ಕುಂದಾಪುರ ಮಿರರ್ ಸುದ್ದಿ…

ಕುಂದಾಪುರ: ಮುಂದಿನ ಎಲ್ಲಾ ಚುನಾವಣೆಗಳಿಗೆ ಭಾರತೀಯ ಜನತಾ ಪಾರ್ಟಿಯ ಸಾಧನೆಗಳು ಮತ್ತು ಅಗತ್ಯತೆಗಳ ಬಗ್ಗೆ ಇಂದಿನಿಂದಲೇ ಕಾರ್ಯೋನ್ಮುಖರಾಗಿ ಎಂದು ಶಿವಮೊಗ್ಗ ಸಂಸದ ಬಿ.ವೈ.ಆರ್.ರಾಘವೆಂದ್ರ ಕರೆ ನೀಡಿದರು. ಅವರು ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲ ವತಿಯಿಂದ ಆಯೋಜಿಸಿದ ನೂತನವಾಗಿ ಎರಡನೇ ಅವಧಿಗೆ ಆಯ್ಕೆಯಾಗಿರುವ ಪಂಚಾಯತ್ ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಪ್ರತೀ ಪಂಚಾಯತ್ ಗಳಲ್ಲಿ ರಕ್ತದಾನ ಶಿಬಿರ ಮಾಡಬೇಕು ಎಂದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಿಜೆಪಿ ಕಾರ್ಯಕರ್ತರ ವಿರುದ್ಧ ದಬ್ಬಾಳಿಕೆ ನಡೆಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ ಅವರು, ನಾವ್ಯಾರೂ ಕೈಗೆ ಬಳೆ ಹಾಕಿ ಕುಳಿತುಕೊಂಡಿಲ್ಲ. ರಾಜ್ಯದಲ್ಲಿ ಪೊಲೀಸ್ ಮೂಲಕ ಕಾರ್ಯಕರ್ತರಿಗೆ ಗೂಂಡಾಗಿರಿ ಪ್ರದರ್ಶಿಸಿದರೆ ಬಿಜೆಪಿ ಕಾರ್ಯಕರ್ತರು ಸಿಡಿದೇಳಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಮಾಜೀ ಸಚಿವ ಕೋಟ ಶ್ರಿನಿವಾಸ ಪೂಜಾರಿ, ಗ್ರಾಮ ಪಂಚಾಯತ್ ಎಂದರೆ ಸ್ಥಳೀಯ ಸಂಸತ್ತು. ಜನಸಾಮಾನ್ಯರ ಸಮಸ್ಯೆಗಳಿಗೆ ಮೊದಲ ಸ್ಪಂದನೆಗೆ ಸಿಗುವವರೇ ಪಂಚಾಯತ್ ಸದಸ್ಯರು. ಪಂಚಾಯತ್ ರಾಜ್ ಬಗ್ಗೆ ಮಾಹಿತಿ ಪಡೆದು ಪಂಚಾಯತ್ ಆಡಳಿತ ನಡೆಸಿ ಎಂದರು.
ಇದೇ ಸಂದರ್ಭ ಎರಡನೇ ಅವಧಿಗೆ ನೂತನ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷ ಆಯ್ಕೆಯಾದವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಬೈಂದೂರು ಶಾಸಕ ಗುರುರಾಜ್ ಗಂಟಿಹೋಳೆ, ಶ್ರೀಮತಿ ಭಾರತಿ ಶೆಟ್ಟಿ, ಮಾಜಿ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮಾಲತಿ ನಾಯ್ಕ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಿಯಾದರ್ಶಿನಿ ದೇವಾಡಿಗ, ಚಿತ್ತೂರು ಪಂಚಾಯತ್ ಅಧ್ಯಕ್ಷ ರವಿರಾಜ್ ಶೆಟ್ಟಿ ಮತ್ತು ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.











