲ್ಲಿ ಮಾಹಿತಿ ಇದೆ ಎಂದರು.

Click Here

ಸಿದ್ದಾಪುರದ ಕಾಲೇಜು ವಿದ್ಯಾರ್ಥಿನಿ ಐಶ್ವರ್ಯ ಕರೆ ಮಾಡಿ, ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿ ೩ ದಿನವಾಗಿದ್ದು ಇನ್ನೂ ವರದಿ ನೀಡಿಲ್ಲ ಇದರಿಂದ ಕಾಲೇಜ್‌ಗೆ ತೆರಳಲು ತೊಂದರೆಯಾಗಿದೆ ಎಂದರು. ಕೂಡಲೇ ಇವರ ಆರ್.ಟಿ.ಪಿ.ಸಿ.ಆರ್ ಪರೀಕ್ಷಾ ವರದಿಯನ್ನು ನೀಡುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣ ಕಾರ್ಯಕ್ರಮವು ಉತ್ತಮವಾಗಿ ನಡೆಯುತ್ತಿದೆ ಇದಕ್ಕಾಗಿ ಜಿಲ್ಲಾಡಳಿತಕ್ಕೆ ಸಾಸ್ತಾನದ ರಾಘವೇಂದ್ರ ಅಭಿನಂದನೆ ಸಲ್ಲಿಸಿದರು. ಸರ್ಕಾರದ ಜೊತೆಯಲ್ಲಿ ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಕೈ ಜೋಡಿಸಿದಾಗ ಜಿಲ್ಲೆಯಲ್ಲಿ ೧೦೦% ಲಸಿಕಾಕರಣ ಸಾಧ್ಯವಾಗಲಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಲಸಿಕೆ ಪಡೆದಾಗ ಜ್ವರ ಬಂದರೆ ಒಳ್ಳೆಯದು ಇಲ್ಲವಾದಲ್ಲಿ ಲಸಿಕೆ ಪ್ರಭಾವ ಬೀರುವುದಿಲ್ಲ ಎನ್ನುತ್ತಾರೆ ಇದು ನಿಜವೇ ಎಂಬ ಇಸ್ಮಾಯಿಲ್ ಎಂಬುವವರ ಪ್ರಶ್ನೆಗೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದಾಗ ಲಸಿಕೆ ಪಡೆದಾಗ ಜ್ವರ ಬರುತ್ತದೆ, ಜ್ವರ ಬಂದಾಗ ರೋಗ ನಿರೋಧಕ ಶಕ್ತಿ ಬೆಳವಣಿಗೆಯಾಗುತ್ತಿರುತ್ತದೆ ಅದರೆ ಇದೇ ವ್ಯಕ್ತಿಗೆ ಎರಡನೇ ಡೋಸ್ ಲಸಿಕೆ ಪಡೆದಾಗ ಜ್ವರ ಬರುವುದಿಲ್ಲ ಎಂದು ವಿಶ್ವ ಅರೋಗ್ಯ ಸಂಸ್ಥೆಯ ಸಲಹೆಗಾರ ಡಾ.ಅಶ್ವಿನ್ ಕುಮಾರ್ ತಿಳಿಸಿದರು.

ಕೋವಿಡ್ ಲಸಿಕಾ ಕೇಂದ್ರದಲ್ಲಿ ಕೋವಿಡ್ ಟೆಸ್ಟ್ ಮಾಡುವುದು ಕಡ್ಡಾಯವೇ ಎಂಬ ಕೊರಂಗ್ರಪಾಡಿಯ ಉದಯ್ ಅವರ ಪ್ರಶ್ನೆಗೆ, ಜ್ವರ, ಶೀತ, ನೆಗಡಿ ಇರುವವರು ಕೋವಿಡ್ ಪಾಸಿಟಿವ್ ಆಗಿರುವ ಸಾಧ್ಯತೆಗಳಿದ್ದು ಅಂತಹವರಿಗೆ ಲಸಿಕೆ ನೀಡಲು ಸಾಧ್ಯವಿಲ್ಲದ ಕಾರಣ ಅದನ್ನು ಪತ್ತೆ ಹಚ್ಚಲು ಪರೀಕ್ಷೆ ನೆಡೆಸಲಾಗುತ್ತಿದೆ ಎಂದು ಡಾ.ಅಶ್ವಿನ್ ಕುಮಾರ್ ತಿಳಿಸಿದರು.

