Video :
ಭಾರತ್ ಸ್ಕೌಟ್ ಮತ್ತು ಗೈಡ್ಸ್, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಸಹಭಾಗಿತ್ವದಲ್ಲಿ ಕೋಟ್ಯಾನ್ ಕುಟುಂಬಸ್ಥರ ಗದ್ದೆಯಲ್ಲಿ ಕೃಷಿಯ ಕಡೆ ನಮ್ಮ ನಡೆ ಕಾರ್ಯಕ್ರಮ


ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ :ಭಾರತ್ ಸ್ಕೌಟ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಉಡುಪಿ ನೇತೃತ್ವದಲ್ಲಿ ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಸಹಭಾಗಿತ್ವದಲ್ಲಿ ಕೋಟ್ಯಾನ್ ಕುಟುಂಬಸ್ಥರ ಗದ್ದೆಯಲ್ಲಿ ಕೃಷಿಯ ಕಡೆ ನಮ್ಮ ನಡೆ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮವನ್ನು ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್ ಅಧ್ಯಕ್ಷೆ ವೀಣಾ ರಾಜೀವ ಕೋಟ್ಯಾನ್ ಅವರು ನೇಜಿಯ ಕಟ್ಟುಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಉದ್ಘಾಟಿಸಿ, ಭಾರತ ಕೃಷಿ ಪ್ರಧಾನವಾದ ರಾಷ್ಟ್ರ. ಸೈನಿಕರು ದೇಶವನ್ನು ಹೇಗೆ ರಕ್ಷಣೆ ಮಾಡುತ್ತಾರೋ ಅದೇ ರೀತಿ ರೈತರು ಅನ್ನದಾತರಾಗಿ ಆಹಾರವನ್ನು ನೀಡುತ್ತಿದ್ದಾರೆ. ಪ್ರಸ್ತುತ ನಾಗರೀಕರಣ, ಕೈಗಾರೀಕರಣ ಬೆಳೆಯುತ್ತಿರುವ ದಿನಗಳಲ್ಲಿ ಕೃಷಿಯ ಕಡೆ ಯುವಜನತೆಯ ಒಲವು ಕಡಿಮೆಯಾಗುತ್ತದೆ. ಇಂಥಹ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ ಕೃಷಿಯ ಒಲವು ಮೂಡಿಸುವ ಕಾರ್ಯ ಶ್ಲಾಘನೀಯವಾದುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸ್ಥಳೀಯ ಸಂಸ್ಥೆಯ ಅಧ್ಯಕ್ಷೆ ಗುಣರತ್ನ ಮಾತನಾಡಿ, ಭಾರತ್ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳಿಗೆ ಕಳೆದ 9 ವರ್ಷಗಳಿಂದ ಕೃಷಿಯ ಕಡೆ ನಮ್ಮ ನಡೆ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಇವತ್ತಿನ ಮಕ್ಕಳಿಗೆ ಕೃಷಿಯ ಬಗ್ಗೆ ಗೊತ್ತಿಲ್ಲ. ಅವರಿಗೆ ಪ್ರಾಯೋಗಿಕವಾದ ಅರಿವು ನೀಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೇವೆ. ನಮ್ಮ ರಾಜ್ಯ ಆಯುಕ್ತರಾದ ಪಿ.ಆರ್.ಸಿಂಧ್ಯಾ ಮಾರ್ಗದರ್ಶನದಲ್ಲಿ ನದಿ ತೀರಪ್ರದೇಶದಲ್ಲಿ ಕಾಂಡ್ಲಾ ಗಿಡ ನಾಟಿ, ಕೋಡಿಯಲ್ಲಿ ಗಾಳಿ ಗಿಡ ನಡುವುದು ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ರಾಜೀವ ಕೋಟ್ಯಾನ್, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಕಾರ್ಯದರ್ಶಿ ಅನಂದ ಅಡಿಗ, ಕರ್ನಾಟಕ ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಜಿಲ್ಲಾ ಸಂಸ್ಥೆಯ ಸಾವಿತ್ರಿ, ಸಮಾಜ ಸೇವಕ ಸತೀಶ್ ಕೋಟ್ಯಾನ್, ಕೆ.ಆರ್ ನಾಯಕ್, ಸುಮಂತ್ ಹೆಗ್ಡೆ, ಕೋಟ್ಯಾನ್ ಕುಟುಂಬಸ್ಥರು, ಲಯನ್ಸ್ ಸದಸ್ಯರು ಉಪಸ್ಥಿತರಿದ್ದರು.
ಸ್ಥಳೀಯ ಸಂಸ್ಥೆ ಖಜಾಂಚಿ ವೀರೇಂದ್ರ ಸ್ವಾಗತಿಸಿದರು. ತೆಕ್ಕಟ್ಟೆ ಕುವೆಂಪು ಶತಮಾನೋತ್ಸವ ಶಾಲೆಯ ಸ್ಕೌಟ್ ಶಿಕ್ಷಕ ಸದಾನಂದ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ವಿದ್ಯಾರ್ಥಿಗಳು ನಾಟಿಗೆ ಹದಗೊಳಿಸಿದ ಗದ್ದೆಯಲ್ಲಿ ಸಾಂಪ್ರಾದಾಯಿಕ ಶೈಲಿಯಲ್ಲಿ ನಾಟಿ ಮಾಡಿದರು. ಸಂಪೂರ್ಣವಾಗಿ ಮರೆಯಾಗುತ್ತಿರುವ ಸಾಂಪ್ರಾದಾಯಿಕ ನಾಟಿ ಪದ್ದತಿಯಲ್ಲಿ ವಿದ್ಯಾರ್ಥಿಗಳು ನಾಟಿ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಕೃಷಿಯ ಅರಿವು ನೀಡಲಾಯಿತು.
ನಾರಾಯಣ ಗುರು ಮಹಿಳಾ ಸಹಕಾರಿ ಸಂಘದ ಮೂಲಕ ವಿದ್ಯಾರ್ಥಿಗಳಿಗೆ ಆಷಾಡದ ಆರೋಗ್ಯ ವಿಶೇಷ ತಿಂಡಿ-ತಿನಿಸುಗಳನ್ನು ನೀಡಲಾಯಿತು. ಕುಂದಾಪುರರ ವಲಯದ 7 ಶಾಲೆಗಳ 290 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.











