ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ :ಕಳೆದ ಮೂರು ದಿನಗಳಿಂದ ಕರಾವಳಿಯಲ್ಲಿ ಬಿಡದೆ ವರ್ಷಧಾರೆ ಸುರಿಯುತ್ತಿದೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬುಧವಾರದಿಂದ ಮಳೆಯ ಅಬ್ಬರ ಹೆಚ್ಚಾಗಿದ್ದು ತಗ್ಗು ಪ್ರದೇಶಗಳು ನೀರಿನಿಂದ ಆವೃತ್ತವಾಗುತ್ತಿದೆ. ಕೆಲವೆಡೆ ನೆರೆ ಸಹ ಕಾಣಿಸಿಕೊಂಡಿದೆ.
ಜೂನ್ ತಿಂಗಳಲ್ಲಿ ಆಗಬೇಕಾದ ವಾಡಿಕೆಯ ಮಳೆ ಆಗದೆ ರೈತರು ಕಂಗೆಟ್ಟಿದ್ದರು. ಜನಸಾಮಾನ್ಯರು ಕೂಡಾ ಜೂನ್‍ನಲ್ಲಿ ನಿರೀಕ್ಷಿತ ಮಳೆಯಾಗದೆ ಕುಡಿಯುವ ನೀರಿಗೂ ಸಮಸ್ಯೆ ಅನುಭವಿಸುತ್ತಿದ್ದರು. ಕೊನೆಗೂ ವಿಳಂಬವಾಗಿ ಆರಂಭವಾದ ಮಳೆ ಈಗ ಆರ್ಭಟಿಸುತ್ತಿದೆ.
ಬಿಡದೆ ಸುರಿಯುತ್ತಿರುವ ಮಳೆ ಕೆಲವಡೆ ಅವಾಂತರ ಸೃಷ್ಟಿಸಿದೆ. ಪೇಟೆ ಪಟ್ಟಣಗಳಲ್ಲಿ ಮರಗಳು ರಸ್ತೆಗೆ ಉರುಳುತ್ತಿವೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಸೃಷ್ಟಿಯಾಗಿದೆ. ತೆಕ್ಕಟ್ಟೆ, ಉಳ್ತೂರು ಭಾಗದಲ್ಲಿಯೂ ನೆರೆ ಕಾಣಿಸಿಕೊಂಡಿದೆ. ಕೋಣಿ ಭಾಗದಲ್ಲಿಯೂ ಕೂಡಾ ನೆರೆ ಕಾಣಿಸಿಕೊಂಡಿದೆ. ಹಳ್ಳ, ತೊರೆಗಳು ಮೈದುಂಬಿ ಹರಿಯುತ್ತಿದೆ. ಜಿಲ್ಲೆಯ ಎಲ್ಲಾ ನದಿಗಳು ಕೂಡಾ ತುಂಬಿ ಹರಿಯುತ್ತಿವೆ. ನದಿಗಳಿಗೆ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು, ತುಂಬಿದ ಹೂಳನ್ನು ಕಾಲಕಾಲಕ್ಕೆ ತಗೆಯದೆ ಇರುವುದರಿಂದ ನೀರಿನ ಮಟ್ಟ ಮೇಲೆ ಬರುವ ಆತಂಕವೂ ಎದುರಾಗಿದೆ.
ಹಳ್ಳಿಗಳಲ್ಲಿ ಕಾಲುಸಂಕದ ಭೀತಿ ಹೆಚ್ಚಾಗಿದೆ. ಮಂಗಳವಾರ ಸಂಜೆ ಕಮಲಶಿಲೆಯಲ್ಲಿ ಅರ್ಚಕರೊಬ್ಬರು ನೀರುಪಾಲಾಗಿದ್ದು ಬುಧವಾರ ಮೃತದೇಹ ಪತ್ತೆಯಾಗಿತ್ತು. ಮಂಗಳವಾರ ರಾತ್ರಿ ತೆಕ್ಕಟ್ಟೆ ಸಮೀಪ ನೀರು ತುಂಬಿದ್ದರಿಂದ ರಸ್ತೆ ಪಕ್ಕದ ಹೊಂಡದ ಅರವಿಲ್ಲದೆ ಬೈಕ್ ಸವಾರ ಬೈಕ್ ಸಹಿತ ನೀರಿಗೆ ಬಿದ್ದು ಅಸುನೀಗಿದ್ದಾರೆ.
ಗುರುವಾರ ಸಂಜೆ ತನಕ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ಹಲವೆಡೆ ಮರಗಳು ಧರೆಗೂರುಳಿವೆ. ಸಂಚಾರಕ್ಕೆ ಸಮಸ್ಯೆಯಾಗಿದೆ. ಮಳೆ ಮುಂದುವರಿಯುವ ಎಲ್ಲಾ ಸಾಧ್ಯತೆಗಳು ಇವೆ. ಕುಂದಾಪುರ, ಬೈಂದೂರು, ಬ್ರಹ್ಮಾವರ ತಾಲೂಕಿನಾದ್ಯಂತ ಮಳೆಯ ಅಬ್ಬರ ಹೆಚ್ಚೇ ಇದೆ. ಇಂದು ರಾತ್ರಿಯೂ ಕೂಡಾ ಮಳೆ ಹೀಗೆ ಮುಂದುವರಿದರೆ ಶುಕ್ರವಾರ ತಗ್ಗು ಪ್ರದೇಶಕ್ಕೆ ನೆರೆ ಆವರಿಸುವ ಸಾಧ್ಯತೆ ಇದೆ.