ತನ್ನ ಮಗನಿಗೆ ಪೆನ್ಸಿಲಿನ್ ಸೇರಿದಂತೆ ಯಾವುದೇ ಇಂಜೆಕ್ಷನ್ ಪಡೆದರೂ ಇನ್‌ಫೆಕ್ಷನ್ ಆಗಲಿದೆ ಅವನು ಕೋವಿಡ್ ಲಸಿಕೆ ಪಡೆಯಬಹುದೇ ಎಂಬ ಶಾಜಿಯಾ ಉಡುಪಿ ಮತ್ತು ನನಗೆ ಹೃದಯದ ಸಮಸ್ಯೆಯಿದ್ದು, ಬ್ಲಾಕ್ ಆಗಿದೆ, ಶುಗರ್ ಮತ್ತು ಬಿಪಿ ಇದೆ ಲಸಿಕೆ ಪಡೆಯಬಹುದಾ ಎಂಬ ಶೋಭಿತಾ ಉಡುಪಿ ಅವರ ಪ್ರಶ್ನೆಗಳಿಗೆ, ತಮಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗಳಲ್ಲಿ ಕೋವಿಡ್ ಲಸಿಕೆ ಪಡೆಯುವಂತೆ ಹಾಗೂ ಜ್ವರ ಇದ್ದವರು ಗುಣಮುಖರಾದ ಬಳಿಕ ಮತ್ತು ಕೋವಿಡ್ ಪಾಸಿಟಿವ್ ಬಂದವರು ೩ ತಿಂಗಳ ನಂತರ ಕೋವಿಡ್ ಲಸಿಕೆ ಪಡೆಯಬಹುದು ಎಂದು ಡಾ.ಅಶ್ವಿನ್ ಕುಮಾರ್ ತಿಳಿಸಿದರು.

ಸೆಪ್ಟಂಬರ್ ೧೭ ರಂದು ಲಸಿಕಾ ಮೇಳ ನಡೆಯುವ ತಮ್ಮ ಸಮೀಪದ ಸ್ಥಳಗಳು ಲಸಿಕೆ ಲಭ್ಯತೆಯ ವಿವರ, ಯಾರನ್ನು ಸಂಪರ್ಕಿಸಬೇಕು ಮುಂತಾದ ಮಾಹಿತಿಗಳಿಗಾಗಿ ಸಾರ್ವಜನಿಕರು ಮೊ.ಸಂ. ೯೬೬೩೯೫೭೨೨೨ ಗೆ ಕರೆ ಮಾಡಬಹುದಾಗಿದ್ದು, ಅಂದು ಬೆಳಗ್ಗೆ ೯ ರಿಂದ ಸಂಜೆ ೪ ಗಂಟೆಯವರಗೆ, ಜಿಲ್ಲೆಯಾದ್ಯಂತ ೩೦೦ಕ್ಕೂ ಹೆಚ್ಚು ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲೆಯಲ್ಲಿ ಈಗಾಗಲೇ ೩ ಗ್ರಾಮ ಪಂಚಾಯತ್‌ಗಳು ಶೇ.೧೦೦ ಮೊದಲ ಡೋಸ್ ಲಸಿಕೆ ಸಾಧನೆ ಮಾಡಿದ್ದು, ಮಹಾಮೇಳದ ಮೂಲಕ ಇನ್ನೂ ೨೦ಕ್ಕೂ ಹೆಚ್ಚು ಗ್ರಾಮ ಪಂಚಾಯತ್‌ಗಳು ಈ ಸಾಧನೆ ಪಟ್ಟಿಗೆ ಸೇರ್ಪಡೆಗೊಳ್ಳಲಿವೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ.ಮಧುಸೂದನ್ ನಾಯಕ್, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರತ್ನ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಡಾ.ಪ್ರೇಮಾನಂದ್, ಎನ್.ಐ.ಸಿಯ ನಿರ್ದೇಶಕ ಮಂಜುನಾಥ್ ಉಪಸ್ಥಿತರಿದ್ದರು.

Click Here

LEAVE A REPLY

Please enter your comment!
Please enter your name here