ಕುಂದಾಪುರ ಮಿರರ್ ಸುದ್ದಿ…
ಬೈಂದೂರು: ಸರಕಾರದ ಅನೇಕ ವರ್ಷಗಳ ಪ್ರಯತ್ನದಿಂದ ಒಂದು ಹಂತ ಮುಟ್ಟಿದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಪರಿಪೂರ್ಣತೆ ಕಂಡಿಲ್ಲ. ಶಿಕ್ಷಣ ಕ್ಷೇತ್ರದಲ್ಲಿ ಪರಿವರ್ತನೆ ಆಗಬೇಕು. ಅನೇಕ ಮಕ್ಕಳಿಗೆ ತಮ್ಮಲ್ಲಿರುವ ಜ್ಞಾನವನ್ನು ಬಳಸಿಕೊಳ್ಳಲು ಇನ್ನೂ ಕೂಡ ಸ್ವಾತಂತ್ರ್ಯ ದೊರೆತ್ತಿಲ್ಲ. ಮಕ್ಕಳಿಗೆ ತಮ್ಮ ಇಚ್ಚೆಗೆ ತಕ್ಕಂತೆ ಅವರ ಆಯ್ಕೆಗೆ ಅನುಗುಣವಾಗಿ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಿಕೊಡಬೇಕು. ವೈಜ್ಞಾನಿಕ ಮನೋಭಾವನೆಯೊಂದಿಗೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎನ್ನುವ ದೂರದೃಷ್ಟಿ ನಮ್ಮದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.

ಅವರು ಬುಧವಾರ ನಾವುಂದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 1.20 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.

ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಬೇಕು ಎನ್ನುವ ಉದ್ದೇಶದಿಂದ ವಾಜಪೇಯಿ ಸರ್ವಶಿಕ್ಷಣಾ ಅಭಿಯಾನದ ಮೂಲಕ ಶಿಕ್ಷಣದ ಸಾರ್ವತ್ರೀಕರಣಕ್ಕೆ ಒಂದು ಚೌಕಟ್ಟನ್ನು ಹಾಕಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆ ತರಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಶ್ರಮಿಸುತ್ತಿದೆ. ಗಾಂಧಿಜಿ ಅವರು ಸಹ ಸ್ವದೇಶಿ ನೀತಿ ದೇಶಕ್ಕೆ ಬೇಕು ಎಂದು ಹೇಳಿದ್ದಾರೆ. ಈ ಕಾಲೇಜು ಸಹಿತ ಎಲ್ಲ ಕಡೆಗಳಲ್ಲಿ ಶಿಕ್ಷಕರ ಕೊರತೆ, ಕೊಠಡಿ ಇನ್ನಿತರ ಕೊರತೆಗಳಿವೆ. ಆದರೆ ಹಳೆ ವಿದ್ಯಾರ್ಥಿಗಳನ್ನು ಬಳಸಿಕೊಂಡು ಈ ಕೊರತೆಗಳನ್ನು ನೀಗಿಸುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಮಾತನಾಡಿ, ಸ್ವಚ್ಛಾ ಭಾರತ್ ಯೋಜನೆಯ ಮೂಲಕ ಇಡಿ ವ್ಯವಸ್ಥೆ ಸ್ವಚ್ಛ ಮಾಡುವ ಕೆಲಸವನ್ನು ಪ್ರಧಾನಿ ಮಾಡುತ್ತಿದ್ದಾರೆ. ಸಮಾಜದ ಕಟ್ಟಕಡೆಯ ಮಗುವಿಗೂ ಶಿಕ್ಷಣ ಸಿಗುವಂತೆ ಆಗಬೇಕು ಬೈಂದೂರು ಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ 250 ಪ್ರಾಥಮಿಕ, 30 ಪ್ರೌಢ, 13 ಪ.ಪೂ. ಕಾಲೇಜುಗಳಿದ್ದು, ಶಿಕ್ಷಣಕ್ಕೆ ತಳಮಟ್ಟದ ಅಡಿಪಾಯ ಹಾಕಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಎನ್.ಎಚ್. ನಾಗೂರ, ಪ.ಪೂ. ಶಿಕ್ಷಣ ಉಪನಿರ್ದೇಶಕ ಮಾರುತಿ, ಡಯಟ್ ಪ್ರಾಂಶುಪಾಲ ವೇದಮೂರ್ತಿ, ಪ್ರೌಢಶಾಲಾ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ, ಲೋಕಪಯೋಗಿ ಕಾರ್ಯನಿರ್ವಾಹಕ ಎಂಜಿನಿಯರ್ ದುರ್ಗಾದಾಸ್, ಕಾಲೇಜಿನ ಪ್ರಾಂಶುಪಾಲ ಅರುಣ್ ನಾಯಕ್, ಉಪಪ್ರಾಂಶುಪಾಲೆ ಶಶಿಕಲಾ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಾಜಶೇಖರ ನಾವುಂದ ಸ್ವಾಗತಿಸಿ, ಗಣೇಶ್ ನಿರೂಪಿಸಿ, ವಂದಿಸಿದರು.











