ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆಯಿಂದ ಶಿಕ್ಷಕರ ದಿನಾಚರಣೆ, ಪ್ರಶಸ್ತಿ ಪ್ರದಾನ, ಗುರುವಂದನ ಕಾರ್ಯಕ್ರಮ
ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಸಮಾಜದಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಪುಣ್ಯದ ಕೆಲಸ. ಪವಿತ್ರವಾದ ಕೆಲಸವನ್ನು ಶಿಕ್ಷಕರು ನಿರ್ವಹಿಸುವ ಮೂಲಕ ಶ್ರೇಷ್ಠತೆಯನ್ನು ಪಡೆಯುತ್ತಾರೆ. ವ್ಯಕ್ತಿಯೊಬ್ಬನ ಯಶಸ್ಸಿನ ಹಿನ್ನೆಲೆಯಲ್ಲಿ ಶಿಕ್ಷಕರ ನಿಸ್ವಾರ್ಥವಾದ ಸೇವೆ ಇರುತ್ತದೆ. ಮಕ್ಕಳು ಕೂಡಾ ತಂದೆ ತಾಯಿಗಳಿಗಿಂತ ಹೆಚ್ಚು ವಿಶ್ವಾಸವನ್ನು ಶಿಕ್ಷಕರಲ್ಲಿ ಇರಿಸಿಕೊಳ್ಳುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಬ್ದುಲ್ ರಹೀಮ್ ಹುಸೇನ್ ಶೇಖ್ ಹೇಳಿದರು.
ಕರ್ನಾಟಕ ರಾಜ್ಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಮನ್ವಯ ವೇದಿಕೆ, ಉಡುಪಿ ಜಿಲ್ಲೆ ನೇತೃತ್ವದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ, ಬಾರ್ ಅಸೋಸಿಯೇಷನ್ ಕುಂದಾಪುರ. ಗೀತಾಹೆಚ್.ಎಸ್. ಫೌಂಡೇಶನ್ ಕೋಟೇಶ್ವರ, ಸರಸ್ವತಿ ಕಲ್ಯಾಣ ಮಂಟಪ ಕೋಟೇಶ್ವರ, ಎಮ್. ಎಸ್.ಮಂಜ ಚಾರಿಟೆಬಲ್ ಟ್ರಸ್ಟ್ ಚಿತ್ತೂರು ಮಾರಣಕಟ್ಟೆ ಇವರ ಸಹಭಾಗಿತ್ವದಲ್ಲಿ ಕೊಟೇಶ್ವರದ ಸರಸ್ವತೀ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪ್ರಶಸ್ತಿ ಪ್ರದಾನ, ಗುರುವಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂದೆ ತಾಯಿಯಲ್ಲಿ ಹೇಳಿಕೊಳ್ಳಲಾಗದ ವಿಚಾರವನ್ನು ಮಗು ಶಿಕ್ಷಕರಲ್ಲಿ ಹೇಳಿಕೊಳ್ಳುತ್ತದೆ. ಹಾಗಾಗಿ ಶಿಕ್ಷಕರು ತಿಂಗಳಿಗೊಮ್ಮೆಯಾದರೂ ವಿದ್ಯಾರ್ಥಿಗಳೊಂದಿಗೆ ಆಪ್ತವಾಗಿ ಮಾತನಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ಮಹತ್ತರವಾದ ಬದಲಾವಣೆಯಲ್ಲಿ ವಿದ್ಯಾರ್ಥಿಗಳಲ್ಲಿ ಮತ್ತು ಅವರ ಕುಟುಂಬದಲ್ಲಿ ಕೂಡಾ ಕಾಣಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಕುಂದಾಪುರ ತಾಲೂಕು ಅಧ್ಯಕ್ಷ ಎಸ್.ವಿ ನಾಗರಾಜ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಉದ್ಯಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜ ಅವರಿಗೆ ಉಡುಪಿ ಜಿಲ್ಲಾ ಮಟ್ಟದ ಸರಕಾರಿ ಶಾಲೆಗಳ ಅಭಿವೃದ್ಧಿ ಹರಿಕಾರ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವೃತ್ತಿಯಿಂದ ನಿವೃತ್ತರಾದರೂ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನಿವೃತ್ತ ಶಿಕ್ಷಕ ನಡೂರು ವಿಶ್ವನಾಥ ಶೆಟ್ಟಿಯವರಿಗೆ ಗುರುವಂದನೆ ಸಲ್ಲಿಸಲಾಯಿತು.
ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿ ಸಾಧಕ ಪ್ರಶಸ್ತಿಯನ್ನು ಅಮಾಸೆಬೈಲು ಪರಿಸರದ ಶಾಲೆಗಳ ಅಭಿವೃದ್ಧಿಗೆ ಅಮೂಲ್ಯ ಕೊಡುಗೆ ನೀಡುತ್ತಿರುವ ಶಂಕರ ಐತಾಳ ಅಮಾಸೆಬೈಲು ಇವರಿಗೆ ಪ್ರದಾನಿಸಲಾಯಿತು.
ಶೂನ್ಯ ಶಿಕ್ಷಕರಿರುವ ಶಾಲೆಗಳಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ ಶೆಟ್ಟಿ ಬೈಂದೂರು ವಲಯ, ಪ್ರಭಾಕರ ಶೆಟ್ಟಿ ಕುಂದಾಪುರ ವಲಯ, ಪರಿಮಳ ಅವಭೃತ ಉಡುಪಿ ವಲಯ, ಆಶಾಲತಾ ಬ್ರಹ್ಮಾವರ ವಲಯ, ಪ್ರೀತೇಶ್ ಕುಮಾರ್ ಕಾರ್ಕಳ ವಲಯ ಇವರಿಗೆ ಉತ್ತಮ ಸಿ.ಆರ್.ಪಿ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರು, ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ರಾಜು ಎನ್., ನಿವೃತ್ತ ಮುಖ್ಯೋಪಾಧ್ಯಾಯರಾದ ಮಹಾಬಲ ಶೆಟ್ಟಿ ಚಿತ್ತೂರು ಮಾರಣಕಟ್ಟೆ, ಕೆನರಾ ಬ್ಯಾಂಕ್‍ನ ನಿವೃತ್ತ ಅಧಿಕಾರಿ ಯು.ದಿನೇಶ್ ಪೈ, ಪಡಿ ಮಂಗಳೂರು ನಿರ್ದೇಶಕ ರೆನ್ನಿ ಡಿಸೋಜ, ಶಿಕ್ಷಣಾಭಿಮಾನಿ ಪ್ರಕಾಶ್ ಆಚಾರ್ಯ, ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ರಾಜ್ಯ ಸಮಿತಿ ಸದಸ್ಯೆ ಶೋಭಾ ಭಾಸ್ಕರ್, ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಬೈಂದೂರು ತಾಲೂಕು ಅಧ್ಯಕ್ಷ ಅವನೀಶ ಹೊಳ್ಳ, ಬ್ರಹ್ಮಾವರ ತಾಲೂಕು ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಕಾರ್ಕಳ ತಾಲೂಕು ಅಧ್ಯಕ್ಷ ಪ್ರಕಾಶ್ ಕೋಟ್ಯಾನ್, ಕುಂದಾಪುರ ತಾಲೂಕು ಕಾರ್ಯದರ್ಶಿ ಪ್ರಮೋದಾ ಕೆ. ಶೆಟ್ಟಿ, ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ತಾಲೂಕು ಕೋಶಾಧಿಕಾರಿ ಕೃಷ್ಣಾನಂದ ಶ್ಯಾನುಭಾಗ್ ಪ್ರಾರ್ಥನೆ ಮಾಡಿದರು. ಸಮನ್ವಯ ವೇದಿಕೆಯ ಪುರಸಭೆ ಘಟಕದ ಅಧ್ಯಕ್ಷ ಅಶ್ವತ್ ಕುಮಾರ್ ಸ್ವಾಗತಿಸಿದರು. ಸಮನ್ವಯ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು ಪ್ರಸ್ತಾವಿಕ ಮಾತುಗಳನ್ನಾಡಿದರು. ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ದೀಪಾ ಮಹೇಶ ವಂದಿಸಿದರು. ಸಮನ್ವಯ ವೇದಿಕೆಯ ಕುಂದಾಪುರ ತಾಲೂಕು ಉಪಾಧ್ಯಕ್ಷ ರಾಜಶೇಖರ ಕಾರ್ಯಕ್ರಮ ನಿರ್ವಹಿಸಿದರು.











