ಕುಂದಾಪುರ: ‘ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ನಿರ್ಮಾಣದ ಬಗ್ಗೆ ಚಿಂತನೆ’ – ಬಿ.ಸಿ.ನಾಗೇಶ

0
601

Click Here

Click Here

ಕುಂದಾಪುರ ಮಿರರ್ ಸುದ್ದಿ…
ಕುಂದಾಪುರ:
ರಾಜ್ಯದಲ್ಲಿ 48 ಸಾವಿರ ಸರ್ಕಾರಿ ಶಾಲೆಗಳಿದ್ದು, ಶಾಲೆಗಳ ಸ್ಥಿತಿಗತಿಗಳ ಮಾಹಿತಿ ಕಲೆ ಹಾಕಿ, ಅವಶ್ಯಕ ಶಾಲಾ ಕೊಠಡಿಗಳ ನಿರ್ಮಾಣದ ಬಗ್ಗೆ ಬಜೆಟ್‍ನಲ್ಲಿ ಮಂಜೂರಾತಿ ಮಾಡಲಾಗುವುದು. ಈ ಹಿಂದೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದೊಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಾಲ್ಕಾರು ಶಾಲೆಗಳ ನಿರ್ಮಿಸಿಲಾಗಿತ್ತು ಇವತ್ತು ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು, ಶಿಕ್ಷಕರ ಕೊರತೆ ಕಾಡುತ್ತಿದೆ. ಹಾಗಾಗಿ ಗ್ರಾಮ ಪಂಚಾಯಿತಿಗೊಂದು ಮಾದರಿ ಶಾಲೆ ನಿಮಾಣದ ಬಗ್ಗೆ ಚಿಂತನೆ ಮಾಡಲಾಗುತ್ತಿದೆ ಎಂದು ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ ಹೇಳಿದರು.

ಅವರು ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಬೈಂದೂರು ವತಿಯಿಂದ ನಡೆದ ಶಿಕ್ಷಣ ಸಚಿವರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಆಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಸಾಕಷ್ಟು ಅಧ್ಯಯನಗಳಿಂದ ಅಂತಿಮಗೊಳಿಸಲಾಗಿದೆ. ವಿಜ್ಞಾನಿ, ಶಿಕ್ಷಣ ತಜ್ಞ ಡಾ|ಕಸ್ತೂರಿ ರಂಗನ್ ಅವರ ನೇತೃತ್ವದ ಟಾಸ್ಕ್‍ಪೋರ್ಸ್ ಸಮಿತಿ ಈ ಕುರಿತು ಅಧ್ಯಯನ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿ ಅಂತಿಮಗೊಳಿಸಿದೆ. ಅದರಲ್ಲಿ ರಾಜ್ಯ ಹಾಗೂ ಆಯಾಯ ಜಿಲ್ಲೆಯ ಕೌಶಲ್ಯವನ್ನು ಮಗುವಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಮಾನವೀಯತೆ ಶಿಕ್ಷಣ, ಬುದ್ಧಿಯನ್ನು ಅರಳಿಸುವ, ಹೃದಯಕ್ಕೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ಈ ಹೊಸ ನೀತಿ ಪರಿಣಾಮಕಾರಿಯಾಗಲಿದೆ. 2022-23ನೇ ಸಾಲಿನಿಂದಲೇ ಹೊಸ ಶಿಕ್ಷಣ ನೀತಿಯನ್ನು ಅಳವಡಿಸುವ ಚಿಂತನೆ ಇದೆ. ಈ ಬಗ್ಗೆ ಶಿಕ್ಷಕರಲ್ಲಿರುವ ಗೊಂದಲ ಪರಿಹರಿಸುವ ನಿಟ್ಟಿನಲ್ಲಿ ಅಲ್ಲಲ್ಲಿ ಸೆಮಿನಾರ್ ಗಳನ್ನು ಮಾಡುವುದು, ಸರ್ಕಾರದ ವತಿಯಿಂದಲೇ ಪುಸ್ತಕಗಳನ್ನು ಒದಸಲಾಗುತ್ತಿದೆ ಎಂದರು.

