ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ತಾಲೂಕಿನ ಅಮಾಸೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಚ್ಚಟ್ಟು ಗ್ರಾಮದ ತೊಂಬಟ್ಟು ಸ.ಹಿ.ಪ್ರಾ. ಶಾಲೆಯ ಇಂಗ್ಲೀಷ್ ಶಿಕ್ಷಕರು ಹೆಚ್ಚುವರಿಯಾಗಿದ್ದು ಇವರ ವರ್ಗಾವಣೆಗೆ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜೂನ್ 21ರ ಬುಧವಾರ ಇಂಗ್ಲಿಷ್ ಶಿಕ್ಷಕರ ವರ್ಗಾವಣೆ ವಿರೋಧಿಸಿ ಪ್ರತಿಭಟನೆಯೂ ನಡೆಯಿತು.
ತೊಂಬಟ್ಟು ಶಾಲೆಯಲ್ಲಿ 1ರಿಂದ 8ನೇ ತರಗತಿಗಳಿದ್ದು ಮುಖ್ಯ ಶಿಕ್ಷಕರು ಸೇರಿ 4ಜನ ಶಿಕ್ಷಕರ ಹುದ್ದೆಗಳು ಮಂಜೂರಾಗಿತ್ತು. ಆದರೆ ಸುಮಾರು 4-5 ವರ್ಷಗಳಿಂದ ಮುಖ್ಯ ಶಿಕ್ಷಕರೇ ಇಲ್ಲ. ಅಲ್ಲದೇ ಇರುವ ಮೂರು ಸಹ ಶಿಕ್ಷಕರ ಪೈಕಿ ಇಂಗ್ಲೀಷ್ ಶಿಕ್ಷಕರನ್ನು ವರ್ಗಾಯಿಸುವುದು ಸರಿಯಲ್ಲ ಎಂದು ಪೋಷಕರು ಆಗ್ರಹಿಸಿದ್ದಾರೆ.
ಈ ಹಿಂದೆ ಈ ಶಾಲೆಯಲ್ಲಿ 80-90 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಶಿಕ್ಷಕರ ಕೊರತೆಯಿಂದ ಮಕ್ಕಳ ಸಂಖ್ಯೆ ಕುಸಿದಿದೆ ಎಂದಿರುವ ಪೋಷಕರು, ತೊಂಬಟ್ಟು ತಾಲೂಕು ಕೇಂದ್ರದಿಂದ 50 ಕಿ.ಮೀಗೂ ಹೆಚ್ಚು ದೂರದಲ್ಲಿದ್ದು ಮೂಲ ಸೌಲಭ್ಯ ವಂಚಿತ ಕುಗ್ರಾಮವಾಗಿದೆ. ಕೃಷಿಯೇ ಪ್ರಧಾಬವಾಗಿರುವ ಇಲ್ಲಿನ ಜನರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಜಾಗತೀಕ ಪೈಪೋಟಿಗೆ ಅಗತ್ಯವಾಗಿರುವ ಇಂಗ್ಲೀಷ್ ಶಿಕ್ಷಕರನ್ನು ಬೇರೆಡೆಗೆ ವರ್ಗಾಯಿಸಬಾರದು ಮತ್ತು ಖಾಲಿ ಇರುವ ಮುಖ್ಯ ಶಿಕ್ಷಕ ಹುದ್ದೆಯನ್ನು ಭರ್ತಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ, ಉಡುಪಿ ಡಿಡಿಪಿಐಯವರಿಗೆ ಈ ಬಗ್ಗ ಮನವಿ ಸಲ್ಲಿಸಲಾಯಿತು.











