ಕುಂದಾಪುರ ಮಿರರ್ ಸುದ್ದಿ….


ಬೈಂದೂರು :ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ, ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಕುಂದಾಪುರ ತಾಲೂಕು, ಗ್ರಾಮ ಪಂಚಾಯತ್ ವಂಡ್ಸೆ ಇವರ ಸಹಯೋಗದಲ್ಲಿ ಗೃಹಲಕ್ಷ್ಮೀ ಯೋಜನೆ ಅನುಷ್ಠಾನ ಕಾರ್ಯಕ್ರಮ ಉಡುಪಿ ಜಿಲ್ಲೆಯ ಗ್ರಾಮ ಪಂಚಾಯತ್ ಪೈಕಿ ವಂಡ್ಸೆ ಗ್ರಾಮ ಪಂಚಾಯತ್‍ನಲ್ಲಿ ಮೈಸೂರು ಕಾರ್ಯಕ್ರಮದ ಸ್ಥಳದಿಂದ ನೇರಾ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಂಡ್ಸೆಯ ಮಹಾತ್ಮಾಗಾಂಧಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಗೃಹಲಕ್ಷ್ಮೀಯರಾದ ಚಿಕ್ಕು ಬಳಗೇರಿ, ಶೇಷಿ ಪೂಜಾರಿ ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿದರು.
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತರಾದ ರಶ್ಮಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಮಹಿಳೆಯರ ಆರ್ಥಿಕ ಸಬಲೀಕರಣ ಧೈಯದೊಂದಿಗೆ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000 ರೂ. ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯ ಸರ್ಕಾರವು ಜಾರಿಗೆ ತಂದಿದ್ದು, ಇದು ಸ್ತ್ರೀ ಸಬಲೀಕರಣಕ್ಕೆ ಮಹತ್ವದ್ದಾಗಿದೆ. ಮನೆಯಲ್ಲಿ ಮಹಿಳೆಯೊಬ್ಬಳು ಶಿಕ್ಷಣ ಪಡೆದರೆ ಇಡಿ ಕುಟುಂಬವೇ ಉದ್ದಾರವಾಗುತ್ತದೆ. ಅದೇ ರೀತಿ ಮಹಿಳೆ ಆರ್ಥಿಕವಾಗಿ ಶಕ್ತಳಾದರೆ ಇಡೀ ಕುಟುಂಬಕ್ಕೆ ಅವಳು ದಿಕ್ಕಾಗುತ್ತಾಳೆ ಎಂದು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಅವಿನಾಶ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕೆ.ಜಿ, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಕೃಷ್ಣಪ್ಪ, ಗ್ರಾಮ ಪಂಚಾಯತ್ ನೋಡೆಲ್ ಅಧಿಕಾರಿ ಉಮೇಶ್, ತಹಶೀಲ್ದಾರ್ ಶೋಭಾಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಯೋಜನಾಧಿಕಾರಿ ಅನುರಾಧ ಹಾದಿಮನೆ, ಗ್ರಾಮ ಪಂಚಾಯತ್ ಸದಸ್ಯರಾದ ಸುಬ್ಬು, ಸುಶೀಲಾ ಉಪಸ್ಥಿತರಿದ್ದರು.
ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ರೇಣುಕಾ ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋವರ್ದನ್ ಜೋಗಿ ವಂದಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ, ವಂಡಬಳ್ಳಿ ಜಯರಾಮ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು,
ಮೈಸೂರಿನಿಂದ ನೇರ ಸಂವಾದ ಕಾರ್ಯಕ್ರಮಕ್ಕೆ ಉಡುಪಿ ಜಿಲ್ಲೆಯಲ್ಲಿ ವಂಡ್ಸೆ ಗ್ರಾಮ ಪಂಚಾಯತ್‍ನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಅದಕ್ಕೆ ಬೇಕಾದ ಪೂರಕ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಮೈಸೂರಲ್ಲಿ ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ವಿಳಂಬವಾಗಿ ಆರಂಭವಾದ್ದರಿಂದ ಮುಖ್ಯಮಂತ್ರಿಗಳ ಭಾಷಣ ಮುಗಿಯುತ್ತಲೇ ಸಂವಾದ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು. ಸಂವಾದ ಇರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಗ್ರಾಮಸ್ಥರು, ಸಾರ್ವಜನಿಕರು ಪಾಲ್ಗೊಂಡಿದ್ದರು.