ಮಗುವಿಗೆ ಬೇಗನೆ ಶಿಕ್ಷಣ ನೀಡಿದರೆ ಪರಿಣಾಮಕಾರಿ ಎನ್ನುವ ಅಂಶವನ್ನು ತಜ್ಞರು ಪ್ರತಿಪಾದಿಸಿದ್ದಾರೆ. ಮಗು 3ನೇ ವಯಸ್ಸಿಗೆ ಶಾಲೆಗೆ ಬಂದರೆ ಮುಂದೆ 1ನೇ ತರಗತಿ ಮಗುವಿಗೆ ಕಷ್ಟವಾಗುವುದಿಲ್ಲ. ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿಕೊಂಡೆ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಿಸುತ್ತೇವೆ. ಏಕರೂಪದ ಶಿಕ್ಷಣ ಎಲ್ಲ ಕಡೆ ಸಿಗುತ್ತದೆ ಎಂದರು.
ಇವತ್ತು ವರ್ಗಾವಣೆ ಪ್ರಮಾಣ ಪತ್ರ ಇಲ್ಲದೆಯೇ ಸರ್ಕಾರಿ ಶಾಲೆಗೆ ದಾಖಲಿಸಿಕೊಳ್ಳಲು ಅವಕಾಶಗಳನ್ನು ಕಲ್ಪಿಸಲಾಗಿದೆ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿಯೂ ಕೂಡಾ 7ನೇ ತರಗತಿಯ ತನಕ ಅನುತೀರ್ಣ ಮಾಡುವ ಪದ್ದತಿ ಇಲ್ಲ. ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ಹಳೆ ವಿದ್ಯಾರ್ಥಿಗಳ ಸಹಕಾರವನ್ನು ಪಡೆದುಕೊಳ್ಳುವಲ್ಲಿ ಶಿಕ್ಷಕರು ಮುಂದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮಾತನಾಡಿ, ಕೋವಿಡ್‍ನಿಂದ ಮಕ್ಕಳ ಶಿಕ್ಷಣದ ಮೇಲೆ ಗಂಭೀರ ಪರಿಣಾಮ ಬೀರಿದೆ. ಮೊಬೈಲ್‍ನಿಂದ ಶಾಲೆಯಲ್ಲಿ ನೀಡುವ ಶಿಕ್ಷಣ ನೀಡಲು ಸಾಧ್ಯವಿಲ್ಲ. ಕುಂಠಿತವಾಗಿರುವ ಮಕ್ಕಳ ಶಿಕ್ಷಣವನ್ನು ಸರಿಪಡಿಸುವುದು ಶಿಕ್ಷಕರಿಂದ ಮಾತ್ರ ಸಾಧ್ಯವಿದೆ. ಇನ್ನೇರಡು ವರ್ಷಗಳಲ್ಲಿ ಶಿಕ್ಷಕರು ಹೆಚ್ಚಿನ ಪ್ರಯತ್ನ ಪರಿಶ್ರಮದಿಂದ ಮಕ್ಕಳನ್ನು ಸರಿಪಡಿಸಬೇಕಾಗಿದೆ ಎಂದರು.

