ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಪ್ರಸ್ತುತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಹೈನುಗಾರಿಕೆಯನ್ನು ನಂಬಿಕೊಂಡ ಹೈನುಗಾರರು ಇದರಿಂದ ಸಂಕಷ್ಟಕ್ಕಿಡಾಗಿದ್ದಾರೆ. ಹೈನೋದ್ಯಮಕ್ಕೆ ಅಗತ್ಯವಿರುವ ವಸ್ತುಗಳ ಬೆಲೆ 25ರಿಂದ 40% ಹೆಚ್ಚಳವಾಗುತ್ತಿರುವುದರಿಂದ ಹೈನುಗಾರರು ಹಾಲು ಉದ್ಯಮದಿಂದ ವಿಮುಖರಾಗುವ ಹಂತಕ್ಕೆ ಬಂದಿದ್ದು, ಕೂಡಲೇ ಸರ್ಕಾರ ಪೋತ್ಸಾಹಧನವಲ್ಲದೆ, ಪ್ರತೀ ಲೀಟರ್ ಹಾಲಿಗೆ 40 ರೂ. ನೀಡಬೇಕು ಎಂದು ದ.ಕ ಹಾಲು ಒಕ್ಕೂಟದ ಮಾಜಿ ನಿರ್ದೇಶಕರು, ಉಡುಪಿ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸರ್ಕಾರ ತಕ್ಷಣ ಹೈನುಗಾರರ ವಿಷಯದಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕಾಗಿದೆ. ಇಲ್ಲದಿದ್ದರೆ ಕರ್ನಾಟಕದ ಹೈನುಗಾರರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದು ಅಮುಲ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳಲಿದೆ. ಹಾಗಾಗಿ ಸರ್ಕಾರ ಕರ್ನಾಟಕದ ಹೈನುಗಾರರ ಹಿತಾಸಕ್ತಿಯಿಂದ ಹಾಲಿನ ದರವನ್ನು ಹೆಚ್ಚು ಮಾಡುವುದರ ಮೂಲಕ ಹೈನುಗಾರರನ್ನು, ನಂದಿನಿಯನ್ನು ಉಳಿಸಿಕೊಳ್ಳಬೇಕೆಂದು ಸಬ್ಲಾಡಿ ಎನ್.ಮಂಜಯ್ಯ ಶೆಟ್ಟಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.