Click Here

ಈ ಸಂದರ್ಭದಲ್ಲಿ ಜಿಲ್ಲೆಗೆ ಪ್ರಥಮ ಬಾರಿಗೆ ಆಗಮಿಸುತ್ತಿರುವ ಸಚಿವರನ್ನು ಶಿಕ್ಷಕರ ಸಂಘ ಬೈಂದೂರು ವಲಯ ಮತ್ತು ಕುಂದಾಪುರ ವಲಯದ ವತಿಯಿಂದ ಸನ್ಮಾನಿಸಲಾಯಿತು. ಶಿಕ್ಷಕರ ಸಂಘಟನೆಯ ವತಿಯಿಂದ ವಿವಿಧ ಬೇಡಿಕೆ ಈಡೇರಿಗೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಎಸ್.ಎಸ್.ಎಲ್.ಸಿ ಯಲ್ಲಿ 625 ಅಂಕ ಗಳಿಸಿದ ಅನುಶ್ರೀ, ಪ್ರಣಿತಾ, ಸೃಜನ್ ಭಟ್, ಶ್ರೇಯಾ, ಅನುಶ್ರೀ ಶೆಟ್ಟಿ ಅವರನ್ನು ಸನ್ಮಾನಿಸಿಲಾಯಿತು.
ಶಿಕ್ಷಣ ಸಚಿವ ಆಪ್ತ ಕಾರ್ಯದರ್ಶಿ ಎ.ಆರ್.ರವಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಪ್ರಾಂಶುಪಾಲರಾದ ವೇದಮೂರ್ತಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಅಕ್ಷರ ದಾಸೋಹ ಕಾರ್ಯಕ್ರಮದ ನಾಗೇಂದ್ರ ಪ್ರಸಾದ್, ಪ.ಪೂ ಶಿಕ್ಷಣ ಇಲಾಖೆಯ ಮಾರುತಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಶೇಖರ್, ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮುಂದಿನಮನೆ ಉಪಸ್ಥಿತರಿದ್ದರು.
ಕುಂದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಎಸ್.ಕೆ ಸ್ವಾಗತಿಸಿ, ಉಪನಿರ್ದೆಶಕ ಎನ್.ಎಚ್.ನಾಗೂರ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ವಂದಿಸಿದರು. ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಡಾ| ಕಿಶೋರ್ ಕುಮಾರ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಧ ಬೈಂದೂರು ಘಟಕದ ಪ್ರಧಾನ ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಬಿ.ಆರ್.ಪಿ ಸುಧಾಕರ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವರು ಶಿಕ್ಷಕರ ಕೊರತೆಯ ಬಗ್ಗೆ ಪ್ರತಿಕ್ರಿಯಿಸಿ, ರಾಜ್ಯದಲ್ಲಿ 48 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಆಗ ಶಾಲೆಗಳನ್ನು ತೆರೆಯಲು ಪ್ರಾಮುಖ್ಯತೆ ನೀಡಲಾಗಿತ್ತು. ವಾಜಪೇಯಿಯವರು ಸರ್ವಶಿಕ್ಷಣ ಅಭಿಯಾನದಲ್ಲಿ 2 ಕಿ.ಮೀ ಒಳಗಡೆ ಶಾಲೆ ಇರಬೇಕು ಎನ್ನುವ ನೆಲೆ ಶಾಲೆಗಳ ಸ್ಥಾಪನೆಯಾಯಿತು. ಕಾಲಕಾಲಕ್ಕೆ ಬದಲಾವಣೆ ತರುವ ಕೆಲಸ ಆಗಿದೆ. ಶಿಕ್ಷಕರ ನೇಮಕಾತಿ ಸಂದರ್ಭ ಶಿಕ್ಷಣ ಮಟ್ಟ ಜಾಸ್ತಿ ಮಾಡುವ ಸಲುವಾಗಿ ಅಭ್ಯರ್ಥಿಗಳಿಗೆ ಟಿಇಟಿ ಮಾಡಲಾಯಿತು. ಹಿಂದಿನ ಶಿಕ್ಷಣ ಸಚಿವರ ಸಮಯದಲ್ಲಿ ಟಿಇಟಿ ಮಾಡಿದಾಗ 10,000 ಜನರಲ್ಲಿ ಸಿಕ್ಕಿದ್ದು 3000 ಜನ. ಈಗ ಮತ್ತೆ ಟಿಇಟಿ ಮಾಡಲಾಗುತ್ತದೆ. ಶೀಘ್ರ ಖಾಲಿ ಹುದ್ದೆಗಳ ಭರ್ತಿ ಮಾಡಲಾಗುವುದು. ಈಗ ಶಿಕ್ಷಕರ ಕೊರತೆಬ ಇರುವಲ್ಲಿ ಅತಿಥಿ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ ಎಂದರು.
ಶಿಕ್ಷಕರು ಶಿಕ್ಷಕರ ಸಂಘದ ಚಟುವಟಿಕೆಗಳಲ್ಲಿ ಶಾಲಾ ಅವಧಿಯಲ್ಲಿ ಭಾಗವಹಿಸಬಾರದು ಎಂದು ಸ್ಪಷ್ಟವಾಗಿ ಹೇಳಿದ್ದೇವೆ. ಅಂತಹದ್ದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು. ಮತ್ತೆ ಖಾಸಗಿ ಶಾಲೆಯವರು ವಿದ್ಯಾರ್ಥಿಗಳು ಆ ಶಾಲೆಯನು ತೊರೆಯಲು ಇಷ್ಟ ಪಟ್ಟಾಗ ಟಿ.ಸಿ ಕೊಡುವುದಿಲ್ಲ ಎನ್ನುವುದನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಡಿಡಿಪಿಐ ಅವರೇ ಪರಿಶೀಲಿಸಿ ಸಮಸ್ಯೆ ಪರಿಹರಿಸಬೇಕು. ಎಲ್ಲೆಲ್ಲಿ ದೂರು ಬಂದಿದೆ ಅಲ್ಲಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತಾರೆ.

Click Here

LEAVE A REPLY

Please enter your comment!
Please enter your name here